ಪುಟ್ಟ ದೇಶ, ದಿಟ್ಟ ಹೆಜ್ಜೆ

ಟುನೀಸಿಯಾ, ಆಫ್ರಿಕಾ ಖಂಡದ ತುತ್ತ ತುದಿಯಲ್ಲಿ, ಮೆಡಿಟೆರ್ರೆನಿಯನ್ ಸಮುದ್ರದ ತೀರದಲ್ಲಿ ಪ್ರಶಾಂತವಾಗಿ ನಿದ್ರಿಸುವ ಒಂದು ಪುಟ್ಟ ಅರಬ್ ದೇಶ. ಎರಡನೇ ಭಾಷೆ ಫ್ರೆಂಚ್. ಜನಸಂಖ್ಯೆ ಸುಮಾರು ಒಂದು ಕೋಟಿ. ಟುನೀಸಿಯಾದ ಬಗ್ಗೆ ನಾವೇನಾದರೂ ಕೇಳಿದ್ದಿದ್ದರೆ ಅದು ಒಂದು ಪ್ರವಾಸಿ ತಾಣ ಎಂದು ಮಾತ್ರ. ನಮ್ಮ ಗೋವಾ ರೀತಿಯದು.

ದಿನನಿತ್ಯ ದ ಸಾಮಗ್ರಿಗಳ ಬೆಲೆ ವಿಪರೀತ ಏರಿದ್ದು ಮಾತ್ರವಲ್ಲದೆ ನಿರುದ್ಯೋಗ ಸಮಸ್ಯೆಯೂ ಕಿತ್ತು ತಿನ್ನಲು ಆರಂಭಿಸಿದಾಗ ಜನ ಸಿಡಿದೆದ್ದರು ಟುನೀಸಿಯಾದಲ್ಲಿ. ಓರ್ವ ಯುವಕ ಆತ್ಮಹತ್ಯೆ ಮಾಡಿ ಕೊಳ್ಳುವುದರೊಂದಿಗೆ ಪರಿಸ್ಥಿತಿ ಹದಗೆಟ್ಟಿತು. ಅಧ್ಯಕ್ಷ ಜೈನುಲ್ ಆಬಿದೀನ್ ಬಿನ್ ಅಲಿ ತಾನು ಆಳುವ ಜನರ ನಾಡಿಮಿಡಿತ ಅರಿಯಲು ವಿಫಲನಾದ. ಪ್ರತಿಭಟಿಸುತ್ತಿದ್ದ ಜನರನ್ನು ಬಲಪ್ರಯೋಗದ ಮೂಲಕ ಅಡಗಿಸಲು ಯತ್ನಿಸಿದ. ಹತ್ತಾರು ಜನರು ಸತ್ತರು. ಜನ ಜಗ್ಗಲಿಲ್ಲ. ಬೀದಿಗಳಿಂದ ಮನೆಗೆ ಹೋಗಲು ನಿರಾಕರಿಸಿ ಉಗ್ರವಾಗಿ ಪ್ರತಿಭಟಿಸಿದರು. ಭ್ರಷ್ಟ ಲಂಚಗುಳಿ ಅಧ್ಯಕ್ಷನ ಸಂಬಂಧಿಯೊಬ್ಬನನ್ನು ಹಾಡು ಹಗಲೇ ಕೊಲೆ ಮಾಡಿದರು. ಇದನ್ನು ಕಂಡು ಕಂಗಾಲಾದ ಬಿನ್ ಅಲಿ ಕಾಲಿಗೆ ಬುದ್ಧಿ ಹೇಳಿದ. ಫ್ರಾನ್ಸ್ ದೇಶ ಅಭಯ ನೀಡಲು ನಿರಾಕರಿಸಿದಾಗ ಸೌದಿ ಅರೇಬಿಯಾ ಆಶ್ರಯ ನೀಡಿತು. ನೇರವಾಗಿ ಜೆದ್ದಾ ನಗರಕ್ಕೆ ಬಂದ ಬಿನ್ ಅಲಿ. ಉಗಾಂಡಾ ದೇಶದ ಸರ್ವಾಧಿಕಾರಿ ದಿವಂಗತ ಇದಿ ಅಮೀನ್ ಮತ್ತು ಪಾಕಿನ ನವಾಜ್ ಶರೀಫ್ ರಂಥ ಭ್ರಷ್ಟ ಅತಿಥಿ ಗಳಿಗೆ ಆಶ್ರಯ ನೀಡಿದ ಕೆಂಪು ಸಮುದ್ರದ ವಧು, ಜೆಡ್ಡಾ ನಗರ ಬಿನ್ ಅಲಿಯನ್ನೂ ಸ್ವಾಗತಿಸಿತು ತನ್ನ ತೀರಕ್ಕೆ.

ಪ್ರತಿಭಟಿಸುವ ಅಸ್ತ್ರವಾಗಿ ಜೀವವನ್ನು ಕಳೆದು ಕೊಳ್ಳುವುದು ತೀರಾ ಅಪರೂಪ ಮುಸ್ಲಿಂ ಜಗತ್ತಿನಲ್ಲಿ. ಹುಟ್ಟಿಗೆ ಕಾರಣನಾದ ದೇವರೇ ಕಳಿಸಬೇಕು ದೇವದೂತನನ್ನು ಜೀವ ತೆಗೆಯಲು. ಆತ್ಮಹತ್ಯೆ ಮಹಾ ಪಾಪ. ಯಾವುದೇ ಸಮಜಾಯಿಷಿ ಇಲ್ಲ ಜೀವ ಕಳೆದುಕೊಳ್ಳುವ ಕೃತ್ಯಕ್ಕೆ. ಆದರೆ ಮನುಷ್ಯ ಹಸಿದಾಗ, ನಿಸ್ಸಹಾಯಕನಾಗಿ ಗೋಡೆಗೆ ದೂಡಲ್ಪಟ್ಟಾಗ ಧರ್ಮ back seat ತೆಗೆದು ಕೊಳ್ಳುತ್ತದೆ. ಟುನೀಸಿಯಾದಲ್ಲಿ ಆದದ್ದು ಇದೇ. ಬರೀ ಅಧ್ಯಕ್ಷ ಮಾತ್ರ ಭ್ರಷ್ಠನಲ್ಲ. ಈತನ ಮಡದಿ ಸಹ ಮುಂದು ಖಜಾನೆಯ ಲೂಟಿಯಲ್ಲಿ. ಒಂದೂವರೆ ಟನ್ನುಗಳಷ್ಟು ಚಿನ್ನವನ್ನು ತೆಗೆದುಕೊಂಡು ದೇಶ ಬಿಟ್ಟಳು. ಎಲ್ಲಿ ಆಶ್ರಯ ಸಿಕ್ಕಿತು ಎಂದು ಇನ್ನೂ ಗೊತ್ತಿಲ್ಲ. ಜನರ ಹತ್ತಿರ ಕವಡೆಗೆ ಬರ ಬಂದಾಗ ಅಧ್ಯಕ್ಷ, ಅವನ ಪತ್ನಿ, ಅವರಿಬ್ಬರ ಸಂಬಂಧಿಕರು ಐಶಾರಾಮದಿಂದ ಬದುಕುವಾಗ ಸಹಜವಾಗಿಯೇ ಓರ್ವ ನಿಸ್ಸಹಾಯಕ ಯುವಕ ಆತ್ಮಹತ್ಯೆಗೆ ಶರಣಾದ ದಾರಿ ಕಾಣದೆ. ತನ್ನ ಜೀವ ಕಳೆದುಕೊಳ್ಳುವ ಮೂಲಕ ಅರಬ್ ಜಗತ್ತಿನ ಒಂದು ಅಪರೊಪದ ಕ್ರಾಂತಿಗೆ ನಾಂದಿ ಹಾಡಿದ.

೨೩ ವರುಷಗಳ ಕಾಲ ಒಂದೇ ಸಮನೆ ತನ್ನ ದೇಶವವ್ವು ಕೊಳ್ಳೆ ಹೊಡೆದ ಬಿನ್ ಅಲಿ ಪಾಶ್ಚಾತ್ಯ ದೇಶಗಳಿಗೆ ಮಿತ್ರ. ಏಕೆಂದರೆ ಅಲ್ಕೈದಾ ಬಂಟರು ತನ್ನ ದೇಶದಲ್ಲಿ ನೆರೆಯೂರಲು ಈತ ಬಿಡಲಿಲ್ಲ. ಈತ ಬಿಡಲಿಲ್ಲ ಎನ್ನುವುದಕ್ಕಿಂತ ಇಲ್ಲಿನ ಜನ ಶಾಂತಿ ಪ್ರಿಯರು ಎಂದೇ ಹೇಳಬಹುದು. ಬಹುತೇಕ ಅರಬ್ ರಾಷ್ಟ್ರಗಳಲ್ಲಿ ಅಲ್ ಕೈದಾ ದ ಪ್ರಭಾವ ಅಷ್ಟಿಲ್ಲ. ತಮ್ಮ ಆಶಯಗಳಿಗೆ ಅನುಸಾರ ಯಾರಾದರೂ ನಡೆಯುವುದಿದ್ದರೆ ಅಲ್ಲಿ ಪ್ರಜಾಪ್ರಭುತ್ವ, ಸ್ವೇಚ್ಛಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಎನ್ನುವ ಮಾರುದ್ದದ ಶಾಪ್ಪಿಂಗ್ ಲಿಸ್ಟ್ ಹಿಡಿದು ಕೊಂಡು ಬರುವುದಿಲ್ಲ ಅಮೇರಿಕಾ ಮತ್ತು ಅದರ ಬಾಲಂಗೋಚಿಗಳು. ಪಶ್ಚಿಮದ ಸಮಯಸಾಧಕತನಕ್ಕೆ ಟುನೀಸಿಯಾ ಸಹ ಹೊರತಾಗಲಿಲ್ಲ. ಈ ತೆರನಾದ ಇಬ್ಬಂದಿಯ ನೀತಿಯ ಪರಿಣಾಮವೇ ೨೩ ವರ್ಷಗಳ ಅವ್ಯಾಹತ ದಬ್ಬಾಳಿಕೆ ಬಿನ್ ಅಲಿಯದು.

ಅರಬ್ ರಾಷ್ಟ್ರಗಳಲ್ಲಿ ಟುನೀಸಿಯಾ ರೀತಿಯ ಕ್ರಾಂತಿಗಳು ಅಪರೂಪ. ಉಣ್ಣಲು, ಉಡಲು, ಸಾಕಷ್ಟಿದ್ದು ಸಾಕಷ್ಟು ಸಂಬಳ ಸಿಗುವ ನೌಕರಿ ಇದ್ದರೆ ಬೇರೇನೂ ಕೇಳದವರು ಅರಬರು. ಅರಬ್ಬರ ಈ ನಡವಳಿಕೆ ನೋಡಿಯೇ ಇಲ್ಲಿ ಸರ್ವಾಧಿಕಾರಿಗಳದು ದರ್ಬಾರು. ಊಳಿಗಮಾನ್ಯ ಪದ್ಧತಿಗೆ ಉದಾಹರಣೆಗಾಗಿ ವಿಶ್ವ ಎಲ್ಲೂ ಪರದಾಡ ಬೇಕಿಲ್ಲ. ಕೊಲ್ಲಿ ಕಡೆ ಒಂದು ಪಿಕ್ ನಿಕ್ ಇಟ್ಟುಕೊಂಡರೆ ಸಾಕು. ಈ ಪ್ರಾಂತ್ಯದಲ್ಲಿ ಪ್ರಜಾಪ್ರಭುತ್ವ ಮೊಳಕೆ ಒಡೆಯುವುದು ಕಷ್ಟದ ಕೆಲಸವೇ.

ಮರಳುಗಾಡಿನಲ್ಲಿ ಹಸಿರು ಮೊಳಕೆಯೊಡೆಯಲು ಸಾಧ್ಯವೇ? ಇಲ್ಲಿನ ನಿಸರ್ಗ, ವಾತಾವರಣ, ಜನರ ನಡಾವಳಿ ಎಲ್ಲವೂ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತ. ಹಾಗಾಗಿ ನಿರಂಕುಶಾಧಿಕಾರಿಗಳ ದೊಡ್ಡ ದಂಡನ್ನೇ ಕಾಣಬಹುದು ಇಲ್ಲಿ. ಆಫ್ರಿಕಾದಲ್ಲೂ, ಏಷ್ಯಾದಲ್ಲೂ ಇರುವ ಸರ್ವಾಧಿಕಾರಿಗಳಿಗೆ ಹೋಲಿಸಿದರೆ ಇಲ್ಲಿನವರು ನಿರ್ದಯಿಗಳಲ್ಲ. ತಾವು ಹೊಡೆದ ಲೂಟಿಯಲ್ಲಿ ಜನರಿಗೂ ಒಂದಿಷ್ಟನ್ನು ಕೊಡುತ್ತಾರೆ. ಕಾರು ಕೊಳ್ಳಲು ಸಾಲ, ಉನ್ನತ ವ್ಯಾಸಂಗಕ್ಕಾಗಿ ಸಾಲ, ಮನೆ ಕಟ್ಟಲು ಸಾಲ, ಕೊನೆಗೆ ಮದುವೆಯಾಗಲೂ ಕೂಡ ಸಾಲ. ಆಹಾ, ಇಷ್ಟೆಲ್ಲಾ ಸವಲತ್ತಿರುವಾಗ ಗೋಡೆ ತುಂಬಾ ಧಿಕ್ಕಾರ ಗೀಚಿ, ಬೀದಿ ಅಲೆಯುತ್ತಾ ಮೈಕ್ ಹಿಡಿದು ಜಯಕಾರ ಕೂಗಿ ಪ್ರಜಾಪ್ರಭುತ್ವವನ್ನು ಮೆರೆಯುವುದಾದರೂ ಏತಕ್ಕೆ ಹೇಳಿ?

ತಮ್ಮ ಪಾಡಿಗೆ ತಾವು ಲೂಟಿ ಮಾಡುತ್ತಾ, ಒಂದಿಷ್ಟು ಜನಕಲ್ಯಾಣ ಮಾಡಿ ಪಾಪದ ಹೊರೆ ಹಗುರ ಮಾಡಿಕೊಳ್ಳುತ್ತಿದ್ದ ಅರಬ್ ಆಡಳಿತಗಾರರಿಗೆ ಟುನೀಸಿಯಾದ ಬೆಳವಣಿಗೆ ಬೆವರೊಡೆಸಿತು. ಭಯ ಆವರಿಸಿತು. ಅಮ್ಮಾನ್, ಕೈರೋ, ಡಮಾಸ್ಕಸ್, ರಿಯಾದ್ ನಗರಗಳ ಬೀದಿಗಳೂ ಟುನೀಸಿಯಾದ ಬೀದಿಗಳ ಹಾದಿ ಹಿಡಿದರೆ? ಕೂಡಲೇ ಅಗತ್ಯ ವಸ್ತುಗಳ ಬೆಲೆ ತಮಗೆ ತಾವೇ ಇಳಿದವು ಸಿರಿಯಾ ಮತ್ತು ಜೋರ್ಡನ್ ದೇಶಗಳಲ್ಲಿ. ಈ ಎರಡೂ ರಾಷ್ಟ್ರಗಳು ನಿದ್ದೆಯಿಂದ ಎಚ್ಚೆತ್ತು ಕೊಳ್ಳುವ ಪ್ರಯತ್ನ ಮಾಡಿದರೆ ಇವಕ್ಕೆಲ್ಲಾ ಸೊಪ್ಪು ಹಾಕಲಾರೆ ಎನ್ನುವ ಮತ್ತೊಬ್ಬ ಸರ್ವಾಧಿಕಾರಿ ಹೋಸ್ನಿ ಮುಬಾರಕ್. ಈಜಿಪ್ಟ್ ನ ಹೋಸ್ನಿ ಮುಬಾರಕ್ ೩೦ ವರುಷಗಳ ಸುದೀರ್ಘ ಅನುಭವವಿರುವ ಠಕ್ಕ. ಬೇರೆಲ್ಲಾ ಠಕ್ಕರು ಚಾಪೆ ಕೆಳಗೆ ತೂರಿಕೊಂಡರೆ ಈತ ರಂಗೋಲಿ ಕೆಳಗೆ ತೂರಿ ಕೊಳ್ಳುತ್ತಾನೆ. ಆತನಿಗೆ ಅದಕ್ಕೆ ಬೇಕಾದ ಪರಿಣತಿ ಒದಗಿಸಲು ಶ್ವೇತ ಭವನ ಸಿದ್ಧವಾಗಿದೆ ಕರಾಳ ಟ್ರಿಕ್ಕುಗಳೊಂದಿಗೆ.

ಈಗ ಈ ಕ್ರಾಂತಿಯ ಪರಿಣಾಮ ನಾನಿರುವ ಸೌದಿಯಲ್ಲಿ ಹೇಗೆ ಎಂದು ಊಹಿಸುತ್ತಿದ್ದೀರೋ? ಇಲ್ಲಿನ ದೊರೆ ಅಬ್ದುಲ್ಲಾ ಜನರಿಗೆ ಅಚ್ಚು ಮೆಚ್ಚು. ಜನರಿಗೆ ಬೇಕಾದ ಎಲ್ಲಾ ಸೌಕರ್ಯವನ್ನೂ ಮಾಡಿ ಕೊಡುತ್ತಾ, ಇಸ್ಲಾಮಿನ ಎರಡು ಪವಿತ್ರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ಡಾಲರುಗಳನ್ನು ಅನುದಾನ ನೀಡುತ್ತಾ ಇರುವ ಈ ದೊರೆ ಜನರ ಕ್ಷೇಮ ವನ್ನು ವೈಯಕ್ತಿಕ ಭೇಟಿ ಮೂಲಕ ನೋಡಿ ಕೊಳ್ಳುತ್ತಾರೆ. ಜನರಿಗೆ ಅನ್ಯಾಯವಾದರೆ ಎಂಥ ಪ್ರಭಾವಶಾಲಿಗಳಾದರೂ ಈ ದೊರೆಯ ನಿಷ್ಟುರ ನ್ಯಾಯದಿಂದ ತಪ್ಪಿಸಿ ಕೊಳ್ಳಲಾರರು. ಕಳೆದ ವರ್ಷ ಜೆಡ್ಡಾ ನಗರದಲ್ಲಿ ಮಳೆಯಿಂದ ಆದ ಅಪಾರ ಅನಾಹುತ ೧೫೯ ಜನರ ಪ್ರಾಣ ತೆಗೆದು ಕೊಂಡಿತ್ತು. ಜನರ ಒತ್ತಾಯದ ಮೇರೆಗೆ ಈ ಅನಾಹುತಕ್ಕೆ ನಗರಸಭೆಯ ಅಧಿಕಾರಿಗಳನ್ನು ನೇರವಾಗಿ ಹೊಣೆಯಾಗಿರಿಸಿ ಅವರುಗಳ ಮೇಲೆ criminal ದಾವೆ ಹೂಡಿ ಜೈಲಿಗೆ ಅಟ್ಟಿದರು ಇಲ್ಲಿನ ದೊರೆ. ಟುನೀಸಿಯಾದ ಕ್ರಾಂತಿ ಸೌದಿ ಬ್ಲಾಗಿಗರೂ ಕುತೂಹಲದಿಂದ ವರದಿ ಮಾಡಿದ್ದಾರೆ ಎಂದು ಅಮೆರಿಕೆಯ npr ರೇಡಿಯೋ ದ ಬಾತ್ಮೀದಾರರು ಹೇಳಿದ್ದಾರೆ.

ಸೌದಿ ಅರೇಬಿಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೂ ಫೇಸ್ ಬುಕ್, ಟ್ವಿಟ್ಟರ್, ಗಳನ್ನು ಬಹಿಷ್ಕರಿಸಿಲ್ಲ. ಈ ಸಾಮಾಜಿಕ ತಾಣಗಳ ಮೂಲಕ ಜನ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ. ಕಳೆದ ದಶಕದಿಂದೀಚೆಗೆ ಇಲ್ಲಿನ ವಾರ್ತಾ ಪತ್ರಿಕೆಗಳೂ ಸಹ ಸಾಕಷ್ಟು ಮುಕ್ತವಾಗಿ ವರದಿ ಮಾಡುತ್ತಿವೆ. ಅಮೆರಿಕೆಯ ಕೆಂಗಣ್ಣಿಗೆ ಗುರಿಯಾದ al-jazeera ಟೀವೀ ಮಾಧ್ಯಮ ಕೂಡಾ ಇಲ್ಲಿ ನೋಡಲು ಲಭ್ಯ. ಅದೇ ರೀತಿ ಸೌದಿ ರಾಜ ಮನೆತನಕ್ಕೆ ವಿರುದ್ಧವಾಗಿ ಬರೆಯುವ ಗಾರ್ಡಿಯನ್, independent ಪತ್ರಿಕೆಗಳು ಇಲ್ಲಿ ಲಭ್ಯ. ವಾಣಿಜ್ಯ, ವ್ಯಾಪಾರ ಸಂಬಂಧಕ್ಕೆ ಅವಶ್ಯವಿರುವ ಪ್ರಕ್ರಿಯೆಯಲ್ಲಿ ವಿಶ್ವದಲ್ಲಿ ೧೩ ನೆ ಸ್ಥಾನ ಸೌದ್ ಅರೇಬಿಯಾಕ್ಕೆ. ಮುಕ್ತತೆಗೆ ಆಹ್ವಾನ ನೀಡಿ ಸಾಮಾಜಿಕ ಅನಿಷ್ಟಗಳನ್ನು ತನ್ನ ಮಡಿಲಿಗಿರಿಸಿ ಕೊಂಡಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಮತ್ತು ಬಹರೇನ್ ದೇಶಗಳು ಸೌದಿಗಿಂತ ತುಂಬಾ ಹಿಂದಿವೆ ವಾಣಿಜ್ಯ ನೀತಿಯಲ್ಲಿ.

ಟುನೀಸಿಯಾ ದೇಶಕ್ಕೆ ಭೇಟಿ ಕೊಟ್ಟ ಯಾರೇ ಆದರೂ ಹೇಳುವುದು ಎರಡೇ ಮಾತುಗಳನ್ನು ಸುಂದರ ದೇಶ. ಸ್ನೇಹಜೀವಿ ಜನ. ಪ್ರವಾಸೋಧ್ಯಮದ ಮೂಲಕ ದೊಡ್ಡ ರೀತಿಯಲ್ಲಿ ವಿದೇಶೀ ವಿನಿಮಯ ಗಳಿಸುತ್ತಾ, ತನ್ನ ರಮಣೀಯ ಆಲಿವ್ (olive) ಬಯಲುಗಳನ್ನೂ, ಸುಂದರ ತೀರ ಪ್ರದೇಶವನ್ನೂ ಜನರಿಗೆ ತೋರಿಸಿ ತನ್ನ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಪುಟ್ಟ ಟುನೀಸಿಯಾ ದೇಶ ಇಟ್ಟಿರುವ ದಿಟ್ಟ ಹೆಜ್ಜೆ ಅದಕ್ಕೆ ಮುಳುವಾಗದೆ ಇರಲಿ ಎಂದು ಹಾರೈಸೋಣ.

ಹೀಗೇ ಸುಮ್ಮನೆ: ಇಸ್ಲಾಮಿನ flexibility ಯ ದ್ಯೋತಕವಾಗಿ ಟುನೀಸಿಯಾ ದಲ್ಲಿ ಬಹುಪತ್ನಿತ್ವ ನಿಷಿದ್ಧ. ಇದು ಶರಿಯತ್ ಗೆ ವಿರುದ್ಧ ಎಂದು ಇಲ್ಲಿನ ಮುಲಾಗಳು ಇದುವರೆಗೂ ಅರಚಿಲ್ಲ.

Advertisements

ವ್ರತಾಚರಣೆಯ ಮಾಸ

ರಮದಾನ್, (ರಂಜಾನ್ ಎಂದೂ ಕರೆಯಲ್ಪಡುತ್ತದೆ, ramzan) ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.

ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು  ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.    

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ. ಅರುಣೋದಯದ “ಪ್ರಾರ್ಥನೆಯ ಕರೆ” ( “ಅದಾನ್” ) ಕಿವಿಗೆ ಬಿದ್ದ ಕೂಡಲೇ ಆಹಾರ, ಪಾನೀಯಗಳು ನಿಷಿದ್ಧವಾಗುತ್ತವೆ. ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ. ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ (ಇದಕ್ಕೆ “ಸುಹೂರ್” ಎಂದು ಕರೆಯುತ್ತಾರೆ) ತೆಗೆದು ಕೊಳ್ಳಲೇಬೇಕು. ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ, ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ, ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ  “ಇಫ್ತಾರ್” ಎಂದು ಕರೆಯುತ್ತಾರೆ. ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು, ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ. ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ. ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ, ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು,ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು.

ರಮದಾನ್ ಮಾಸದ ಮಹತ್ವದ ಬಗ್ಗೆ ಹೇಳುತ್ತಾ ಪ್ರವಾದಿಗಳು ಹೇಳಿದ್ದು, ರಮದಾನ್ ಮಾಸ ೭೦,೦೦೦ ತಿಂಗಳು ಗಳಿಗೆ ಸಮಾನ ಎಂದು. ಅದೂ ಅಲ್ಲದೆ ಇದೇ ತಿಂಗಳಿನಲ್ಲಿ ಪವಿತ್ರ ಕುರಾನ್ ನ ಸೂಕ್ತಗಳು ಅವತೀರ್ಣವಾಗಿದ್ದು.  ಈ ಕಾರಣಕ್ಕಾಗಿ ಜಗದಾದ್ಯಂತ ಮುಸ್ಲಿಮರು ಈ ತಿಂಗಳ ತಮ್ಮ ಬಿಡುವಿನ ವೇಳೆಯಲ್ಲಿ ಮತ್ತು ಹೆಚ್ಚು ಸಮಯ ಕುರಾನ್ ಪಾರಾಯಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಹಾಗೆಯೆ ಈ ತಿಂಗಳಿನಲ್ಲಿ ರಾತ್ರಿಯಲ್ಲಿ “ತರಾವೀಹ್” ಎಂದು ಕರೆಯಲ್ಪಡುವ ವಿಶೇಷ ಪ್ರಾರ್ಥನೆಗಳು ಸಹ ನಡೆಯುತ್ತವೆ. ಪ್ರತೀ ಆರಾಧನೆ, ದಾನ, ಒಳ್ಳೆಯ ಮಾತು, ಕೃತಿ ಇವುಗಳಿಗೆ ಪ್ರತಿಫಲ ಸಹ ೭೦,೦೦೦ ಪ್ರತಿಫಲದ ರೀತಿಯಲ್ಲಿ ದೇವರು ಕೊಡುವನೆಂದೂ ಮುಸ್ಲಿಮ್ ವಿಧ್ವಾಂಸರು ಹೇಳುತ್ತಾರೆ.      

ರಮದಾನ್ ತಿಂಗಳಿನಲ್ಲಿ ನಾವು ಮಾಡುವ ಪ್ರತೀ ಕೆಲಸವೂ ಇಸ್ಲಾಮೀ ಆದರ್ಶಗಳಿಗೆ ಪೂರಕವಾಗಿರಬೇಕೆಂದು ವಿಧ್ವಾಂಸರುಗಳು ಎಚ್ಚರಿಸುತ್ತಾರೆ. ಈ ಮಾಸದಲ್ಲಿ ಉದ್ರೇಕ ಪಡುವುದಾಗಲೀ,ಕೆರಳುವುದಾಗಲೀ ಮಾಡಬಾರದು. ಹಾಗೇನಾದರೂ ಯಾರಾದರೂ ಉದ್ರೇಕಿಸಿದರೆ “ನಾನು ವ್ರತಾಚರಣೆ ಮಾಡುತ್ತಿದ್ದೇನೆ” ಎಂದು ಹೇಳಿ ಮೌನವಾಗಿರಬೇಕು ಎಂದು ಸಲಹೆ ನೀಡುತ್ತಾರೆ. ಜ್ಞಾನಾರ್ಜನೆ, ಮತ್ತು ಸಂಯಮ ಪಾಲನೆ ರಮದಾನ್ ತಿಂಗಳ ವೈಶಿಷ್ಟ್ಯ ಎನ್ನಬಹುದು. ವ್ರತಾಚರಣೆಯ ಮೂಲಕ ರಮದಾನ್ ತಿಂಗಳು ನಮಗೆ “ಸ್ವ ನಿಗ್ರಹ” ದ ಗುಣವನ್ನೂ, ಸಂಯಮ ಶೀಲತೆಯನ್ನೂ ಕಲಿಸುತ್ತದೆ. ಈ ತೆರನಾದ ನಡವಳಿಕೆ ಮುಸ್ಲಿಮರು ಬರೀ ರಮದಾನ್ ಮಾಸಕ್ಕೆ ಸೀಮಿತಗೊಳಿಸದೆ ತಮ್ಮ ಬದುಕಿನ ಪ್ರತೀ ಘಳಿಗೆಯಲ್ಲೂ ಪಾಲಿಸಿದರೆ ದೇವರು ಯಶಸ್ಸನ್ನು ದಯಪಾಲಿಸುತ್ತಾನೆ ಸಮಾಜಕ್ಕೆ ಆದರ್ಶಪ್ರಾಯನಾಗಿ ಬದುಕುತ್ತಾನೆ.  

ಪ್ರತೀ ಮುಸ್ಲಿಂ ಮನೆಯಲ್ಲೂ ರಮದಾನ್ ಒಂದು ವಿಶೇಷ ತಿಂಗಳಾಗಿರುತ್ತದೆ. ಅದರಲ್ಲೂ ಮಕ್ಕಳಿಗೆ ಒಂದು ರೀತಿಯ ಸಂತಸ. ಐದು ವರ್ಷದ ಮೇಲ್ಪಟ್ಟ ಮಕ್ಕಳೂ ಸಹ ಪೂರ್ತಿ ತಿಂಗಳಲ್ಲದಿದ್ದರೂ ಸಾಧ್ಯವಾದಷ್ಟು ದಿಂದ ಉಪವಾಸ ಆಚರಿಸಲು ಯತ್ನಿಸುತ್ತಾರೆ. ನನ್ನ ಆರು ವರ್ಷದ ಮಗ ಕಳೆದ ಎರಡು ವರ್ಷಗಳಿಂದ ೮ – ೧೦ ದಿನ ಉಪವಾಸವಿದ್ದನು. ಸಂಜೆಯಾಗುತ್ತಿದ್ದಂತೆ ಮಕ್ಕಳು ಕಾತುರದಿಂದ ಮಸ್ಜಿದ್ ಗಳ ಗೋಪುರಗಳು ಹೊರಡಿಸುವ ಅದಾನ್ ಗಾಗಿ ಕಾದು ನಿಂತು “ಅಲಾಹು ಅಕ್ಬರ್” (ದೇವರು ಸರ್ವಶ್ರೇಷ್ಠ ) ಎನ್ನುವುದನ್ನು ಕೇಳುತ್ತಲೇ ಓಡಿ ಬಂದು ಅಮ್ಮಾ, ಅಪ್ಪಾ, ಅದಾನ್ ಆಗುತ್ತಿದೆ, ಬೇಗ ನೀರು ಕುಡಿಯಿರಿ ಎಂದು ಉತ್ತೇಜಿಸುತ್ತಾರೆ.

೩೦ ದಿನಗಳ ಉಪವಾಸ ಮುಗಿದ ನಂತರ ಚಂದ್ರ ದರ್ಶನ ವಾಗುತ್ತಲೇ “ಈದ್” ಸಂಭ್ರಮ ಎಲ್ಲೆಡೆ. ಚಂದ್ರ ದರ್ಶನ ಆಗುತ್ತಲೇ ಮಾರನೆ ದಿನದ ಈದ್ ನಂದು ಯಾರೂ ತಿನ್ನಲು ಇಲ್ಲದೆ ಬಳಲಬಾರದು ಎಂದು ಬಡಬಗ್ಗರಿಗೆ ಅಕ್ಕಿ ದಾನ ಮಾಡುತ್ತಾರೆ. ಈ ದಾನದಿಂದಾಗಿಯೇ ಈದ್ ಹಬ್ಬಕ್ಕೆ “ಈದ್ ಅಲ್ ಫಿತ್ರ್” ಎಂದು ಹೆಸರು.         

ಸೌದಿ ಅರೇಬಿಯಾದಲ್ಲಿ ರಮದಾನ್ ತುಂಬಾ ಸೊಗಸು. ಇಡೀ ತಿಂಗಳು ಮತ್ತು ಅದರ ನಂತರ ಬರುವ ಸುಮಾರು ಹತ್ತು ದಿನಗಳ ಈದ್ ಸಂಭ್ರಮ. ಇಡೀ ನಗರವೇ ಅಲಂಕಾರದಲ್ಲಿ ಮುಳುಗಿರುತ್ತದೆ. ಎಲ್ಲೆಲ್ಲೂ ವಿಶೇಷ offer ಗಳು, ಬಹುಮಾನಗಳು, ರಸ್ತೆ ಬದಿಯಲ್ಲಿ ಉಪವಾಸವಿಟ್ಟುಕೊಂಡು ಪ್ರಯಾಣ ಮಾಡುವವರಿಗೆ ಪುಕ್ಕಟೆ ತಿಂಡಿ ತೀರ್ಥಗಳ ವಿತರಣೆ, ನಿರ್ಗತಿಕರಿಗೆ, ಕೆಳಸ್ತರದ ಉದ್ಯೋಗ ಮಾಡುವವರಿಗೆ ದಾನ ಮಾಡುವಲ್ಲಿ ಪೈಪೋಟಿ, ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ಕಾಣಬಹುದು. ಕೆಲಸದ ಸಮಯವೂ ನಾಲ್ಕು ಅಥವಾ ಐದು ಘಂಟೆಗಳು. ಹಾಗಾಗಿ ಉಪವಾಸವಿರುವುದು ಬಹಳ ಸುಲಭ ಅರೇಬಿಯಾದಲ್ಲಿ.

ಕಣ್ಣು ಹೋಗಿ, ಬಂತು ಕಾರಂಜಿ

ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ ಹಾಗೆ. ಮಳೆ, ಚಳಿ ಎಲ್ಲವೂ ಇದೆ ಇಲ್ಲಿ. ಆದರೆ ತಾಯಿಫ್ ಗೆ ಹಲವು ಸಾರಿ ಹೋಗಿದ್ದರಿಂದ ತಾಯಿಫ್ ನಂಥದ್ದೆ ಮತ್ತೊಂದು ತಾಣ “ಅಲ್-ಬಾಹ” ಎನ್ನುವ ಸ್ಥಳವಿದೆ ಎಂದು ಕೇಳಿದ್ದರಿಂದ ಅಲ್ಲಿಗೆ ಹೊರಟೆವು.

ಜೆಡ್ಡಾ ದಿಂದ ೪೦೦ ಕಿ ಮೀ ದೂರ ಅಲ್-ಬಾಹಾ. ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದಲ್ಲಿರುವ ಈ ಚಿಕ್ಕ ನಗರ ಸುಡು ಬಿಸಿಲಿನಲ್ಲಿ ಬೆಂದ ಶರೀರಕ್ಕೆ ತಂಪನ್ನೀಯುವ ತಾಣ. ಸೌದಿಯಿಂದ ಮಾತ್ರವಲ್ಲದೆ ನೆರೆಯ ಕತಾರ್, ಒಮಾನ್, ಕುವೈತ್, ಬಹರೇನ್ ದೇಶಗಳಿಂದಲೂ ರಜೆಗೆ ಜನ ಇಲ್ಲಿಗೆ ಬರುತ್ತಾರೆ. ಜೆಡ್ಡಾ ಬಿಟ್ಟು ಸುಮಾರು ೨೦೦ ಕಿ ಮೀ ಕ್ರಮಿಸುತ್ತಿದ್ದಂತೆಯೇ ಭೌಗೋಳಿಕ ಬದಲಾವಣೆಗಳು ಗೋಚರಿಸ ತೊಡಗಿತು. ಅಗಾಧ ಸಾಗರದಂತೆ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಮರಳೋ ಮರಳು. ಮಟ್ಟಸವಾದ, ಸಮನಾದ ಮರುಭೂಮಿ, ಆಗಾಗ sand storm area, ಮತ್ತು ಒಂಟೆಗಳ ಪ್ರದೇಶ ಎಂದು ಸೂಚಿಸುವ ಫಲಕಗಳು. ಸೂರ್ಯನ ಅಟ್ಟಹಾಸಕ್ಕೆ ಬೆಚ್ಚಿದ ಮರಳು ರಾಶಿ ರಹದಾರಿಯ ಮೇಲೆ ಪಲಾಯಾನ ಮಾಡುವ ಸುಂದರ ದೃಶ್ಯ ನೋಡುತ್ತಾ ಹೋದಂತೆ ಸುಂದರ ಬೆಟ್ಟಗಳ ಶ್ರೇಣಿ ಗೋಚರಿಸಿತು. ಹವಾನಿಯಂತ್ರಿತ ಕಾರಿನೊಳಕ್ಕೆ ಕೂತು ನೋಡಲು ಬಹು ಸುಂದರ ದೃಶ್ಯ. ಆದರೆ ಬಟಾ ಬೆತ್ತಲೆಯಾದ (ಹಸಿರಿನ ಸುಳಿವೂ ಇಲ್ಲದ) ಬೆಟ್ಟಗಳನ್ನು ಕಾರಿನಿಂದ ಇಳಿದು ನೋಡಿದರೆ ನರಕ ಸದೃಶ ಅನುಭವ. ಅಂಥ ಬೇಗೆ. ಅಲ್-ಬಾಹಾ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಗಿಡ ಮರಗಳಿಂದ ತುಂಬಿದ ಚಿಕ್ಕ ಚಿಕ್ಕ ಬಯಲುಗಳು. ಈ ಪ್ರದೇಶದಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಮಳೆ ಆಗುವುದರಿಂದ ಹಸಿರು ತೊಡುವ ಭಾಗ್ಯ ಈ ಪ್ರದೇಶದ ನೆಲಕ್ಕೆ.

ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದ ಲ್ಲಿರುವ ಅಲ್-ಬಾಹಾ ತಲುಪಲು ಮಾಡಬೇಕು ಶಿಖರಾರೋಹಣ. ಆಗುಂಬೆ, ಚಾರ್ಮಾಡಿ, ಬಾಬಾ ಬುಡನ್ ಗಿರಿಗಳನ್ನು ನೋಡಿದ್ದ ನನಗೆ ಈ ಬೆಟ್ಟ ಇನ್ನೂ ಎತ್ತರ ಎಂದು ತೋರಿತು. ಸುತ್ತಲೂ ಆವರಿಸಿ ಕೊಂಡ ಎತ್ತರದ ಬೆಟ್ಟಗಳಿಗೆ ರಸ್ತೆ ಜೋಡಣೆ ನಿಸ್ಸಂಶಯವಾಗಿಯೂ  engineering marvel ಎನ್ನಬಹುದು. two way ರಸ್ತೆಯಾದ್ದರಿಂದಲೂ, ರಸ್ತೆಗಳ ಮಧ್ಯೆ ಯಾವುದೇ barrier ಇಲ್ಲದಿದ್ದರಿಂದಲೂ ನಿಧಾನವಾಗಿ ಚಲಿಸಿ ಎನ್ನುವ ಫಲಕಗಳು, ಮಾತ್ರವಲ್ಲ ರಸ್ತೆಯ ಒಂದು ಕಡೆ ಬೆಟ್ಟದ ಆಸರೆ ಇದ್ದರೆ ಮತ್ತೊಂದು ಕಡೆ ವಾಹನ ಕೆಳಗುರುಳದಂತೆ ಭಾರೀ ಗಾತ್ರದ ಮೂರಡಿ ಎತ್ತರದ ಕಾಂಕ್ರೀಟ್ ಗೋಡೆಗಳು. ಹತ್ತಾರು ಬೆಟ್ಟಗಳನ್ನು ಬಳಸಿ ಹೋಗುವ ರಸ್ತೆಗೆ ೨೫ ಸುರಂಗಗಳು, ಅಲ್ಲಲ್ಲಿ ಕಣಿವೆಯಿಂದ ಕಣಿವೆಗೆ ಕಟ್ಟಿದ ಸೇತುವೆಗಳು. ತೈಲ ಸಂಪತ್ತು ತನ್ನ ಕಾರ್ಯ ಕ್ಷಮತೆಯನ್ನು ತೋರಿಸುವುದು ಇಂಥ ಸ್ಥಳಗಳಲ್ಲಿ.

ಅಲ್-ಬಾಹ ದಲ್ಲಿ ಸುತ್ತಾಡುತ್ತಿದ್ದಾಗ  “ಥೀ ಐನ್” ಎಂದು ಸಾರಿಗೆ ಫಲಕಗಳಲ್ಲಿ ಕಾಣುತ್ತಿತ್ತು. ಈ ಹೆಸರು ನನಗೆ ವಿಚಿತ್ರವಾಗಿ ಕಂಡಿತು. ಇದೂ ಯಾವುದಾದರೂ ಒಂದು ವಿಶೇಷವಾದ ಚಿಕ್ಕ ಪಟ್ಟಣವಿರಬೇಕು, ಅದರ ಬಗ್ಗೆ ಯಾರಿಗಾದರೂ ಕೇಳೋಣ ಅಂದರೆ ಇಲ್ಲಿ ಇಂಥ ವಿಷಯಗಳಲ್ಲಿ, ಅದರಲ್ಲೂ ಚಾರಿತ್ರಿಕ ವಿಷಯಗಳಲ್ಲಿ ಜನರಿಗೆ ಒಲವು, ಆಸಕ್ತಿ ಕಡಿಮೆಯೇ. ಸರಿ ಶುಕ್ರವಾರದ ಪ್ರಾರ್ಥನೆ ಮುಗಿಸಿದ ಕೂಡಲೇ ಹೊರಟೆವು ಜೆದ್ದಾದ ಕಡೆ ಹೋಗುವ ಸ್ಥಳಗಲ್ಲಿ ಇನ್ಯಾವುದಾದರೂ ಪ್ರೇಕ್ಷಣೀಯ ಸ್ಥಳವಿದ್ದರೆ ಕತ್ತಲಾಗುವ ಮುನ್ನ ನೋಡಿಕೊಂಡು ಜೆಡ್ಡಾ ಸೇರಬಹುದು ಎನ್ನುವ ಎಣಿಕೆಯೊಂದಿಗೆ. ಮತ್ತದೇ ೨೫ ಸುರಂಗಗಳನ್ನು ತೂರಿಕೊಂಡು, ಚುಮು ಚುಮು ಮಳೆಗೆ ಹಿತವಾಗಿ, ನಗ್ನವಾಗಿ ಬಿದ್ದು ಕೊಂಡಿದ್ದ ಬೆಟ್ಟಗಳ ಸಾಲನ್ನೂ, ಒದ್ದೆಯಾದ ರಸ್ತೆಗಳ ಮೇಲೆ ವಾಹನಗಳು ಹೊರಡಿಸುವ ಕಾರಂಜಿ ಗಳನ್ನು ನೋಡುತ್ತಾ ಘಾಟಿ ಇಳಿದು ಒಂದ್ಹತ್ತು ಕಿ ಮೀ ದೂರ ಬರುತ್ತಿದ್ದಂತೆಯೇ ಮತ್ತದೇ ಫಲಕ ಕಾಣಿಸಿತು “ಧೀ ಐನ್”. ಈ ಸ್ಥಳ ಎಡಕ್ಕೆ ಎನ್ನುವ ನಿರ್ದೇಶನ ಕಂಡಿದ್ದೇ ಕುತೂಹಲದಿಂದ ಗಾಡಿಯನ್ನು ರಹ ದಾರಿಯಿಂದ ಚಿಕ್ಕ ಕಡಿದಾದ ರಸ್ತೆಗೆ ನಡೆಸಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಧುತ್ತೆಂದು ಎದುರಾಯಿತು ಒಂದು ಬೆಟ್ಟ, ಅದರ ತುಂಬಾ ಶಿಥಿಲಗೊಂಡ ಮನೆಗಳು. ಇದೇನಪ್ಪಾ, “ಹರಪ್ಪಾ”, “ಮೊಹೆಂಜೋದಾರೋ” ತಲುಪಿ ಬಿಟ್ಟೆನಾ ಎಂದು ಕೌತುಕದಿಂದ ಹತ್ತಿರ ಬಂದಾಗ ಬೇಲಿ. ಅಲ್ಲಿಂದಲೇ ಒಂದು ಫೋಟೋ ಕ್ಲಿಕ್ಕಿಸಿದಾಗ ನನ್ನಾಕೆಗೆ ಇನ್ನೂ ಮುಂದಕ್ಕೆ ಹೋಗಿ ಅದೇನೆಂದು ನೋಡೋಣ ಎನ್ನುವ ಆಸೆ. ಮತ್ತಷ್ಟು ದೂರ ಹೋದಾಗ ಒಂದು ಟೋಲ್ ಗೇಟ್. ವಿಚಾರಿಸಿದಾಗ ಒಳ ಹೋಗಲು ತಲೆಗೆ ೧೦ ರಿಯಾಲ್ (೧೨೫ ರೂ) ಎಂದ. ಹಣ ತೆತ್ತು ಪಾಸ್ ಪಡೆದು ಹತ್ತಿರ ಹೋದಾಗ ಎಲ್ಲಾ ಹಳೆ ಕಾಲದ ಮನೆಗಳು, ಗುಡ್ಡದ ತುಂಬಾ ಅಚ್ಚುಕಟ್ಟಾಗಿ ಖಾಲಿ ಸಿಗರೆಟ್ ಪ್ಯಾಕ್ ಗಳನ್ನು ಜೋಡಿಸಿದಂತೆ ಕಾಣುತ್ತಿತ್ತು. ಅರ್ಧ ಗುಡ್ಡ ಹತ್ತಿ ಒಂದೇ ನಮೂನೆಯ ಮನೆಗಳನ್ನು ನೋಡುತ್ತಾ ಕೆಳಗಿಳಿದಾಗ ಝರಿಯ ಸಪ್ಪಳ. ಹಾಂ, ಮರಳುಗಾಡಿನಲ್ಲಿ ಝರಿಯೇ ಎಂದು ಹೋಗಿ ನೋಡಿದಾಗ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಚಿಕ್ಕದಾದರೂ ಅರೇಬಿಯಾದಲ್ಲಿ ಝರಿ, ಕಾಲುವೆ, ಕಾರಂಜಿಗಳು, ಅಪರೂಪವೇ. ಹಾಗಾಗಿ ಇದೊಂದು ರೀತಿಯ welcome change. ತಂಪಾದ ಝರಿಯ ನೀರನ್ನು ಮುಖಕ್ಕೆ ಸಿಂಪಡಿಸಿ ಕೊಂಡು ಝರಿಯ ಮತ್ತು ಈ ಬೆಟ್ಟದ ಮೇಲೆ ವಾಸವಿದ್ದವರ ಕುರಿತು ವಿಚಾರಿಸಿದೆ.

ಸುಮಾರು ೪೦೦ ವರ್ಷಗಳ ಹಿಂದೆ ಜನ ವಾಸವಿದ್ದ ಒಂದು ಹಳ್ಳಿ “ಥೀ ಐನ್”. ಇದರ ಅರ್ಥ “ಝರಿ ಇರುವ ಹಳ್ಳಿ” ಎಂದು. ಮತ್ತೊಂದು ಅರ್ಥ “ಒಕ್ಕಣ್ಣಿನ ಮನುಷ್ಯ” ಎಂದೂ ಇದೆ. ಇದರ ಹಿನ್ನೆಲೆ ಹೀಗಿದೆ ನೋಡಿ. ನೂರಾರು ವರ್ಷಗಳ ಹಿಂದೆ ಯೆಮನ್ ದೇಶದ ಮುದುಕನ ಹತ್ತಿರ ಮಾಂತ್ರಿಕ ದಂಡ ಇತ್ತಂತೆ, ಅಲ್ಲಾವುದ್ದೀನನ ಹತ್ತಿರ ಮಾಂತ್ರಿಕ ದೀಪ ಇದ್ದಂತೆ. ಅದನ್ನು ಉಪಯೋಗಿಸಿ ನೀರನ್ನು ಕಂಡು ಹಿಡಿಯಲು ಹಳ್ಳಿಯ ಜನ ಹೇಳಿದಾಗ ಆ ಮುದುಕ ತನ್ನ ದಂಡ ದಿಂದ ನೆಲಕ್ಕೆ ಬಡಿಯುತ್ತಾನೆ. ಕೂಡಲೇ ಚಿಮ್ಮುತ್ತದೆ ನೀರಿನ ಚಿಲುಮೆ. ನೀರೆನೋ ಚಿಮ್ಮಿತು, ಆದರೆ ಅದಕ್ಕೆ ಬೆಲೆಯನ್ನೂ ತೆತ್ತ ಪಾಪದ ಮುದುಕ; ನೆಲಕ್ಕೆ ಬಡಿದ ದಂಡ ಅವನ ಕಣ್ಣಿನ ಮೇಲೆ ಬಿದ್ದು  ತನ್ನ ಒಂದು ಕಣ್ಣನ್ನು ಕಳೆದು ಕೊಳ್ಳುತ್ತಾನೆ. ಜನರಿಗೆ ಉಪಕಾರ ಮಾಡಲು ಹೋಗಿ ಒಂದು ಕಣ್ಣನ್ನು ಕಳೆದುಕೊಂಡ ಯೆಮನ್ ದೇಶದ ವೃದ್ಧನ ಕತೆಯನ್ನು ಮೆಲುಕು ಹಾಕುತ್ತಾ ಜೆಡ್ಡಾ ಕಡೆ ಪ್ರಯಾಣ ಬೆಳೆಸಿದೆ.

ಪ್ರಯಾಣದ ವೇಳೆ ತೆಗೆದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇನೆ. ನೋಡಿ, ಏನಾದರೂ ಅರ್ಥ ಆಗುತ್ತಾ ಅಂತ. ಏಕೆಂದರೆ ಹೇಳಿಕೊಳ್ಳುವಂಥದ್ದಲ್ಲದ ಕ್ಯಾಮರ ಮತ್ತು ಬೆನ್ನು ತಟ್ಟಿ ಕೊಳ್ಳುವಂಥ “ಕಲೆ”ಯಿಲ್ಲದೆ ತೆಗೆದ ಚಿತ್ರಗಳಿವು. ಇಂಥ ಚಿತ್ರಗಳನ್ನ ನೋಡಲು ಬಲವಂತ ಪಡಿಸಿದ್ದಕ್ಕೆ ಕ್ಷಮೆಯಿರಲಿ.   

 

ಸೌದಿ ಅರೇಬಿಯಾದಲ್ಲಿ ಬಂದ್ ಗೆ ಕರೆ

ನಿರಂಕುಶ ರಾಜಪ್ರಭುತ್ವ ಇರುವ, democracy ಎಂದರೆ ಡೈನೋಸಾರಾ ಎಂದು ಗಾಭರಿಯಲ್ಲಿ ಕೇಳುವ ಅರೇಬಿಯಾದಲ್ಲಿ ಎಂಥ ಬಂದ್ ಎಂದಿರಾ? ನಮ್ಮಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅಥವಾ ವಿರೋಧಪಕ್ಷಗಳವರ ಜೀವ ಸುಟ್ಟು ತಿನ್ನಲು ನೀಡುವ ಕರೆಗೆ ಸ್ವಲ್ಪ ಭಿನ್ನ ಅರೇಬಿಯಾದ ಬಂದ್. ಎಷ್ಟೇ ಗಡಿಬಿಡಿ ಇದ್ದರೂ ನಮ್ಮನ್ನು ಸೃಷ್ಟಿಸಿ ಈ ಭೂಲೋಕಕ್ಕೆ ತಂದ ಆ ದೇವನನ್ನು ಆರಾಧಿಸಲು ಅಂಗಡಿ ಮುಂಗಟ್ಟುಗಳು ಬಂದ್ ಆಚರಿಸುತ್ತವೆ. ಬಹುತೇಕವಾಗಿ ಭಗವಂತನಿಗಾಗಿರುವ ಈ ಬಂದ್ ಸ್ವ-ಪ್ರೇರಣೆಯಿಂದ ನಡೆಯುತ್ತದೆ. ಕೆಲವೊಮ್ಮೆ “promotion of virtue and prevention of vice” department ಗೆ ಸೇರಿದ ಪೊಲೀಸರು (ಇವರನ್ನು “ಹಯ್ಯ” ಎಂತಲೂ ಕರೆಯುತ್ತಾರೆ) ಈ ಕಾನೂನನ್ನು ಜಾರಿ ಗೊಳಿಸುತ್ತಾರೆ. ಇವರ ಕೆಲಸವೇ ಜನರು ಪ್ರಾರ್ಥನೆಗೆ ಹೋಗುವಂತೆ ಮಾಡುವುದು.

ಪ್ರಥಮವಾಗಿ ಸೌದಿ ಅರೇಬಿಯಾಕ್ಕೆ ಬರುವವರಿಗೆ ಇದೊಂದು ವಿಚಿತ್ರ ವಿದ್ಯಮಾನವಾಗಿ ಕಾಣುತ್ತದೆ. ಪ್ರಪಂಚದಲ್ಲಿ ಬೇರಾವುದೇ ಮುಸ್ಲಿಂ ರಾಷ್ಟ್ರಗಳಲ್ಲೂ ಈ ರೀತಿಯ ವ್ಯವಸ್ಥೆಯಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ತೋರಿದರೂ ಬಹಳಷ್ಟು ಜನರಿಗೆ ಒಂಥರಾ ಕಿರಿಕಿರಿ. ಯಾವುದಾದರೂ ಕೆಲಕ್ಕೆಂದು ಹೊರಟರೆ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. ಅದರಲ್ಲೋ ಚಳಿ ಗಾಳದಲ್ಲಿ ಸಂಜೆಯ ಮತ್ತು ರಾತ್ರಿಯ ಪ್ರಾರ್ಥನೆಗಳ ಮಧ್ಯೆ ಕೇವಲ ಒಂದು ಘಂಟೆಯ ಅಂತರ. ಅಂಥ ಸಮಯದಲ್ಲಿ ರಾತ್ರಿಯ ಪ್ರಾರ್ಥನೆ ಮುಗಿದ ನಂತರವೇ ಶಾಪಿಂಗ್ ಹೋಗುವುದು ಲೇಸು. ಜೆಡ್ಡಾ ರಾತ್ರಿ ಬದುಕಿಗೆ ಖ್ಯಾತ. ಬಹುತೇಕ ಅಂಗಡಿಗಳು ಮಧ್ಯ ರಾತ್ರಿ ವರೆಗೆ ತೆರೆದಿರುತ್ತವೆ, ಕೆಲವೊಂದು ಸೂಪರ್ ಮಾರ್ಕೆಟ್ ಗಳು ೨೪ ಘಂಟೆಯೂ ತೆರೆದಿರುತ್ತವೆ. ಹೀಗೆ ಪ್ರಾರ್ಥನೆಗೆಂದು ಅಂಗಡಿ ಮುಂಗಟ್ಟುಗಳು ಮುಚ್ಚುವ ಪರಿಪಾಠ ಕೆಲವರಿಗೆ ಬೇಸರ, ಕೋಪ ತರಿಸುತ್ತದೆ. any time is prayer time here ಎಂದು ಒಬ್ಬ ಬಿಳಿಯ ಅಸಹನೆಯಿಂದ ನನ್ನಲ್ಲಿ ಹೇಳಿದ. ಅವನೇಕೆ ನನ್ನ ಆರು ವರ್ಷದ ಮಗನೂ ಮೊನ್ನೆ ಇದೇ ರೀತಿಯ ಮಾತನ್ನಾಡಿದ. ಜರೀರ್ ಪುಸ್ತಕದಂಗಡಿ ನೋಡಿದಾಗೆಲ್ಲಾ ಅಪ್ಪ, ಜರೀರ್ ಗೆ ಹೋಗೋಣ ಬಾ (ಜರೀರ್ ಇಲ್ಲಿನ ಸುಪ್ರಸಿದ್ಧ ಪುಸ್ತಕ ಮಳಿಗೆ) ಎಂದು ಗೋಗರೆದಾಗ ಆ ಸಮಯ ಪ್ರಾರ್ಥನೆಯ ಸಮಯವಾಗಿರುತ್ತದೆ. i dont like salah, every day is salah time ಎಂದು ತನ್ನ ತನ್ನ ಹರುಕು ಮುರುಕು ಆಂಗ್ಲ ಭಾಷೆಯಲ್ಲಿ ಸಿಡಿದೇಳುತ್ತಾನೆ. ನನಗೆ “ಸಲಾ” ಇಷ್ಟವಿಲ್ಲ, ಯಾವಾಗ ನೋಡಿದರೂ ಸಲಾ ಸಮಯ ಎಂದು ಅವನು ಹೇಳುವ ರೀತಿ ಇದು.

“ಸಲಾ” ಎಂದರೆ ಅರಬಿ ಭಾಷೆಯಲ್ಲಿ “ಆರಾಧನೆ”. ನಾವು ನಮಾಜ್ ಎಂದು ಹೇಳುತ್ತೆವಲ್ಲ, ಅದು. ಸಲಾ ಎನ್ನುವ ಪದ “ಸಿಲ್” ಎನ್ನುವ ಪದದಿಂದ ಬಂದಿದ್ದು ಮತ್ತು “ಸಿಲ್” ಎಂದರೆ ಸಂಪರ್ಕ ಅಂತ. ವಾಹ್, ನಮ್ಮನ್ನು ಮಣ್ಣಿನಿಂದ ಸೃಷ್ಟಿಸಿ, ದೇವದೂತರಿಂದ ನಮಗೆ ಸಾಷ್ಟಾಂಗ ಮಾಡಿಸಿ ಅವನ ಉತ್ತಾರಾಧಿಕಾರಿಯಾಗಿ ಭೂಲೋಕ ಆಳಲು ಕಳಿಸಿದ ಪರಮಾತ್ಮನೊಂದಿಗೆ ಸಂಪರ್ಕ. ನೇರ ಸಂಪರ್ಕ. ಯಾರ ಮಧ್ಯಸ್ಥಿಕೆಯೂ ಇಲ್ಲದ ನೇರ ಒಡನಾಟ.ಇಂಥ ಪರಮಾತ್ಮನಿಗೆ ಸಾಷ್ಟಾಂಗ ಎರಗಲು ಸಮಯ ನಿಗದಿ ಪಡಿಸಿದರೆ ನಮ್ಮ ಶಾಪ್ಪಿಂಗ್ ತೆವಲಿಗೆ ಇದು ಅಡ್ಡ ಎಂದು ಅದರ ವಿರುದ್ಧ ನಮ್ಮ ತಗಾದೆ.

ನೀವು ಶಾಪಿಂಗ್ ಮಾಡುತ್ತಿರುವಾಗ ನಮಾಜಿನ ಕರೆ ಮೊಳಗಿದರೂ ನಿಮ್ಮನ್ನು ಹೊರಗಟ್ಟುತ್ತಾರೆ. ನೀವು ಗೋಣಿ ಚೀಲ ಭರ್ತಿ ರೊಕ್ಕ ಇಟ್ಟುಕೊಂಡು ಹೋಗಿದ್ದರೂ ಆ ಹಣ ಅಂಗಡಿಯವನಿಗೆ ಬೇಡ. ಮೊದಲು ಪ್ರಾರ್ಥನೆ ನಂತರ ನಿನ್ನ ವ್ಯಾಪಾರ ಎನ್ನುತ್ತಾರೆ. ಅಷ್ಟೊಂದು ಭಯ ಕಾನೂನಿನದು. ಪೊಲೀಸರು ಬಂದರೆ ಸರಿಯಾದ ದಂಡ ವಿಧಿಸುತ್ತಾರೆ ಎಂದು ಭಯ. ಕೆಲವೊಮ್ಮೆ ನನಗೂ ಅನ್ನಿಸುವುದುಂಟು. ಭಗವಂತನ ಆರಾಧನೆಗೆ ಮೂರನೆಯವರ ಬಲವಂತ ಏಕೆ ಎಂದು.

ಜೆಡ್ಡಾದಲ್ಲಿ ಸಾರಿಗೆ ತಡೆ ಸಿಕ್ಕಾಪಟ್ಟೆ. ಎಲ್ಲರ ಹತ್ತಿರವೂ ಕಾರು. ಇಲ್ಲದೆ ಏನು, ಪೆಟ್ರೋಲ್ ಒಂದು ಲೀಟರ್ ಗೆ ಇಲ್ಲಿನ ೪೫ ಪೈಸ (ಭಾರತದ ಐದು ರೂಪಾಯಿಗಿಂತ ಕಡಿಮೆ). ಕಾರನೂ ಸಾಕುವುದು ಸುಲಭ ತಾನೇ. ಹೀಗೆ ಈ ಟ್ರಾಫಿಕ್ ಅನ್ನು ದಾಟಿಕೊಂಡು ಅಂಗಡಿ ಸೇರಿದೆವು ಅನ್ನುವಷ್ಟರಲ್ಲಿ ಸಲಾ ಟೈಂ. ಕೆಲವೊಮ್ಮೆ ಶಾಪಿಂಗ್ ಮಧ್ಯೆ ನಮಾಜಿನ ಸಮಯವಾದರೂ ನಿರ್ದಾಕ್ಷಿಣ್ಯದಿಂದ ಹೊರಗಟ್ಟುತ್ತಾರೆ. ಆದರೆ ಎಲ್ಲಾ ಮಾಲುಗಳಲ್ಲೂ, ಇನ್ನಿತರ ಸ್ಥಳಗಳಲ್ಲೂ ಆರಾಧನೆಗೆ ವಿಶೇಷ ಸೌಲಭ್ಯವಿದೆ. ಏನಿಲ್ಲವೆಂದರೂ ಪ್ರತಿಯೊಬ್ಬರ ಕಾರಿನಲ್ಲಿ ಚಿಕ್ಕ ಕಂಬಳಿ (prayer rug) ಇರುತ್ತದೆ. ಎಲ್ಲಿ ನಿಂತಿರುತ್ತಾರೋ ಅಲ್ಲೇ ಹಾಸಿ ಭಗವಂತನ ಸ್ತುತಿ ಮಾಡುತ್ತಾರೆ.      

ಒಮ್ಮೆ ನಾನು ನನ್ನ ಸೋದರಿಯ ಟಿವಿ ರೆಪೇರಿ ಮಾಡಿಸಲೆಂದು “ಬಲದ್” ಎಂದು ಕರೆಯಲ್ಪಡುವ ಜೆಡ್ಡಾ ನಗರದ ಪ್ರಮುಖ ಆಕರ್ಷಣೆಯ ವಲಯಕ್ಕೆ ಹೋದೆ. ಆಗ ತಾನೇ ಸೂರ್ಯ ಅಸ್ತಮಿಸುತ್ತಿದ್ದ. ಸೂರ್ಯಾಸ್ತಮಾನದ ಪ್ರಾಥನೆಯ ಸಮಯ ಇನ್ನೂ ಸ್ವಲ್ಪ ಹೊತ್ತಿನಲ್ಲಿ ಶುರು ಆಗುವುದರಲ್ಲಿತ್ತು. ಅಷ್ಟರಲ್ಲೇ ಅಂಗಡಿ ತಲುಪಿದ ನಾನು ಅಂಗಡಿಯವನಿಗೆ ಟಿವಿ ಒಪ್ಪಿಸಿ ಬೇಕಾದ ಕಾಗದ ಅವನಿಂದ ಪಡೆದು ಅಂಗಡಿ ಹೊರಗೆ ಕಾಲಿಡುವಷ್ಟರಲ್ಲಿ ಬಂದರು ಪೊಲೀಸರು. ಅಂಗಡಿಯ ಮುಂದೆ ಜೀಪ್ ನಿಲ್ಲಿಸಿದ್ದೆ, ಧಡ ಧಡ ಇಳಿದು ನನ್ನನ್ನೂ, ಅಂಗಡಿಯ ಬಾಗಿಲು ಹಾಕುತ್ತಿದ್ದವನನ್ನೂ, ಇನ್ನಿಬ್ಬರನ್ನೂ ಜೀಪ್ ಹತ್ತಿಸಿದರು. ನಾವು ಪ್ರಾಥನೆಗೆ ಹೋಗಲೇ ಹೊರಟಿದ್ದು ಎಂದು ಹೇಳಿದರೂ ಕೇಳದೆ ನಮ್ಮಿಂದ ನಮ್ಮ ಗುರುತು ಚೀಟಿ ಪಡೆದುಕೊಂಡು ಓಡಿಸಿದರು ಜೀಪನ್ನು ಹತ್ತಿರದಲ್ಲೇ ಇದ್ದ ಮಸೀದಿಗೆ. ನನ್ನೊಂದಿಗೆ ಇದ್ದ ನಮ್ಮ ಆಫೀಸಿನ ಹುಡುಗನೊಬ್ಬ ಹೆದರಿ ಈಗೇನಾಗಬಹುದು ಎಂದು ಕಣ್ ಸನ್ನೆಯಿಂದ ಕೇಳುತ್ತಿದ್ದ. ಪಾಪ ಅವನು ಭಾರತದಿಂದ ಬಂದ ಹೊಸತು. ಎಂಥ ಸ್ವಾಗತ ಸಿಕ್ಕಿದೆ ಇವನಿಗೆ ಎಂದು ನನಗೆ ಒಂದು ಕಡೆ ನಗು, ಮತ್ತೊಂದು ಕಡೆ ಕನಿಕರ. ನನಗಂತೂ ಇಂಥವನ್ನು ಕೇಳಿ, ಓದಿ ಸಾಕಷ್ಟು ಪರಿಚಯವಿತ್ತು. ನಾವೇನೂ ಕಳ್ಳ ಕಾಕರಲ್ಲವಲ್ಲ. ಭಯ ಏಕೆ ಎಂದು ಅವರು ತಂದು ಬಿಟ್ಟ ಮಸೀದಿಯ ಬಳಿ ಇಳಿದೆ. ಪೊಲೀಸ್ ಜೀಪಿನಿಂದ ಇಳಿದ ನಮ್ಮನ್ನು ನೋಡಲು ಜನರಿಗೆ ಒಂಥರಾ ಮೋಜು. ಆಹಾ, ನಮಾಜ್ ಮಾಡದೆ ಅಡ್ಡಾಡುತ್ತೀರಾ  ಎಂದು ತುಂಟತನದಿಂದ ನಮ್ಮೆಡೆ ನೋಟ ಬೀರಿ ನಗುತ್ತಿದ್ದರು. ಒಂದು ರೀತಿಯ ಅವಮಾನ ತಾನೇ? ನಮಾಜಿನ ಸಮಯದಲ್ಲಿ ನಮಾಜ್ ಮಾಡುವುದು ಬಿಟ್ಟು ಟಿವಿ ರೆಪೇರಿ, ಮತ್ತೇನೋ ಕೆಲಸ. ಸರಿ ನಾವು ಓಡಿ ಹೋಗದಂತೆ ನಮ್ಮ ಗುರುತಿನ ಚೀಟಿ ಜಪ್ತಿ ಆಗಿದೆಯಲ್ಲ. ನಾವು ನಮಾಜ್ ಮಾಡಿ ಜೀಪಿನ ಹತ್ತಿರ ಬಂದು ಪೊಲೀಸರೊಂದಿಗೆ ನಮ್ಮ ಯಾತ್ರೆ ಠಾಣೆಯ ಕಡೆ. ನಮಾಜ್ ಮಾಡಿಸಿ ಸುಮ್ಮನೆ ತಾಂಬೂಲ ಕೊಟ್ಟು ಕಳಿಸುವುದಿಲ್ಲ. ಠಾಣೆಗೆ ಹೋಗಬೇಕು. ಸರಿ ಠಾಣೆ ತಲುಪಿದೆವು. ಅಲ್ಲಿದ್ದ ಅಧಿಕಾರಿ ಸೌಮ್ಯವಾದ ಸ್ವರದಲ್ಲಿ ಕೇಳಿದ ನಮಾಜ್ ಮಾಡಲು ಎಂದು ಧಾಡಿ ಎಂದು. ನಾವು ನಮ್ಮ ಕಾರಣವನ್ನು ಹೇಳುತ್ತಿದ್ದಂತೆ ಅದೇನನ್ನೋ ಅರಬ್ಬೀ ಭಾಷೆಯಲ್ಲಿ ಬರೆದು ಸಹಿ, ಹೆಬ್ಬಟ್ಟು ಒತ್ತಿಸಿಕೊಂಡು ಬಿಟ್ಟರು. ಯಾರೋ ಹೇಳಿದರು ಈ ರೀತಿ ಮೂರು ಬಾರಿ ನಮ್ಮ ಹೆಸರು ದಾಖಲಾದರೆ ಗಡೀಪಾರಂತೆ. ನಮ್ಮ ಕಾರಿನಿಂದ ಬಹು ದೂರ ಬಂದಿದ್ದೆವು. ಅವರೇನು ನಮ್ಮನ್ನು ಕರೆತಂದ ಸ್ಥಳಕ್ಕೆ ಬಿಡಲು ಅವರ ಬೀಗರೇ ನಾವು? ಟ್ಯಾಕ್ಸಿ ಹಿಡಿದು ನನ್ನ ಕಾರಿರುವ ಸ್ಥಳಕ್ಕೆ ಬಂದೆ. ಇಷ್ಟು ಸುಲಭವಾಗಿ ಸಮಸ್ಯೆ ಪರಿಹಾರವಾಗಿದ್ದು ನಮ್ಮ ಪುಣ್ಯವೆಂದೇ ಹೇಳಬೇಕು. ಮತ್ತೇನು ನೇಣು ಹಾಕುತ್ತಿದ್ದರಾ ಎಂದು ಕೇಳಬೇಡಿ. ನಮಾಜ್ ಮಾಡಿಸಿ, ಠಾಣೆಗೆ ತಂದ ನಂತರ ಕೆಲವು ತಲೆ ಕೆಟ್ಟ ಪೊಲೀಸರು ಅವರದೇ ಆದ ರೀತಿಯಲ್ಲಿ ರಾಟೆ ಏರಿಸುತ್ತಾರೆ. ಅಂದರೆ ನಿಮಗೆ ನಮಾಜ್ ಗೊತ್ತಲ್ಲ. ನಿಲ್ಲುವುದು, ಬಾಗುವುದು, ಸಾಷ್ಟಾಂಗ ಎರಗುವುದು, ನಂತರ ಮಗುದೊಮ್ಮೆ ನೇರವಾಗಿ ನಿಲ್ಲುವುದು. ಒಂದು ರೀತಿಯ ಶಾಸ್ತ್ರೀಯ ನೃತ್ಯ, ಕ್ಷಮಿಸಿ ಶಾಸ್ತ್ರೀಯ ಭಸ್ಕಿ. ಹೀಗೆ ಮೂರು ಸಲ ಆವರ್ತಿಸಿದಾಗ ಸೂರ್ಯಾಸ್ತಮಾನದ ನಮಾಜ್ ಮುಗಿದಂತೆ.  ಈ ರೀತಿಯ ಬಾಗುವುದು, ಏಳುವುದು ಈ ಸರ್ಕಸ್ಸನ್ನು ಸುಮಾರು ಐವತ್ತೋ, ನೂರೋ ಸಲ ಮಾಡಿಸಿ ಬಿಡುತ್ತಾರೆ. ಅದಾದ ಮೇಲೆ ಆಗುವ ಗತಿ ಗೊತ್ತೇ ಇದೆಯಲ್ಲ, ಅನುಭವ ಚಿತ್ರದಲ್ಲಿ ಕಾಶೀನಾಥ್ ಹುಡುಗಿಯರನ್ನು ಪಟಾಯಿಸಲು ಬಾಡಿ ಬಿಲ್ಡ್ ಎಂದು ಭಸ್ಕಿ ಜೋರಾಗಿ ಹೊಡೆದು ನಡೆದ ಶೈಲಿ. ಆ ಗತಿ ನಮಾಜ್ ಮಾಡದವನಿಗೆ. ದೇವರಾದರೂ ಕನಿಕರ ತೋರಿಸಿಯಾನು, ಪೊಲೀಸರು ತೋರಿಸುವುದಿಲ್ಲ.

ಜನರಿಂದ ನಮಾಜ್ ಮಾಡಿಸಿದ ಈ ಪೊಲೀಸರು ಬಿಡುವಿದ್ದರೆ ಮಾಲ್ ಗಳಿಗೆ ಹೋಗುತ್ತಾರೆ ಚೇಷ್ಟೆಗೆಂದು ಬರುವ ಪಡ್ಡೆ ಹುಡುಗ ಹುಡುಗಿಯರಿಗಾಗಿ. ಸ್ವಲ್ಪ ಅನುಮಾನ ಕಂಡರೂ ಸಾಕು ಅವರನ್ನು ಕರೆದು ತಾಕೀತು ಮಾಡುತ್ತಾರೆ, ಇಲ್ಲಾ ಭಸ್ಕಿ ಹೊಡೆಸಿ ಗೋಳು ಹೊಯ್ದುಕೊಳ್ಳುವ ಪೋಲೀಸರಾದರೆ ಅಪ್ಪಂದಿರನ್ನು ಕರೆಸುತ್ತಾರೆ ಠಾಣೆಗೆ. ಜನ್ಮ ಕೊಟ್ಟರೆ ಸಾಲದು, ಸರಿಯಾಗಿ ಸಾಕಬೇಕು ಎಂದು ಬುದ್ಧಿ ಹೇಳಲು. ಇವರ ವಿರುದ್ಧ ಯಾರೂ ಸೊಲ್ಲೆತ್ತುವುದಿಲ್ಲ, ಏಕೆಂದರೆ ಇವರ ವಿರುದ್ಧ ನೀವು ನ್ಯಾಯಾಲಯದ ಮೆಟ್ಟಿಲು ಹತ್ತಿದರೂ ಪ್ರಯೋಜನವಿಲ್ಲ, ನ್ಯಾಯ ಹೇಳುವವನೂ ಇವರ ವರ್ಗಕ್ಕೇ ಸೇರಿದವನು. 

ಒಮ್ಮೆ ನಗರದ ಮಧ್ಯ ಭಾಗದಲ್ಲಿರುವ ಹಿರಾ ಮಾಲ್ನಲ್ಲಿ ಅಡ್ಡಾಡುತ್ತಾ ಇರುವಾಗ ಕಂಡಿದ್ದು. ನಾಲ್ಕು ಜನ ಹುಡುಗರು ಬೆರ್ಮುಡ, ಉದ್ದದ ಕೂದಲು, ಕೊರಳಿಗೆ ಸರ, ಕೈಗೆ ಕಡಗ ಹೀಗೆ ಒಂದು ಥರಾ ಜಿಪ್ಸಿ ಗಳ ಥರಾ ನಡೆಯುತ್ತಿದ್ದರು. ಆಗಮನವಾಯಿತು ಈ ಪೊಲೀಸರದು.  ಸಮಾಜದಲ್ಲಿ ನೈತಿಕತೆ ಕಾಪಾಡಲು ನಿಯಮಿಸಲ್ಪಟ್ಟ “ಮುತಾವಾ”ಗಳು. ಆ ಹುಡುಗರನ್ನು ನಿಲ್ಲಿಸಿ ಶುರು ಮಾಡಿದರು ಪ್ರಶ್ನೆಗಳನ್ನು. ಕೂದಲು ಹೀಗೇಕೆ ಬಿಟ್ಟಿದ್ದೀಯ, ಇದೇನು ನಿನ್ನ ಅವತಾರ, ನೀವೆಲ್ಲಿ ವಾಸವಾಗಿದ್ದೀರಾ….. ಹುಡುಗರು ಭಯದಿಂದ ಕೇಳಿದ ಪ್ರಶ್ನೆಗಳಿಗೆ ತಡಬಡಿಸಿ ಉತ್ತರಿಸಿ ಇನ್ನು ಈ ವೇಷದಲ್ಲಿ ನಾವು ಅಡ್ಡಾಡುವುದಿಲ್ಲ ಎಂದು ಹೇಳಿ ಅವರ ಕೈಗಳಿಂದ ತಪ್ಪಿಸಿಕೊಂಡರು. ಕೆಲವೊಮ್ಮೆ ಇಷ್ಟರಲ್ಲೇ ನಿಲ್ಲುತ್ತದೆ ಈ ವಿಚಾರಣೆ, ಒಂದಿಷ್ಟು ಕೌನ್ಸೆಲಿಂಗ್ನೊಂದಿಗೆ. ಒಂದು ದಿನ ನಾನು ನನ್ನ ಶ್ರೀಮತಿ ಮಕ್ಕಾದ ಮಸೀಯಿಂದ ಹೊರ ನಡೆಯುತ್ತಿದ್ದಾಗ ಬಂದ ಇಂಥದ್ದೇ ಒಬ್ಬ ಪೋಲೀಸಪ್ಪ. ನನ್ನನ್ನು ತಡೆದು ನಿನ್ನ ಪತ್ನಿಯೇಕೆ perfume ಧರಿಸಿದ್ದಾಳೆ ಎಂದು. ನೀನೆಕಪ್ಪ ನನ್ನ ಹೆಂಡತಿಗೆ ಮೂಗು ತಾಗಿಸಿದ್ದು ಎಂದು ಕೇಳಲು ಮನಸ್ಸಾದರೂ ನಿನ್ನ ಮೂಗಿಗೆ ಬಡಿದಿದ್ದು ನನ್ನ Mont Blanc ಪರ್ಫ್ಯೂಂ ಎಂದು ಹೇಳಿ ಮುಂದೆ ನಡೆದೆ. ಸ್ತ್ರೀಯರು ಸುಗಂಧ ದ್ರವ್ಯ ಹಚ್ಚಿಕೊಳ್ಳಬಾರದು, ಅದು ಪರ ಪುರುಷರಿಗೆ open invitation.

ಕೆಲವೊಮ್ಮೆ ನವಿರಾಗಿ ವರ್ತಿಸುವ “ಮುತಾವಾ” ಎಂದೂ ಕರೆಯಲ್ಪಡುವ ಈ ಸಮಾಜ ಸುಧಾರಕರಿಂದ  ಸಮಾಜಕ್ಕೇನೋ ಒಳ್ಳೆಯದೇ. ಇಲ್ಲಿನ ನಿಯಮಿತ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಅನಿಯಮಿತವಾಗಿ ವರ್ತಿಸುವ ಯುವ ವರ್ಗಕ್ಕೆ, ಯೌವ್ವನದ ಎಗ್ಗಿಲ್ಲದ ರಭಸಕ್ಕೆ  ತಡೆ ಒಡ್ಡುವ ಇಂಥ road hump ಗಳು ಅವಶ್ಯಕ.

ಸೌದಿ ಅರೇಬಿಯಾದಲ್ಲಿ ಆಗುವ ಭಗವಂತನ ನಾಮ ಸ್ಮರಣೆ ಬೇರಾವ ದೇಶದಲ್ಲೂ ಆಗಲಿಕ್ಕಿಲ್ಲವೇನೋ. ರಸ್ತೆ ಬದಿಯಲ್ಲಿ, ಬ್ಯಾಂಕಿನಲ್ಲಿ ಸರತಿಯಲ್ಲಿ ನಿಂತಾಗ, ಜಾಹೀರಾತಿನ ಮಧ್ಯೆ ಹೀಗೆ ಎಲ್ಲೆಡೆ ದೇವರನ್ನು ಸ್ಮರಿಸಲು, ಕೊಂಡಾಡಲು ಕರೆ. ಹೀಗೆ ಸದಾ ದೇವನಾಮ ಸ್ಮರಣೆ ಮಾಡುವ ಸಮಾಜ ಅದೇ ದೇವನ ಆದೇಶವನ್ನು ಕಡೆಗಣಿಸುವುದರಲ್ಲೂ ಮುಂದು ಎಂದರೆ ನಿಮಗೆ ಅಚ್ಚರಿ ಆಗಬಹುದು. ಈ ದ್ವಂದ್ವ ನಮಗೆ ಹೇರಳವಾಗಿ ಈ ಮರಳುಗಾಡಿನಲ್ಲಿ ಕಾಣಲು ಸಿಗುತ್ತದೆ.

ಧರ್ಮ ಮತ್ತು ಹಿಂಸೆ

“ಜಗತ್ತಿನಲ್ಲಿನ ಜಿಹಾದ್ ಮೂಲಕ “ಕಾಷಿರ್”(ಸುಳ್ಳು ದೇವರ ಆರಾಧಕರು ಅಥವಾ false religion worshipers) ಜನರನ್ನು ಕೊಂದು ನಮ್ಮ ಸತ್ಯ ಮತ್ತು ಏಕೈಕ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಬೇಕು ಎಂದು ನಂಬುತ್ತದೆ” ಎಂದು ಅಂತರ್ಜಾಲದ ಮಾಧ್ಯಮವೊಂದರಲ್ಲಿ ಒಬ್ಬರ ಅಭಿಪ್ರಾಯ. ಮೇಲಿನ ಹೇಳಿಕೆ ನನ್ನ ಪ್ರಕಾರ ಬಾಲಿಶ. ಭಯೋತ್ಪಾದನೆ ಇಸ್ಲಾಂ ಧರ್ಮ ವಿರೋಧಿ ಎಂದು ಭಾರತದ ಮಾತ್ರವಲ್ಲ ಜಗತ್ತಿನ ಎಲ್ಲಾ ಮುಸ್ಲಿಮ ಧರ್ಮಗುರುಗಳು (ಉಲೇಮ) ಹೇಳಿಕೆ ನೀಡಿದ್ದಾರೆ. “ಕಾಫಿರ್” ಅನ್ನುವ ಪದದ ಬಗ್ಗೆ ಬಹಳಷ್ಟು ವಿವಾದಗಳಿವೆ. ಮುಸ್ಲಿಮೇತರರನ್ನು ಕಾಫಿರರೆಂದು ತೆಗಳಬಾರದು ಮತ್ತು ಸಂಬೋಧಿಸಬಾರದೆಂದು ಮುಸ್ಲಿಂ ಪಂಡಿತರ ಅಭಿಪ್ರಾಯ. ಅಷ್ಟಕ್ಕೂ ಕಾಫಿರ್ ಅನ್ನುವ ಪದಕ್ಕೆ ಹಲವು ಅರ್ಥಗಳಿವೆ. ಕಾಫಿರ್ ಅಂದರೆ “ವಿರೋಧಿಸುವವ” ಮತ್ತು “ಮರೆಮಾಚುವವ” ಎಂದೂ ಅರ್ಥೈಸುತ್ತಾರೆ. ಹೊಲದಲ್ಲಿ ರೈತ ಬೀಜ ಬಿತ್ತುವುದಕ್ಕೆ “ಕುಫ್ರ್” (ಕಾಫಿರ್ ನ ಮೂಲ ಪದ “ಕುಫ್ರ್”) ಎನ್ನುತ್ತಾರೆ, ಅಂದರೆ ಆತ ಬೀಜವನ್ನು ಬಿತ್ತಿ ಮಣ್ಣಿನಿಂದ ಮುಚ್ಚುತ್ತಾನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಮುಸ್ಲಿಮರನ್ನು ಧ್ವೇಷದಿಂದ ನಾವು ಸಾಬ, ತುರ್ಕ, ಮುಸಲ, “ಹಲಾಲ್ ಖೋರ್” (ಸಂಪದದಲ್ಲಿ ಕೇಳಿದ್ದು) ಹೀಗೆ ವಿವಿಧ ನಾಮಾವಳಿಗಳಿಂದ ಕರೆದು ಹಿಗ್ಗುವುದು ಒಂದು ಪರಿಪಾಠವಾದಾಗ ಹಾಗೆ ಕರೆಯುವವರನ್ನು ಬಹುಶಃ ಮುಸ್ಲಿಮರು ಬೇಸರದಿಂದ ಕಾಫಿರರೆಂದು ಕರೆಯುತ್ತಾರೇನೋ. ಆದರೂ ಬಹುಪಾಲು ಮುಸ್ಲಿಮರು ಹಿಂದೂಗಳನ್ನು ಹಾಗೆ ಕರೆಯುವುದನ್ನು ನಾನು ಕೇಳಿಲ್ಲ. (personally, any amount of provocation will not entice or induce me to label people as kafirs) ಒಬ್ಬನ ಮನಸ್ಸನ್ನು ನೋಯಿಸುವುದು, ಘಾಸಿಗೊಳಿಸುವುದು ಒಂದು ಮಸೀದಿಯನ್ನು ಕೆಡವಿದಂತೆ ಎಂದು ಹಿರಿಯರು ಹೇಳುತ್ತಾರೆ. ಅಂಥ ಉನ್ನತ ಸಂಸ್ಕಾರದಲ್ಲಿ ಮಿಂದ ಒಬ್ಬ ವ್ಯಕ್ತಿ ಯಾರ ಮನಸ್ಸನ್ನೂ ನೋಯಿಸುವುದಿಲ್ಲ.

“ಸೆಮೆಟಿಕ್” ಧರ್ಮಗಳು ಎಂದರೆ ಪ್ರವಾದಿ ಅಬ್ರಹಾಮರ ಧರ್ಮವನ್ನು ನಂಬಿ ನಡೆಯುವವರು ಎಂದು ಸಾಮಾನ್ಯ ತಿಳಿವಳಿಕೆ. ಸೆಮೆಟಿಕ್ ಪದಕ್ಕೆ ಬಹು ದೊಡ್ಡ ವ್ಯಾಖ್ಯಾನವಿದೆ. ಯಹೂದ್ಯ, ಕ್ರೈಸ್ತ, ಇಸ್ಲಾಂ ಧರ್ಮಗಳು ಸೆಮೆಟಿಕ್. ಆದರೂ ಸಹ ಕ್ರೈಸ್ತರು ಮತ್ತು ಯಹೂದ್ಯರು ಇಸ್ಲಾಮ್ ಧರ್ಮವನ್ನ ಸೆಮೆಟಿಕ್ ಎಂದು ಭಾವಿಸುವುದಿಲ್ಲ. ಇಸ್ಲಾಂ ಯಹೂದ್ಯರ “ಮೋಸೆಸ್”, ಮತ್ತು ಕ್ರೈಸ್ತರ “ಏಸು” ಇವರುಗಳನ್ನು ದೇವನ ಸಂದೇಶವಾಹಕರು ಎಂದು ನಂಬಿ ಗೌರವಿಸುತ್ತಾರೆ. ಅವರುಗಳನ್ನು ಏಕ ವಚನದಲ್ಲೂ ಸಂಬೋಧಿಸುವುದಿಲ್ಲ. ಅವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ನಾಮಕರಣವನ್ನೂ ಮಾಡುತ್ತಾರೆ.(ನನ್ನ ಮಗಳ ಹೆಸರು “ಇಸ್ರಾ ಮರ್ಯಮ್”. ಮರ್ಯಮ್, ಯೇಸು ಮಾತೆ) ಪ್ರವಾದಿಗಳು ಯಹೂದ್ಯರನ್ನು ಮತ್ತು ಕ್ರೈಸ್ತರನ್ನು “ಒಡಂಬಡಿಕೆಗಳ ಜನ” ಎಂದು ಅವರನ್ನು ಗೌರವದಿಂದ ನಡೆಸಿ ಕೊಂಡಿದ್ದು ಮಾತ್ರವಲ್ಲ ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದ್ದರು. ಪವಿತ್ರ ಕುರಾನಿನಲ್ಲಿ ಯಹೂದ್ಯರನ್ನು, ಕ್ರೈಸ್ತರನ್ನೂ, ಸೇಬಿಯನ್ನರನ್ನೂ “ಗ್ರಂಥಗಳ ಸಮುದಾಯ” ಎಂದು ಸಂಬೋಧಿಸಿದ್ದರಿಂದ ಅವರ ಮೇಲೆ unprovoked ಆಕ್ರಮಣ ಮಾಡುವಂತಿಲ್ಲ. ಧರ್ಮ ಯುದ್ಧ ಗಳ ಸಮಯದಲ್ಲಿ ಯಾವುದೇ ಕಾರಣಕ್ಕೂ ಇಗರ್ಜಿ, ಮತ್ತು ಕ್ರೈಸ್ತ ಸಂತರು ವಾಸಿಸುವ ನಿವಾಸಗಳ ಮೇಲೆ ಆಕ್ರಮಣ ಕೂಡದು ಎಂದು ಸ್ಪಷ್ಟವಾಗಿ ಇಸ್ಲಾಮಿನ ಪ್ರಥಮ ಖಲೀಫಾ ಅಬೂ ಬಕ್ಕರ್ ನಿರ್ದೇಶಿಸಿದ್ದರು.

ಇಸ್ಲಾಮಿನ ಎರಡನೇ ಖಲೀಫಾ ಉಮರ್ ಮುಸ್ಲಿಂ ಸೇನೆ ವಶಪಡಿಸಿಕೊಂಡ ಜೆರುಸಲೆಂ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಇಗರ್ಜಿಗೆ ಹೋಗಿ ಧರ್ಮಗುರುಗಳನ್ನು ಭೇಟಿಯಾಗುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ಪ್ರಾರ್ಥನೆಯ ಕರೆ ಕೇಳಿಬರುತ್ತದೆ. ಕೂಡಲೇ ಪಾದ್ರಿ ಉಮರ್ ರವರಿಗೆ ಪ್ರಾರ್ಥಿಸಲೆಂದು ಕಂಬಳಿಯನ್ನು ಇಗರ್ಜಿಯಲ್ಲೇ ಹಾಸುತ್ತಾರೆ. ಸೌಮ್ಯವಾಗಿ ನಿರಾಕರಿಸಿದ ಉಮರ್ ಇಗರ್ಜಿಯಿಂದ ಹೊರಕ್ಕೆ ಸ್ವಲ್ಪ ದೂರ ಹೋಗಿ ನಮಾಜ್ ನಿರ್ವಹಿಸುತ್ತಾರೆ. ಆಗ ಪಾದ್ರಿ ಕೇಳುತ್ತಾರೆ, ಖಲೀಫಾ ಉಮರ್, ಏಕೆ ಇಗರ್ಜಿಯಲ್ಲಿ ನಮಾಜ್ ಮಾಡಕೂಡದು ಎಂದೇನಾದರೂ ಇಸ್ಲಾಮಿನಲ್ಲಿ ಇದೆಯಾ ಎಂದು. ಆಗ ಉಮರ್ ಹೇಳುತ್ತಾರೆ, ಹಾಗೇನಿಲ್ಲ, ಆದರೆ ನಾನು ಇಗರ್ಜಿಯಲ್ಲಿ ನಮಾಜ್ ಮಾಡಿದ ಕಾರಣಕ್ಕೆ ಭವಿಷ್ಯದಲ್ಲಿ ಧರ್ಮದ ತಿರುಳರಿಯದ ಮುಸ್ಲಿಂ ಮತಾಂಧರು ಈ ಇಗರ್ಜಿಯನ್ನೇ ಕೆಡವಿ ಮಸೀದಿ ನಿರ್ಮಿಸಬಹುದು ಎನ್ನುವ ಆತಂಕದಿಂದ ನಾನು ಬಯಲಿನಲ್ಲಿ ನಮಾಜ್ ಮಾಡಿದೆ ಎಂದು ಹೇಳುತ್ತಾರೆ. ಈ ಮಹಾನ್ ಚೇತನ ಆಡಿದ ಇಂಥ ಮಾತಿಗೆ ಸರಿಸಾಟಿಯಾದ ಒಂದೇ ಒಂದು ಮಾತನ್ನು ಚರಿತ್ರೆಯಿಂದ ಹೆಕ್ಕಿ ತೋರಿಸಲು ನಮಗೆ ಸಾಧ್ಯವಾಗದು.

ಸೆಮೆಟಿಕ್ ಧರ್ಮಗಳು ಹಿಂಸೆ ಯನ್ನು ಪ್ರೋತ್ಸಾಹಿಸುತ್ತವೆ ಎಂದು ಹೇಳುವುದು ಅಜ್ಞಾನದ ಕುರುಹು. ಮೇಲಿನ ಪರಧರ್ಮ ಸಹಿಷ್ಣುತೆಯ ಒಂದಲ್ಲ, ಲೆಕ್ಕವಿಲ್ಲದ ಉದಾಹರಣೆಗಳು ಇಸ್ಲಾಮೀ ಚರಿತ್ರೆಯಲ್ಲಿ ನಮಗೆ ಕಾಣಲು ಸಿಗುತ್ತವೆ. ಮುಸ್ಲಿಮರಿಗೆ ಆದರ್ಶ ವ್ಯಕ್ತಿಗಳು ಪ್ರವಾದಿಗಳು, ನಂತರ ಬಂದ ನಾಲ್ಕು ಖಲೀಫಾ ನಾಯಕರುಗಳು, ಪಾಶ್ಚಿಮಾತ್ಯರು ಈಗಲೂ ಕೊಂಡಾಡುವ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿಯಂಥ ಮಹಾ ವ್ಯಕ್ತಿಗಳು. ಇವರಾರೂ ಧರ್ಮ ಬೇರೆ ಎಂದು ಹೇಳಿ ಪರಧರ್ಮೀಯರನ್ನು ನಿಕೃಷ್ಟವಾಗಿ ನಡೆಸಿಕೊಂಡಿಲ್ಲ. ಚರಿತ್ರೆಯಲ್ಲಿ ತಮ್ಮ ಸ್ವಾರ್ಥ, ಅಧಿಕಾರ ಮತ್ತು ಸಾಮ್ರಾಜ್ಯ ವಿಸ್ತರಣೆಗೆ ಬಂದ ದಂಡು ಕೋರರೋ, ಲೂಟಿಕೋರರೋ ಮುಸ್ಲಿಮರಿಗೆ ಆದರ್ಶ ಅಲ್ಲ ಹಾಗೂ ಧರ್ಮ ಸಮ್ಮತವಲ್ಲದ ಕೆಲಸ ಮಾಡಿದ ರಾಜರ ಬಗ್ಗೆ ಮುಸ್ಲಿಮರಿಗೆ ಹೆಮ್ಮೆಯೂ ಇಲ್ಲ.

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಅಲ್-ನಂಸ” ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ ನನ್ನ ಅಭ್ಯಾಸ. ಸರಿ, ಬೇಕಾದ್ದನ್ನೆಲ್ಲ ಕೇಳಲು ಅಲ್ಲಾವುದ್ದೀನನ ದೀಪ ದ ಮೊರೆಗೆ ಹೋದ ಹಾಗೆ ಯಾಹೂ ಸರ್ಚ್ ಬಾರ್ ಗೆ ನನ್ನ ಪಯಣ. ಕೂಡಲೇ ಸಿಕ್ಕಿತು ಉತ್ತರ. “ಅಲ್-ನಂಸ” ಎಂದರೆ ಆಸ್ಟ್ರಿಯಾ ದೇಶ ಅಂತ. ಆಸ್ತ್ರಿಯಾಕ್ಕೆ “ಅಲ್-ನಂಸ” ಎಂದು ಕರೆಯುತ್ತಾರೆ. ಅರಬ್ ಭಾಷೆ ರೋಚಕ. ಪ್ರತಿ ಆಂಗ್ಲ ಪದಕ್ಕೂ ಪರ್ಯಾಯವಾಗಿ ಒಂದು ಪದ ಇದ್ದೆ ಇರುತ್ತದೆ. ನಾವು ಫೋನ್ ಗೆ ಕನ್ನಡದಲ್ಲಿ ದೂರವಾಣಿ ಎನ್ನದೇ ಫೋನ್ ಎಂದೇ ಕರೆಯುತ್ತೇವೆ, ಅದೇ ರೀತಿ ಮೊಬೈಲ್ ಸಹ. ಮೊಬೈಲ್ ಗೆ ಕನ್ನಡದಲ್ಲಿ ಏನನ್ನುತ್ತಾರೋ ನನಗೆ ಗೊತ್ತಿಲ್ಲ ಆದರೆ ಅರಬ್ಬೀ ಭಾಷೆಯಲ್ಲಿ ಇದಕ್ಕೆ “ಜವ್ವಾಲ್” ಎನ್ನುತ್ತಾರೆ. ಅಪ್ಪಿತಪ್ಪಿಯೂ ಯಾವ ಅರಬನೂ ತಾನು ಮಾತನಾಡುವಾಗ ಮೊಬೈಲ್ ಎನ್ನುವುದಿಲ್ಲ. ಫೋನ್ ಗೆ “ಹಾತಿಫ್” ಎನ್ನುತ್ತಾರೆ. ಕಾರಿಗೆ “ಸಿಯಾರ”. ವಿಮಾನಕ್ಕೆ “ತಯಾರ”. ಇವುಗಳಿಂದಲೇ ತಿಳಿಯುತ್ತದೆ ಅರಬರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹ ಹೆಚ್ಚು ಎಂದು, ಅದರಲ್ಲೇನು ತಪ್ಪಿದೆ ಹೇಳಿ? ನಾವೂ ಸಹ ಅವರನ್ನು ಅನುಕರಿಸಬೇಕು ಈ ವಿಷಯದಲ್ಲಿ ಅಲ್ಲವೇ. ಇಲ್ಲದಿದ್ದರೆ ಬೆಳಿಗ್ಗೆ ಎದ್ದು ತಿಂಡಿಗೆ ಎಂದು ಉಪಾಹಾರ ಮಂದಿರಕ್ಕೆ ಹೋಗಿ ಅಲ್ಲಿ ಉದ್ದಿನ ವಡೆಗೆ “ಮೆದು ವಡ” ಎಂದು ಬರೆದ ಎಂದು ತಕರಾರು ಮಾಡಿ ನಂತರ ಸ್ವಲ್ಪ ದೂರ ಬಂದು ಬಾಯಾರಿತು ಎಂದು ಎಳನೀರು ಕುಡಿಯಲು ಹೋದರೆ ಅಲ್ಲಿ ಎಳೆ ನೀರಿಗೆ “ನಾರಿಯಲ್” ಎಂದ ಎಂದು ಅರಚಾಡಿ ಗಂಟಲನ್ನು ಮತ್ತಷ್ಟು ಒಣಗಿಸುವುದಕ್ಕಿಂತ ನಮ್ಮ ಭಾಷೆ ಬಗ್ಗೆ ನಮ್ಮಲ್ಲೂ, ನಮ್ಮ ಮಕ್ಕಳಲ್ಲೂ ಅಭಿಮಾನ ಹುಟ್ಟಿಸಬೇಕು. ಉಪಕರಣಗಳ ಹಾಗೂ ಇತರೆ ಹೆಸರುಗಳನ್ನು ಬಿಡಿ ದೇಶಗಳ ಹೆಸರೂ ಅರಬ್ಬೀಕರಣ. ಭಾರತಕ್ಕೆ “ಹಿಂದ್” ಎನ್ನುತ್ತಾರೆ. ಜರ್ಮನಿಗೆ ” ಅಲ್-ಮಾನಿಯಾ”, ಗ್ರೀಸ್ ದೇಶಕ್ಕೆ “ಯುನಾನಿ”. ಹಂಗೇರಿ ಗೆ “ಅಲ್-ಮಜಾರ್”, ಹೀಗೆ ಸಾಗುತ್ತದೆ ಪಟ್ಟಿ. ಋತು “ಶರತ್ಕಾಲ” ಕ್ಕೆ ಅರಬ್ಬೀ ಭಾಷೆಯಲ್ಲಿ “ಖಾರಿಫ್” ಎನ್ನುತ್ತಾರೆ. ಖಾರಿಫ್ ಎಂದು ನಮ್ಮಲ್ಲೂ ಕೇಳಿದ ನೆನಪು, ಅದೇನೆಂದು ಸರಿಯಾಗಿ ಗೊತ್ತಿಲ್ಲ. ಚಳಿಗಾಲಕ್ಕೆ ” ಶಿತ “. ಇದನ್ನು ಕೇಳಿ ಚಳಿ ಹಿಡಿಯಿತಾ? ಇದೇನಪ್ಪಾ ನಮ್ಮ ಮೇಜು, ಕುರ್ಚಿ ಹಾಗೆ ಶೀತಾ ಸಹ ಅರಬ್ಬೀ ಮೂಲದ್ದೇ ಎಂದು? ಅದರ ಬಗ್ಗೆ ನನಗರಿವಿಲ್ಲ. ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು. ಭಾನುವಾರ ಕ್ಕೆ “ಅಹದ್” ಅಂದರೆ ಮೊದಲು ಎಂದು. ವಾರದ ಮೊದಲ ದಿನ ಭಾನುವಾರ ಅಲ್ಲವ, ಅದಕ್ಕಿರಬೇಕು. ಸೋಮವಾರಕ್ಕೆ ” ಇತ್ನೇನ್” ಅಂದರೆ ಎರಡು. ಮಂಗಳವಾರ ಮೂರನೇ ದಿನ…..ಶುಕ್ರವಾರಕ್ಕೆ “ಜುಮಾ” ಮತ್ತು ಶನಿವಾರಕ್ಕೆ “ಸಬ್ತ್”.

ಅರಬ್ಬೀ ಮತ್ತು ಪೆರ್ಶಿಯನ್ ಪದಗಳು ಕನ್ನಡದಲ್ಲೀ ಹೇರಳವಾಗಿ ಕಾಣಲು ಸಿಗುತ್ತವೆ. ಅವುಗಳ ಬಗ್ಗೆ ಮುಂದೆಂದಾದರೂ ಬರೆಯುವೆ. ಅದೂ ಅಲ್ಲದೆ ಅರಬ್ಬೀ ಅಕ್ಷರ ಮಾಲೆಯಲ್ಲಿ “p” , “t” ಗಳು ಇಲ್ಲ. ಇವುಗಳ ಅನುಪಸ್ಥಿತಿಯಲ್ಲಿ ಬರುವ ಕೆಲವು ಪದಗಳು ತಮಾಷೆಯಾಗಿವೆ, ಇವುಗಳ ಬಗ್ಗೆಯೂ ಮುಂದೆಂದಾದರೂ ಬರೆಯುವೆ.

ಈ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳು:  

shreekant mishrikoti

ರಾಬಿ ಮತ್ತು ಖಾರಿಫ್ ಬೆಳೆ ಅಂದರೆ ಮುಂಗಾರು ಬೆಳೆ ಮತ್ತು ಹಿಂಗಾರು ಬೆಳೆ .
ವಿಕಿಪೀಡಿಯದಲ್ಲಿ ಹೀಗಿದೆ.
Rabi crop, spring harvest in India
The Kharif crop is the autumn harvest (also known as the summer or monsoon crop) in India and Pakistan.

ಮತ್ತೆ
ಲ್ಯಾಂಡ್-ಲೈನ್ ಗೆ ಸ್ಥಿರದೂರವಾಣಿ ಮತ್ತು ಮೊಬೈಲ್ ಗೆ ಸಂಚಾರಿ ದೂರವಾಣಿ ಅನ್ನೋ ಶಬ್ದಗಳು ಹೆಚ್ಚು ಚಾಲ್ತಿಯಲ್ಲಿವೆ . ಕೆಲವರು ನಿಲ್ಲುಲಿ , ನಡೆಯುಲಿ, ಜಂಗಮವಾಣಿ ಮುಂತಾದವನ್ನು ಬಳಸುವರು.

salimath wrote:

landline = ನಿಲ್ಲುಲಿ
mobile phone = ನಡೆಯುಲಿ (credits: ಬರತ್ ವೈ)

car= ನೆಲದೇರು (ನೆಲ+ತೇರು)
ವಿಮಾನ = ಬಾಂದೇರು (ಬಾನ್+ತೇರು)
ಗನನಸಖಿ= ಬಾಂಗೆಳತಿ (ಬಾನ್+ಗೆಳತಿ)
ಶೀತ = ಕುಳಿಱು

ಮರುಭೂಮಿಯ ಎಲೆಮರೆಕಾಯಿ

ವಾರಾಂತ್ಯವಾದ್ದರಿಂದ ಮೊನ್ನೆ ಗುರುವಾರ ಜೆಡ್ಡಾ ದಿಂದ ೪೦೦ ಕಿ. ಮೀ ದೂರ ಇರುವ ಮದೀನಾ ನಗರಕ್ಕೆ ಹೊರಟೆವು ಪರಿವಾರ ಸಮೇತ. ಮಧ್ಯಾಹ್ನ ಬುತ್ತಿ ಕಟ್ಟಿಕೊಂಡು ( ಇಲ್ಲಿ ರಸ್ತೆಗೆ ತಾಗಿದ ಮರಳುಗಾಡಿನಲ್ಲಿ ಕಂಬಳಿ ಹಾಸಿ ಕೂತು ತಿನ್ನುವುದು ಒಂದು ರೀತಿಯ ಮೋಜು, ನಮ್ಮಲ್ಲಿನ ತೋಟದಲ್ಲಿ ಊಟದ ಥರ ) ಹೊರಟೆವು. ನಗರದ ಪರಿಮಿತಿ ಬಿಟ್ಟು ಸ್ವಲ್ಪ ದೂರ ಬರುತ್ತಲೇ ತಪಾಸಣಾ ನಿಲುಗಡೆ. ಸೌದಿ ಅರೇಬಿಯಾದಲ್ಲಿ ಎಲ್ಲಿ ನೋಡಿದರೂ ತಪಾಸಣೆಯೇ. ನಗರದ ಗಡಿ ಬಿಟ್ಟಾಗ, ಬೇರೆ ನಗರ ಪ್ರವೇಶಿಸುವಾಗ, ಇವೆರೆಡರ ನಡುವೆ random ಆಗಿ patrol ಮಾಡುವ ಪೋಲೀಸರ ತಪಾಸಣೆ ಅಲ್ಲಲ್ಲಿ. ೧೯೯೦ ರ ಕೊಲ್ಲಿ ಯುದ್ಧಾ ನಂತರ ಇಲ್ಲಿನ ಅರಸು ಮನೆತನಕ್ಕೆ ಮುನಿದು ಅಲ್ ಕೈದಾ ನಡೆಸಿದ ಕೆಲವು ಭಯೋತ್ಪಾದಕ ಚಟುವಟಿಕೆಗಳ ನಂತರ ಹೆಚ್ಚಿನ ಬಂದೋಬಸ್ತು. ಈಗ ಈ ದೇಶ ತುಂಬಾ ಸುರಕ್ಷಿತ. ಸರಿ ತಪಾಸಣಾ ನಿಲುಗಡೆ ಸಮೀಪಿಸುತ್ತಲೇ ನಾನು ಕಾರನ್ನು ನಿಧಾನಗೊಳಿಸಿ ಕಿಟಕಿಯ ಗಾಜನ್ನು ಇಳಿಸಿದೆ. ನನ್ನತ್ತ ನೋಡಿದ ಸುಮಾರು ಇಪ್ಪತ್ತರ ಚಿಗುರು ಮೀಸೆಯ ಮಂದಸ್ಮಿತ ಪೋಲಿಸ್ ಕೇಳಿದ ನಾನು ಯಾವ ದೇಶದವನೆಂದು. ನಾನು ಭಾರತೀಯ ಎಂದು ಹೇಳುತ್ತಿದ್ದಂತೆಯೇ ಆಹ್, ಹಿಂದಿ ಎನ್ನುತ್ತಾ ಸ್ವಾಗತ (ಮರ್ಹಬ) ಎಂದು ಅರಬ್ಬಿಯಲ್ಲಿ ಹೇಳಿ ನನ್ನ ಗುರುತು ಚೀಟಿ ಮತ್ತು ವಾಹನ ಚಾಲನಾ ಪರವಾನಗಿಯನ್ನು ತೆಗೆಯಲು ಬಿಡದೆ ಮುಂದೆ ಹೋಗಲು ಬಿಟ್ಟ. ಭಾರತೀಯರಿಗೆ ಅರಬರು ಹಿಂದಿ ಎಂದು ಕರೆಯತ್ತಾರೆ. ಹಿಂದ್ ದೇಶದವ ಎಂದರ್ಥ. ಕೆಲವು ಪಂಡಿತರ ಪ್ರಕಾರ ಹಿಂದೂ ಶಬ್ದ ಮೂಲವೂ ಅದೇ. ಅದೇ ಪದದಿಂದಲೇ ಹಿಂದೂ ಎನ್ನುವ ಪದವೂ ಬಂದಿದ್ದು. ಭಾರತೀಯರ ಮೇಲಿನ ಪೋಲಿಸ್ ಪೇದೆಯ ನಂಬುಗೆ ನೋಡಿ ನನಗೆ ಭಾರತೀಯನಾಗಿ ಹುಟ್ಟಿದ್ದು ಧನ್ಯ ಎನ್ನಿಸಿತು. ಈ ಮರ್ಯಾದೆ, ಆತಿಥ್ಯ  ಭಾರತದಲ್ಲೂ ನನಗೆ ಸಿಗಲಿಕ್ಕಿಲ್ಲವೇನೋ? ಭಾರತೀಯರು ತಮ್ಮ ದೇಶದ ಒಳಗೆ ಜಾತಿ ಧರ್ಮ, ಭಾಷೆ ಎಂದು ಹೇಗಾದರೂ ಕಚ್ಚಾಡಿಕೊಳ್ಳಲಿ, ಸಾಗರೋಲ್ಲಂಘನ ಅಥವಾ ಸೀಮೋಲ್ಲಂಘನ ಮಾಡಿದ ಕೂಡಲೇ ನಮ್ಮ identity ಎಲ್ಲಿ ಹೋದರೂ ಒಂದೇ. identical. ಭಾರತೀಯ. Indian. ಪೂರ್ಣ ವಿರಾಮ.

 ಭಾರತೀಯತೆಯೇ ಗುಣ, ಬಾಕಿ ಎಲ್ಲಾ ಗೌಣ.

 ಬೇರಾವುದೇ ದೇಶದವರನ್ನು ಕಂಡರೂ, ವಿಶೇಷವಾಗಿ ಪಾಕಿ, ಆಫ್ಘನ್ ರನ್ನು ಕಂಡರಂತೂ ಪೊಲೀಸರಿಗೆ ದೊಡ್ಡ ಕೆಲಸ. ಬರೀ ಅವರ ಕಾಗದ ಪತ್ರ, ಜಾತಕವಲ್ಲ, ವಾಹನವನ್ನೂ ಕೆಳಗೆ ಮೇಲೆ ಎಂದು ಕನ್ನಡಿ ಹಿಡಿದು ಪರೀಕ್ಷಿಸಿ ಮುಂದೆ ಬಿಡುತ್ತಾರೆ. ಅಂಥ reputation ಅವರದು. ಹೊಡಿ ಬಡಿ ಕಡಿ ಎಂದರೆ ಇವರುಗಳು ಮುಂದೆ. ಹೆಚ್ಚು ಮಾತನಾಡಿದರೆ ಪೇದೆಯನ್ನೂ ತದುಕಲು ಹೆದರುವುದಿಲ್ಲ. ಹಾಗಾಗಿ ಇವರಿಗೆ ತಪಾಸಣಾ ಸ್ಥಳಗಳಲ್ಲಿ ವಿಶೇಷ ಮನ್ನಣೆ ಮತ್ತು ಮಣೆ. ವಿಷದ ಹಲ್ಲು ಇಲ್ಲ ಎಂದು ಚೆನ್ನಾಗಿ ಖಾತ್ರಿ ಪಡಿಸಿಕೊಂಡ ನಂತರವೇ ಹಸಿರು ನಿಶಾನೆ ಮುಂದೆ ಹೋಗಲು. ಆದರೆ ಭಾರತೀಯ ಹಾಗಲ್ಲ, ತಾನಿರುವ ನಾಡಿನ ಕಾನೂನಿಗೆ ತಲೆಬಾಗಿ ಇರುವಷ್ಟು ದಿನ ಯಾವ ತಕರಾರುಗಳಿಗೂ ಹೋಗದೆ ಎಲೆಮರೆಕಾಯಿಯಂತೆ ತನ್ನ ಪಾಡಿಗೆ ದುಡಿದು ದಣಿದು ಬಂದು ರೂಮಿನಲ್ಲಿ ತನ್ನ ಪ್ರೀತಿ ಪಾತ್ರರ ಭಾವ ಚಿತ್ರಗಳನ್ನು ನೋಡುತ್ತಾ ಮುದುಡಿ ಬಿದ್ದಿರುತ್ತಾನೆ ತನ್ನ ನಾಡಿನ ಕನಸನ್ನು ಕಾಣುತ್ತಾ.  

 ಈ ದೇಶದ ಬಿಗಿಯಾದ ಕಾನೂನಿನ ಬಗ್ಗೆ ಒಂದೆರಡು ಮಾತುಗಳನ್ನೂ ಹೇಳುತ್ತೇನೆ, ಮತ್ತು ಇಂಥವನ್ನು ನಾವೂ ಅಳವಡಿಸಿಕೊಂಡರೆ ಮುಂಬೈಯಲ್ಲಿ ಪಾಕಿ ಪಾತಕಿಗಳು ನಡೆಸಿದ ನರಸಂಹಾರದಂಥ ಘಟನೆಗಳು ಮರುಕಳಿಸದಂತೆ ತಡೆಗಟ್ಟಬಹುದು. ಈ ದೇಶಕ್ಕೆ ಉದ್ಯೋಗಕ್ಕಾಗಿ ಬರುವ ಪ್ರತಿಯೊಬ್ಬನೂ ತನ್ನ ಪಾಸ್ ಪೋರ್ಟನ್ನು ತನ್ನ ಯಜಮಾನನಿಗೆ (employer) ಒಪ್ಪಿಸಿ ಅದರ ಬದಲಿಗೆ “ಇಕಾಮ” ಎಂದು ಕರೆಯಲ್ಪಡುವ ಗುರುತಿನ ಕಾರ್ಡನ್ನು ಪಡೆಯಬೇಕು. ಈ ಕಾರ್ಡನ್ನು ತಾನು ತನ್ನ ರೂಮನ್ನು ಬಿಟ್ಟು ಎಲ್ಲೇ ಹೋದರೂ ಜೊತೆಗೇ ಒಯ್ಯಬೇಕು. ಅಲ್ಲಲ್ಲಿ ನಡೆಯುವ random ತಪಾಸಣೆಗಳಲ್ಲಿ ಗುರುತು ಚೀಟಿ ಇಲ್ಲದ್ದನ್ನು ಕಂಡರೆ ಯಾವುದೇ ಸಮಜಾಯಿಷಿಗೂ ಕಿವಿಗೊಡದೆ ಒಳಗೆ ತಳ್ಳುತ್ತಾರೆ. ಚೀಟಿಯನ್ನು ತಂದ ನಂತರವೆ ಬಿಡುಗಡೆ. ಹಜ್ ಸಮಯದಲ್ಲಿ ತಪಾಸಣೆ ಸ್ವಲ್ಪ ಜೋರು. ಯಾತ್ರಾರ್ಥಿಯಾಗಿ ಬಂದು ಮರಳಿ ತಮ್ಮ ದೇಶಕ್ಕೆ ವಾಪಸು ಹೋಗದೆ ದುಡಿಯಲು ಇಲ್ಲೇ ಉಳಿದು ಕೊಳ್ಳುವ ಜನರು ಅಸಂಖ್ಯ. ಅವರಲ್ಲಿ ಬಡ ರಾಷ್ಟ್ರಗಳ ಅರಬರು ಮತ್ತು ಆಫ್ರಿಕನ್ನರು ಹೇರಳ. ಹೀಗೆ ಅಕ್ರಮವಾಗಿ ಉಳಿದು ಕೊಳ್ಳುವ ಯಾವ ದೇಶದವನೇ ಆಗಲಿ, ಮುಸ್ಲಿಮನೇ ಆಗಿರಲಿ ಯಾವ ರಿಯಾಯ್ತಿಯೂ ಇಲ್ಲ. forced deportation.  

 ಮೇಲೆ ಹೇಳಿದ ಮದೀನಾ ಹೋಗುವ ದಾರಿಯಲ್ಲಿನ  ತಪಾಸಣೆ ಮುಗಿದ ಕೂಡಲೇ, ದೇವನೊಬ್ಬನೇ ಆರಾಧನೆಗೆ ಅರ್ಹ ಎಂದು ವಿಶ್ವ ಕೇಳುವಂತೆ ಮೊಳಗಿಸಿ, ಸಮಾನತೆಯ ಕಹಳೆ ಊದಿದ ಮರಳುಗಾಡಿನ ನಿರಕ್ಷರಕುಕ್ಷಿ, ಸಂಪತ್ತು, ಕೀರ್ತಿ ನಶ್ವರ, ದೈವಭಕ್ತಿ, ಸನ್ನಡತೆಯೇ ಶಾಶ್ವತ ಎಂದು ಜಗಕ್ಕೆ ಹೇಳಿ ಕೊಟ್ಟ ಮಹಾ ಪ್ರವಾದಿಯ ಪ್ರೀತಿಯ ಪಟ್ಟಣದ ಕಡೆ ಕಾರು ಸಾಗುತ್ತಿದ್ದಂತೆ ನನಗೊಂದು ಕರೆ ಬಂದಿತು. ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ store assistant ನನ್ನು ಗುರುತು ಚೀಟಿ ಇಲ್ಲದೆ ತನ್ನ ರೂಮಿನ ಹೊರಗಿನ browsing center ಹತ್ತಿರ ಅಡ್ಡಾಡುತ್ತಿದ್ದ ಎಂದು ಪೊಲೀಸರು ಬಂಧಿಸಿದರು ಎಂದು ಸುದ್ದಿ. ಜೆಡ್ಡಾ ಬಿಟ್ಟು ತುಂಬಾ ದೂರ ಬಂದಿದ್ದರಿಂದ ನಾನು ನಮ್ಮ ಮಾನವ ಸಂಪನ್ಮೂಲ ವಿಭಾಗದ ಸೌದಿಗೆ ಫೋನಾಯಿಸಿ ವಿಚಾರಿಸಲು ಹೇಳಿದೆ. ಸೌದಿಯ ವಿವರಣೆಗೂ ಪೊಲೀಸರು ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಬಹಳಷ್ಟು ಮನವಿಯ ನಂತರವೇ ಆತನನ್ನು ಅವರು ಬಿಟ್ಟಿದ್ದು. ಹಿಡಿಯಲ್ಪಟ್ಟವನು ಮುಸ್ಲಿಂ ಮಾತ್ರವಲ್ಲ, ಪೊಲೀಸರು ಮರ್ಯಾದೆ ಕೊಡುವ, ಗೌರವಿಸುವ ವಿಶ್ವಾಸಿಗಳು ಬಿಡುವ  ದೊಡ್ಡ ಗಡ್ದವನ್ನೂ ಹುಲುಸಾಗಿ ಬೆಳೆಸಿದ್ದ. ಊಹೂಂ, ಚೀಟಿ ಇಲ್ಲವೋ ನಡಿ ಮಾವನ ಮನೆಗೆ ಎಂದರು ಪೊಲೀಸರು. ಧರ್ಮ, ಜಾತಿ ಎಲ್ಲಾ ಆಮೇಲೆ. ಈ ಗುರುತಿನ ಚೀಟಿಯ ನಿಯಮ ಬರೀ ವಿದೇಶೀಯರಿಗೆ ಮಾತ್ರವಲ್ಲ, ಸೌದಿ ಗಳೂ “ಬುತಾಕ” ಅಥವಾ “ಹವ್ವಿಯ್ಯ” ಎನ್ನುವ ಕಾರ್ಡನ್ನು ಹೊಂದಿರಲೇಬೇಕು. ಬ್ಯಾಂಕಿನಲ್ಲಿ ಹಣ ಪಾವತಿಸುವಾಗಲಾಗಲಿ, ಬೇರೆ ಯಾವುದೇ ಕಾರ್ಯಗಳಿಗೂ ಮೊದಲಿಗೆ ಕಾರ್ಡ್ ನ ದರ್ಶನ ಆಗಬೇಕು, ಇಲ್ಲದಿದ್ದರೆ ಕಾನೂನಿನ ದುರ್ದರ್ಶನ. ನಾನು ಮನೆಯಲ್ಲಿ ಮರೆತೆ, ಅತ್ತೆ ಮನೆಯಲ್ಲಿ ಬಿಟ್ಟು ಬಂದೆ ಹಾಗೆ ಹೀಗೆ ಎಂದು ಕತೆಗಳನ್ನ ನೇಯ್ದರೆ ಅವು ನಮ್ಮ ಕಿವಿಗಳಿ ಗೇ ಇಂಪು. ಕೇಳಿಸಿಕೊಳ್ಳುವವನ ಕಿವಿಗಲ್ಲ. ಎಷ್ಟೋ ಜನ ಸೌದಿಗಳು ಗೊಗರೆಯುವುದನ್ನು  ನೋಡಿದ್ದೇನೆ, ನಾನು ಕಾರ್ಡನ್ನು ಮರೆತು ಬಂದೆ, ನನ್ನ ಕೆಲಸ ಮಾಡಿ ಕೊಡು ಎಂದು. ಕೇಳುವವರು ಬೇಕಲ್ಲ.  ನಮ್ಮ ದೇಶದಲ್ಲೂ ಇಂಥ ಒಂದು ಕಟ್ಟುನಿಟ್ಟಿನ ವ್ಯವಸ್ಥೆ ಇರಬೇಕು. ಎಷ್ಟೇ ಹಣ ಖರ್ಚಾದರೂ ಭಾರತದ ಪ್ರತೀ ಪೌರನಿಗೆ ಒಂದು ಗುರುತು ಚೀಟಿಯನ್ನು ಹೊಂದಿಸಲೇ ಬೇಕು.

 ಅಕ್ರಮವಾಗಿ ನಮ್ಮ ಗಡಿ ಹಾರಿ ಬರುವ ನೇಪಾಳಿ ಮತ್ತು ಇತರೆ ದೇಶಗಳ ಜನರನ್ನು ತಡೆಯಲು ಇದೇ ಮಾದರಿಯ ಕಾರ್ಡು ಮತ್ತು ತಪಾಸಣೆ ನಮಗಿರಬೇಕು. ಅದಕ್ಕೆ ತಗಲುವ ಖರ್ಚು ದುಂದು ಖರ್ಚಲ್ಲ.  ದೇಶದ ಗಡಿ, ಜನ ಸುರಕ್ಷಿತವಾಗಿರಬೇಕೆಂದರೆ ನಾವು ನಿಷ್ಟುರರಾಗಿರಬೇಕು. ನಮ್ಮ ಒಳ್ಳೆಯತನವನ್ನು, ಹೃದಯ ವೈಶಾಲ್ಯತೆಯನ್ನು  ದೇಶದ ಒಳಗೆ ನೆಲೆಸಿ ಕೊಂಡಿರುವ ಸಹ ಭಾರತೀಯರಿಗೆ ಮಾತ್ರ ಮೀಸಲಿಟ್ಟರೆ ಸಾಕು.