ವೇದ ಸುಳ್ಳಾದರೂ…

ವೇದ ಸುಳ್ಳಾದರೂ, ಗಾದೆ ಸುಳ್ಳಾಗದು. ಈ ಕೆಳಗಿನ ಗಾದೆ ಸ್ವಲ್ಪ ವಿಚಿತ್ರವಾಗಿದೆ, tread carefully.

“A man who likes a lot of salt in his food is very much in love with his wife.” – Albanian saying.  

ಮೇಲಿನದು ಅಲ್ಬೇನಿಯಾ ದೇಶದ ಗಾದೆ. ತನ್ನ ಆಹಾರದಲ್ಲಿ ಹೆಚ್ಚು ಉಪ್ಪನ್ನು ಬಯಸುವವನು ತನ್ನ ಹೆಂಡತಿಯಲ್ಲಿ ಹೆಚ್ಚು ಅನುರಕ್ತನಾಗಿರುವನು.

ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಗಾದೆ ನಮ್ಮಲ್ಲಿ ಪ್ರಚಲಿತವಿದ್ದರೆ ಅಲ್ಬೇನಿಯಾದ ಗಾದೆ ಅರ್ಧಾಂಗಿನಿಯ ಕಡೆ ವಾಲುವಂಥದ್ದು. ಅದರಲ್ಲೇನು ತಪ್ಪು ತಕ್ಕಳಿ, ನಮಗೆ ‘ಅಮ್ಮ’ ಪ್ರಯಾರಿಟಿ, ಅವರಿಗೆ ‘ಅಮ್ಮಾವ್ರು’ ಪ್ರಯಾರಿಟಿ ಅಷ್ಟೇ.

ವಿ. ಸೂ:  ಮಡದಿಯನ್ನು ಇಂಪ್ರೆಸ್ ಮಾಡಲೆಂದು ಉಪ್ಪು ಜಾಸ್ತಿ ಹಾಕಿಸಿಕೊಂಡು ಬಿ. ಪಿ. ಯನ್ನು ತಾರಕಕ್ಕೇರಿಸಿ ಕೊಂಡೆ ಎಂದು ಮಾತ್ರ ನನ್ನನ್ನು ಹಳಿಯಬೇಡಿ.

Advertisements

ಬೇಡದ ಕಡೆ ತಲೆ ಹಾಕಿದ ಕರಡಿ

ನಮಗೆ ಅವಶ್ಯಕತೆ ಇರದ ಕಡೆ ತಲೆ ಹಾಕಬಾರದು ಎಂದು ಹಿರಿಯರ ಬುದ್ಧಿವಾದ. ಕಿತಾಪತಿ ಮಾಡುವವರನ್ನು ಕಂಡರೆ ಹೇಳುತ್ತಾರೆ ಬೇಡದೆ ಇರೋ ಜಾಗದಲ್ಲಿ ತಲೆ ಹಾಕೋದು ಅಂದ್ರೆ ಇವ್ನಿಗೆ ತುಂಬಾ ಇಷ್ಟ ಎಂದು ತೆಗಳೋದನ್ನೂ ನಾವು ಕೇಳಿದ್ದೇವೆ. ಆದರೆ ಇಲ್ಲಿ ಬೇಡ ಕಡೆ ತಲೆ ಹಾಕಿ ಮಂಗಳಾರತಿ ಮಾಡಿಸಿ ಕೊಂಡಿದ್ದು ಹುಲು ಮನುಜನಲ್ಲ. ಬದಲಿಗೆ ಮೈ ತುಂಬಾ ಕೇಶ ಇಟ್ಟುಕೊಂಡು ನಮ್ಮ ಮಕ್ಕಳಿಗೆ ಬೊಂಬೆ ರೂಪದಲ್ಲೂ, ನಿಜ ರೂದಲ್ಲೂ ಕಚಗುಳಿ ಇಡುವ ಜಾಂಬವ. ಕರಡಿ.

ಫ್ಲೋರಿಡಾ ರಾಜ್ಯದಲ್ಲಿರುವ “ಒಕಾಲಾ” ನಗರದಲ್ಲಿ ವಾಸಿಸುವ ಕರಡಿಯೊಂದು ತನ್ನ ತಲೆಯನ್ನು ಪ್ಲಾಸ್ಟಿಕ್ ಬಾಟಲಿ ಯೊಂದರಲ್ಲಿ ಸಿಕ್ಕಿಸಿಕೊಂಡು ಪರದಾಡಿತು. ಪೂರ್ತಿ ಹತ್ತು ದಿನ. ಓಹ್, ಹತ್ತು ದಿನಗಳ ಮನುಷ್ಯನ ನಿರ್ಲಕ್ಷ್ಯೆ ಕಾರಣ  ಕಾಲ ತಿನ್ನಲು, ಕುಡಿಯಲು ಆಗದೆ ಒದ್ದಾಡಿದ ಕರಡಿಗೆ ಕೊನೆಗೆ ಮುಕ್ತಿ ಸಿಕ್ಕಿದ್ದೂ ಭಾಗ್ಯಕ್ಕೆ ಮನುಷ್ಯನಿಂದಲೇ. ಪ್ರವಾಸದ ವೇಳೆ ಹೋದ ಹೋದೆಡೆ ನಮ್ಮ ಗಾರ್ಬೇಜ್ ಎಳೆ ದು ಕೊಂಡು ಹೋಗುವ ನಮಗೆ ನಿಸರ್ಗದ ಕಡೆ ನಮಗಿರುವ ಬೇಜವಾಬ್ದಾರಿತನಕ್ಕೆ ಪ್ರವಾಸ ಅಥವಾ ಪರ್ಯಟನ ಕಳೆದು ಬರುವಾಗ ನಮ್ಮ ಹಿಂದೆ ಬಿಟ್ಟು ಹೋಗುವ ತಿಪ್ಪೆಗಳೇ ಸಾಕ್ಷಿ.

ಜೆಡ್ಡಾ ದಿಂದ ಸುಮಾರು ೨೦೦ ಕಿ.ಮೀ ಇರುವ ನಮ್ಮ ಕೆಮ್ಮಣ್ಣು ಗುಂಡಿಯನ್ನು ಹೋಲುವ “ತಾಯಿಫ್” ಭೇಟಿಯ ವೇಳೆ ಬೆಟ್ಟದ ಕೆಳಗಿನ ದಾರಿಯಲ್ಲಿ ಒಂದು ಮರವನ್ನು ಕಂಡೆ. ಸಾಮಾನ್ಯವಾಗಿ ಮರ ಎಂದ ಮೇಲೆ ಎಲೆಗಳು ಇದ್ದೇ ಇರುತ್ತವೆ, ಅಲ್ಲವೇ? ಸಖೇದಾಶ್ಚರ್ಯ, ಇದೊಂದು ವಿಚಿತ್ರ ಮರವಾಗಿ ಕಂಡಿತು ನನಗೆ. ಮರದ ಟೊಂಗೆಯ ತುಂಬಾ ಬಣ್ಣ ಬಣ್ಣದ, ವಿವಿಧ ಆಕಾರದ, ಗಾತ್ರದ ಚೀಲಗಳು. ಪ್ಲಾಸ್ಟಿಕ್ ಚೀಲಗಳು. ಸಂಪೂರ್ಣ ಮರವನ್ನು ಆವರಿಸಿ ಬಿಟ್ಟಿತ್ತು. ಗಾಡಿಯಲ್ಲಿ ಹೋಗುವಾಗ ಮೇಯೋದು, ತದನಂತರ ಬಿಡೋದು ಗಾಳಿ ಪಟವ. ಅಲ್ಲಲ್ಲ, ಪ್ಲಾಸ್ಟಿಕ್ ಪಟವ. ಸ್ವಲ್ಪ ದೂರ ಹೋದ ನಂತರವೇ ನನ್ನ ಮಂದ ಮಾತಿಗೆ ತೋಚಿದ್ದು ಒಹ್, ಈ ಮರದ ಚಿತ್ರವೊಂದನ್ನು ಕ್ಲಿಕ್ಕಿಸಬೇಕಿತ್ತು ಎಂದು.       

ತನ್ನ ಸುಂದರ ಮೂತಿಯನ್ನು ಈ ಪ್ಲಾಸ್ಟಿಕ್ ಬಾಟಲಿಗೆ ಸಿಕ್ಕಿಸಿಕೊಂಡ ಕೇವಲ ಆರು ತಿಂಗಳ ಹಸುಳೆ ಕರಡಿಗೆ ವನ್ಯ ಜೀವಿ ಸಂರಕ್ಷಕರು ಬಂದು ಮೊದಲು ಪಕ್ಕದಲ್ಲೇ ಇದ್ದ ಅದರ ತಾಯಿಗೆ ಶಾಂತ ಗೊಳಿಸುವ ಚಚ್ಚು ಮದ್ದನ್ನು ನೀಡಿ ಪ್ಲಾಸ್ಟಿಕ್ ಮುಕ್ತ ಗೊಳಿಸಿದರು. ಅವರ ಪ್ರಕಾರ ಆ ಕರಡಿ ಒಂದೆರಡು ದಿನಗಳಲ್ಲಿ ಸಾಯುತ್ತಿತ್ತಂತೆ ಬಾಟಲಿ ಕಾರಣ  ತಿನ್ನಲು ಕುಡಿಯಲು ಆಗದೆ.     

ಚಿತ್ರ ಕೃಪೆ: http://www.newstimes.com/news/article/Plastic-jar-removed-from-Fla-bear-cub-s-head-615774.php#photo-3

ಮಾವಿನ ಹಣ್ಣು

ಈ ಚಿತ್ರವನ್ನು ನನ್ನ ಎರಡು ವರ್ಷದ ಮಗಳು ಇಸ್ರಾ ತೆಗೆದದ್ದು. ನನ್ನ ತಂಗಿ ಇತ್ತೀಚೆಗೆ ಭಾರತಕ್ಕೆ ಹೋದಾಗ ನಮ್ಮ ಮನೆಯ ಮುಂದಿನ ಮರದಲ್ಲಿ ಆದ ಮಾವಿನ ಹಣ್ಣುಗಳನ್ನು ತಂದಿದ್ದಳು. ಹಣ್ಣು ಬಹಳ ರುಚಿಯಾಗಿದ್ದವು.  ಅದೂ ಅಲ್ಲದೆ ನಮ್ಮ ಮನೆಯ ತೋಟದಲ್ಲಿ ಬೆಳೆದ ಹಣ್ಣು ಎಂದರೆ ವಿಶೇಷವಾದ ರುಚಿ ಅದಕ್ಕೆ ಇರುತ್ತದಲ್ಲವೇ? ಮನೆಯ ಮುಂದಿನ ಮಾವಿನ ಮರಕ್ಕೆ ಹಾದು ಹೋಗುವ ಪಡ್ಡೆ ಹುಡುಗರ ದುರ್ಗಣ್ಣು. ಯಾರೂ ಇಲ್ಲದಾಗ ಮರ ಬೋಳಿಸಿ ಹೋಗಿ ಬಿಡುತ್ತಾರೆ. ನನ್ನಮ್ಮನ ಶಾಪವೋ ಶಾಪ.

ಹಣ್ಣುಗಳ ರಾಜ ಮಾವಿನ ಹಣ್ಣನ್ನು ಇಷ್ಟ ಪಡದವರು ವಿರಳ. ಕೆಲವರಿಗೆ ಮಾವಿನ ಹಣ್ಣು ಶರೀರವನ್ನು ಸ್ಥೂಲ ವಾಗಿಸುತ್ತದೆ ಎಂದು ತಿನ್ನಲು ಭಯ. ಒಂದು ದೊಡ್ಡ ಬಾಳೆ ಹಣ್ಣಿನಲ್ಲೂ ಮತ್ತು ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲೂ ಇರುವುದು ೧೦೦ ಕ್ಯಾಲೋರಿಗಳು. ಬಾಳೆಹಣ್ಣನ್ನು ತಿನ್ನಲು ತಕರಾರಿಲ್ಲದೆ ಇದ್ದರೆ ಮಾವಿನ ಹಣ್ಣಿಗೇಕೆ ತಕರಾರು?

ಮಾವಿನ ಹಣ್ಣನ್ನು ತಿನ್ನುವ ಕಲೆ ತಿಳಿದಿರುವುದು ಕೆಲವರಿಗೆ ಮಾತ್ರ. ಇಡಿಯಾದ ಹಣ್ಣನ್ನು ಕತ್ತರಿಸದೆ ತಿಂದರಂತೂ ಆಗುವ ಪಾಡು ಗೊತ್ತೇ ಇದೆಯಲ್ಲ. ಮಾವಿನ ಹಣ್ಣಿನ ಕಲೆಯೂ ಸಹ ಸುಲಭವಾಗಿ ಹೋಗುವನ್ಥದ್ದಲ್ಲ. ಚಿಕ್ಕವನಿದ್ದಾಗ ಹಣ್ಣನ್ನು ತಿನ್ನುವಾಗ  ಅದರ ರಸ ಅಂಗೈಯಿಂದ ಹಿಡಿದು ಮೊಣಕಯ್ಯವರೆಗೂ ಬಂದು ಅಲ್ಲಿಂದ ತನ್ನ ದಿಕ್ಕನ್ನು ಬದಲಿಸಿ ಅಂಗಿಯ ಮೇಲೂ ಬಿದ್ದು, ಮುಂದುವರೆದು ಚಡ್ಡಿ ಪ್ಯಾಂಟಿ ನ ಮೇಲೆ ಎರಗಿದಾಗ ಮನೆಯಲ್ಲಿ ಅಮ್ಮನ ಕೈಯ್ಯಲ್ಲಿ ಹೊಡೆತ ತಿಂದ ಉದಾಹರಣೆಗಳು ಬಹಳ. ಹೇಗೆ ತಿಂದರೂ ತನ್ನ ಒಸರುವ ಬುದ್ಧಿ ಬಿಡದ ತುಂಟ ರಸ ಮೈ, ಬಟ್ಟೆ ಮೇಲೆ ಹರಿಯುವುದರಿಂದ ತಡೆಯಲು ಒಂದು ಮಾರ್ಗವಿದೆ. ಅದೆಂದರೆ ನಮ್ಮ ಪ್ರೀತಿಯ ಹಣ್ಣನ್ನು ನಮ್ಮೊಂದಿಗೆ ತಿನ್ನಲು ಕೊಂಡೊಯ್ಯುವುದು ಸ್ನಾನ ಗೃಹಕ್ಕೆ. ಶವರ್ ಅಡಿಯಲ್ಲಿ ನಿಂತು ತಿನ್ನಬೇಕು ಹಣ್ಣನ್ನು. ರಸ ತನಗೆ ಬೇಕಾದ ರೀತಿಯಲ್ಲಿ, ಬೇಕಾದ ಕಡೆ ಒಸರಿ ಕೊಳ್ಳಲಿ, ಹಾಡುತ್ತಾ ತಿಂದು, ಗೊರಟೆಯ ಬುಡ ಕಾಣುವವರೆಗೂ ಸರಿಯಾಗೇ ಚೀಪಿ ಶವರ್ ಆನ್ ಮಾಡಿದರೆ ಸಂಪೂರ್ಣ ಮುಕ್ತಿ ರಸದಿಂದ. ಹೇಗಿದೆ ಪ್ಲಾನು?

ಗೋಲ್ಡಿನ ಗೋಳು

Truth is the first casualty in war, ಹಾಗಂತ ಒಂದು ಕಹಾವತ್ ಇದೆ. ಸತ್ಯವೂ ಹೌದು. ಆದರೆ ಈ ಆಧುನಿಕ ಯುಗದಲ್ಲಿ gold is the first casualty, ಏನಂತೀರಾ? ಕೆಲ ವರ್ಷಗಳ ಹಿಂದೆ ನನ್ನ ಸಂಬಂಧಿಯೊಬ್ಬರು ಆತುರದಿಂದ ಎಲ್ಲೋ ಹೊರಟಿದ್ದ ನನ್ನನ್ನು ತಡೆದು  ಕೇಳಿದರು, ಅಲ್ಲಾ, ಅಮೆರಿಕೆಯಲ್ಲಿನ ಕಟ್ಟಡಗಳು ಉರುಳಿದಾಗ (sept 11,2001) ಚಿನ್ನದ ಬೆಲೆ ಏಕೆ ತಾರಕಕ್ಕೇರಿತು ಅಂತ. ನನಗೆ ಒಂದೆಡೆ ನಗು, ಅಲ್ಲಿ ಜನ ಸತ್ತು ಬಿದ್ದಿದ್ದಾರೆ, ಇಲ್ಲಿ ನೋಡಿದರೆ ಈ ಎಪ್ಪನಿಗೆ ಚಿನ್ನದ ಚಿಂತೆ. ಮತ್ತೊಂದೆಡೆ ಅವರ ದುಗುಡವೂ ಅರ್ಥವಾಗುವಂಥದ್ದೇ. ೩ ಹೆಣ್ಣು ಮಕ್ಕಳ ತಂದೆ ಆತ. ಚಿನ್ನದ ಬೆಲೆ ಗಿಲೆ ನೋಡದೆ ನಾಚಿಕೆ ಬಿಟ್ಟು ಅಷ್ಟು ತೊಲ ಕೊಡು, ಇಷ್ಟು ತೊಲ ಕೊಡು ಅಂತ ತೋಳಗಳ ರೀತಿ ಹರಿದು ತಿನ್ನುತ್ವೆ ಮದುವೆ ಆಗುವ ಗಂಡು ಎನ್ನಿಸಿ ಕೊಂಡವನ ಮಾತಾ, ಪಿತರು.

ಈಗ ಗೋಲ್ಡ್ ಏಣಿಯ ಸಹಾಯವೇ ಇಲ್ಲದೆ ಅಟ್ಟ ಹತ್ತಿ ಕೂತಿದೆ. ಕಾರಣ credit crunch, financial turmoil, market woes, ಆಹಾ ಎಂತೆಂಥ ಹೆಸರುಗಳು ನಮ್ಮ ಮೇಲೆ ನಾವೇ ತಂದುಕೊಂಡ ಅನಿಷ್ಟಗಳಿಗೆ. ಅತಿಯಾಸೆ, ಮಿತಿಮೀರಿದ ಖರ್ಚು, ಆದಾಯಕ್ಕಿಂತ ಹೆಚ್ಚಿನ ಶಾಪಿಂಗ್ ಟ್ರಿಪ್ಗಳು, ಬ್ಯಾಂಕುಗಳ, ಕಂಪೆನಿಗಳ ಕಳ್ಳ ವಹಿವಾಟು ಇತ್ಯಾದಿ, ಇತ್ಯಾದಿ.

ಮಾಡಿದ್ದುಣ್ಣೋ ಮಹಾರಾಯ…