ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

Image

ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬೆರಳೆಣಿಕೆಯಷ್ಟಿನ ಸೈನಿಕರನ್ನು ಕಟ್ಟಿಕೊಂಡು ಬ್ರಿಟಿಷರಿಗೆ ಶರಣಾಗದೆ ಹುತಾತ್ಮರಾದ ಅದ್ಭುತ ಚೇತನ ಟಿಪ್ಪು. ಈ ವೀರ, ರಾಜನಾದ ಮಾತ್ರಕ್ಕೆ ಇವರ ಆಡಳಿತದಲ್ಲಿ ಕೆಲವರು ಎಸಗಿರಬಹುದಾದ ಪ್ರಮಾದಗಳ ಕಾರಣ, ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡಿಸಲು ಹೋರಾಡಿದ ಆ ಗುಣ ಇಂದಿನ ಜನರಿಗೆ ಬೇಡ. ಯಾವನೋ ಪರಂಗಿ ಇತಿಹಾಸಕಾರ ಟಿಪ್ಪು ಬಗ್ಗೆ ಬರೆದಿದ್ದನ್ನು ವೇದವಾಕ್ಯ ಎಂದು ನಂಬುತ್ತಾ, ಟಿಪ್ಪು ಸುಲ್ತಾನರ ಬಗ್ಗೆ ಇಲ್ಲ ಸಲ್ಲದ ಅಪವಾದ, ಅವಹೇಳನ ಮಾಡುತ್ತಾ, ಕಥೆ ಕಾದಂಬರಿ ಬರೆಯುತ್ತಾ ಜನರ ಮನಸಿನಲ್ಲಿ ಟಿಪ್ಪು ಒಬ್ಬ ಕ್ರೂರ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖೇದಕರ. ಸ್ವಾತಂತ್ರ್ಯ ಕಲಿಗಳ ಬಗ್ಗೆ,, ಅವರ ತ್ಯಾಗದ ಬಗ್ಗೆ ಆದರ ಇಲ್ಲದಿದ್ದರೂ ಪರವಾಗಿಲ್ಲ, ಅನಾದಾರ ಬೇಡ. ಸ್ವಾತಂತ್ರ್ಯ ಕಲಿಗಳ ಸಾಹಸವನ್ನು ಅವಗಣನೆ ಮಾಡುವುದು ಸಲ್ಲದು. ಆದರೆ ಇದನ್ನು ಹೇಳುವುದಾದರೂ ಯಾರಿಗೆ? ಹೋಬಳಿ ಗಳನ್ನು ಆಳಿದ ಪಾಳೆಗಾರರ ಬಗ್ಗೆ ನಮಗೆ ಅತೀವ ಭಕ್ತಿ, ಅಭಿಮಾನ ಇದೆ. ಆದರೆ ಟಿಪ್ಪುವಿಗೆ ಮಾತ್ರ ಈ ಉಪಚಾರ ಅಲಭ್ಯ. ಟಿಪ್ಪು, ಕರುನಾಡಿನಲ್ಲಿ ಹುಟ್ಟಿದ ಕೆಚ್ಚೆದೆಯ ಕನ್ನಡಿಗ. ನಮ್ಮ, ನೆಲ, ಸಂಸ್ಕಾರ, ಜೀವನ ರೀತಿ, ಭಾಷೆ ಎಲ್ಲವನ್ನೂ ಕಲುಷಿತಗೊಳಿಸಲು ಬಂದ ಶತ್ರುವನ್ನು ಸದೆ ಬಡಿಯಲು ಟಿಪ್ಪೂ ನಡೆಸಿದ ಹರಸಾಹಸ ನಮಗೆ ಸ್ಮರಣೀಯವಾಗಬೇಕು. ಹಾಗೆ ಮಾಡದೆ ಕೃತಘ್ನ ಗುಣವನ್ನ ಮೆರೆಯೋ ನಾವು ದೇಶಪ್ರೇಮಿಗಳು.    

ಟಿಪ್ಪು ಮನಸ್ಸು ಮಾಡಿದ್ದರೆ, ಸ್ವಾರ್ಥಿಯಾಗಿದ್ದರೆ, ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡು, ಸಂಧಿ ಮಾಡಿಕೊಂಡು, ಜನ್ಮವೆತ್ತಿದ ನಾಡಿನಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತೇನೆ ಎಂದು ಬ್ರಿಟಿಷರಿಗೆ ಆಶ್ವಾಸನೆ ನೀಡಿದ್ದರೆ ಸುಲಭವಾಗಿ ಕಿರೀಟ ಉಳಿಸಿ ಕೊಳ್ಳಬಹುದಿತ್ತು . ಹಾಗೆ ಮಾಡದೆ ಸಾಧಾರಣ ಸೈನಿಕನಂತೆ ಹೋರಾಡಿ ವೀರ ಮರಣನ್ನಪ್ಪಿದ ಟಿಪ್ಪುವಿಗೆ ಅಪಮಾನ. ಬ್ರಿಟಿಷರೊಂದಿಗೆ ಸಂಬಂಧ ಬೆಳೆಸಿ ಕೊಂಡು, ಕಿರೀಟ ಸಿಕ್ಕಿಸಿಕೊಂಡು ಮೆರೆದವರಿಗೆ ಸಮ್ಮಾನ. ಅವರ ಬಗ್ಗೆ ನಮ್ಮ ನಾಡಿಗೆ ಅಭಿಮಾನ. ಟಿಪ್ಪುವಿನಂಥ ಕೆಚ್ಚೆದೆಯ ಕಲಿ ಬೇರೆ ದೇಶದಲ್ಲಿ ಬಾಳಿ ಬದುಕಿದ್ದರೆ ಆ ವ್ಯಕ್ತಿಯ ಬಗ್ಗೆ ಬರೆಯಲು, ಆ ಶೂರನನ್ನು ದಂತ ಕಥೆಯಾಗಿಸಲು ಪೈಪೋಟಿಯೇ ಏರ್ಪಡುತ್ತಿತ್ತು. ನಮ್ಮ ದೇಶದಲ್ಲೂ ನಡೆಯುತ್ತಿದೆ ಪೈಪೋಟಿ, ಟಿಪ್ಪು ಹೆಸರಿಗೆ, ಕೀರ್ತಿಗೆ ಹೇಗೆ ಕೆಸರೆರಚಿ ಹೆಸರು ಮಾಡಿಕೊಳ್ಳುವ ಪೈಪೋಟಿ.  

೧೭೫೦ ರಲ್ಲಿ ಹೈದರಲಿ – ಫಖ್ರುನ್ನಿಸ ದಂಪತಿಗಳಿಗೆ ಜನಿಸಿದ ಟಿಪ್ಪೂ ಬ್ರಿಟಿಷರ ವಿರುದ್ಧ ಹೋರಾಡಿದ ಅಮೋಘ ವೀರ, ಅಪ್ರತಿಮ ಶೂರ. ಸ್ವಾತಂತ್ರ್ಯದ ಪ್ರಪ್ರಥಮ ಕಹಳೆ ಝಳಪಿಸುವ ಟಿಪ್ಪೂ ಖಡ್ಗದ ಮೂಲಕ.  ಆರ್ಕಾಟ್ ಪ್ರದೇಶದ ಸೂಫಿ ಸಂತರ ಹೆಸರನ್ನು ತನ್ನ ಮಗನಿಗೆ ನಾಮಕರಣ ಮಾಡಿದ ಟಿಪ್ಪೂ ತಾಯಿ ತನ್ನ ಮಗನಲ್ಲಿ ಉದಾತ್ತ ಗುಣಗಳು ಮನೆಮಾಡುವಂತೆ ನೋಡಿಕೊಂಡರು. ಈ ಗುಣಗಳೇ ಟಿಪ್ಪು ತನ್ನ ಪ್ರಜೆಗಳ ಮನ್ನಣೆ, ಆದರ ಗೌರವ, ನಿಷ್ಠೆ ಗಳಿಸಿ ಕೊಳ್ಳಲು ನೆರವಾದವು.  

ತನ್ನಲ್ಲಿ ದೈವದತ್ತವಾಗಿ ಬಂದ ಸ್ಫೋಟಕ ಸ್ಥೈರ್ಯ, ಶೌರ್ಯದ ಕಾರಣ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಟಿಪ್ಪೂ, ಶತ್ರುವನ್ನು ಲೀಲಾಜಾಲವಾಗಿ ಮಣಿಸಿದ್ದರು. ಟಿಪ್ಪು ಕೇವಲ ೧೩ ನೆ ವಯಸ್ಸಿನಿಂದಲೇ ತಂದೆಯ ಗರಡಿಯಲ್ಲಿ ಪಳಗಿ ಅಪ್ರತಿಮೆ ಯೋಧ ಎನಿಸಿಕೊಂಡಿದ್ದರು. ಬೆನ್ನು ತಿರುಗಿಸಿ ಓಡಿ ಸಮಯ ಸಿಕ್ಕಾಗ ಬೇಟೆಯಾಡೋ ಕಲಿಗಳ ಪೈಕಿಯವರಾಗಿರಲಿಲ್ಲ ಟಿಪ್ಪು. ರಣರಂಗದಲ್ಲಿ ಟಿಪ್ಪು ಹೋರಾಡುವ ಪರಿ, ಅವರ ಪಾದರಸದಂಥ, ಮಿಂಚಿನ ಚಲವಲನ ಕಂಡ ಶತ್ರು ಹೇಳುತ್ತಿದ್ದು ಯಾವ ದಿಕ್ಕಿನಲ್ಲ್ಲಿ ತಿರುಗಿದರೂ ನಮಗೆ ಟಿಪ್ಪುವೇ ಕಾಣುತ್ತಿದ್ದುದು ಎಂದು. ಟಿಪ್ಪುವಿನ ಶೌರ್ಯ ಸಾಹಸ, ರಣನೀತಿಗಳಿಂದ ನಾಡಿನೊಳಗಿನ ಶತ್ರುಗಳೂ, ಲಂಡನ್ನಿನಲ್ಲಿ ಕೂತ ಪರಂಗಿಗಳೂ ಭಯದಿಂದ ಹೆಪ್ಪುಗಟ್ಟುತ್ತಿದ್ದರು.  

ಟಿಪ್ಪು ಹುತಾತ್ಮರಾಗಿ ಬಿದ್ದಿದ್ದರೂ ಅವರು ಸತ್ತಿರಲಿಕ್ಕಿಲ್ಲ ಎಂದು ಅತೀ ಸಮೀಪದಿಂದ ಮತ್ತಷ್ಟು ಗುಂಡುಹಾರಿಸಿ ಟಿಪ್ಪು ಹತರಾದರು ಎಂದು ಖಾತರಿ ಪಡಿಸಿ ಕೊಂಡ ನಂತರವೇ ಬ್ರಿಟಿಶ್ ಸೇನೆ ಅವರ ಪಾರ್ಥಿವ ಶರೀರದ ಹತ್ತಿರ ಬರಲು ಧೈರ್ಯ ತೋರಿಸಿದ್ದು. ಖಡ್ಗದ ಹಿಡಿತ ಬಿಡದೆ, ರಕ್ತದ ಮಡುವಿನಲ್ಲಿ ಟಿಪ್ಪು ಹತರಾಗಿ ಬಿದ್ದ ಆ ಸ್ಥಳಕ್ಕೆ ಧಾವಿಸಿ ಬಂದ ಬ್ರಿಟಿಶ್ ಸೈನಿಕನೊಬ್ಬ ಟಿಪ್ಪೂರವರ ಕೈಯ್ಯಲ್ಲಿದ್ದ ಭಾರೀ ಖಡ್ಗ ವನ್ನು ತನ್ನ ಕೈಯ್ಯಲ್ಲಿ ತೆಗೆದು ಕೊಂಡು ಹೇಳಿದ್ದು, ಈ ಅಪ್ರತಿಮ ವೀರನ ಖಡ್ಗ ನನ್ನ ಕೈಯಲ್ಲಿ ಸೇರಿದ್ದು ನನಗೆ ಅತೀವ ಹೆಮ್ಮೆ ತೋರುತ್ತಿದೆ, ಎಂದು ಕಣ್ಣೀರು ಹಾಕುತ್ತಾನೆ. ಟಿಪ್ಪುವಿಗೆ ಸಲ್ಲಬೇಕಾದ ಗೌರವಾರ್ಹ, ಮಿಲಿಟರಿ ಶವಸಂಸ್ಕಾರ ಬ್ರಿಟಿಶ್ ಸೇನೆ ಮಾಡುತ್ತದೆ. ಕರ್ನಲ್ ವೆಲ್ಲೆಸ್ಲಿ ಟಿಪ್ಪೂ ಸುಲ್ತಾನರ ಶೌರ್ಯಕ್ಕೆ ಮೆಚ್ಚಿ ಅವರ ಸ್ಮರಣಾಥ ಮಡಿದ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸುತ್ತಾನೆ. ಶತ್ರುವಿಗೆ ಇರುವ ಅಂತಃಕರಣ ದೇಶವಾಸಿಗೆ ಇಲ್ಲದೆ ಹೋಯಿತು.                

ಈ ಮಹಾನ್ ಚೇತನದ ಬಗ್ಗೆ ಬರೆಯುವ ಸುದೈವ ನನಗೆ ಒದಗಿ ಬಂದಿದ್ದನ್ನು ನೋಡಿ ಸಂತಸವಾಗುತ್ತಿದ್ದರೂ, ಬರಹದ ಉದ್ದೇಶ ಟಿಪ್ಪೂ ಬಗೆಗಿನ ಅಪವಾದ ನೀಗಿಸುವ ಅವಶ್ಯಕತ ಎನ್ನುವ ಅರಿವು ನನ್ನಲ್ಲಿ ಖೇದವನ್ನೂ ಉಂಟು ಮಾಡುತ್ತಿದ್ದೆ. ಟಿಪ್ಪು ಈ ನಾಡಿಗೆ ಸಂದ ಸೌಭಾಗ್ಯ. ಯಾವುದೇ ದೇಶವೂ ಹೆಮ್ಮೆ ಪಡಬಹುದಾದ ಒಬ್ಬ ಸ್ವಾತಂತ್ರ್ಯ ಯೋಧ. ಅಮೆರಿಕೆಯ ಜಾರ್ಜ್ ವಾಷಿಂಗ್ಟನ್, ಫ್ರಾನ್ಸ್ ನ ನೆಪೋಲಿಯನ್ ರಂಥ ಮಹನೀಯರ ಸಮಕಾಲೀನರಾಗಿದ್ದ ಟಿಪ್ಪುವಿಗೆ ಈ ಮಹನೀಯರುಗಳಿಗೆ ಅವರ ದೇಶಗಳು ತೋರಿದ ಕೃತಜ್ಞತಾ ಭಾವ ದಕ್ಕದೆ ಹೋದುದು ನಮಗೆ ನಾವೇ ಮಾಡಿ ಕೊಂಡ ಅವಮಾನ.  

ಟಿಪ್ಪು ಸುಲ್ತಾನ್ ರನ್ನು ಹಿಂದೂ ವಿರೋಧೀ ಎಂದು ಅಪಪ್ರಚಾರ ಮಾಡುವ ಜನರಿಗೆ ಶೃಂಗೇರಿ ಆಚಾರ್ಯ ರೊಂದಿಗೆ ಟಿಪ್ಪು ನಡೆಸಿದ ೩೦ ಪತ್ರಗಳ ಸಂವಾದ, ವಿವರಣೆ ಯನ್ನು ಸರಕಾರ, ಮತ್ತು ಶೃಂಗೇರಿ ಮಠ ಕೊಟ್ಟು ಟಿಪ್ಪೂ ರವರ ಬಗ್ಗೆ ಇಲ್ಲಸಲ್ಲದ ನ್ನು ಬರೆದು ದಿಢೀರ್ ಹೆಸರುವಾಸಿಯಾಗಲು ಪ್ರಯತ್ನಿಸುತ್ತಿರುವ ಇತಿಹಾಸ್ಯಕಾರರು, ಮತ್ತು ‘ಪತ್ರಕರ್ತ’ ಇತಿಹಾಸ್ಯಕಾರರ ಪ್ರಯತ್ನಗಳನ್ನು ಕೊನೆಗಾಣಿಸಬೇಕು.

ಶೃಂಗೇರಿಯ ಶಾರದ ಮಾತೆಯ ಪೀಠದ ಮೇಲೆ ಉಗ್ರ ಧಾಳಿ ನಡೆಸಿದ ಮರಾಠ ಸೇನೆ ಮತ್ತು ಅದರ ಸೇನಾ ನಾಯಕ ತೋರಿದ ಕ್ರೌರ್ಯಕ್ಕೆ ಟಿಪ್ಪು ಬೆಚ್ಚಿ ಬಿದ್ದಿದ್ದರು. ಶಾರದಾ ಮಾತೆಯ ವಿಗ್ರಹಗಳನ್ನು ಬೀದಿಗೆಸೆದು, ಅಲ್ಲಿನ ಅರ್ಚಕರನ್ನು ಕೊಂದು, ಅಟ್ಟಹಾಸಗೈದ ಮರಾಠರ ಕ್ರೌರ್ಯ ಕಂಡು ಶೃಂಗೇರಿ ನಲುಗಿತು. ಒಂದು ಪವಿತ್ರ ಕ್ಷೇತ್ರದ ಮೇಲೆ ಧಾಳಿ ಮಾಡಿದ್ದ ಮರಾಠರ ವಿರುದ್ಧ ಅಲ್ಲಿನ ಆಚಾರ್ಯು ಮೊರೆ ಹೋಗಿದ್ದು ಟಿಪ್ಪುವಿನಲ್ಲಿಗೆ. ಆಚಾರ್ಯರು ಟಿಪ್ಪುವಿನ ಸಹಾಯ ಯಾಚಿಸಿದ ಸುದ್ದಿ ತಿಳಿದ ಮರಾಠರು ಟಿಪ್ಪು ರವರ ಶಕ್ತಿ ಸಾಮರ್ಥ್ಯಕ್ಕೆ ಹೆದರಿ ಶೃಂಗೇರಿಯಿಂದ ಕಾಲು ಕೀಳುತ್ತಾರೆ. ಮರಾಠರಿಂದ ದಾಳಿಗೀಡಾದ ಮಠದ ದುರಸ್ತಿಗೆ ಟಿಪ್ಪು ಸುಲ್ತಾನ್ ಉದಾರವಾಗಿ ಧನಸಹಾಯ ಮಾಡುತ್ತಾರೆ. ಕೆಲ ಸಮಯದ ನಂತರ ಮರಾಠ ದಾಳಿಯ ನೇತೃತ್ವ ವಹಿಸಿದ್ದ ರಘುನಾಥ ರಾವ್ ಮಠದೊಂದಿಗೆ ಸಂಬಂಧ ಬೆಳೆಸಲು ತಾನಿರುವಲ್ಲಿಗೆ ಆಚಾರ್ಯರನ್ನು ಕರೆಸುತ್ತಾನೆ. ತನ್ನ ಕಡು ಶತ್ರು ಮರಾಠ ರೊಂದಿಗೆ ಸಂಬಂಧ ಬೆಳೆಸಲು ಹೋಗುವ ಆಚಾರ್ಯರಿಗೆ ಅವರು ಹೋಗುವ ಹಾದಿಯಲ್ಲಿ ಯಾವ ತೊಂದರೆಯೂ ಆಗಂತೆ ಎಲ್ಲಾ ಸಜ್ಜೀಕರಣದ ವ್ಯವಸ್ಥೆ ಮಾಡುವುದು ಮಾತ್ರವಲ್ಲದೆ ಆಚಾರ್ಯ ಹಿಂತಿರುಗಿ ಬರುವುದು ತಡವಾದಾಗ ಅದರ ಕುರಿತು ಆತಂಕಿತರಾಗಿ ವಿಚಾರಿಸುತ್ತಾರೆ ಟಿಪ್ಪು.

ಟಿಪ್ಪು ಹೇಳುತ್ತಿದ್ದುದು, ನನಗಿರುವುದು ದೇವರ ದಯೆ, ಆಚಾರ್ಯರ ಆಶೀರ್ವಾದ, ಮತ್ತು ನನ್ನ ಶಸ್ತ್ರ ಭಂಡಾರ. ಟಿಪ್ಪು ಮತ್ತು ಶಾರದಾ ಪೀಠದ ಆಚಾರ್ಯರ  ನಡುವೆ ೩೦ ಪತ್ರಗಳ ಸಂವಾದ ಸಹ ನಡೆಯುತ್ತದೆ.  

ಟಿಪ್ಪು ಸೈನ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದುದು ಹಿಂದೂಗಳು. ಟಿಪ್ಪೂ ಸುಲ್ತಾನರ ಪ್ರಧಾನಿ ಪೂರ್ಣಯ್ಯ, ಓರ್ವ ಬ್ರಾಹ್ಮಣ. ಕಂದಾಯ ಮಂತ್ರಿ ಕೃಷ್ಣ ರಾವ್, ಮತ್ತೊಬ್ಬ ಬ್ರಾಹ್ಮಣ. ಸೇನಾ ದಂಡನಾಯಕ ಶ್ರೀನಿವಾಸ ರಾವ್.  ಶ್ರೀರಂಗ ಪಟ್ಟಣದ ಶ್ರೀ ರಂಗನಾಥನ ದೇಗುಲ, ಕಲ್ಲಾಳದ ಲಕ್ಷ್ಮಿಕಾಂತ ದೇವಾಲಯ, ಮೇಲುಕೋಟೆಯ ನಾರಾಯಣ ಸ್ವಾಮೀ ಮಂದಿರಗಳನ್ನೂ  ಸೇರಿಸಿ ೧೫೦ ಕ್ಕೂ ಹೆಚ್ಚು ಹಿಂದೂ ದೇವಾಯಗಳಿಗೆ ಉದಾರ ಧನಸಹಾಯ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ‘ಹಕೀಂ ನಂಜುಂಡ’ ಎನ್ನುವ ಲಿಂಗವನ್ನು ಟಿಪ್ಪು ಕೊಟ್ಟಿದ್ದಂತೆ.

ಶ್ರೀರಂಗ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕೆರೆ ತೊನ್ನೂರುಎನ್ನುವ ಗ್ರಾಮದಲ್ಲಿ ೧೨ ನೆ ಶತಮಾನದ ಕೆಲವು ದೇವಾಲಯಗಳಿವೆ. ಈ ದೇವಾಲಯಗಳಿಗೆ ಟಿಪ್ಪು ಭೇಟಿ ನೀಡಿದ್ದರಂತೆ.  

ಟಿಪ್ಪು ಸುಲ್ತಾನರ ಬದುಕಿನ ಧ್ಯೇಯ ತನ್ನ ನಾಡಿನ ಜನ ಸುಭಿಕ್ಷರನ್ನಾಗಿಸೋದು ಮಾತ್ರವಲ್ಲ ಅವರನ್ನು ಗುಲಾಮಗಿರಿಯ ಸಂಕೋಲೆಗಳಿಂದ ದೂರ ಇಡುವುದೇ ಆಗಿತ್ತು. ಪಟ್ಟ ಭದ್ರ ಮತ್ತು ಪುರೋಹಿತಶಾಹಿ ಶಕ್ತಿಗಳ ಕೈಗಳಿಂದ ಜಮೀನನ್ನು ನಿರ್ಗತಿಕರಿಗೆ, ಬಡವರಿಗೆ ನೀಡಿ ಸಮಾಜಿಕ ಸುಧಾರಣೆಯ ಅಡಿಗಲ್ಲನ್ನು ಹಾಕಿದರು ಟಿಪ್ಪು. ಇದನ್ನೇ ಇಂದಿರಾ ಗಾಂಧೀ ಅನುಕರಿಸಿದ್ದು ಉಳುವವನೇ ಹೊಲದೊಡೆಯ ನೀತಿಯ ಮೂಲಕ. ಬಹುಶಃ ಜಮೀನನ್ನು ಕಸಿದುಕೊಂಡು ಬಡವರಿಗೆ, ನಿರ್ಗತಿಕರಿಗೆ ಟಿಪ್ಪು ಹಂಚಿದ್ದು ನುಂಗಲಾರದ ತುತ್ತಾಗಿರಬಹುದೇ? ಫ್ರಾನ್ಸ್ ದೇಶದಿಂದ ಬಂದ ಯಾತ್ರಿಕರು ಮೈಸೂರು ಸಂಸ್ಥಾನದ ಪ್ರಗತಿ, ಬೆಳವಣಿಗೆ ಕಂಡು ವಿಸ್ಮಿತರಾಗಿದ್ದರು.  

ಟಿಪ್ಪು ಸುಲ್ತಾನರ ವಿರುದ್ಧ ಹೋರಾಡಿದ್ದ ಬ್ರಿಟಿಶ್ ಸೈನಿಕರಾದ ಕಿರ್ಕ್ ಪಾಟ್ರಿಕ್, ವಿಲ್ಕ್ಸ್ ಮುಂತಾದವರು ಯುದ್ಧ ಮುಗಿದ ಕೂಡಲೇ ಇತಿಹಾಸಕಾರರಾಗಿ ತಮಗೆ, ತಮ್ಮ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನನಾಗಿದ್ದ ವ್ಯಕ್ತಿಯನ್ನು ತಮಗೆ ತೋಚಿದ ರೀತಿಯಲ್ಲಿ ಬಿಂಬಿಸಿ ಬರೆದರು. ಟಿಪ್ಪುವನ್ನು ಮತಾಂಧ, ಕ್ರೂರ ಎಂದು ಚಿತ್ರೀಕರಿಸಿದರು. ನಮ್ಮ ನೆಲ, ಜಲವನ್ನು, ಖನಿಜ ಸಂಪತ್ತನ್ನು ಡೊಗ್ಗು ಸಲಾಮು ಹಾಕಿ ಬ್ರಿಟಿಷರಿಗೆ ಅರ್ಪಿಸದೆ ಸವಾಲೆಸೆದು, ಅವರನ್ನು ದೇಶದಿಂದ ಹೊರಗಟ್ಟಲು ತೋರಿಸಿದ ಕೆಚ್ಚು ಇವರ ಲೆಕ್ಕಾಚಾರದಲ್ಲಿ ಟಿಪ್ಪು ತೋರಿಸಿದ ಕ್ರೌರ್ಯ.

ನರಬಲಿ, ಮದ್ಯಸೇವನೆ ನಿಷೇಧ, ಗಾಂಜಾ ಕೃಷಿಯ ಮೇಲಿನ ನಿರ್ಬಂಧ, ವೇಶ್ಯಾವಾಟಿಕೆಯ ನಿರ್ಮೂಲನ…..ಮುಂತಾದ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು ಟಿಪ್ಪು. ಊಹಿಸಿ ನೋಡಿ,, ಇಷ್ಟಲ್ಲಾ ಕಾರ್ಯಗಳನ್ನು ಮರಾಠ, ನಿಜಾಮರ ಜೊತೆಗೂಡಿ ನಮ್ಮ ನಾಡನ್ನು ಕಬಳಿಸಲು ಹೊಂಚು ಹಾಕುತ್ತಿದ್ದ ಬ್ರಿಟಿಷರ ಉಪಟಳದ ನಡುವೆ ಟಿಪ್ಪು ಹೇಗೆ ಮಾಡಿರಬಹುದು ಎಂದು. 

ಬ್ರಿಟಿಷರೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದ ಜನರ ವಿರುದ್ಧ ಹೋರಾಡಲು ಟಿಪ್ಪು ಹಿಂದೆ ಮುಂದೆ ನೋಡಲಿಲ್ಲ. ಜಾತಿ ಧರ್ಮ ನೋಡಲಿಲ್ಲ. ತನ್ನದೇ ಧರ್ಮೀಯರಾದ ಕೇರಳದ ಮಾಪಿಳ್ಳೆ, ಮತ್ತು ನಿಜಾಮರ ವಿರುದ್ಧವೂ ಟಿಪ್ಪು ಸೆಣಸಿದ್ದರು. ಕರ್ನೂಲಿನ ನಾವಾಬರನ್ನೂ ಬಿಡಲಿಲ್ಲ ಟಿಪ್ಪು. ತಮ್ಮ ಕುತಂತ್ರಗಳಿಂದ ಮರಾಠರು ಮತ್ತು ನಿಜಾಮರ ಸಹಾಯ ಟಿಪ್ಪುವಿಗೆ ಸಿಗದಂತೆ ಮಾಡಿದ ಬ್ರಿಟಿಷರು ದೇಶ ಕಬಳಿಸುವ ತಮ್ಮ ಕೆಲಸ ಸುಗಮವಾಗುವಂತೆ ನೋಡಿಕೊಂಡರು.

ಆತ್ಮಾಭಿಮಾನಿ ಟಿಪ್ಪು ನಾಡಿನೊಳಗಿನ ಜನರ ಸಹಕಾರದ ಕಾರಣ ಬ್ರಿಟಿಶ್ ಶತ್ರು ತನ್ನ ನಾಡನ್ನು ಆಕ್ರಮಿಸುವುದನ್ನ ಕಾಣಲಾರದೆ ದೂರದ ದೇಶಗಳ ಮೊರೆ, ಸಹಕಾರ ಯಾಚಿಸಬೇಕಾಯಿತು. ತುರ್ಕಿ, ಇರಾನ, ಇರಾಕ್, ಇಟಲಿ, ಫ್ರಾನ್ಸ್ ದೇಶಗಳ ಸಹಕಾರ ಬೇಡಿದ ಟಿಪ್ಪುವಿಗೆ ಈ ಸಹಾಯ ಸಿಕ್ಕಿದ್ದರೆ ಭಾರತದ ಚರಿತ್ರೆಯೇ ಬೇರೆಯಾಗುತ್ತಿತ್ತು. ಕೇವಲ ನಾಲ್ಕೈದು ಸಾವಿರ ಫ್ರೆಂಚ್ ಸೈನಿಕರ ಸಹಾಯ ಸಿಕ್ಕಿದ್ದರೂ ಬ್ರಿಟಿಶ್ ಸೂರ್ಯ ನಿರಾಯಾಸವಾಗಿ ಅಸ್ತಂಗತವಾಗಿ ಬಿಡುತ್ತಿತ್ತು. ನಾಲ್ಕನೇ ಮೈಸೂರು ಯುದ್ಧದ ಗತಿಯೇ ಬದಲಾಗುತ್ತಿತ್ತು. ಮಹಾತ್ಮಾ ಗಾಂಧಿ, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫ್ಫಾರ್ ಖಾನ್ ರಂಥ ಸ್ವಾತಂತ್ರ್ಯ ಹೋರಾಟಗಾರರ ಅವಶ್ಯಕತೆ ಬರುತ್ತಿರಲಿಲ್ಲ ಈ ನಾಡನ್ನು ಗುಲಾಮ ಗಿರಿಯಿಂದ ಮುಕ್ತಗೊಳಿಸಲು.           

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂ ರೀತಿಯ ಮುಸ್ಲಿಂ ಬಾಂಧವರ ಪಾಲು ಹಿರಿದು. ಬ್ರಿಟಿಷರನ್ನು ನಾಡಿನಿಂದ ಓಡಿಸಲು ರಹಸ್ಯ ರೇಷ್ಮೆ ಪತ್ರ ಗಳ ಮೂಲಕ ಕಾರ್ಯಾಚರಣೆ ಮಾಡಿದ ದೇವೊಬಂದ್ ಮೌಲ್ವಿಗಳ ಬಗ್ಗೆ ನಮ್ಮ ದೇಶದ ಜನರಿಗೆ ಅರಿವಿಲ್ಲ. ಬ್ರಿಟಿಷರನ್ನು ನಾಡಿನಿಂದ ಓಡಿಸಲು ಟಿಪ್ಪೂ ರಂತೆಯೇ ಈ ಮೌಲ್ವಿಗಳೂ ಸಹ ಪರದೇಶಗಳ ಸಹಾಯ ಯಾಚಿಸಿದ್ದರು. ಹಾಗೆಯೇ ಭಾರತದ ತ್ರಿವರ್ಣ ಧ್ವಜವನ್ನು ರಚಿಸಿದ ಮುಸ್ಲಿಂ ಮಹಿಳೆಯ ಪರಿಚಯ ಉಂಟೆ ನಮಗೆ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಬಹಳಷ್ಟು ಹೊರಾಡಿದ್ದಾನೆ. ಅವನಿಗೆ ಕೀರುತಿಯ, ಮೂರುತಿಯ ಅವಶ್ಯಕತೆಯೂ ಇಲ್ಲ. ಎಲ್ಲಾದರೂ ಕೇಳಿದ್ದೀರಾ, ಮುಸ್ಲಿಮರು ತಮ್ಮ ಧರ್ಮಕ್ಕೆ ಸೇರಿದ ವೀರರ ಪ್ರತಿಮೆ ಸ್ಥಾಪಿಸಲು ಮಾಡಿದ ಮನವಿ ಬಗ್ಗೆ? ರಸ್ತೆ ಬೀದಿ ಗಳಿಗೆ ನಮ್ಮ ಮಹನೀಯರ ನಾಮಕರಣ ಮಾಡಿ ಎಂದು ಬೇಡಿಕೆ ಇಟ್ಟ ಬಗ್ಗೆ?

ನಾಡಿನ ಇತಿಹಾಸಕಾರೊಂದಿಗೆ, ನಾನೂ ಇತಿಹಾಸ್ಯಕಾರ ಎನ್ನುವ ಭ್ರಮೆಯಲ್ಲಿರುವ ಪತ್ರಕರ್ತರಲ್ಲಿ ನನ್ನ ಮನವಿ. ನಮ್ಮ ಸಂಸ್ಕಾರ, ಹಿಂದೂ ಮತ್ತು ಮುಸ್ಲಿಂ, ಜ್ಞಾನ ಮತ್ತು ಜ್ಞಾನಾರ್ಜನೆಯನ್ನು ಒಂದು ಆರಾಧನೆಯನ್ನಾಗಿ ಪರಿಗಣಿಸುತ್ತವೆ. ಅದೇ ಕಾರಣಕ್ಕಾಗಿ ಸರಸ್ವತೀ ದೇವಿಯನ್ನು ವಿದ್ಯಾ ದೇವಿಯನ್ನಾಗಿ ಕಾಣಲಾಗುತ್ತದೆ.  ನಮ್ಮಲ್ಲಿ ಮನೆ ಮಾಡಿಕೊಂಡ ಪೂರ್ವಾಗ್ರಹ ಪೀಡಿತ ವಿಚಾರಗಳು, ಹಗೆ, ಪ್ರಶಸ್ತಿಗಾಗಿ ರಾಜಕೀಯ ಪಕ್ಷಗಳನ್ನ ಸಂಪ್ರೀತಗೊಳಿಸಲು ಮುಗ್ಧ ಜನರನ್ನು ದಾರಿ ತಪ್ಪಿಸುವ ಕಾರ್ಯ, ಇವು ‘ಸರಸ್ವತೀ ಸಮ್ಮಾನ’ವಲ್ಲ. ಇದು ಸರಸ್ವತೀ ವಂದನೆ ಯಂತೂ ಖಂಡಿತಾ ಅಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುವ ನಾಣ್ಣುಡಿ ಯ ಹಿಂದಿನ ಉದ್ದೇಶ ಅರ್ಥ, ಸಂಬಂಧ, ಬಾಂಧವ್ಯ ನಿರ್ಮಿಸಲು ಸುಳ್ಳನ್ನು ಬೇಕಾದರೂ ಹೇಳಬೇಕು ಎಂದು. ಆದರೆ ಸಾವಿರ ಸುಳ್ಳನ್ನು ಹೆಣೆದು ಶಾಂತಿ ಸೌಹಾರ್ದ ಹದಗೆಡಿಸುವ, ದೊಂಬಿ ಎಬ್ಬಿಸುವ ಪರಿಪಾಠ ನಮ್ಮ ಸಂಸ್ಕಾರಕ್ಕೆ ಹೇಳಿಸಿದ್ದಲ್ಲ. ಟಿಪ್ಪುವಿನೊಂದಿಗೆ ಹೋರಾಡಿದ್ದು ಮುಸ್ಲಿಂ ಸೈನಿಕರು ಮಾತ್ರವಲ್ಲ ಅದರಲ್ಲಿ ಬಹುಪಾಲು ಹಿಂದೂಗಳೂ ಇದ್ದರು. ಧರ್ಮಾಂಧತೆಯ ಸೊಂಕಿಲ್ಲದ, ಟಿಪ್ಪುವಿಗೆ ಸ್ವಾಮೀ ನಿಷ್ಠೆ ಪ್ರದರ್ಶಿಸಿದ ಈ ಯೋಧರಿಗೆ ನಾವು ಮಾಡುವ ಅವಮಾನ ಟಿಪ್ಪು ದೇಶ ಭಕ್ತಿಯನ್ನು ಪ್ರಶ್ನಿಸುವುದು.   ದೇಶ ಭಕ್ತ ಯಾವುದೇ ಧರ್ಮೀಯನಾಗಿರಲಿ ಅವನು ಭಾರತೀಯ ಎನ್ನುವುದನ್ನು ಮರೆಯದಿರಿ. ಹಿಂದೂಸ್ಥಾನವು ಎಂದೂ ಕಾಣದ, ಭಾರತ ರತ್ನ ಟಿಪ್ಪು ಮತ್ತು ಅವರಂಥ ಕಲಿಗಳಿಗೆ ಅಪಮಾನ ಎಸಗಬೇಡಿ.

“ಇನ್ನೂರು ವರ್ಷ ಕುರಿಗಳ ಥರ ಬಾಳುವುದಕ್ಕಿಂತ, ಎರಡು ದಿನಗಳ ಹುಲಿಯ ಬದುಕೇ ಶ್ರೇಷ್ಠ”.

ಟಿಪ್ಪೂ ಸುಲ್ತಾನರ ಮೇಲಿನ ನುಡಿಗಳು ನಮ್ಮ ಮನಃಪಟಲದಲ್ಲಿ ಮಾಸದೆ ಇದ್ದಿದ್ದರೆ, ಟಿಪ್ಪುವಿನಂಥ ದೇಶಭಕ್ತರನ್ನು ಆದರಿಸಿದ್ದರೆ  ದೇಶ ಇಂದು ವಿದೇಶೀಗಳ ಹಂಗಿನಲ್ಲಿ ಇರುತ್ತಿರಲಿಲ್ಲ. ಕಾಶ್ಮೀರದ ಒಂದು ತುಣುಕನ್ನು ಕಳೆದು ಕೊಂಡಿದ್ದರಿಂದ ಹಿಡಿದು, ಚೀನಾಕ್ಕೆ ೩೮ ಸಾವಿರ ಚದರ ಕಿಲೋ ಮೀಟರುಗಳ ಪವಿತ್ರ ಸ್ಥಳವನ್ನೂ ಬಿಟ್ಟು ಕೊಟ್ಟು, ಕೊನೆಗೆ ಅಮೆರಿಕೆಯಲ್ಲಿನ ನಮ್ಮ ರಾಜತಂತ್ರಜ್ಞೆ ದೇವಯಾನಿಯ ಮುಖ ಭಂಗದವರೆಗೆ, ನಮಗೆ ಕಾಣಸಿಗುವ ಕಾರಣ ನಮ್ಮಲ್ಲಿನ ಕೆಚ್ಚಿನ ಕೊರತೆ. ಅಭಿಮಾನಶೂನ್ಯತೆ.  

ಸ್ಕಾಟ್ಲೆಂಡ್ ದೇಶದ ಸುಪ್ರಸಿದ್ಧ ಕವಿ ಸರ್. ವಾಲ್ಟರ್ ಸ್ಕಾಟ್, ನೆಪೋಲಿಯನ್ ಬೋನಪಾರ್ಟೆ ಬಗ್ಗೆ ಬರೆಯುತ್ತಾ, ಹೈದರಾಲಿಯಲ್ಲಿ ಕಾಣಲು ಸಿಕ್ಕಿದ್ದ ರಾಜಕೀಯ ದೂರದೃಷ್ಟಿ ಮತ್ತು ವಿಶಾಲ ಮನೋಭಾವ ನೆಪೋಲಿಯನ್ ನಲ್ಲಿ ಇಲ್ಲದಿದ್ದರೂ, ರಣರಂಗದಲ್ಲಿ ಟಿಪ್ಪು ತೋರಿದ್ದ ಛಲ, ಮತ್ತು ಪರಾಕ್ರಮ ಮತ್ತು ಅಂತಿಮ ಹೋರಾಟದಲ್ಲಿ ನಿಜವಾದ ಗಂಡಿನಂತೆ ಕೈಯಲ್ಲಿನ ಖಡ್ಗ ವನ್ನು ಮುಷ್ಟಿಯಲ್ಲೇ ಇರಿಸಿ ಟಿಪ್ಪು ಸಾವನ್ನಪ್ಪಿದ ರೀತಿ ನೆಪೋಲಿಯನ್ ಧೈರ್ಯ ತೋರಿಸಿದ್ದ ಎಂದು ಮುಕ್ತ ಕಂಠ ದಿಂದ ಟಿಪ್ಪುವನ್ನು ಹೊಗಳುತ್ತಾನೆ. ಕನ್ನಡ ನಾಡಿನ ಇತಿಹಾಸಕಾರ ಮಾಡಬೇಕಾದ ಕೆಲಸವನ್ನ ದೂರದ ಸ್ಕಾಟ್ಲೆಂಡಿನ ಮುತ್ಸದ್ದಿಯೊಬ್ಬ ಮಾಡುತ್ತಾನೆ.

ಚಿತ್ರ ಕೃಪೆ: http://www.sacredartindia.com

 

Advertisements

14 thoughts on “ಹಿಂದೂಸ್ಥಾನದ ವ್ಯಾಘ್ರ ‘ಟಿಪ್ಪು ಸುಲ್ತಾನ್’, ಒಂದು ಐತಿಹಾಸಿಕ ನೋಟ

 1. Kumar ಹೇಳುತ್ತಾರೆ:

  [[ಭಾರತ ಕಂಡ ಅತ್ಯಪೂರ್ವ ಮಾತ್ರವಲ್ಲ, ಏಕೈಕ ಸ್ವಾತಂತ್ರ್ಯ ವೀರ ಟಿಪ್ಪು ಸುಲ್ತಾನ್]]
  ಇದೇನಿದು ನೀವು ಹೇಳುತ್ತಿರುವುದು? ಟಿಪ್ಪುವನ್ನು ಬಿಟ್ಟರೆ ಬೇರಾರೂ ಸ್ವಾತಂತ್ರ್ಯ ವೀರರೇ ಭಾರತದಲ್ಲಿಲ್ಲವೇ?
  ಶಿವಾಜಿ, ಗುರುಗೋವಿಂದ ಸಿಂಹ, ಬಂದಾ ಬೈರಾಗಿ, ರಾಣಾ ಪ್ರತಾಪ ಸಿಂಹ, ರಣಜಿತ್ ಸಿಂಗ್, ಇವರೆಲ್ಲರೂ ಏನು?
  ತಾತ್ಯಾ ಟೋಪಿ, ಪೇಶ್ವೆ ನಾನಾ ಸಾಹೇಬ್, ವಾಸುದೇವ ಬಲವಂತ ಫಡ್ಕೆ, ಚಂದ್ರ ಶೇಖರ್ ಆಜಾದ್, ಅಶ್ವಾಖ್ ಉಲ್ಲಾ ಖಾನ್, ಭಗತ್ ಸಿಂಗ್, ಸುಭಾಷ್ ಬೋಸ್, ರಾಸ ಬಿಹಾರಿ ಬೋಸ್, ಸ್ವಾಮಿ ವಿವೇಕಾನಂದ, ಸ್ವಾಮಿ ಶ್ರದ್ಧಾನಂದ, ಮೇಡಮ್ ಕಾಮಾ, ನಿವೇದಿತಾ, ಆನಿ ಬೆಸೆಂಟ್, ಇವರೆಲ್ಲಾ ಸ್ವಾತಂತ್ರ್ಯ ವೀರರಲ್ಲವೇ?

  [[ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡುಗಡೆ ಮಾಡಿಸಲು ಹೋರಾಡಿದ ಆ ಗುಣ]]
  ತಾನು ಏತಕ್ಕಾಗಿ ಹೋರಾಡುತ್ತಿರುವೆ ಎನ್ನುವುದನ್ನು ಸ್ವತಃ ಟಿಪ್ಪೂ ಸುಲ್ತಾನನೇ ತನ್ನ ಖಡ್ಗದ ಮೇಲೆ ಕೆತ್ತಿಕೊಂಡಿರುವನು.
  ಅವನು ಎಲ್ಲಿಯೂ ತಾನು ಭಾರತ ಮಾತೆಯನ್ನು ಬ್ರಿಟಿಷರ ಕಪಿ ಮುಷ್ಟಿಯಿಂದ ಬಿಡಿಸಲು ಹೋರಾಡುತ್ತಿರುವೆ ಎಂದು ಹೇಳಿಕೊಂಡಿಲ್ಲ.

  [[ಟಿಪ್ಪು, ಕರುನಾಡಿನಲ್ಲಿ ಹುಟ್ಟಿದ ಕೆಚ್ಚೆದೆಯ ಕನ್ನಡಿಗ]]
  ಟಿಪ್ಪು ಕರುನಾಡಿನಲ್ಲಿ ಹುಟ್ಟಿದ್ದು ನಿಜ. ಆದರೆ, ಆತನಿಗೆ ಕನ್ನಡದ ಕುರಿತಾಗಿ ಪ್ರೀತಿಯಿರಲಿಲ್ಲ.
  ಕನ್ನಡದ ಕುರಿತಾಗಿ ಪ್ರೀತಿಯಿದ್ದಿದ್ದರೆ, ಅಲ್ಲಿಯವರೆಗೂ ರಾಜ್ಯಭಾಷೆಯಾಗಿದ್ದ ಕನ್ನಡವನ್ನು ತೆಗೆದು ಪರಕೀಯ ಭಾಷೆಯಾದ ಪರ್ಶಿಯನ್ ಭಾಷೆಯನ್ನು ರಾಜ್ಯಭಾಷೆಯಾಗಿ ಮಾಡುತ್ತಿರಲಿಲ್ಲ. ಆತ ಠಂಕಿಸಿದ ನಾಣ್ಯಗಳಲ್ಲಿ ಬರೆಸಿರುವ ಪರ್ಶಿಯನ್ ಅಕ್ಷರಗಳೇ ಇದಕ್ಕೆ ಸಾಕ್ಷಿ.

  [[ಟಿಪ್ಪು ಒಬ್ಬ ಕ್ರೂರ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಖೇದಕರ]]
  ಟಿಪ್ಪು ಲಕ್ಷಾಂತರ ಹಿಂದುಗಳನ್ನು ಮುಸಲ್ಮಾನರನ್ನಾಗಿ ಮತಾಂತರಿಸಿದ್ದು ಸುಳ್ಳೇ?
  ಕೊಡಗಿಗೊಮ್ಮೆ ಭೇಟಿಕೊಟ್ಟು, ಅಲ್ಲಿನ ಜನರ ಅಳಲಿನ ಕಥೆಗಳನ್ನು ಸ್ವತಃ ಆಲಿಸಿರಿ. ಇಸ್ಲಾಮಿಗೆ ಮತಾಂತರಗೊಳ್ಳಲು ಒಪ್ಪದವರನ್ನು ಟಿಪ್ಪು ಯಾವ ರೀತಿ ಕೊಲೆಗೈದ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.
  ಕೊಡಗಿನಲ್ಲಿ ಮಾತ್ರವಲ್ಲ. ಮೈಸೂರಿನ ಸುತ್ತಮುತ್ತಲೂ ಈ ರೀತಿಯ ಘಟನೆಗಳು ಸಾಕಷ್ಟು ಸಂಭವಿಸಿದೆ.
  ಒಂದು ಊರಿನಲ್ಲಿ ದೀಪಾವಳಿಯನ್ನೇ ಆಚರಿಸುವುದಿಲ್ಲ. ಅದೇ ದಿನ ಟಿಪ್ಪು ಸುಲ್ತಾನನು ಆ ಊರಿನ ಮೇಲೆ ಧಾಳಿ ನಡೆಸಿ ನೂರಾರು ಜನರ ಮಾರಣ ಹೋಮ ಮಾಡಿದ್ದನಂತೆ. ಅಂದಿನಿಂದ, ಆ ಊರಿನಲ್ಲಿ ದೀಪಾವಳಿ ಆಚರಿಸುತ್ತಿಲ್ಲ.
  ಆ ಊರಿನವರೇನೂ ಬ್ರಿಟಿಷರಾಗಿರಲಿಲ್ಲ. ಅವರು ಮಾಡಿದ ಒಂದೇ ತಪ್ಪೆಂದರೆ, ಮುಸಲ್ಮಾನರಾಗಿ ಮತಾಂತರಗೊಳ್ಳಲು ಒಪ್ಪದೇ ಇದ್ದುದು!

  1. bhadravathi ಹೇಳುತ್ತಾರೆ:

   ಸಂಕ್ರಾಂತಿ ಹಬ್ಬದ ಶುಭಾಶಯಗಳು, ತಮಗೂ, ಪರಿವಾರದವರಿಗೂ.
   ಟಿಪ್ಪು ಮಾಡಿದ ಪ್ರಮಾದಗಳನ್ನು ಅವರ ತಲೆಗೆ ಕಟ್ಟುವ ಅವಶ್ಯಕತೆ ಇಲ್ಲ. ಅಂಥ ಕೃತ್ಯಗಳನ್ನು ಎಸಗಿದ್ದೇ ಆದರೆ ಅದು ಅವರ ಕೈ ಕೆಳಗಿನ ಜನ ಮಾಡಿರಬಹುದು. ಟಿಪ್ಪು ಅಂಥ ಹಿಂದೂ ವಿರೋಧೀ ಯಾಗಿದ್ದರೆ ನಾನು ಬರೆದು ತೋರಿಸಿರುವ ದೇವಾಲಯಗಳಿಗೆ ಅನುದಾನ ಕೊಡುತ್ತಿರಲಿಲ್ಲ. ಶೃಂಗೇರಿಯಲ್ಲಿ ಮರಾಠಿ ಗರ ಕ್ರೌರ್ಯಕ್ಕೆ ಬೆಚ್ಚಿ ಆಚಾರ್ಯರು ಟಿಪ್ಪು ಸಹಾಯ ಕೇಳುತ್ತಿರಲಿಲ್ಲ. ಒಡೆದು ಆಳುವ ನೀತಿಯ ಬ್ರಿಟಿಶ್ ಇತಿಹಾಸಕಾರರು ಬೇಕಾದ ಥರ ಬರೆದರು. ಏಕೆಂದರೆ ಅವರ ವಿರುದ್ಧ ಟಿಪ್ಪು ಹೋರಾಡಿದ್ದು ಮಾತ್ರವಲ್ಲ, ದೇಶವಾಸಿಗಳನ್ನೂ, ವಿದೇಶಿಯರನ್ನೂ theatre of war ಒಳಕ್ಕೆ ತರು ಟಿಪ್ಪು ಶ್ರಮಿಸಿದ್ದರು. ದೇಶದ ವಿರುದ್ಧ, ತನ್ನ ನಾಡಿನ ವಿರುದ್ಧ ಪಿತೂರಿ ಎಸಗುವವರನ್ನು ಯಾವ ರಾಜನೂ ಸುಮ್ಮನೆ ಬಿಟ್ಟಿದ್ದು ಚರಿತ್ರೆಯಲ್ಲಿ ಕಾಣೋಲ್ಲ. ಸಾಕಷ್ಟು ಪುರಾವೆಗಳಿಲ್ಲದಾಗ್ಯೂ ಅಫ್ಜಲ್ ಗುರುವನ್ನು ನೇಣಿಗೆ ಏರಿಸಲಿಲ್ಲವೇ ನಾವು? ದೇಶ ದ್ರೋಹದ ಕಿಂಚಿತ್ ಸಂಶಯ ಬಂದರೂ ರಾಜನಾಗಲೀ, ರಾಜ್ಯವೇ ಆಗಲೀ ಸುಮ್ಮನೆ ಇರೋಲ್ಲ. White mughal ಪುಸ್ತಕ ಬರೆದ William Dalrymple ಹೀಗೆ ಬರೆಯುತ್ತಾನೆ…

   http://www.theguardian.com/politics/2005/may/24/foreignpolicy.india

   1. Kumar ಹೇಳುತ್ತಾರೆ:

    ಶುಭಾಷಯಗಳಿಗೆ ಧನ್ಯವಾದಗಳು. ನಿಮಗೂ ಸಹ ಹೊಸ ವರ್ಷದ ಮತ್ತು ಈದ್ ಮಿಲಾದ್ ಹಬ್ಬದ ಶುಭಾಷಯಗಳು.

    ಟಿಪ್ಪು ಸುಲ್ತಾನನ ಕುರಿತಾದ ಈ ಪುಸ್ತಕವನ್ನೊಮ್ಮೆ ಓದಿ:
    Husain M. (1957). The dreams of Tipu Sultan: Translated from the original Persian with an introduction and notes. Karachi: Pakistan Historical Society.
    ಈ ಪುಸ್ತಕವನ್ನು ಓದಲು, ಈ ಕೊಂಡಿ ಉಪಯೋಗಿಸಿ: https://archive.org/details/dreamsoftipusult00tipprich

    ಈ ಪುಸ್ತಕದಲ್ಲಿ ಅನೇಕ ಕಡೆಗಳಲ್ಲಿ, ತಾನು ವಿಗ್ರಹಾರಾಧಕರನ್ನು ಇಸ್ಲಾಮಿಗೆ ಮತಾಂತರಿಸುವುದಾಗಿ, ಮತಾಂತರಕ್ಕೆ ಒಪ್ಪದವರನ್ನು ಕೊಲ್ಲುವುದಾಗಿ ಸ್ವತಃ ಟಿಪ್ಪು ಹೇಳಿಕೊಂಡಿರುವುದನ್ನು ದಾಖಲಿಸಿದ್ದಾರೆ.
    ಈ ಪುಸ್ತಕದ 69ನೇ ಪುಟದಲ್ಲಿರುವ ಈ ವಾಕ್ಯಗಳನ್ನು ನೋಡಿ:
    I invoked god in these terms: “O God, in the hills the unbelievers of the land of the enemy have forbidden fasting and prayer; convert them all to Islam, so that the religion of thy messenger may gain in strength.

    ಇತಿಹಾಸದ ಈ ಪುಸ್ತಕವನ್ನು ನೋಡಿ:
    Sen, Surendranath (1930). Studies in Indian history. University of Calcutta

    ಇದರಲ್ಲಿ, ಟಿಪ್ಪುವು ಬೇಕಲ್ ಪ್ರಾಂತದ ಗವರ್ನರರಾಗಿದ್ದ ಬುದ್ರುಜ್ ಜಮಾನ್ ಖಾನ್ ಅವರಿಗೆ 1756ರ ಫೆಬ್ರವರಿ 13ರಂದು ಬರೆದಿರುವ ಪತ್ರದಲ್ಲಿ ಈ ರೀತಿ ಬರೆದಿದ್ದಾನೆ: “Your two letters, with the enclosed memorandums of the Nâimâ (Nair) captives, have been received. You did right in causing a hundred and thirty-five of them to be circumcised, and in putting eleven of the youngest of these into the Usud Ilhye band, and the remaining ninety-four into the Ahmedy troops, consigning the whole, at the same time, to the charge of the Kiladar of Nugr (Bednore).”

    ಅದೇ ವರ್ಷದ ಮೇ ತಿಂಗಳಿನಲ್ಲಿ ಕ್ಯಾಲಿಕಟ್^ನ ಫೌಜ್ದಾರ್ ಆಗಿದ್ದ ಅರ್ಶದ್ ಆಲಿ ಬೇಗ್ ಅವರಿಗೆ ಕಳುಹಿಸಿರುವ ಆಜ್ಞಾಪನಾ ಪತ್ರದಲ್ಲಿ, ಈ ರೀತಿ ಟಿಪ್ಪು ಬರೆದಿದ್ದಾನೆ: “Getting possession of the villain, Goorkul, and of his wife and children, you must forcibly make Mussalmans out of them, and then dispatch the whole under a guard to Seringapatam.”

    ಮತ್ತು ತನ್ನ ಉದ್ದೇಶವೇನೆಂದು ಟಿಪ್ಪುವು ಸ್ವತಃ ತನ್ನ ಖಡ್ಗದ ಮೇಲೆ ಕೆತ್ತಿಸಿಕೊಂಡಿದ್ದನು. ಅದರಲ್ಲಿ ಪರ್ಶಿಯನ್ ಭಾಷೆಯಲ್ಲಿ ಈ ರೀತಿ ಬರೆದಿದೆ: “ವಿಗ್ರಹಾರಾಧಕರಿಗೆ ಈ ಖಡ್ಗವು ಸಿಡಿಲಿನಂತೆ ಪ್ರಹಾರ ಮಾಡುತ್ತದೆ”.

    ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನರು ಕೊಡಗು ಹಾಗೂ ಮಲಬಾರಿನಲ್ಲಿ ನಡೆಸಿದ ನರಮೇಧ ಮತ್ತು ಮತಾಂತರಗಳು, ಆತನ್ ತನ್ನ ಖಡ್ಗದ ಮೇಲೆ ಬರೆದುಕೊಂಡದ್ದನ್ನೇ ಸಾಧಿಸಿ ತೋರಿಸಿದೆ ಅಲ್ಲವೇ?

 2. Kumar ಹೇಳುತ್ತಾರೆ:

  ಈ ಚರ್ಚೆಗೆ ಸಂಬಂಧಿಸಿದಂತೆ ನಾನೊಂದು ಮಾತನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ.
  ಇತಿಹಾಸವನ್ನು ಅಭ್ಯಸಿಸುವಾಗ ಅದನ್ನು ವಸ್ತುನಿಷ್ಠವಾಗಿ ನೋಡೋಣ. ಅಲ್ಲಿರುವ ವ್ಯಕ್ತಿಗಳ ಮತ-ಧರ್ಮಗಳ ಆಧಾರದ ಮೇಲೆ ಅವರನ್ನು ವಿಶ್ಲೇಷಿಸುವುದು ಸಲ್ಲದು.
  ಈ ಹಿನ್ನೆಲೆಯಲ್ಲಿ, ಟಿಪ್ಪುವು ಮುಸಲ್ಮಾನ ಎಂಬ ಕಾರಣಕ್ಕೆ ನಾನವನನ್ನು ವಿರೋಧಿಸುತ್ತಿಲ್ಲ. ಅದೇ ರೀತಿ, ಹಂದು ಎಂಬ ಕಾರಣಕ್ಕೆ ಜಯಚಂದನನ್ನಾಗಲೀ, ವೀರಭದ್ರ ತಿವಾರಿಯನ್ನಾಗಲೀ, ನೆಹರೂ ಅವರನ್ನಾಗಲೀ ನಾನು ಸಮರ್ಥಿಸುವುದಿಲ್ಲ.
  ಮುಸಲ್ಮಾನರಾಗಿದ್ದರೂ ನನಗೆ ರಸಖಾನ, ಅಶ್ವಾಖ್ ಉಲ್ಲಾ ಖಾನ್, ಉಸ್ತಾದ್ ಝಾಕಿರ್ ಹುಸ್ಸೇನ್, ಉಸ್ತಾದ್ ಅಮ್ಜದ್ ಆಲಿ ಖಾನ್, ಡಾ||ಅಬ್ದುಲ್ ಕಲಾಂ ಅವರ ಕುರಿತಾಗಿ ಅಪಾರ ಗೌರವವಿದೆ.
  ನಾನು ಸ್ವಾಮಿ ವಿವೇಕಾನಂದರನ್ನು, ಭಗತ್ ಸಿಂಗ್ ಅವರನ್ನು, ಸುಭಾಷ್ ಬೋಸರನ್ನು ಗೌರವಿಸುವುದು ಅವರ ಮತದ ಕಾರಣಕ್ಕಾಗಿ ಅಲ್ಲ.

  ನಾನು ಈ ಹಿಂದಿನ ಪ್ರತಿಕ್ರಿಯೆಯಲ್ಲೇ ತಿಳಿಸಿರುವಂತೆ, ಟಿಪ್ಪು ಸುಲ್ತಾನನು ಸ್ವತಃ “ಮತಾಂತರ ತನ್ನ ಕರ್ತವ್ಯ. ವಿಗ್ರಹಾರಾಧಕರನ್ನು ಕೊಲ್ಲುವುದೇ ತನ್ನ ಗುರಿ” ಎಂಬುದಾಗಿ ಹಲವು ಕಡೆ ಹೇಳಿಕೊಂಡಿದ್ದಾನೆ. ಮತ್ತು ಆತ ರಾಜ್ಯಭಾಷೆಯಾಗಿದ್ದ ಕನ್ನಡದ ಜಾಗದಲ್ಲಿ ಪರ್ಶಿಯನ್ ಭಾಷೆಯನು ರಾಜ್ಯಭಾಷೆಯಾಗಿ ಮಾಡಿದ. ಇವೆಲ್ಲಾ ಸಂಗತಿಗಳು ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಸಂಗತಿಗಳು. ಇವುಗಳಿಂದ ತಿಳಿಯುವುದೇನೆಂದರೆ, ಟಿಪ್ಪುವು ಒಬ್ಬ ಮತಾಂಧನಾಗಿದ್ದ ಮತ್ತು ಆತ ಕನ್ನಡದ ವಿರೋಧಿಯಾಗಿದ್ದ ಎಂಬುದು. ಈ ಕಾರಣಕ್ಕಾಗಿ ನಾನು ಟಿಪ್ಪುವನ್ನು ವಿರೋಧಿಸುತ್ತೇನೆ.
  ಇದೇ ಸಂಗತಿಗಳನ್ನು ಹಿಂದು ರಾಜನು ಮಾಡಿದ್ದರೂ ನಾನು ಇದೇ ರೀತಿ ವಿರೋಧಿಸುತ್ತಿದೆ.

 3. Kumar ಹೇಳುತ್ತಾರೆ:

  ಟಿಪ್ಪು ಸುಲ್ತಾನನು ಟಂಕಿಸಿದ್ದ ನಾಣ್ಯಗಳನ್ನು ಇಲ್ಲಿ ನೋಡಿ:
  http://hosuronline.com/index.php/coins-of-tipu-sultan-period-recovered-near-kelamangalam/

  ಆತನ ರಾಜ್ಯದಲ್ಲಿ ಕನ್ನಡ ರಾಜ್ಯಭಾಷೆಯಾಗಿರಲಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಪುರಾವೆ ಬೇಕೇನು?
  ಸ್ಥಳೀಯ ಭಾಷೆ, ಸಂಸ್ಕೃತಿ, ಮತಾಚಾರಗಳನ್ನು ಟಿಪ್ಪುವು ಎಂದೂ ಒಪ್ಪಲಿಲ್ಲ. ತನ್ನ ಉದ್ದೇಶ, ಕಾಫಿರರನ್ನು-ವಿಗ್ರಹಾರಾಧಕರನ್ನು ಇಲ್ಲದಂತೆ ಮಾಡುವುದು, ಎನ್ನುವುದನ್ನು ಅತ್ಯಂತ ಸ್ಪಷ್ಟವಾಗಿ ಆತ ತಿಳಿಸಿದ್ದ. ತಾನು ಮಾಡುತ್ತಿರುವುದು “ಜೆಹಾದ್” ಎನ್ನುವುದನ್ನೂ ಆತ ಹೇಳುತ್ತಿದ್ದ. ಟಿಪ್ಪುವು ಮತಾಂಧನಾಗಿದ್ದ ಮತ್ತು ಎಗ್ಗಿಲ್ಲದೆ ಮತಾಂತರದ ಕಾರ್ಯಗಳನ್ನು ಕೈಗೊಂಡ ಎನ್ನುವುದರಲ್ಲಿ ಅನುಮಾನವೇ ಇಲ್ಲ.

 4. Kumar ಹೇಳುತ್ತಾರೆ:

  [[ಟಿಪ್ಪು ಸೈನ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದುದು ಹಿಂದೂಗಳು]]
  ಈ ಕಾರಣಕ್ಕಾಗಿ ಟಿಪ್ಪುವು ಹಿಂದುಗಳನ್ನು ಮತಾಂತರಿಸಲಿಲ್ಲ ಎಂದೋ, ಅಥವಾ ಹಿಂದುಗಳನ್ನು ಪ್ರೀತಿಸುತ್ತಿದ್ದ ಎಂದೋ ಹೇಳಿದರೆ, ನಿಮಗೆ ಇತಿಹಾಸದ ಜ್ಞಾನವೇ ಇಲ್ಲವೆಂದು ತಿಳಿಯಬೇಕಾಗುತ್ತದೆ.
  ಸೈನ್ಯಕ್ಕೆ ಸೈನಿಕರಾಗಿ ಸೇರುವುದು ಹೊಟ್ಟೆ ಹೊರೆಯುವುದಕ್ಕಾಗಿ. ಬ್ರಿಟಿಷ್ ಸೈನ್ಯದಲ್ಲೂ ಅಧಿಕ ಸಂಖ್ಯೆಯಲ್ಲಿ ಹಿಂದುಗಳಿದ್ದರು ಮತ್ತು ಮುಸಲ್ಮಾನರೂ ಇದ್ದರು. ಬ್ರಿಟಿಷ್ ಸೈನ್ಯದಲ್ಲಿ ಬ್ರಿಟಿಷರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು. ಈ ಕಾರಣಕ್ಕಾಗಿ, ಬ್ರಿಟಿಷರು ಹಿಂದುಗಳನ್ನು ಹಾಗೂ ಮುಸಲ್ಮಾನರನ್ನು ಬಹಳ ಪ್ರೀತಿಸುತ್ತಿದ್ದರು, ಮತ್ತು ಅವರು ಈ ದೇಶವನ್ನು ಉದ್ದಾರ ಮಾಡಲೆಂದೇ ಸೈನ್ಯವನ್ನು ಕಟ್ಟಿದ್ದರು ಎಂಬುದಾಗಿ ನೀವು ಹೇಳುವಿರೇನು?

 5. bhadravathi ಹೇಳುತ್ತಾರೆ:

  ನರೇಂದ್ರ, ಈದ್ ಮಿಲಾದ್ ನಾನು ಆಚರಿಸೋದಿಲ್ಲ. ಪ್ರವಾದೀ ಹುಟ್ಟಿದ ನಾಡಿನಲ್ಲೂ ಈ ಆಚರಣೆ ಇಲ್ಲ. ಪಾಪ ನಮ್ಮವರು ಎಲ್ರೂ ಕ್ರಿಸ್ಮಸ್ ಮಾಡ್ತಾರೆ, ಹುಟ್ಟಿದ ಹಬ್ಬ ಆಚರಿಸುತ್ತಾರೆ ಎಂದು ಹಾಕಿಕೊಂಡ ಒಂದು ಪರಿಪಾಠ. ಈ ಆಚರಣೆಗೆ ಇಸ್ಲಾಮಿನ ಮನ್ನಣೆ ಇಲ್ಲ, ಪ್ರವಾದಿಗಳಾಗಲೀ, ಅವರ ಅನುಚರರೆ ಆಗಲೀ ಇಂಥ ಆಚರಣೆಗಳ ಪರವಾಗಿರಲಿಲ್ಲ. ಈದ್ ಮಿಲಾದ್ ಗೆ ಭಾರತದಲ್ಲಿ ರಜೆ, ಸೌದಿಯಲ್ಲಿ ರಜೆ ಇಲ್ಲ, ಜನರಿಗೆ ಅದರ ಮಾಹಿತಿ ಕೂಡಾ ಇಲ್ಲ.
  ತಾವು ಪಟ್ಟಿ ಮಾಡಿದ ರೀತಿ ಟಿಪ್ಪುವಿನಲ್ಲಿ ಕ್ರೌರ್ಯ ಅಸಹನೆ ಮನೆ ಮಾಡಿದ್ದರೆ ಅವರು ಹಿಂದೂಗಳು ಬಹುಸಂಖ್ಯಾತರಾದ ಒಂದು ನಾಡನ್ನು ಆಳಲು ಸಾಧ್ಯವಾಗುತ್ತಿರಲಿಲ್ಲ. ಅವರ ಸಂಪುಟದಲ್ಲಿ ಧರ್ಮ ಭೀರು ಹಿಂದೂಗಳು ಮಂತ್ರಿಗಳಾಗಿ ಇರುತ್ತಿರಲಿಲ್ಲ. ಬಲವಂತವಾಗಿ ಇಸ್ಲಾಮಿಗೆ ಮತಾಂತರ ಗೊಳಿಸಿದ ಎಂದರೆ ಅಪ್ಪಟ ಸುಳ್ಳು. ಒಂದು ಕಡೆ ಬ್ರಿಟಿಷರ ಉಪಟಳ, ಅದರೊಂದಿಗೇ ದೇಶದೊಳಗಿನ ದ್ರೋಹಿ ಮರಾಠಿ ನಿಜಾಮರ ಹುನ್ನಾರ ಬ್ರಿಟಿಷರೊಂದಿಗೆ ಸೇರಿ. ನಾಡನ್ನು ಸುಭಿಕ್ಷವಾಗಿಸಲು ಎಲ್ಲ ಕಾರ್ಯಕ್ರಮಗಳ ಬಗ್ಗೆ ಅತೀವ ಆಸಕ್ತಿ. ೩೦೦೦ ಕ್ಕೂ ಹೆಚ್ಚು ಕೆರೆ ಬಾವಿಗಳ ನಿರ್ಮಾಣ, ಅಸಂಖ್ಯ ದೇವಾಲಯಗಳ ಅಭಿವೃದ್ದಿಗೆ ಅನುದಾನ, ದೂರದ ಚೈನಾದಿಂದ ರೇಷ್ಮೆ ಕೃಷಿಯನ್ನು ತನ್ನ ನಾಡಿಗೆ ತಂದು ನಾಡು ಇಂದೂ ಸಹ ಪಡೆಯುತ್ತಿರುವ ಪ್ರಯೋಜನ……ಒಡನೆ ಎರಡೇ….ಈ ಎಲ್ಲಾ ಕೆಲಸಗಳ ನಡುವೆಯೂ ಮತಾಂತರಕ್ಕೆ ಆತನಿಗೆ ಸಮಯ ಎಲ್ಲಿಂದ ಸಿಕ್ಕಿತೋ, ಅಥವಾ ಹಾಗೆ ಮಾಡಿದ ಎಂದು ಬ್ರಿಟಿಶ್ ಇತಿಹಾಸಕಾರ ಹೇಳಿಕೊಟ್ಟಿದ್ದನ್ನು ಗಿಳಿಪಾಠ ಒಪ್ಪಿಸುವ ನಮ್ಮ ದೇಸೀ ಇತಿಹಾಸಕಾರರ ಪರಿಸ್ಥಿತಿಗೆ ಕನಿಕರ ತೋರುತ್ತಿದೆ. ಟಿಪ್ಪು ಬಗ್ಗೆ ಇರುವ ಇಲ್ಲ ಸಲ್ಲದ ಅಪವಾದ ಅಪ್ಪಟ ಸುಳ್ಳು. ಭಾರತದಲ್ಲಿ ಹುಟ್ಟಿ ಇಲ್ಲೇ ಸಾಯುವ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆ ಎಂದು ಪರಿಗಣಿಸಬೇಕು ಎನ್ನುವ ಜನರಿಗೆ ಪುರಸ್ಕಾರ. ಇಂಥ ಒಂದೇ ಒಂದು ನುಡಿಯನ್ನಾಡದ, ನಾಡಿನ ಬಗ್ಗೆ ಅನನ್ಯ ಭಕ್ತಿ ಅಭಿಮಾನ ಇಟ್ಟುಕೊಂಡ ಟಿಪ್ಪು ವಿಗೆ ತಿರಸ್ಕಾರ.
  ಟಿಪ್ಪು ತನ್ನ ಹೋರಾಟವನ್ನು ಜಿಹಾದ್ ಎಂದು ಕರೆದಿದ್ದರಲ್ಲಿ ಯಾವುದೇ ತಪ್ಪಿಲ್ಲ. ಜಿಹಾದ ಎಂದರೆ ಯಾವುದೇ ಧರ್ಮೀಯನ ವಿರುದ್ಧದ ಹೋರಾಟವಲ್ಲ. ಬ್ರಿಟಿಷರನ್ನು ‘ಕಾಫಿರ್’ ಎಂದು ಕರೆದ ಟಿಪ್ಪು. ಅಂದರೆ ಕಾಫಿರ್ ಎಂದರೆ ಯಾವುದೇ ಇಸ್ಲಾಂ ಅಳಲ್ದ ಯಾವುದೇ ಧರ್ಮಕ್ಕೆ ಸೇರಿದವನು ಎಂದಲ್ಲ. ಕಾಫುರ್ ಎಂದರೆ, ಇನ್ನೊಬ್ಬರ ಹಕ್ಕನ್ನು ಕಸಿಯುವವನು ಎನ್ನುವ ಅರ್ಥ ಸೇರಿ ಹಲವಾರು ಅರ್ಥಗಳಿವೆ. ಕಾಫಿರ್ ಎನ್ನುವ ಪದ “ಕುಫ್ರ್” ಎನ್ನುವ ಅರಬ್ಬೀ ಪದದ ಮೂಲದಿಂದ. ಕುಫ್ರ್ ಎಂದರೆ ‘ಬಚ್ಚಿಡುವವನು’ ಎಂದು.
  ಬ್ರಿಟಿಷರೊಂದಿಗೆ ಸಂಧಾನ ಮಾಡಿ ಕೊಂಡಿದ್ದರೆ ಟಿಪ್ಪು ಮಹಾರಾಜನಾಗಿ ಇರಬಹುದಿತ್ತು. ಆಗ ಚರಿತ್ರೆ ಈತನನ್ನು ಯಾವ ರೀತಿ ಚಿತ್ರೀಕರಿಸುತ್ತಿತ್ತು ಎಂದು ಯೋಚಿಸಿ. ಹೋರಾಡಿದರೂ ಕಷ್ಟ, ಹೋರಾಡದೆ ಇದ್ದರೂ ಕಷ್ಟ. ಮುಸ್ಲಿಂ ನ ಬದುಕು ಅಡಕೊತ್ತರಿಯಲ್ಲಿ ಸಿಕ್ಕಿಕೊಂಡ ಅಡಕೆ.
  ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮಲ್ಲಿ ಒಂದು ಮನವಿ. ಟಿಪ್ಪುವನ್ನು ವಿರೋಧಿಸುತ್ತಾ ಇರುವಂತೆಯೇ ಸ್ವಲ್ಪ ಹೃದಯದಲ್ಲಿ ಆತನಿಗೆ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನೋ ರೀತಿ ಜಾಗ ಕೊಟ್ಟು ಇನ್ನಷ್ಟು ಸಂಶೋಧನೆ ನಡೆಸಬಾರದೆ?

  1. Kumar ಹೇಳುತ್ತಾರೆ:

   [[ಭಾರತದಲ್ಲಿ ಹುಟ್ಟಿ ಇಲ್ಲೇ ಸಾಯುವ ಮುಸ್ಲಿಮರನ್ನು ಎರಡನೇ ದರ್ಜೆ ಪ್ರಜೆ ಎಂದು ಪರಿಗಣಿಸಬೇಕು ಎನ್ನುವ ಜನರಿಗೆ ಪುರಸ್ಕಾರ]]
   ನಿಮಗೆ ಈ ರೀತಿಯ ಅಭಿಪ್ರಾಯ ಎಲ್ಲಿಂದ ಬಂತೋ ಗೊತ್ತಿಲ್ಲ.
   ಭಾರತದಲ್ಲಿರುವ ಎಲ್ಲಾ ಮುಸಲ್ಮಾನರೂ ಭಾರತೀಯರೇ. ಅವರು ಭಾರತೀಯರಂತೆಯೇ ಬದುಕಬೇಕು.
   ಆದರೆ, ನಮ್ಮ ರಾಜಕಾರಣಿಗಳು ಮುಸಲ್ಮಾನರ ಮತಗಳಿಗಾಗಿ ಎಲ್ಲ ರೀತಿಯ ಸರ್ಕಸ್ ಮಾಡುತ್ತಿದ್ದಾರೆ.
   ಅವರ ಮತಕ್ಕಾಗಿ, ಮುಸಲ್ಮಾನ ದೇಶಗಳಲ್ಲಿ ಇಲ್ಲದ “ಈದ್ ಮಿಲಾದ್ ರಜೆ”, “ಪೈಗಂಬರ್ ಜನುಮದಿನದ ರಜೆ”ಯನ್ನೂ ಕರುಣಿಸಿಬಿಡುತ್ತಾರೆ. ಸಾಚಾರ್ ಸಮಿತಿಯಂತಹ ಸಮಿತಿಯನ್ನು ನೇಮಕ ಮಾಡಿ, ಕೇವಲ ಮುಸಲ್ಮಾನರಿಗೆ ಅನುಕೂಲ ಮಾಡಿಕೊಡುವ ಸೋಗು ಹಾಕುತ್ತಾರೆ, ದೇಶದ ಉತ್ಪನ್ನದಲ್ಲಿ ಮೊದಲ ಭಾಗ ಮುಸಲ್ಮಾನರಿಗೆ ಸೇರಬೇಕೆಂಬ ಘೋಷಣೆ ಹಾಕುತ್ತಾರೆ. ಇವರಿಗೆ ನಿಜಕ್ಕೂ ಮುಸಲ್ಮಾನರು ಮುಂದುವರೆಯಬೇಕೆಂಬ ಇಚ್ಚೆ ಇದ್ದಿದ್ದಲ್ಲಿ ಮುಸಲ್ಮಾನರು ಎಂದೋ ಮುಂದುವರೆದುಬಿಡುತ್ತಿದ್ದರು ಅಲ್ಲವೇ? ಆದರೆ, ಹೆಚ್ಚಿನ ಮುಸಲ್ಮಾನರು ಇಂತಹ ಮೋಸಕ್ಕೆ ಬಲಿಯಾಗಿಬಿಟ್ಟಿದ್ದಾರೆ. ಇದೆಕ್ಕೆಲ್ಲಾ “ಜಾತ್ಯಾತೀತ” ಎನ್ನುವ ಲೇಪವನ್ನೂ ಹಾಕಿಬಿಟ್ಟಿದ್ದಾರೆ!
   ಇದಕ್ಕೆ ವ್ಯತಿರಿಕ್ತವಾಗಿ, “ಹಿಂದು” ಎನ್ನುವ ಪದ ಕೇಳಿದ ಕೂಡಲೇ ಚೇಳು ಕುಟುಕಿದಂತೆ ಎಗರಾಡುತ್ತಾರೆ, ಮತ್ತು ಅದನ್ನು ಹೇಳಿದವರಿಗೆ “ಕೋಮುವಾದಿ” ಎನ್ನುವ ಹಣೆಪಟ್ಟಿ!!
   ಇದರ ಪರಿಣಾಮವಾಗಿ, ಕೋಮು-ಕೋಮುಗಳ ನಡುವೆ ಅಸಹನೆ ಹೆಚ್ಚಿದೆ. ದೇಶದ ವಿಭಜನೆಯ ಕರಾಳ ಘಟನೆಯೇ, ಎರಡೂ ಕೋಮುಗಳ ನಡುವೆ ಕಂದಕ ನಿರ್ಮಿಸಿತ್ತು. ಇದೀಗ, ಈ ರಾಜಕಾರಣಿಗಳ “ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ” ಎನ್ನುವ ಆಟದಿಂದ ಕಂದಕದ ಆಳ-ಅಗಲ ಹೆಚ್ಚುತ್ತಿದೆ.
   ಭಾರತದಲ್ಲಿರುವ ನಾವೆಲ್ಲರೂ ಭಾರತೀಯರು ಮತ್ತು ಆ ರೀತಿಯೇ ಇರಲು ಇಷ್ಟ ಪಡುತ್ತೇವೆ; ನಮ್ಮನ್ನು ಮುಸಲ್ಮಾನರು-ಅಲ್ಪಸಂಖ್ಯಾತರು ಎಂದು ನೋಡಿ, ವೈಮನಸ್ಯ ಹುಟ್ಟು ಹಾಕಬೇಡಿ, ಎಂದು ಮುಸಲ್ಮಾನರು ಒಕ್ಕೊರಲಿನಿಂದ ಸರಕಾರವನ್ನು ಒತ್ತಾಯಿಸಬೇಕು. ನಾವೆಲ್ಲರೂ “ಭಾರತೀಯ”ರಾದರೆ ಮಾತ್ರ ನಮ್ಮೆಲ್ಲ ಸಮಸ್ಯೆಗಳೂ ಪರಿಹಾರವಾದೀತು ಮತ್ತು ನಮ್ಮ ದೇಶ ಮುಂದುವರೆದೀತು.

   ಇನ್ನು ಟಿಪ್ಪುವಿಗೆ ಸಂಬಂಧಿಸಿದಂತೆ, ನಮ್ಮದೇ ರಾಜ್ಯದಲ್ಲಿರುವ ಕೊಡಗರು ಜೀವಂತ ಸಾಕ್ಷಿಗಳಾಗಿದ್ದಾರೆ. ಅವರ ಪೂರ್ವಜರು ಅನುಭವಿಸಿದ್ದನ್ನು ಅವರು ಮರೆಯಲು ಸಿದ್ಧರಿಲ್ಲ. ಟಿಪ್ಪುವು ಮೈಸೂರನ್ನು “ನಜರಬಾದ್” ಮಾಡಲು ಹೊರಟದ್ದು ಸುಳ್ಳೇ? ಆತನ ರಾಜ್ಯದಿಂದ ಕನ್ನಡವನ್ನು ಉಚ್ಚಾಟಿಸಿದ್ದು ಸುಳ್ಳೇ? ಆತ ಬರೆದ ಪತ್ರಗಳಲ್ಲಿ (ಈ ಹಿಂದೆಯೇ ಅದನ್ನು ಉದ್ಧರಿಸಿದ್ದೇನೆ) ಮತಾಂತರ ಮಾಡುವಂತೆ ಆಜ್ಞಾಪಿಸಿದ್ದು ಸುಳ್ಳೇ? ನಾನೇನೂ ಕೇವಲ ಬ್ರಿಟಿಷ್ ಇತಿಹಾಸಕಾರರ ಪುಸ್ತಕವನ್ನಷ್ಟೇ ನೋಡುತ್ತಿಲ್ಲ.
   ಉದಾಹರಣೆಗೆ ನಾನು ತೆಗೆದುಕೊಂಡದ್ದು ಮುಸಲ್ಮಾನ ಇತಿಹಾಸಕಾರನೊಬ್ಬ ಬರೆದಿರುವ ಇತಿಹಾಸದ ಪುಸ್ತಕ (Husain M. (1957). The dreams of Tipu Sultan: Translated from the original Persian with an introduction and notes. Karachi: Pakistan Historical Society) ಮತ್ತು ಮತ್ತೊಂದು ಕಲಕತ್ತಾ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡಿರುವ ಸುರೇಂದ್ರನಾಥ ಸೇನ್ ಎನ್ನುವ ಇತಿಹಾಸಕಾರರ ಪುಸ್ತಕ.

   [[ಟಿಪ್ಪುವನ್ನು ವಿರೋಧಿಸುತ್ತಾ ಇರುವಂತೆಯೇ ಸ್ವಲ್ಪ ಹೃದಯದಲ್ಲಿ ಆತನಿಗೆ ಅಡ್ಜಸ್ಟ್ ಮಾಡ್ಕೊಳ್ಳಿ]]
   ನನ್ನ ಹೃದಯದಲ್ಲಿ ಟಿಪ್ಪುವಿಗಾಗಲೀ ಜಯಚಂದನಿಗಾಗಲೀ ಮೀರ್ ಜಾಫರನಿಗಾಗಲೀ ಔರಂಗಜೇಬನಿಗಾಗಲೀ ಘೋರಿ-ಘಜನಿಗಾಗಲೀ ಒಂದಿನಿತೂ ಜಾಗವಿಲ್ಲ.

   ಟಿಪ್ಪುವಿನ ಖಡ್ಗದಲ್ಲಿರುವ ಬರಹ, ನಾಣ್ಯದಲ್ಲಿರುವ ಬರಹ, ಆತನ ಪತ್ರಗಳು, ಇವೆಲ್ಲಾ ಟಿಪ್ಪುವು ಮತಾಂಧನಾಗಿದ್ದ, ಹಿಂದುಗಳನ್ನು ಮತಾಂತರಿಸಿದ ಮತ್ತು ಕನ್ನಡದ ವಿರೋಧಿಯಾಗಿದ್ದ ಎನ್ನುವುದಕ್ಕೆ ಸಾಕ್ಷಿಗಳು.
   ಟಿಪ್ಪುವಿನ ಖಡ್ಗದಲ್ಲೋ ಅಥವಾ ನಾಣ್ಯದಲ್ಲೋ ಅಥವಾ ಯಾವುದಾದರೂ ಪತ್ರದಲ್ಲೋ, “ಸರ್ವಧರ್ಮ ಸಮಭಾವ”, “ಮತಾಂತರ ತಪ್ಪು”, “ಹಿಂದುಗಳು ಕಾಫಿರರಲ್ಲ ಮತ್ತು ಹೀಗಾಗಿ ಅವರನ್ನು ಮತಾಂತರಿಸಬೇಡಿ”, “ನಾನು ಭಾರತಕ್ಕಾಗಿ ಹೋರಾಡುತ್ತಿರುವೆ”, “ನಾವೆಲ್ಲಾ ಭಾರತೀಯರು ಮತ್ತು ಮುಸಲ್ಮಾನರು-ಹಿಂದುಗಳು ಅಣ್ಣತಮ್ಮಂದಿರು; ಇದಕ್ಕಾಗಿ ಹಿಂದುಗಳನ್ನು ಕೊಲ್ಲುವುದಾಗಲೀ, ಮತಾಂತರಿಸುವುದಾಗಲೀ ತಪ್ಪು” – ಈ ರೀತಿಯದ್ದು ಇದ್ದಿದ್ದರೆ, ಟಿಪ್ಪುವನ್ನು ನಾನು ಪ್ರೀತಿಸುತ್ತಿದ್ದೆ. ನಿಮ್ಮ ಬಳಿಯಿರುವ ಇತಿಹಾಸದ ಪುಸ್ತಕಗಳಲ್ಲಿ ಈ ರೀತಿಯ ಹೇಳಿಕೆಗಳು/ಪತ್ರಗಳು ಇದ್ದರೆ, ದಯವಿಟ್ಟು ಹಂಚಿಕೊಳ್ಳಿ.

   ನಿಮ್ಮೊಡನೆ ನನ್ನದೂ ಒಂದು ಮನವಿ. ಟಿಪ್ಪುವನ್ನು ಒಬ್ಬ ಮುಸಲ್ಮಾನ ಎನ್ನುವ ಹಿನ್ನೆಲೆಯಿಂದ ನೋಡುವುದನ್ನು ಬಿಟ್ಟುಬಿಡಿ. ಆತನನ್ನು ಇತಿಹಾಸದ ಒಬ್ಬ ವ್ಯಕ್ತಿಯೆಂದಷ್ಟೇ ನೋಡುತ್ತಾ ಆತನ ವಿಶ್ಲೇಷಣೆ ಮಾಡಿ ಅಭಿಪ್ರಾಯವನ್ನು ರೂಪಿಸಿಕೊಳ್ಳಿ. ಮತ್ತು ನಾನು ಈ ಹಿಂದೆ ಉದ್ಧರಿಸಿದ ಇತಿಹಾಸ ಗ್ರಂಥಗಳನ್ನೂ ಒಮ್ಮೆ ಅಧ್ಯಯನ ಮಾಡಿ. ಸಾಧ್ಯವಾದರೆ ಕೊಡಗಿಗೊಮ್ಮೆ ಹೋಗಿ ಬನ್ನಿ, ಅಲ್ಲಿನ ಜನರ ಅಭಿಪ್ರಾಯವನ್ನೊಮ್ಮೆ ಆಲಿಸಿರಿ.

 6. bhadravathi ಹೇಳುತ್ತಾರೆ:

  during the same period (TIPU’S), and in the same region, the RAJA OF HALERI and his kodava followers when capturing mysorean units in battles, used to spare death to all but the BRAHMINS that they would behead and mount on spears. perhaps it was a gruesome tradition of the region.

  ಮೇಲಿನದನ್ನು ಓದಿ…. ಒಂದನ್ನು ಹೆಕ್ಕಲು ಹೋಗಿ, ಮತ್ತೇನೇನೋ ಆನಾವರಣ ಗೊಳ್ಳುತ್ತಾ ಇದೆ. ಘಜನಿ, ಘೋರಿ, ಅಲಾವುದ್ದೀನ್ ಖಿಲ್ಜಿ ಅಂತ ಜಪಿಸೋದನ್ನು ಬಿಟ್ಟು ನಾಡನ್ನು ಕಟ್ಟೋ ಕಡೆ ಗಮನ ಹರಿಸೋಣ. ಟಿಪ್ಪು ಚರ್ಚೆ ಇಲ್ಲಿಗೆ ಮುಕ್ತಾಯ -)

  1. Kumar ಹೇಳುತ್ತಾರೆ:

   [[during the same period (TIPU’S), and in the same region,….]]
   ನೀವು ಈ ಸಾಲುಗಳನ್ನು ಎಲ್ಲಿಂದ ಉದ್ಧರಿಸುತ್ತಿರುವಿರಿ, ಅದರ ಮೂಲ ಗ್ರಂಥ ಯಾವುದು ಮತ್ತು ಅದರ ಸಂದರ್ಭಗಳನ್ನು ತಿಳಿಯದೇ ನಾನದಕ್ಕೆ ಪ್ರತಿಕ್ರಿಯಿಸಲಾರೆ.

   [[ಘಜನಿ, ಘೋರಿ, ಅಲಾವುದ್ದೀನ್ ಖಿಲ್ಜಿ ಅಂತ ಜಪಿಸೋದನ್ನು ಬಿಟ್ಟು]]
   ನನ್ನ ಆ ಜಪದಲ್ಲಿ ಜಯಚಂದನ ಹೆಸರೂ ಇತ್ತು, ಅದನ್ನೇಕೆ ತೆಗೆದುಹಾಕಿಬಿಟ್ಟಿರಿ? 😉

   [[ನಾಡನ್ನು ಕಟ್ಟೋ ಕಡೆ ಗಮನ ಹರಿಸೋಣ]]
   ಸತ್ಯದ ಇತಿಹಾಸದ ಮೇಲೆ ನಾಡನ್ನು ಕಟ್ಟೋಣ. ನಮ್ಮ ಇತಿಹಾಸದ ಪಠ್ಯಗಳು, ಇತಿಹಾಸದ ಅಧ್ಯಯನ ಹಳ್ಳ ಹಿಡಿಯುವುದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿಯಲು, ಅರುಣ್ ಶೌರಿ ಅವರು ಬರೆದಿರುವ ಸಂಶೋಧನಾ ಗ್ರಂಥ “Eminent Historians” ಒಮ್ಮೆ ಓದಿರಿ.

   ನಾವೆಲ್ಲಾ ಒಂದೇ ನಾಡಿಗೆ ಸೇರಿದವರು, ಒಂದೇ ಜನಾಂಗಕ್ಕೆ ಸೇರಿದವರು. ನಮ್ಮದು ಸಮಾನವಾದ ಇತಿಹಾಸ, ಸಮಾನವಾದ ಶತೃ-ಮಿತ್ರರು ನಮಗೆ. ನಮ್ಮ ನಾಡಿಗೆ ಶತೃವಾದವನು ಯಾವುದೇ ಮತಕ್ಕೆ/ಕುಲಕ್ಕೆ ಸೇರಿದ್ದರೂ ನಮಗೆಲ್ಲರಿಗೂ ಸಮಾನವಾಗಿ ಶತೃ. ನಮ್ಮ ನಾಡಿಗೆ ಮಿತ್ರನಾದವನು ನಮಗೆಲ್ಲರಿಗೂ ಮಿತ್ರ – ಅವನ ಮತ-ಕುಲ ನಮಗೆ ನಗಣ್ಯ. ನಮ್ಮ ನಾಡಿಗಾದ ಅಪಮಾನ, ನಮಗೆ ಪ್ರತಿಯೊಬ್ಬರಿಗೂ ಅಪಮಾನ ಮತ್ತು ಅದನ್ನು ಸರಿಪಡಿಸಲು ನಾವೆಲ್ಲಾರೂ ಕಟಿಬದ್ಧರಾಗುತ್ತೇವೆ. ಈ ರೀತಿಯ ರಾಷ್ಟ್ರೀಯ ಭಾವನೆಯಿಂದ ನಾವೆಲ್ಲಾ ಒಂದಾಗೋಣ, ಒಟ್ಟಾಗಿ ನಾಡನ್ನು ಕಟ್ಟೋಣ.

 7. ಅತ್ಯುತ್ತಮ ಲೇಖನ. ಇತಿಹಾಸ ಎಂಬುದು ಅದು ಬರೆಯಲ್ಪಟ್ಟವನ ಮನಸ್ಥಿತಿಯನ್ನು ಅವಲಂಬಿಸಿದೆ. ಟಿಪ್ಪುವನ್ನು ಮತಾಂಧ ಎಂದು ಚಿತ್ರೀಕರಿಸಿ ಪ್ರತೀ ಇತಿಹಾಸಕಾರನ ಹಿಂದೆ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳಿತ್ತು ಎಂಬುದು ಸೂರ್ಯ ಚಂದ್ರರಂತೆ ಸತ್ಯ.

  ಏನೇ ಇರಲಿ ನಿಮ್ಮ ವಸ್ತು ನಿಷ್ಠ, ಇತಿಹಾಸ ನಿಷ್ಠ ಲೇಖನ ಓದಿ ತುಂಬಾ ಖುಷಿ ಆಯಿತು. ಧನ್ಯವಾದಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s