ಎವರೆಸ್ಟ್ ಅಲ್ಲ, ಅದರಾಚೆಯ ಶಿಖರದ ಬೆನ್ನು ಹತ್ತಿ…

SAUDI EVEREST GADLINGDOTCOM
ತಮ್ಮ ಎದುರಿಗೆ ಶಿಖರದಷ್ಟೇ ಎತ್ತರವಿದ್ದ ಅಡಚಣೆಗಳನ್ನು ಗೆದ್ದು ಜಗದ ತುತ್ತ ತುದಿಯನ್ನು ಮೆಟ್ಟಿ ನಿಂತರು ಇಬ್ಬರು ಪರ್ವತಾರೋಹಿಗಳು. ಒಬ್ಬಾಕೆ ಸೌದಿ ಅರೇಬಿಯಾ ಮೂಲದ ೨೭ ರ ತರುಣಿಯಾದರೆ, ಜಪಾನ್ ದೇಶದ ೮೦ ವಯಸ್ಸಿನ ಹಿರಿಯ ಮತ್ತೊಬ್ಬ.

“ರಾಹಾ ಮುಹರ್ರಕ್” ಸೌದಿ ಅರೇಬಿಯಾದ ವಾಣಿಜ್ಯ ನಗರ ಜೆಡ್ಡಾ ನಗರದವಳು. ಮನದಾಳದಲ್ಲಿ ಅಡಗಿ ಕೂತಿದ್ದ ಆಕಾಂಕ್ಷೆ ಎನ್ನುವ “ಪುಟ್ಟ ರಕ್ಕಸ ಸ್ಫೋಟ ಗೊಂಡಾಗ” ಶಿಖರ ಮಣಿಯಿತು ಈ ನಾರೀಮಣಿಗೆ. ಮಂಗಳವಾರ ಅವರೋಹಣ ಮಾಡಿದ ನಂತರ ಈಕೆಯ ಮೊಬೈಲ್ ರಿಂಗ್ ಗುಟ್ಟುತ್ತಲೇ ಇದೆಯಂತೆ.

ಸಂಪ್ರದಾಯವಾದಿಗಳ ತಮ್ಮದೇ ಆದ ವ್ಯಾಖ್ಯಾನಕ್ಕೆ ಎದುರು ಉತ್ತರ ನೀಡದ ಸಂಪ್ರದಾಯವಾದೀ ಸೌದಿ ಅರೇಬಿಯಾ, ತನ್ನ ಮಹಿಳೆಯರಿಗೆ ಡ್ರೈವಿಂಗ್ ಮಾಡಲು ಅನುಮತಿಸದ ವಿಶ್ವದ ಏಕೈಕ, ವಿಶ್ವದ ಏಕೈಕ ಮುಸ್ಲಿಂ ದೇಶ. ಯಾವುದೇ ದೇಶದಲ್ಲೂ ಮಹಿಳೆ ವಾಹನ ಚಲಾಯಿಸ ಬಹುದು. ಸೌದಿ ಅರೇಬಿಯಾ ಹೊರತು ಪಡಿಸಿದರೆ ಯಾವುದೇ ಮುಸ್ಲಿಂ ದೇಶದಲ್ಲೂ ಮಹಿಳೆ ವಾಹನ ಚಲಾಯಿಸಬಹುದು. ಆದರೆ ನಮ್ಮ ಸಮಾಜ ಇನ್ನೂ ಪರಿ ಪಕ್ವವಾಗಿಲ್ಲ, ಕಾಲ ಇನ್ನೂ ಪ್ರಶಸ್ತ ವಾಗಿಲ್ಲ ಎನ್ನುವ ನೆಪದ ಕಾರಣ ಮಹಿಳೆ ಕಾಲು ಕಾರಿನ accelerator ಮೇಲೆ ಊರಲು ಆಗಿಲ್ಲ. ಆದರೆ ಇದೇ ಕಾಲುಗಳು ಪರ್ವತವನ್ನು ಮೆಟ್ಟಿ ನಿಂತವು. ಸಾಮಾನ್ಯ ಪರ್ವತವಲ್ಲ. ಅದೇ ಎವರೆಸ್ಟ್ ಶಿಖರ. ಎತ್ತರ, ಭರ್ತಿ ಇಪ್ಪತ್ತೊಂಭತ್ತು ಸಾವಿರದ ಮೂವತ್ತೈದು ಅಡಿಗಳು.

ಪರ್ವತದಷ್ಟೇ ಸವಾಲಾಗಿತ್ತು ತನ್ನ ಕುಟುಂಬದವರನ್ನು ಒಪ್ಪಿಸುವ ಕೆಲಸ ಎನ್ನುವ ‘ರಾಹಾ’ ಕ್ರಮೇಣ ಮನೆಯವರ ಸಹಕಾರ ಮತ್ತು ಬೆಂಬಲವನ್ನ ಗಳಿಸಿಕೊಂಡಳು. ತನ್ನ ಗುರಿಯೆಡೆ ದೃಢ ಹೆಜ್ಜೆಗಳನ್ನು ಹಾಕಿದಳು. ಸಂಪ್ರದಾಯವಾದೀ ಹಿನ್ನೆಲೆಯಿಂದ ಬಂದ ಯಾವುದೇ ಮಹಿಳೆಯೂ ಸಾಧಿಸಲಾರದ್ದನ್ನು ಸಾಧಿಸಿದಾಗ ಆಗುವ ಅವರ್ಣನೀಯ ಆನಂದ ಈ ಯುವತಿಗೆ ಸಿಕ್ಕಿದ್ದು ಈಕೆಯ ಯಶಸ್ಸಿಗಾಗಿ ಹಾರೈಸುತ್ತಿದ್ದ ಜನರಿಗೆ ಸಂತಸ ತಂದಿತು. ಎವರೆಸ್ಟ್ ಏರುವ ಮೊದಲು ಒಂದೂವರೆ ವರ್ಷಗಳ ಕಾಲ ಎಂಟು ವಿವಿಧ ಪರ್ವತಗಳನ್ನು ಈಕೆ ಏರಿ ತಯಾರಿ ತೆಗೆದುಕೊಂಡಳು.ಸೂರ್ಯನ ಅತ್ಯಂತ ಆಪ್ತ, ಉರಿ ಬಿಸಿಲಿನ ದೇಶದಿಂದ ಬಂದ ಈಕೆಗೆ ಮೂಳೆ ಕೊರೆಯುವ ಚಳಿ ಇಟ್ಟುಕೊಂಡ ಹಿಮಚ್ಛಾದಿತ ಪರ್ವತ ಸಾಕಷ್ಟು ಸವಾಲುಗಳನ್ನೇ ಒಡ್ಡಿರಬಹುದು. ಸಾಧಿಸುವ ಛಲ ಸವಾಲನ್ನು ಸಲೀಸಾಗಿ ಓವರ್ಟೇಕ್ ಮಾಡುತ್ತದೆ.

ಗುರಿಯ ಗಾತ್ರದಷ್ಟೇ ಯಶಸ್ಸಿನ ಗಾತ್ರವೂ ಆಗಿರುತ್ತದೆ ಎನ್ನುವ ರಾಹಾ ತಾನು ಎವೆರೆಸ್ಟ್ ಏರಿದ ಪ್ರಪ್ರಥಮ ಸೌದಿ ಎನ್ನುವ ಹೆಗ್ಗಳಿಕೆಗಿಂತ ತನ್ನ ಯಶಸ್ಸು ಇತರೆ ಮಹಿಳೆಯರಿಗೂ ಸ್ಫೂರ್ತಿಯಾದರೆ ತನಗೆ ಹೆಚ್ಚು ತೃಪ್ತಿ ಎನ್ನುತ್ತಾಳೆ. ಕೇವಲ ಒಂದೂವರೆ ವರ್ಷಗಳ ಹಿಂದೆ ಒಂದೂ ಪರ್ವತವನ್ನು ಏರದೇ ಇದ್ದ ತನಗೆ ಎವರೆಸ್ಟ್ ಒಲಿದಿದ್ದು ಹೊಸ ಚೇತನವನ್ನು ಆಕೆಗೆ ಕೊಟ್ಟಿದೆ. ಅಮೆರಿಕೆಯ ಆಲಾಸ್ಕಾ ರಾಜ್ಯದ ದೆನಾಲಿ ಮತ್ತು ಆಸ್ಟ್ರೇಲಿಯಾದ Kosciuszko (ಉಚ್ಛಾರ ಗೊತ್ತಿಲ್ಲ) ಪರ್ವತಗಳನ್ನು ಏರುವ ಆಸೆ ಇಟ್ಟುಕೊಂಡಿರುವ ಈಕೆ ಹೇಳುವುದು…

“ಯಾವುದನ್ನೂ ನೀವು ಪ್ರಯತ್ನಿಸದೆ ಇದ್ದರೆ ಹೇಗೆ ತಾನೇ ಗೊತ್ತಾಗುವುದು ನಿಮಗೆ ಸಾಧಿಸುವುದಕ್ಕೆ ಆಗೋಲ್ಲ ಎಂದು?”
ಏಕೆಂದರೆ ಹೆಜ್ಜೆ ಕೀಳುವ, ಹೆಜ್ಜೆ ಮುಂದಕ್ಕೆ ಊರುವ, ಅದಮ್ಯ ಆಸೆ, ಹುರುಪು, ಛಲ ಇದ್ದರೆ ಪರ್ವತವೂ, ಕಣಿವೆಯೂ ನಮ್ಮ ಅಧೀನಕ್ಕೆ, ಏನಂತೀರಿ?

ವಯಸ್ಸು ಅಂಕಿ ಅಂಶಗಳ ಕೆಲಸಕ್ಕೆ ಮಾತ್ರ ಸೀಮಿತ ಎಂದು ದೃಢವಾಗಿ ನಂಬಿದ, ನಂಬಿದ್ದನ್ನು ಸಾಧಿಸಿಯೂ ತೋರಿಸಿದ ಜಪಾನ್ ದೇಶದ ಹಿರಿಯ, ವಯಸ್ಸಿನ ನೆಪ ಒಡ್ಡಿ ಮೂಲೆ ಗುಂಪಾಗಲು ಬಯಸುವ ಎಲ್ಲರಿಗೂ ಒಂದು ಸ್ಫೂರ್ತಿ.
‘ಯುಚಿರೋ ಮೂರಾ’ ಎವರೆಸ್ಟ್ ಶಿಖರವನ್ನು ಕೆಣಕಿದ್ದು ಮೂರು ಸಲ. ಎಲ್ಲಾ ಯಶಸ್ಸೂ ಕೈ ಸೇರಿದ್ದು ಸಾಮಾನ್ಯ ಜನರ ಕೈಗಳು ನಡುಗುವ ವಯಸ್ಸಿನಲ್ಲಿ. ೭೦ ಮತ್ತು ೭೫ ನೇ ವಯಸ್ಸಿನಲ್ಲಿ ಮತ್ತು ಈಗ ೮೦ ರ ತುಂಬು ಪ್ರಾಯದಲ್ಲಿ ಎವರೆಸ್ಟ್ ಏರಿದ ಈ ತ್ರಿವಿಕ್ರಮ ಬಹುಶಃ ವಿಶ್ವದಾಖಲೆ ಸರದಾರ.

ವಯಸ್ಸು ಎಂಭತ್ತಾದರೆ ವಯೋವೃದ್ಧ ಎನ್ನುತ್ತಾರೆ, ಆದರೆ ಯುಚಿರೋ ರನ್ನು ಕರೆಯಬೇಕಿರೋದು ಹಿರಿಯ ಅಂತ. ನಮ್ಮಲ್ಲಿ ಈ ವಯಸ್ಸಿನವರ್ಯಾರಾದರೂ ತಮ್ಮ ಮನದಾಳದಲ್ಲಿ ಹುದುಗಿ ಕೂತ ಆಸೆಗಳನ್ನು ಸಾಕಾರಗೊಳಿಸುವ ಇಚ್ಛೆ ವ್ಯಕ್ತ ಪಡಿಸಿದರೆ ಮನೆಯವರ, ನೆರೆಹೊರೆಯವರ ಮತ್ತು ಸಮಾಜದ ಪ್ರತಿಕ್ರಿಯೆ ಹೇಗಿರುತ್ತದೆ? ಸ್ವಲ್ಪ ವಯಸ್ಸಾದರೆ ಮುದಿ ಗೂಬೆ ಎಂದು ಮೂದಲಿಸುವ ಸಮಾಜ ಹಿರಿಯರ ಆಸೆಗೆ ಒತ್ತಾಸೆಯಾಗಿ ನಿಂತೀತೆ?

ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲಿನ ಮೇಲ್ಭಾಗದ (hip) ಶಸ್ತ್ರ ಚಿಕಿತ್ಸೆ ಮಾಡಿಸಿ ಕೊಂಡ, ಕಳೆದ ಜನವರಿ ತಿಂಗಳಿನಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಯುಚಿರೋ, ೩೦ ಕೇಜೀ ತೂಕವನ್ನು ಬೆನ್ನ ಮೇಲೆ ಹೊತ್ತು ವಾರದಲ್ಲಿ ಮೂರು ದಿನ ನಡೆಯುತ್ತಾರೆ ತನ್ನ ಕನಸಿನ ಬೆನ್ನ್ಹತ್ತಿ. “I have a dream to climb Everest at this age,” he said. “If you have a dream, never give up. Dreams come true.” ಯಾರದೋ ಕನಸುಗಳು ನಮಗೆ ಬೀಳುವುದಿಲ್ಲ, ನಮ್ಮ ಕನಸುಗಳು ನಮ್ಮನ್ನು ನಂಬುತ್ತವೆ. ನಮ್ಮ ಕನಸು ಪರೋಕ್ಷವಾಗಿ ನಮಗೆ ಹೇಳೋದು, ಏಳು, ಗುರಿಯೆಡೆ ಸಾಗು ಎಂದು. ಆದರೆ ನೆಪ ಹುಡುಕುವವರಿಗೆ ಇದರ ಅರಿವಿರುವುದಿಲ್ಲ. ಮೈ ಕೊಡವಿ ಎದ್ದಾಗ ದೈತ್ಯದಂಥ ಗುರಿ ಮುದುಡಿ ಕೊಳ್ಳುತ್ತದೆ, ನಮ್ಮ ಕೈ ಸೇರುತ್ತದೆ.
ಎವರೆಸ್ಟ್ ಪರ್ವತ ಹತ್ತಿದ ಅತ್ಯಂತ ಹಿರಿಯ ಪುರುಷ ಯುಚಿರೋ ಆದರೆ, ಅತ್ಯಂತ ಹಿರಿಯ ಮಹಿಳೆ ಸಹ ಜಪಾನ್ ದೇಶದವರು. ಎರಡನೇ ವಿಶ್ವ ಯುದ್ಧದಲ್ಲಿ ಸೋತು ಸುಣ್ಣವಾಗಿ ಅಮೆರಿಕೆಯ ನಿರ್ದಯ ಧಾಳಿಗೆ ತುತ್ತಾಗಿ, ನುಚ್ಚು ನೂರಾಗಿ, ನಲುಗಿ ಹೋದ ದೇಶದ ಪ್ರಜೆಗಳಿಗೆ, ಅದೂ ಇಳಿ ವಯಸ್ಸಿನಲ್ಲಿ ಇರುವ ಛಲ ನೋಡಿ.

ಮೊದಲ ಚಿತ್ರ ಕೃಪೆ: http://www.gadling.com

Advertisements

2 thoughts on “ಎವರೆಸ್ಟ್ ಅಲ್ಲ, ಅದರಾಚೆಯ ಶಿಖರದ ಬೆನ್ನು ಹತ್ತಿ…

 1. Kumar ಹೇಳುತ್ತಾರೆ:

  > ಆಸ್ಟ್ರೇಲಿಯಾದ Kosciuszko (ಉಚ್ಛಾರ ಗೊತ್ತಿಲ್ಲ) ಪರ್ವತ

  The name of the mountain was previously spelt “Mount Kosciusko”, an Anglicisation, but the spelling “Mount Kosciuszko” was officially adopted in 1997 by the Geographical Names Board of New South Wales. The traditional English pronunciation of Kosciuszko is /kɒziːˈɒskoʊ/ (for letter by letter pronunciation visit the url: http://en.wikipedia.org/wiki/Mount_Kosciuszko).

  Or you can listen to the pronunciation here: http://upload.wikimedia.org/wikipedia/commons/c/cc/Pl-Tadeusz_Ko%C5%9Bciuszko.ogg

  From the above source, I feel the pronunciation is: ಕಾಜ಼ೀಆಸ್ಕೋ

 2. Kumar ಹೇಳುತ್ತಾರೆ:

  ಸಮಾಜದ ಕಟ್ಟುಪಾಡುಗಳನ್ನು ಮೆಟ್ಟಿ ಎವರೆಸ್ಟ್ ಏರಿದ್ದು ನಿಜಕ್ಕೂ ಸಾಧನೆಯೇ.
  ಇಲ್ಲಿ ಎವರೆಸ್ಟ್ ಏರಿದ್ದಕ್ಕಿಂತ, ಸಂಪ್ರದಾಯವಾದವನ್ನು ಧಿಕ್ಕರಿಸಿ, ಅದರಲ್ಲೂ ಸಂಪ್ರದಾಯಕ್ಕೆ ವಿರುದ್ಧ ಹೋದವರ ಪ್ರಾಣಕ್ಕೆ ಕುತ್ತಾಗಬಹುದು ಎಂಬ ಅರಿವಿರುವಾಗಲೂ, ಮುಂದುವರೆದದ್ದು ಮೆಚ್ಚಬೇಕಾದ ಸಂಗತಿ.

  ಅದೇ ರೀತಿ, ಸಾಧನೆಯ ಪಥದಲ್ಲಿ ವಯೋಮಾನವನ್ನೂ ಲೆಕ್ಕಿಸದೆ, ‘ಇಳಿ’ ವಯಸ್ಸಿನಲ್ಲೂ ಎವರೆಸ್ಟ್ ಏರಿದ್ದು ಹಿರಿದಾದ ಸಾಧನೆಯೇ ಸರಿ.

  ಇದೇ ಸಮಯದಲ್ಲಿ, ಭಾರತದ ಕುವರಿಯೊಬ್ಬಳ ಸಾಧನೆಯು ಪ್ರಾಯಶಃ ನಿಮ್ಮ ಗಮನಕ್ಕೆ ಬರಲಿಲ್ಲ ಎನಿಸುತ್ತದೆ. ಅದು ನಿಮ್ಮ ಗಮನಕ್ಕೆ ಬಂದಿದ್ದರೆ, ಅದನ್ನು ನೀವು ಖಂಡಿತ ನಿಮ್ಮ ಲೇಖನದಲ್ಲಿ ಉಲ್ಲೇಖಿಸುತ್ತಿದ್ದಿರಿ ಎಂಬ ಭರವಸೆ ನನಗಿದೆ.
  ಭಾರತದ ಅರುಣಿಮಾ ಸಿನ್ಹಾ, ಎವರೆಸ್ಟ್ ಏರಿದ ಪ್ರಪ್ರಥಮ ಅಂಗವಿಕಲೆ ಎಂಬ ಸಾಧನೆ ಮಾಡಿದ್ದಾರೆ.
  http://www.khelnama.com/130531/others/gallery/indias-arunima-sinha-first-female-amputee-climb-mount-everest/9486
  http://articles.timesofindia.indiatimes.com/2013-05-31/interviews/39629663_1_arunima-sinha-mount-everest-mountaineering

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s