ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

ಗುಜರಾತ್ ನಲ್ಲಿ ನಡೆದ ನರಮೇಧಕ್ಕೆ ನರೇಂದ್ರ ಮೋದಿ ಕಾರಣ ಎಂದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಭಾವನೆಗೆ ಪೂರಕವಾಗಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳು ಮೋದಿ ತಮ್ಮ ದೇಶಕ್ಕೆ ಕಾಲಿಡಲು ಅನುಮತಿ ನಿರಾಕರಿಸಿದ್ದವು. ಭಾರತದ ಒಳಗೂ ಈ ನಿಲುವಿಗೆ ಸಹಮತ ಸಹ ವ್ಯಕ್ತವಾಗಿತ್ತು. ಕಳೆದ ಬಿಹಾರದ ಚುನಾವಣೆಯ ಸಮಯ ಭಾಜಪದ ಪರವಾಗಿ ನರೇಂದ್ರ ಮೋದಿ ಬಿಹಾರಕ್ಕೆ ಬರುವ ವಿಷಯ ತಿಳಿದ ಅಲ್ಲಿನ ಮುಖ್ಯಮಂತ್ರಿ ನೀತೀಶ್ ಕುಮಾರ್ ತಮ್ಮ ರಾಜ್ಯಕ್ಕೆ ಆತ ಕಾಲಿಡ ಕೂಡದು ಎಂದು ತಾಕೀತು ಮಾಡಿ ವಿವಾದಕ್ಕೆ ಒಳಗಾಗಿದ್ದರು. ಮೋದಿ ಇಲ್ಲದೆಯೇ ಅಲ್ಲಿನ ಚುನಾವಣೆಯನ್ನ ಭಾಜಪ – ನಿತೀಶ್ ಪಕ್ಷದ ಒಕ್ಕೂಟ ಜಯಿಸಿತ್ತು. ಹೊರದೇಶಗಳಲ್ಲೂ, ಸ್ವದೇಶದಲ್ಲೂ ಈ ತೆರನಾದ ಅಭಿಪ್ರಾಯ ನರೇಂದ್ರ ಮೋದಿ  ಬಗ್ಗೆ ಇರುವಾಗ ಮೋದಿಯಾಗಲೀ ಭಾಜಪ ವಾಗಲೀ ಆತ್ಮಾವಲೋಕನ ಏಕೆ ಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಒಂದು ಒಗಟು.  ಸುಖಾಸುಮ್ಮನೆ ಯಾರನ್ನೂ ನಮ್ಮ ಮನೆ ಕಡೆ ತಲೆ ಹಾಕಬೇಡ ಎಂದು ಯಾರೂ  ತಾಕೀತು ಮಾಡೋಲ್ಲ. ನಮ್ಮ ದೇಶದ ಚರಿತ್ರೆಯಲ್ಲಿ ಈ ರೀತಿಯ ಸನ್ನಿವೇಶವನ್ನು ಎದುರಿಸುವಂಥ ಪರಿಸ್ಥಿತಿಗೆ ಒಳಗಾದ ಒಬ್ಬನೇ ಒಬ್ಬ  ರಾಜಕಾರಣಿಯ ಹೆಸರು ನಮ್ಮ ನೆನಪಿಗೆ ಬರುವುದೇ?

ಗುಜರಾತ್ ರಾಜ್ಯದ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಿಗೆ ಎದುರಾಗೋದು ಮುಗ್ಧರ ಹತ್ಯೆ ಮತ್ತು ಆಕ್ರಂದನ. ಗುಜರಾತ್ ನ ಮೇಲಿನ ಈ ಕಳಂಕ ವನ್ನು ತೊಡೆದು ಹಾಕಲು ಮೋದಿಯ ಅಂತರ್ಜಾಲ ಅಭಿಮಾನೀ ಸಮುದಾಯ ಹಗಲೂ ರಾತ್ರಿ ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದೆ, ಅಂಥ ರಾಜ್ಯ ಈ ದೇಶದಲ್ಲೆಂದೂ ಉದಯಿಸಿಲ್ಲ ಎಂದು ಟಾಮ್ ಟಾಮ್ ಮಾಡಿದ್ದೆ ಮಾಡಿದ್ದು. ಇದು ಪೊಳ್ಳು ಮತ್ತು ಸುಳ್ಳುಗಳ propaganda ಎಂದು ಭಾರತೀಯರಿಗೆ ಮನವರಿಕೆ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಗುಜರಾತ್ ನ ಅಭಿವೃದ್ಧಿ ಒಂದು myth ಎಂದು ಈಗ ವೇದ್ಯವಾಯಿತು. ಗುಜರಾತ್ ಗಿಂತ ಅಭಿವೃದ್ಧಿಯ ಪಥದಲ್ಲಿ ಬಿಹಾರ ದಾಪುಗಾಲು ಹಾಕುತ್ತಿದೆ. 

ನರೇಂದ್ರ ಮೋದಿ ಯನ್ನು ಯಾವ ಕಾರಣಕ್ಕೆ ಮತ್ತು ಉದ್ದೇಶಕ್ಕೆ  ಹೊಗಳಲಾಗುತ್ತಿದೆ, ಪ್ರಧಾನಿ ಹುದ್ದೆಗೆ ನಾಮಕರಣ ಮಾಡಲು ಉತ್ಸುಕತೆ, ಉತ್ಸಾಹ ತೋರಿ ಬರುತ್ತಿದೆ ಎಂದು ತಿಳಿಯದಷ್ಟು ಮೂಢ ನಲ್ಲ ಭಾರತೀಯ. ಗುಜರಾತ್ ಮು. ಮಂತ್ರಿಯ ಮೇಲಿನ ಪ್ರಯಾಣದ ನಿರ್ಬಂಧವನ್ನು ತೆಗೆದ ಇಂಗ್ಲೆಂಡ್ ದೇಶದ ಈ ಕ್ರಮ ಎಷ್ಟು ವಿವೇಚನಾಪೂರ್ಣ ಎನ್ನುವುದು ನಮಗೆ ಗೊತ್ತಿಲ್ಲ. ಆದರೆ ವ್ಯಾಪಾರದ ಹಿತದೃಷ್ಟಿಯ ಮುಂದೆ ಮಾನವೀಯ ಮೌಲ್ಯಗಳು ಗೌಣ ಎಂದು ಇಂಗ್ಲೆಂಡ್ ದೇಶಕ್ಕೆ ಅನ್ನಿಸಿದರೆ ಅದು ಅವರಿಗೆ ಬಿಟ್ಟ ಆಯ್ಕೆ. ಅವರ ಹಿತ್ತಲಿನಲ್ಲೇ ನಡೆದ ಯಹೂದ್ಯರ ವಿರುದ್ಧ ನಡೆದ ಸಾಮೂಹಿಕ ನರಸಂಹಾರದ ಅನುಭವ ಇರುವ ದೇಶ ಇಂಗ್ಲೆಂಡ್. ಅವರಿಗೆ ನಾವು ಪಾಠ ಹೇಳುವ ಅಗತ್ಯ ಇಲ್ಲ. ನರೇಂದ್ರ ಮೋದಿಯನ್ನು ಗುಜರಾತ್ ನ ಮುಸ್ಲಿಮರು ಕ್ಷಮಿಸಿದ್ದಾರೆ. ಉತ್ತರ ಪ್ರದೇಶದ ‘ದೇವೋ ಬಂದ್’ ಇಸ್ಲಾಮೀ ಸಂಸ್ಥೆಯ ‘ಮೌಲಾನ ವಾಸ್ತಾನ್ವಿ’ ಕೂಡಾ ಹಳತನ್ನು ಮರೆತು ಮುನ್ನಡೆಯುವ ಮಾತನ್ನಾಡಿದ್ದಾರೆ. ಆದರೂ ಮನುಷ್ಯ ನಿರ್ದೋಷಿ ಯಾಗಿದ್ದರೆ ತನ್ನ ಹೆಸರಿಗೆ ಅಂಟಿದ ಕಳಂಕವನ್ನು ತೊಡೆಯುವ ಶತಾಯ ಗತಾಯ ಪ್ರಯತ್ನಿಸ ಬೇಕು, ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು. ಈ ನಿಟ್ಟಿನಲ್ಲಿ ಗುಜರಾತಿನ ಮುಖ್ಯಮಂತ್ರಿ ತೊಡಗಿಸಿಕೊಂಡರೆ ‘feeling of closure’ ನ ಅವಕಾಶ ಭಾರತೀಯರಿಗೆ ಆತ ಕೊಟ್ಟಂತಾಗುತ್ತದೆ. ಆ ಕಾಲ ನಿಜಕ್ಕೂ ಬರಬಹುದೇ?            

Advertisements

2 thoughts on “ಮೋದಿಗೆ ಸಿಕ್ಕಿತು ಟ್ರಾವಲ್ ಪರ್ಮಿಟ್

 1. Kumar ಹೇಳುತ್ತಾರೆ:

  ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತಿನಲ್ಲಿ ಕೋಮುಗಲಭೆ ನಡೆದು ನೂರಾರು ಜನರ ಕೊಲೆಯಾದರು ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
  ಆದರೆ, ಈ ಕೋಮುಗಲಭೆ ಯಾವ ಕಾರಣಕ್ಕೆ ಪ್ರಾರಂಭವಾಯಿತು ಎನ್ನುವುದನ್ನು ಯಾರೂ ಎಲ್ಲೂ ಮಾತನಾಡುವುದೇ ಇಲ್ಲ.
  ರಾಜ್ಯವೊಂದರಲ್ಲಿ ಗಲಭೆಯಾಗಿ ಅಲ್ಲಿ ಅನೇಕ ಜನ ಸಾವಿಗೀಡಾಗಿದ್ದಕ್ಕೆ ಅಲ್ಲಿನ ಮುಖ್ಯಮಂತ್ರಿ ಕಾರಣವಾಗುವುದಾದರೆ, ಹಿಂದೆ ನಡೆದ ಇದಕ್ಕೂ ಭೀಕರ ದುರಂತಗಳ ವಿಷಯದಲ್ಲಿ ಈ ರೀತಿ ಏಕೆ ಮಾತನಾಡುತ್ತಿಲ್ಲ. ಆಯಾ ಮುಖ್ಯಮಂತ್ರಿಗಳನ್ನು ಕಳಂಕಿತರೆಂದು ಏಕೆ ಹೇಳಲಾಗುತ್ತಿಲ್ಲ.
  ಭಾರತ ವಿಭಜನೆಯಾದಾಗ ಲಕ್ಷಾಂತರ ಜನರ ಹತ್ಯೆಯಾಯಿತು, ಲಕ್ಷಾಂತರ ಜನ ಸ್ಥಾನಪಲ್ಲಟರಾದರು, ಲಕ್ಷಾಂತರ ಜನ ಅತ್ಯಾಚಾರಕ್ಕೊಳಗಾದರು – ಅಂದಿನ ಪ್ರಧಾನಿಯನ್ನಾಗಲೀ, ಇಲ್ಲವೇ ಅಂದು ಗುಜರಾತ್, ಪಂಜಾಬ್, ಬಂಗಾಳಗಳಲ್ಲಿ ಮುಖ್ಯಮಂತ್ರಿಯಾಗಿದ್ದವರನ್ನಾಗಲೀ ಕಳಂಕಿತರನ್ನಾಗಿ ಕಾಣಲಾಗಿಲ್ಲ.
  ೧೯೮೪ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ ಹತ್ತಾರು ಸಹಸ್ರ ಸಿಖ್ಖರ ಹತ್ಯೆಯಾಯಿತು. ಅದನ್ನು ಕಾಂಗ್ರೆಸ್ ಸರಕಾರದ ಮಂತ್ರಿಗಳೇ ನಡೆಸಿದರೆಂದು ಹೇಳಲಾಗಿದೆ – ಇದಕ್ಕೆ ವಿಡಿಯೋ ಸಾಕ್ಷಿಗಳೂ ಇದೆ. ಆದರೆ, ಅಂದಿನ ಪ್ರಧಾನಿ, ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಕಳಂಕಿತರೆನಿಸಲಿಲ್ಲ.
  ಮಧ್ಯಪ್ರದೇಶದ ಭೂಪಾಲ್‍ನಲ್ಲಿ ನಡೆದ ಯೂನಿಯನ್ ಕಾರ್ಬೈಡ್ ದುರಂತದಲ್ಲಿ ಹತ್ತಾರು ಸಹಸ್ರ ಜನ ಅಸು ನೀಗಿದರು. ಇಂದಿಗೂ ಆ ವಿಕಿರಣದ ಪ್ರಭಾವದಿಂದ ತೊಂದರೆ ಪಡುತ್ತಿರುವವರಿದ್ದಾರೆ. ಆ ದುರಂತಕ್ಕೆ ಕಾರಣರಾದವರಿಗೆ ವಿಮಾನದ ಸೌಲಭ್ಯ ನೀಡಿ ತಪ್ಪಿಸಿಕೊಂಡು ಹೋದವರು ಕಳಂಕಿರತೆನಿಸಲಿಲ್ಲ.
  ಇಂತಹ ಎಷ್ಟೋ ದುರಂತಗಳು ನಡೆದು ಹೋಗಿವೆ. ಆದರೆ, ಆ ಕಾರಣಕ್ಕೆ ಅಂದಿನ ಮುಖ್ಯಮಂತ್ರಿಗಳನ್ನು ಕಳಂಕಿತರನ್ನಾಗಿ ಮಾಡಿದ ಉದಾಹರಣೆಯೇ ಇಲ್ಲ.
  ಆದರೆ, ಆ ಎಲ್ಲಾ ದುರಂತಗಳಿಗಿಂತ ಹಲವು ಪಟ್ಟು ಸಣ್ಣ ಗಲಭೆಯಾದ ಗುಜರಾತಿನ ಗಲಭೆಗೆ ಅಲ್ಲಿನ ಮುಖ್ಯಮಂತ್ರಿಯನ್ನೇ ನೇರ ಹೊಣೆಯಾಗಿಸಿದ್ದರ ಹಿಂದೆ ಯಾವುದೋ ಹುನ್ನಾರವಿದೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ?
  ನ್ಯಾಯ ಎಲ್ಲರಿಗೂ ಸಮಾನ. ಸತ್ಯಕ್ಕೇ ಅಂತಿಮ ಜಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s