ಟಿಬೆಟ್ ನ ಬುದ್ಧರ ಗುರು ದಲಾಯಿ ಲಾಮ ಕಾಶ್ಮೀರದಲ್ಲಿ ನೆಲೆಸುತ್ತಿರುವ ಟಿಬೆಟ್ ದೇಶದ ಮುಸ್ಲಿಮರನ್ನು ಭೇಟಿಯಾದರು. ಟಿಬೆಟನ್ ಸಾರ್ವಜನಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ದಲಾಯಿ ಲಾಮ ಉತ್ತಮ ಮಟ್ಟದ ಶಿಕ್ಷಣ ಯಾವ ರೀತಿ ಪರಿವಾರ, ಸಮಾಜ ಮತ್ತು ದೇಶಕ್ಕೆ ಉಪಯುಕ್ತ ವಾಗುತ್ತದೆ ಎಂದು ವಿವರಿಸಿದರು. ಇಂದಿನ ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿದ್ದು ಅಂತರಾತ್ಮದ ನೆಮ್ಮದಿಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ ಎಂದು ವಿಷಾದಿಸಿದರು. ಪ್ರಸಕ್ತವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ದಲಾಯಿ ಲಾಮರ ಆಶಯದ ಅರ್ಥ ನಮಗರ್ಥವಾಗುತ್ತದೆ. ಶಿಕ್ಷಣ ವ್ಯಾಪಾರೀಕರಣ ಗೊಳ್ಳುತ್ತಿರುವುದು ಮಾತ್ರವಲ್ಲ “ಅಜೆನ್ಡೀಕರಣ” (agenda ) ವೂ ಆಗುತ್ತಿರುವ ಬಗ್ಗೆ ಲಾಮಾ ರಿಗೆ ಬಹುಶಃ ತಿಳಿದಿರಲಿಕ್ಕಿಲ್ಲ. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ. ಅಂಥ ಶಿಕ್ಷಣ ಎನ್ನುವ ಪವಿತ್ರ ತೀರ್ಥಕ್ಕೆ ಕಲಬೆರಕೆ ನಡೆಸಿ ಗುಮಾನಿ ಪಡದ ಮುಗ್ಧ ಮಕ್ಕಳಿಗೆ ಕೊಟ್ಟಾಗ ಕಳ್ಳಭಟ್ಟಿ ಕುಡಿದಾಗ ಆಗುವ ಅನಾಹುತಕ್ಕೆ ಸರಿಸಮಾನವಾದ ಪರಿಣಾಮ ಉಂಟು ಮಾಡುತ್ತದೆ ಎನ್ನುವ ಅರಿವು ಬಹುಶಃ ಬಹಳ ಜನರಿಗೆ ತಿಳಿದಿಲ್ಲ ಎಂದು ತೋರುತ್ತದೆ.