ಈ ತಿಂಗಳು ನಿನಗೆ ಸಿಗುತ್ತೆ ಕೋಟಿ

ಜೂನ್, ಜುಲೈ ತಿಂಗಳಿನಲ್ಲಿ ಭಾರತದಲ್ಲಿದ್ದಾಗಿನ ಅನುಭವ. ಪ್ರತೀ ಸಲ ಬಂದಾಗ ವಿಶೇಷ ಇದ್ದೇ ಇರುತ್ತೆ.  ನನಗೆ ಕಾಣುವ ವಿಶೇಷ ಅಲ್ಲಿನ ಜನರಿಗೆ (ಭಾರತೀಯರಿಗೆ) ವಿಶೇಷವೇನೂ ಅಲ್ಲ. ಆದರೆ ನನ್ನಂಥ, ಬದುಕಿನ ಬಹುಪಾಲು ಹೊರದೇಶದಲ್ಲಿ ಕಳೆಯುವ ಅನಿವಾಸಿಗಳಿಗೆ ಇಲ್ಲಿಯ ಪ್ರತೀ ಕ್ಷಣವೂ ರೋಚಕ, ಕುತೂಹಲಭರಿತ. ಭಾರತದಲ್ಲಿ ಇರುವಷ್ಟು ದಿನ ಪ್ರತೀ ಕ್ಷಣವನ್ನು ಆಸ್ವಾದಿಸಿ ಮನಸು ಹಗುರಾಗುವ ಸವಿ ನೆನಪುಗಳೊಂದಿಗೆ, ವಿದಾಯ ನೀಡುವ ಭಾರವಾದ ಹೃದಯದೊಂದಿಗೆ ಮರಳುತ್ತಾನೆ ಅನಿವಾಸಿ ಪೆವಿಲಿಯನ್ ಗೆ. ಹಾಗಂತ ನಮಗೆ ಕಾಣ ಸಿಗುವುದೆಲ್ಲಾ ರೋಚಕವೋ, ಅವಿಸ್ಮರಣೀಯವೋ ಆಗಬೇಕೆಂದಿಲ್ಲ. ಆದರೆ ಕೆಲವೊಂದು ಮೋಸ ಹೋಗುವ ಕಹಿ ಘಟನೆಗಳ ಹಿಂದೆಯೇ ಹೇ, ನಿಲ್ಲು ಅನಿವಾಸಿ, ಭಾರತ ಇಷ್ಟೇ ಅಲ್ಲ, ಇನ್ನೂ ಬೇಕಷ್ಟಿದೆ ಅವಳ ಮಡಿಲಲ್ಲಿ ಎಂದು ಕೈ ಬೀಸಿ ಕರೆದು ಮನಸ್ಸನ್ನು ಮುದ ಗೊಳಿಸುವ ಅನುಭವಗಳೇ ಹೆಚ್ಚು ಎಂದು ಸುಲಭವಾಗಿ ಹೇಳಬಹುದು.

ಬೆಂಗಳೂರಿನಲ್ಲಿ ಮಿತ್ರರು ಇರುವುದರಿಂದ ಭೇಟಿ ಅನಿವಾರ್ಯ. ನನ್ನ ಕಾರಿನಲ್ಲಿ ಬಂದಿದ್ದರೂ ಬೆಂಗಳೂರ ತುಂಬಾ ಗುಂಡಿ ತೋಡಿ ಅಲ್ಲಿ ಇಲ್ಲಿ ಎಂದು ಸಿಕ್ಕ ಸಿಕ್ಕಲ್ಲಿ deviation ಗಳಿದ್ದರಿಂದ ಕಾರನ್ನು ಮಿತ್ರನ ದ್ಮನೆಯ ಹತ್ತಿರ ಪಾರ್ಕ್ ಮಾಡಿ ಯಾರನ್ನೋ ಕಾಣಲೆಂದು ರಿಕ್ಷಾ ಹಿಡಿದೆ. ಈಗ ರಿಕ್ಷಾಗಳ ಬಣ್ಣ ಬೇರೆಯಾಗಿ ಬಿಟ್ಟಿದೆ. ವನಸಿರಿಯ ಹಸಿರು ಬಣ್ಣ ಬಳಿದು ಕೊಂದು ಸ್ವಲ್ಪ ಆಹ್ಳದಕರವಾಗಿ ಕಾಣುತ್ತಿವೆ ರಿಕ್ಷಾಗಳು. ಆದರೆ ಅದರೊಂದಿಗೆ ಅವುಗ್ಲಾ ಚಾಲಕರೂ ತಮ್ಮ ಸುಲಿಯುವ ಅಭ್ಯಾಸದಲ್ಲಿ ಸ್ವಲ್ಪವೂ ಸುಧಾರಣೆ ಮಾಡಿ ಕೊಂಡಿದ್ದು ನನ್ನ ಅನುಭವಕ್ಕೆ ಬರಲಿಲ್ಲ. ಯಾವ ರಿಕ್ಷಾ ಚಾಲಕನನ್ನು ಸಂಪೂರ್ಣ ನಂಬಿ ಚೌಕಾಶಿ ಮಾಡದೆ, ಇವನು ಸುತ್ತಿಸುತ್ತಿದ್ದ ಜಾಗಗಳ ಬಗ್ಗೆ ತಂಟೆ ತಕರಾರು ಮಾಡದೆ ಕೂತರೂ ಸುಲಿಗೆ ಮಾತ್ರ ಬಿಡುತ್ತಿರಲಿಲ್ಲ. ಇರಲಿ ಪರವಾಗಿಲ್ಲ. ಏಕೆಂದರೆ ಅವನೆಷ್ಟೇ ಸುಲಿಗೆ ಮಾಡಿದರೂ ರೂಪಾಯಿ ಯನ್ನು ರಿಯಾಲ್ ನೊಂದಿಗೆ ಭಾಗಿಸಿದಾಗ ಯಾಗುವ ನಷ್ಟ ಜುಜುಬಿ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನಿಂದ, ಪಿಳ್ಳಣ್ಣ ಗಾರ್ಡನ್ ಗೆ ಬರಬೇಕಿತ್ತು. ರಿಕ್ಷಾ ಹಿಡಿದೆ. ಸಭ್ಯ ಚಾಲಕ, ಇಂಗ್ಲೀಷ ಸಹ ಮಾತನಾಡುತ್ತಿದ್ದ. ಹೆಸರು ಥಾಮಸ್. ಇಂಥ ಕಡೆ ಹೋಗ್ಬೇಕು ಎಂದಾಗ ಕೂರಿಸಿ ಕೊಂಡು ಹೊರಟ. ಸ್ವಲ್ಪ ದೂರ ಹೋಗುತ್ತಲೇ ತಿಳಿಯಾಯಿತು ನಾನೀಗ  round  the  world  ಟ್ರಿಪ್ ಮೇಲೆ ಹೊರಟಿದ್ದೇನೆಂದು. ಆಟೋದವರ public  relations ಸ್ಕಿಲ್ ಗಳು ಜನಜನಿತ ವಾದ್ದರಿಂದ ಹೆಚ್ಚು ಮಾತನಾಡದೆ ಸುತ್ತಾ ಮುತ್ತಾ ನೋಡ ತೊಡಗಿದೆ. ಕೆಲವೊಮ್ಮೆ ನಾವು ಮೋಸ ಹೋಗುತ್ತಿದ್ದೇವೆ ಎನ್ನುವ ಅರಿವು ಇದ್ದರೂ ಪ್ರತಿಭಟಿಸಲು ನಾಲಗೆಯೇ ಏಳೋಲ್ಲ. ಒಂದು ತೆರನಾದ hypnotic ಅನುಭವ. ನನಗಂತೂ ಈ ಅನುಭವ ಆಗುತ್ತಲೇ ಇರುತ್ತೆ, ಆದರೂ ಏನೂ ಮಾತನಾಡೋಲ್ಲ. ಗುರಿ ಮುಟ್ಟಿದ ನಂತರ hypnotism ನ ನಶೆ ಇಳಿದ ನಂತರ ಛೇ, ನಾನೆಂಥ ಹೆಡ್ಡ ಎಂದು ತಲೆಯನ್ನು ಚಚ್ಚಿ ಕೊಂಡು ಸುಮ್ಮನಿರುತ್ತಿದ್ದೆ.  ಆಟೋ ಚಲಾಯಿಸುತ್ತಾ ಗಾಯಕ್ಕೆ ಉಪ್ಪು ಹಚ್ಚುವಂತೆ ಈತ ಹೇಳಿದ, just  sit and relax , i  am very honest  person you  know  ಎಂದು ನನ್ನನ್ನು ತಬ್ಬಿಬ್ಬು ಮಾಡಿದ. ಅವನ ಈ ಮಾತು ಸಹನೆಯ ಶವ ಪೆಟ್ಟಿಗೆ ಮೇಲಿನ ಕೊನೆಯ ಮೊಳೆಯಾದರೂ ಯಾರೋ, ಅವನ ತಾತನ ಬಗ್ಗೆ ಹೇಳುತ್ತಿರಬೇಕು ಪಾಪ ಎಂದು ತೆಪ್ಪಗೆ ಕೂತೆ. ಪಿಳ್ಳಣ್ಣ ಗಾರ್ಡನ್ ಬಂತು. ಮೀಟರ್ ೯೬ ರೂಪಾಯಿ ತೋರಿಸುತ್ತಿತ್ತು. ಅವಸರದಿಂದ ನೂರು ರೂಪಾಯಿ ಅವನ ಕೈಗೆ ತುರುಕಿ keep  the  rest  ಎಂದು ಚಿಲ್ಲರೆಯನ್ನು ಅವನಿಗೆ ಬಿಟ್ಟು ಸೌದಿಯ ಬರೀ ಏಳು ರಿಯಾಲ್ ತಾನೇ ಆಗಿದ್ದು ಎಂದು ಸಮಾಧಾನಿಕೊಳ್ಳುತ್ತಾ ಹೆಜ್ಜೆ ಹಾಕಿದೆ. ಇದು ನನಗಾದ krack jack ಅನುಭವ, ಸ್ವಲ್ಪ ಸಿಹಿ, ಸ್ವಲ್ಪ ಕಹಿ.

ಈ ಕತೆ ಕೇಳಿ.

ಸಂಬಂಧದಲ್ಲಿ ಒಬ್ಬರಿಗೆ ಅಪಘಾತ ವಾಗಿದ್ದರಿಂದ ಅವರನ್ನು ನೋಡಲು ಹೊರಟೆ. ಭದ್ರಾವತಿಯಿಂದ ಹುಬ್ಬಳ್ಳಿಗೆ. ಜೂನ್ ತಿಂಗಳಾದರೂ ಉರಿಯುವ ಸೂರ್ಯ ಮಾತ್ರ ತನ್ನ ಖುರ್ಚಿ ಮಳೆರಾಯನಿಗೆ ಬಿಟ್ಟು ಕೊಡದೆ ಹಠ ಮಾಡುತ್ತಿದ್ದ. ಹುಬ್ಬಳ್ಳಿ ಯ ಬಿಸಿಲ ದರ್ಬಾರು ಸ್ವಲ್ಪ ಜೋರೆ ಎನ್ನಬಹುದು. ನನ್ನ ಕೆಲಸ ಮುಗಿಸಿ ಕೊಂಡು ತಂಗಿಯ ಅತ್ತೆ ಮಾವಂದಿರನ್ನು ಕಂಡು ಬರೋಣ ಎಂದು ಹಾನಗಲ್ ಕಡೆ ಹೊರಟೆ. ಹುಬ್ಬಳ್ಳಿಯ ಜನ-ವಾಹನ ನಿಬಿಡ ರಸ್ತೆಯಿಂದ ಹೇಗೋ ನುಣುಚಿಕೊಂಡು ಹೆದ್ದಾರಿ ತಲುಪಿ ನಿರಾಳವಾಗಿ accelarator ಮೇಲೆ ಜೋರಾಗಿ ಪಾದ ಊರಿದ್ದೆ ತಡ ಬಕ ಪಕ್ಷಿಗಳಂತೆ ರಸ್ತೆಗೆ ಅಡ್ಡವಾಗಿ ಮುಗಿ ಬಿದ್ದರು ಪೊಲೀಸರು. ಗಾಡಿ ನಿಲ್ಲಿಸಿ ಏನೆಂದು ಕೇಳಿದಾಗ, ತುಂಬಾ ಫಾಸ್ಟ್ ಆಗಿ ಹೋಗುತ್ತಿದ್ದೀರಾ ಬನ್ನಿ ಎಂದ. ಅಲ್ಲೇ ರಸ್ತೆಯ ಪಕ್ಕದಲ್ಲಿ ಮರದ ಕೆಳಗೆ ಕ್ಯಾಮರಾ ಹಿಡಿದು ಕೊಂಡು ಸ್ಪೀಡ್ ಆಗಿ ಹೋಗೋ ವಾಹನಗಳ ಶೂಟಿಂಗ್ ನಲ್ಲಿ ನಿರತರಾಗಿದ್ದರು ಪೇದೆಗಳು. ನನ್ನ ಸ್ಪೀಡು ೮೦ ಎಂದು ತೋರಿಸುತ್ತಿತ್ತು ಕ್ಯಾಮರಾ. ದಂಡ ೪೦೦ ರೂಪಾಯಿ ಪೀಕಿ, ಬೇರೆಲ್ಲೂ ಕ್ಯಾಮರಾ ಇಲ್ಲ ಎಂದು ಅವರಿಂದಲೇ ಖಾತ್ರಿ ಪಡಿಸಿಕೊಂಡು ಹೊರಟೆ ಹಾನಗಲ್ ಕಡೆ. ಒಂದು ಕಡೆ ರಸ್ತೆ ಸರಿಯಾಗಿ ತಿಳಿಯದ ಕಾರಣ ಹತ್ತಿರದಲ್ಲೇ ಇದ್ದ restaurant ಹತ್ತಿರ ಹೋಗುತ್ತಿದ್ದಂತೆ ಜಟೆ ಬಿಟ್ಟು ಕೊಂಡ  ಮಧ್ಯವಯಸ್ಸಿನ, ಆಕರ್ಷಕ ಮಹಿಳೆ ಕುಂಕುಮದ ಬಟ್ಟಲನ್ನು ಹಿಡಿದು ಎದುರು ಬಂದಳು. ಅವಸರದಲ್ಲಿ ಇದ್ದಿದ್ದರಿಂದ ಏನೇನೇನೂ ಹೇಳುತ್ತಿದ್ದ ಆಕೆಯ ಮಾತಿಗೆ ಕಿವಿಗೊಡದೆ ಹತ್ತು ರೂಪಾಯಿ ಆಕೆಗೆ ಕೊಟ್ಟು, ಹಾನಗಲ್ ದಾರಿ ಖಾತ್ರಿ ಮಾಡಿಕೊಂಡು ಕಾರ್ ಹತ್ತುವಾಗ ಮತ್ತೊಮ್ಮೆ ಆಕೆ ಬಂದು, ಸ್ವಲ್ಪ ನಿಲ್ಲಪ್ಪಾ ತಮ್ಮಾ ಎಂದು ನಿಲ್ಲಿಸಿಕೊಂಡಳು.  ನೋಡಪ್ಪಾ ತಮ್ಮ, ನಿನ್ನ ಮನಸ್ಸು ದೊಡ್ಡದು, ಎಷ್ಟು ಬೇಗ ನನಗೆ ಹತ್ತು ರೂಪಾಯಿ ಕೊಟ್ಟು ಬಿಟ್ಟೆ ನೋಡು, ಆದರೆ ನಿನಾನ್ ಕೈಲಿ ಕಾಸು ನಿಲ್ಲೋಲ್ಲ, ಈ ತಿಂಗಳು ಕಳೀಲಿ ನೋಡು ನಿನಗೆ ಕೋಟಿ  ಸಿಗತ್ತೆ ಎಂದು ಹೇಳುತ್ತಾ, ನೀನು ಮತ್ತೊಮ್ಮೆ ಈ ಕಡೆ ಬಂದಾಗ ನನಗೆ ರವಿಕೆಗೆ ಅಂತ ಐವತ್ತು ರೂಪಾಯಿ ಕೊಡಬೇಕು ಎಂದು ನನ್ನಿಂದ ಪ್ರಾಮಿಸ್ ಮಾಡಿಸಿ ಕೊಂಡಾಗ ನಾನು ಸರೀ ಸರೀ ಖಂಡಿತ ಕೊಡುತ್ತೇನೆ ಐವತ್ತು ರೂಪಾಯಿ ಎಂದು ಅಲ್ಲಿಂದ ಹೊರಟೆ. ನನ್ನ ಪ್ರವಾಸ ಮುಗಿಸಿ ಮನೆ ತಲುಪಿದ ನಂತರ ಈ ಘಟನೆಯನ್ನು ಮನೆಯಲ್ಲಿ ಎಲ್ಲರಿಗೂ ಹೇಳಿದಾಗ ಮಡದಿ, ನನ್ನ ತಾಯಿ, ತಂಗಿಯರು, ತಮ್ಮನ ಹೆಂಡತಿ ಎಲರೂ ಒಂದೇ ಸ್ವರದಲ್ಲಿ ಅಯ್ಯೋ, ಹಣ ಕೊಡದೆ ಎಂಥ ಕೆಲಸ ಮಾಡಿ ಬಿಟ್ಟೆ ನೀನು, ಆಕೆಗೆ ರವಿಕೆಗೆಂದು ನೂರು ರೂಪಾಯಿ ಕೊಡಬಾರದಿತ್ತಾ ಎಂದು ದೂರಿದಾಗ ಹೌದಲ್ವಾ, ನನ್ನ ಮಂದ ಬುದ್ಧಿಗೆ ಇದು ಹೊಳೆಯಲೇ ಇಲ್ವಲ್ಲ ಎಂದು ಕೊಂಡೆ. ಆಕೆ ಹೇಳಿದ ಹಾಗೆ ನನಗೆ ಕೋಟಿ ಸಿಗಬೇಕಿರುವುದು ಈ ತಿಂಗಳಿನಲ್ಲಿ. ಇದುವರೆಗೂ ಸಿಕ್ಕಿಲ್ಲ. ಸಿಗಬೇಕೆನ್ನುವ ಆಸೆಯೂ ಇಲ್ಲ. ಆದರೂ ಮುಂದಿನ ನನ್ನ ಭೇಟಿಯಲ್ಲಿ ಆಕೆ ಸಿಕ್ಕರೆ ಆಕೆಗೆ ರವಿಕೆಯಂತೂ ಖಂಡಿತಾ ಹೊಂದಿಸಬೇಕು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s