ಇಂದೇ ಡ್ರಾ, ಗೆಲ್ಲಿರಿ ೫೦ ಕೋಟಿ

ಅಮೇರಿಕಾ. ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ. ಬರೀ ತಂತ್ರಜ್ಞಾದಲ್ಲಿ ಮುಂದಲ್ಲ. ತಂತ್ರಗಾರಿಕೆಯಲ್ಲೂ ಮುಂದು. ಇಲ್ಲದಿದ್ದರೆ ವಿಶ್ವದ ‘ಹಿರಿಯಣ್ಣಯ್ಯ’ ನಾಗಿ ಮೆರೆಯಲು ಸಾಧ್ಯವೇ? ಮೊದಲು ವಿಶ್ವ ‘ಬೈ ಪೋಲಾರ್’ ಆಗಿತ್ತು. ಅಂದರೆ ಎರಡು ದೇಶಗಳ ಪಾರುಪತ್ಯ. ಅಮೇರಿಕಾ, ರಷ್ಯಾ ಒಬ್ಬರನ್ನೊಬ್ಬರು ಸಂಶಯದಿಂದ ನೋಡುತ್ತಾ, ಸಮಯ ಸಿಕ್ಕಾಗಲೆಲ್ಲಾ ಪರಸ್ಪರರಿಗೆ ಮದ್ದನ್ನು ಅರೆಯುತ್ತಾ ವಿಶ್ವದ balance ತಪ್ಪಿ ಹೋಗದಂತೆ ನೋಡಿ ಕೊಂಡಿದ್ದರು. ೮೦ ರ ದಶಕದಲ್ಲಿ ಅಂದಿನ ರಷ್ಯಾದ ಅಧ್ಯಕ್ಷ ಮಿಖಾಯಿಲ್ ಗೋರ್ಬಚೋಫ್ ರವರ perestroika, glasnost ನೀತಿಗಳ ಕಾರಣ ರಷ್ಯಾದ ಕಮ್ಯುನಿಸ್ಟ್ ಸರಕಾರ ಪತನಗೊಂಡು ಪ್ರಜಾಪ್ರಭುತ್ವ ಸ್ಥಾಪನೆಯಾಯಿತು. ಇದರೊಂದಿಗೆ ರಷ್ಯಾದ ಹಿಡಿತ ವಿಶ್ವ ವಿದ್ಯಮಾನಗಳ ಮೇಲೆ ತಪ್ಪಿ ಅಮೇರಿಕಾ ಹಿರಿಯಣ್ಣ ನ ಪಟ್ಟ ಅಲಂಕರಿಸಿಕೊಂಡಿತು. ಅಲ್ಲಿಂದ ಶುರುವಾದ ದರ್ಬಾರು ಇದುವರೆಗೆ ಸಾಂಗವಾಗಿ ನಡೆದು ಬರುತ್ತಿದೆ. ತಂತ್ರ ಗಾರಿಕೆಯೊಂದಿಗೆ ಒಂದಿಷ್ಟು ಡ್ರಾಮಾ ಸಹ ಇದ್ದರೆ ತನ್ನ ಆಟಕ್ಕೆ ಯಾವ ಧಕ್ಕೆಯೂ ಬರದು ಎನ್ನುವ ತಿಳಿವಳಿಕೆಯೂ ಅಮೆರಿಕೆಗಿದೆ. ಅದಕ್ಕೆಂದೇ ಮಾಸ್ಟರ್ ಹಿರಿಯಣ್ಣಯ್ಯ ಡ್ರಾಮಾ ಕಂಪೆನಿ ಎಂದು ಹೇಳಿದ್ದು.   

“ಲಷ್ಕರ್ ಎ ತೈಬಾ” ಸಂಘಟನೆಯ ನಾಯಕ ಹಫೀಜ್ ಮುಹಮ್ಮದ್ ಸಯೀದ್ ನ ತಲೆಗೆ ೫೦ ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದ ಅಮೇರಿಕಾ ಭಾರತೀಯರಿಗೆ ಸಂತೋಷ ತಂದಿತು. ೧೦ ಮಿಲ್ಲಿಯನ್ ಡಾಲರ್. ಒಂದು ಕೋಟಿ ಡಾಲರ್. ಮುಂಬೈ ಮೇಲೆ ನಡೆದ ನರಸಂಹಾರಕ್ಕೆ ಹಫೀಜ್ ಸಯೀದ್ ನೇರ ಕಾರಣ ಎಂದು ಅಮೇರಿಕಾ ಈ ಕ್ರಮವನ್ನು ಘೋಷಿಸಿತು. ಮುಂಬೈ ಮೇಲೆ ಆಕ್ರಮಣ ನಡೆದಿದ್ದು, ದಕ್ಷ, ದಿಟ್ಟ  ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸೇರಿದಂತೆ ೧೬೬ ಅಮಾಯಕ ಪ್ರಾಣಗಳು ಹೋಗಿದ್ದು ನವೆಂಬರ್ ೨೬, ೨೦೦೮ ರಲ್ಲಿ. ಮೂರೂವರೆ ವರ್ಷಗಳು ಬೇಕಾದವು ಅಮೆರಿಕೆಗೆ ಸಯೀದ್ ನ ವಿರುದ್ಧ ಕ್ರಮ ಜರುಗಿಸಲು. ಮುಂಬೈ ನರಸಂಹಾರ ನಡೆದ ಕೂಡಲೇ ಭಾರತ ಎಲ್ಲ ಪುರಾವೆಗಳನ್ನು ನೀಡಿಯೂ, ಅಮೇರಿಕಾ ಮಾತ್ರ ಸಾಂತ್ವನದ ಮಾತನ್ನು ಆಡಿತೆ ಹೊರತು ಪಾಕ್ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಆಫ್ಘಾನಿಸ್ತಾನದಲ್ಲಿ ತನ್ನ ಸೈನ್ಯಕ್ಕೆ ಪಾಕ್ ಸೈನ್ಯ ನೀಡುವ ಸಹಕಾರ ನಿಲ್ಲಬಹುದು ಎನ್ನುವ ಅಂಜಿಕೆಯಿಂದ ಮುಂಬೈ ಅಮಾಯಕರು ಅಮೆರಿಕೆಯ ಗಣನೆಗೆ ಬರಲಿಲ್ಲ. ಹಾಗಾದ್ರೆ ಈಗ ಏಕೆ ಅಮೆರಿಕೆಯ ಆಫರ್ ಸಯೀದ್ ಸಯೀದ್ ತಲೆಗೆ? ಒಬ್ಬ ನಿರ್ದೇಶಕನ ಡ್ರಾಮಾ ಗಳನ್ನು ಪಡೆ ಪಡೆ ನೋಡುವವನಿಗೆ ನಿರ್ದೇಶಕನ ಕಸುಬಿನ ಧಾಟಿ ತಿಳಿದು ಬಿಡುತ್ತದೆ. ಪ್ರಪಂಚ ಅಮೆರಿಕೆಯ ಎಷ್ಟು ಡ್ರಾಮಾಗಳನ್ನು ನೋಡಿರಲಿಕ್ಕಿಲ್ಲ? ಅಮೆರಿಕೆಯ ಸೈನ್ಯ ಕೆಲ ತಿಂಗಳುಗಳ ಹಿಂದೆ ಹತ್ತಾರು ಪಾಕ್ ಸೈನಿಕರನ್ನು ಪ್ರಮಾದವಶಾತ್ ಕೊಂದು ಹಾಕಿತ್ತು. ಪಾಕ್ ಉಗ್ರವಾಗಿ ಪ್ರತಿಭಟಿಸಿತು. ಗಾಯಕ್ಕೆ ಒಂದಿಷ್ಟು ಮುಲಾಂ (ಡಾಲರ್ ಮುಲಾಂ) ಬಳಿದ ನಂತರ ಪಾಕ್ ಸರಕಾರವೇನೋ ಸುಮ್ಮನಾಯಿತು, ಆದರೆ ಪಾಕ್ ನಲ್ಲಿ ವಿಜ್ರಂಭಿಸುತ್ತಿರುವ ಮೂಲಭೂತವಾದಿಗಳು ಸುಮ್ಮನಾಗಲಿಲ್ಲ. ಆ ಮೂಲಭೂತವಾದಿಗಳ ಗುರುವೇ ಈ ಸಯೀದ್ ಎನ್ನುವ ವ್ಯಕ್ತಿ. ಲಷ್ಕರ್ ಸಂಘಟನೆ ಯನ್ನು ಅಮೇರಿಕಾ ಬಹಿಷ್ಕರಿಸಿದ ಕೂಡಲೇ ‘ಜಮಾತ್ ಉದ್ ದಾವಾ’ ಎನ್ನುವ ಸಮಾಜ ಸೇವಾ ಸಂಘಟನೆ ಆರಂಭಿಸಿ ತನ್ನ ಅಜೆಂಡಾ ಜೀವಂತವಾಗಿರಿಸಿಕೊಂಡ ಈ ಸಯೀದ್. ಈತನಿಗೆ ಭಾರತದ ಮೇಲೆ ಅತೀವ ಧ್ವೇಷ. ಈತ ಅಮೆರಿಕೆಯ ವಿರುದ್ಧ ಕಿಡಿ ಕಾರಲು ಶುರು ಮಾಡಿದ. ಪಾಕ್ ಸೈನಿಕರನ್ನು ಕೊಂದ ಅಮೇರಿಕ ಮತ್ತು ಮಿತ್ರ ದೇಶಗಳ ಸೈನಿಕರನ್ನು ಪೀಡಿಸುವುದಾಗಿ ಧಮಕಿ ಕೊಟ್ಟ. ಇವನನ್ನು ಬಲಿ ಹಾಕಿದರೆ ತನ್ನ ಸೈನಿಕರು ನಿರಾಳವಾಗಿರಬಹುದು ಎಂದು ಅಮೇರಿಕಾ ಈತನ ಮೇಲೆ ಎರಗಿತು. ಸುಮ್ಮನೆ ಎರಗಿದರೆ ಲಾಭ ಕಡಿಮೆ. ಹಾಗಾಗಿ ಭಾರತ ಮೇಲೆ ಆಕ್ರಮಣ ಮಾಡಿದ ಕಾರಣ ಈ ಕ್ರಮ ಎಂದು ಅಮೇರಿಕಾ ಸಾರಿದ ಕೂಡಲೇ ನಮ್ಮ ನಾಯಕರು, ಮಾಧ್ಯಮಗಳು ಪಟಾಕಿ ಸಿಡಿಸಿದವು. ಅಮೆರಿಕೆಯ ಈ ಕ್ರಮದಿಂದ ಭಾರತಕ್ಕೆ ಲಾಭವಾದರೂ ನಿಜವಾದ ಲಾಭ ಅಮೆರಿಕೆಗೆ. ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಭಾರತ ಸರಿಯಾದ ಪಾಠ ಕೊಡಬೇಕಿತ್ತು ಪಾಕಿಗೆ. ಆದರೆ ನಾವು ಸೌಮ್ಯತೆಯ ದಾರಿ ಹಿಡಿದೆವು. ಸಂಯಮ, ತಾಳ್ಮೆ ನಮ್ಮ ಮಂತ್ರವಾಯಿತು. ಈ ಸಂಯಮ ತಾಳ್ಮೆಯ ಲಾಭವೂ ಅಮೆರಿಕೆಗೆ ಎನ್ನುವುದು ನಮಗೆ ತಿಳಿದರೂ ಅಮೆರಿಕೆಯ ದಾಳದಾಟದ ನೈಪುಣ್ಯಕ್ಕೆ ನಮ್ಮದು ನಿರುತ್ತರ.

ಅಮೇರಿಕಾ ಆಗಾಗ ಅನ್ನ ಮಿತ್ರ ಮಂಡಳಿಯೊಂದಿಗೆ ಪ್ರಪಂಚ ಎನ್ನುವ ಪ್ರೇಕ್ಷಕನಿಗೆ ಹೊಸ ಹೊಸ ಡ್ರಾಮಾ ಗಳನ್ನು ಕೊಟ್ಟು ತಾನು ಮಾಡುವುದೆಲ್ಲಾ ಈ ಪ್ರಪಂಚದ ಭದ್ರತೆಗೆ, ಸುರಕ್ಷೆಗೆ ಎಂದು ನಂಬಿಸುತ್ತದೆ. you cannot fool all of the people all of the time ಎಂದು ಅಮೆರಿಕೆಯವನೇ ಆದ ಅಬ್ರಹಾಂ ಲಿಂಕನ್  ಹೇಳಿದ ಮಾತುಗಳು ಯಾವಾಗ ಸಾಕಾರ ವಾಗುವುದೋ ಕಾದು ನೋಡೋಣ. ಅಲ್ಲಿಯವರೆಗೆ ಮುಂದಿನ ಡ್ರಾಮಾದ ನಿರೀಕ್ಷೆಯಲ್ಲಿ ದಿನ ಕಳೆಯೋಣ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s