ಪಾಳು ಬಿದ್ದ ‘ಸುದ್ದಿ’ ಮನೆ

ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದ್ನಂತೆ. ಆದರೆ ಇತ್ತೀಚೆಗೆ ದಿಲ್ಲಿಯ ೩೩ ವರ್ಷ ಪ್ರಾಯದ ನಿರುದ್ಯೋಗಿ ಯುವಕ ತನ್ನ ತಂದೆಯನ್ನೇ ಕೊಂದು ಬಿಟ್ಟ. ತಡೆಯಲು ಬಂದ ತಾಯಿಯನ್ನು ತದುಕಿದ. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾದ ಸುದ್ದಿ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ರೀತಿಯ “ಕ್ರೈಮ್ಸ್” ಆಫ್ ಇಂಡಿಯಾ ಪತ್ರಿಕೆಯಾಗಿ ಹೊರಹೊಮ್ಮುತ್ತಿರುವುದು ವಿಷಾದಕರ. ತನ್ನ ತಂದೆಯ ಕೊಲೆ ಮಾಡಿದ ಈ ವ್ಯಕ್ತಿ ಕೆಲ ತಿಂಗಳ ಹಿಂದೆಯೂ ತನ್ನ ಪಾಲಕರ ಮೇಲೆ ಹಲ್ಲೆ ಮಾಡಿದ್ದ, ಆದರೆ ಹೆತ್ತ ಕರುಳು ಈ ದುರುಳನನ್ನು ಕ್ಷಮಿಸಿ ಪೊಲೀಸರಿಂದ ಬಿಡಿಸಿ ಕೊಂಡು ಬಂದಿತ್ತು. ಬಂಧ ಮುಕ್ತನಾಗಿ ಹೊರಬಂದ ಈ ಯುವಕ ತನ್ನ ತಂದೆ ಪಾಲಿಗೆ ಯಮನಾಗಿ ಎರಗಿದ.

ಗುಜರಾತಿನಲ್ಲಿ ೮೫ ರ ಪ್ರಾಯದ ವೃದ್ಧ ಅರ್ಚಕರನ್ನು ಬಡಿದು ಕೊಂಡರು ಆಗಂತುಕರು. ಪ್ರಾಯಕ್ಕೆ ಬಂದ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿ ಓಡಿದ್ದಕ್ಕೆ ಹುಡಗಿಯ ತಂದೆ ಮತ್ತು ನೆಂಟರಿಷ್ಟರು ಕ್ರುದ್ಧರಾಗಿ ಹುಡುಗನ ತಾಯಿ ಮತ್ತು ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿದರು. ಎಸಗಿದ ಕ್ರೌರ್ಯ ಸಾಲದೆಂಬಂತೆ ಈ ಅತ್ಯಾಚಾರಕ್ಕೆ ಹುಡುಗಿಯ ಕಡೆಯ ಮಹಿಳೆಯರ ಬೆಂಬಲವೂ ಇತ್ತು. ಕೆಲ ತಿಂಗಳುಗಳ ಹಿಂದೆ ಪರಾಟಾ ಗಾಗಿ ಹೊಡೆದಾಡಿ ಒಬ್ಬ ಸತ್ತ.

ತಮಿಳು ನಾಡಿನ ವಿದ್ಯಾಮಂತ್ರಿಯೊಬ್ಬ ೧೦ ನೆ ತರಗತಿ ಪರೀಕ್ಷೆಗೆ ಕೂತು  ಪರೀಕ್ಷೆ ಬರೆಯಲು ಬೇರೊಬ್ಬ ವ್ಯಕ್ತಿಯನ್ನು ಹೈರ್ ಮಾಡಿದ. ಶೌಚಾಲಯದಲ್ಲಿ ಶೌಚಕ್ಕೆ ಕೂತ ಒಬ್ಬ ಹೊರಬರಲು ಹೆಚ್ಚು ಸಮಯ ತೆಗೆದು ಕೊಂಡ ಎಂದು ತನ್ನ ಸರತಿಗಾಗಿ ಕಾಯುತ್ತಿದ್ದ ಮತೊಬ್ಬ ಅವನ ಮೇಲೆ ಹಲ್ಲೆ ನಡೆಸಿ ಕೊಂದು ಬಿಟ್ಟ.

ಚೆನ್ನೈ ನಗರದಲ್ಲಿ ಶಾಲಾ ಬಾಲಕನೊಬ್ಬ ತನ್ನ ಅದ್ಯಾಪಿಕೆಯ ಮೇಲೆ ಚೂರಿಯಿಂದ ಆಕ್ರಮಿಸಿ ಕೊಲೆ ಮಾಡಿದ. ಅದ್ಯಾಪಿಕೆ ತನ್ನನ್ನು ಟೀಕಿಸಿದಳು ಎನ್ನುವ ಕಾರಣಕ್ಕೆ ನಾನಾಕೆಯನ್ನು ಕೊಂದೆ ಎಂದ ಬಾಲಕ. ಪ್ರೇಮಿಗಳ ದಿನಾಚರಣೆಯಂದು ಇಬ್ಬರು ಬಾಲಕರು ಸೇರಿ ತಮ್ಮ ಗೆಳೆಯನ ಹತ್ಯೆ ಮಾಡಿದರು. ಹುಡುಗಿಯ ವಿಷಯದಲ್ಲಿ ಈ ಕೊಲೆ. ಹದಿಹರೆಯದ ಪ್ರೇಮ ಹುಚ್ಚು ಹೊಳೆ ಎನ್ನುವುದಕ್ಕೆ ಜ್ವಲಂತ ನಿದರ್ಶನ ಈ ಘಟನೆ.

ನೈತಿಕ ಮೌಲ್ಯಗಳಿಗೆ ಅತೀವ ಪ್ರಾಮುಖ್ಯತೆ ಕೊಡುವ ನಮ್ಮ ದೇಶದಲ್ಲಿ ಈ ತೆರನಾದ ಘಟನೆಗಳು ಜರುಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು? ನೈತಿಕ ಮೌಲ್ಯಗಳ ಬಗ್ಗೆ ಅಷ್ಟೇನೂ ಹೆಚ್ಚಾಗಿ ತಲೆ ಕೆಡಿಸಿ ಕೊಳ್ಳದ, ಮಾರ್ಗದರ್ಶನಕ್ಕಾಗಿ ನಮ್ಮ ಕಡೆ ನೋಡುತ್ತಿದ್ದ ಪಾಶ್ಚಾತ್ಯ ವಿಶ್ವಕ್ಕಿಂತ ನಾವು ಕಡೆಯಾಗುತ್ತಿದ್ದೆವೆಯೇ? ಹಿಂಸೆ, ಅತ್ಯಾಚಾರ ಎಸಗುವ ತಪ್ಪಿತಸ್ಥರಿಗೆ ತಡಮಾಡದೆ ತಕ್ಕ ಶಿಕ್ಷೆ ಪ್ರದಾನ ಮಾಡುತ್ತಿದ್ದೇವೆಯೇ? ದಿನ ನಿತ್ಯ ಈ ರೀತಿಯ ಸುದ್ದಿಗಳನ್ನು ಓದುವ, ತಪ್ಪಿತಸ್ಥರು ರಾಜಾರೋಷವಾಗಿ ಜಾಮೀನಿನ ಮೇಲೆ ಓಡಾಡುವುದನ್ನು ನೋಡುವ ನಮ್ಮ ಎಳೆಯರು ಹಿಂಸೆಯ, ದಾರಿ ತುಳಿದರೆ ಭವಿಷ್ಯದಲ್ಲಿ ಭಾರತದ ಕತೆ ಏನಾದೀತು?

  ಒಟ್ಟಿನಲ್ಲಿ ಸಮಾಜ ತುಳಿಯುತ್ತಿರುವ ಹಾದಿ ನಮ್ಮ ಪೂರ್ವಜರ ದಾರಿಗಿಂತ ವಿಭಿನ್ನವಾಗಿದೆ ಎಂದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಮನುಷ್ಯ ಸಂಯಮ, ತಾಳ್ಮೆಯ ಕಲೆಯನ್ನು ರೂಢಿಸಿ ಕೊಳ್ಳಬೇಕಿದೆ. ತಾಳ್ಮೆ, ಸಂಯಮ, ಬದುಕಿನ ಎಂಥಾ ಪರೀಕ್ಷೆಗಳನ್ನೂ ನಿಭಾಯಿಸಬಲ್ಲುದು ಎನ್ನುವುದಕ್ಕೆ ಧರ್ಮ ಗ್ರಂಥದ ಸೂಕ್ತ ಇಲ್ಲಿದೆ…

“ಕಾಲದಾಣೆ. ನಿಸ್ಸಂಶಯವಾಗಿಯೂ ಮನುಷ್ಯ ಹಾದಿ ತಪ್ಪಿದ್ದಾನೆ. ಸತ್ಕರ್ಮಗಳನ್ನು ಮಾಡುವವರೂ, ಸತ್ಯಕ್ಕಾಗಿ ಶ್ರಮಿಸುವವರೂ, ಸಂಯಮವನ್ನು ಪಾಲಿಸುವವರನ್ನು ಹೊರತುಪಡಿಸಿ”.    

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s