ಅ-ಣ್ಣಾ-ರಣ್ಯ ರೋದನ

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.  ಸ್ವಾತಂತ್ರ್ಯಕ್ಕಾಗಿನ ತುಡಿತ, ದಾಸ್ಯದಿಂದ ಬಿಡಿಸಿ ಕೊಂಡು ನಮ್ಮನ್ನು ನಾವೇ ಆಳಿಕೊಳ್ಳುವ ಮಹದಾಸೆ ಈ ಚಳುವಳಿಗೆ ಪ್ರೇರಣೆ. ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ. ಸ್ವಾತಂತ್ರ್ಯ ತರುವ ಹರ್ಷ, ಪುಳಕವನ್ನು ಭಾರತೀಯರು ಅನುಭವಿಸಿದರು.  ಆದರೆ ಅರವತ್ತೈದು ವರ್ಷಗಳ ನಂತರ ನಾವು ನಮಗರಿವಿಲ್ಲದೆಯೇ ಬಾಣಲೆಯಿಂದ ಬೆಂಕಿಗೆ ಜಾರಿದ ವಾಸ್ತವದ ಅರಿವು ನಿಧಾನವಾಗಿ ಆಗ ತೊಡಗಿತು.  

೧೯೪೭ ರಲ್ಲಿ ನಮ್ಮ ಹಾಗೇ ಕಡುಬಡತನ ದಿಂದ ಬಳಲುತ್ತಿದ್ದ ದೇಶ ದಕ್ಷಿಣ ಕೊರಿಯಾ ಇಂದು ಶ್ರೀಮಂತಿಕೆಯಲ್ಲಿ ವಿಶ್ವದ ಅಗ್ರಮಾನ್ಯ ದೇಶಗಳ ಸಾಲಿನಲ್ಲಿ ನಿಂತಿದೆ. ನಮ್ಮ ನೆರೆಯ ಚೀನಾ ಪ್ರಜಾಪ್ರಭುತ್ವ, ಅದೂ, ಇದೂ ಎಂದು ಯಾವುದೇ ಸದ್ದು ಗದ್ದಲ ಮಾಡದೆ ತನ್ನಷ್ಟಕ್ಕೆ ತಾನೇ ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕಿದೆ. ಆದರೆ ನಾವು ಮಾತ್ರ ರಾಜಕಾರಣಿ – ಅಧಿಕಾರಶಾಹಿ ಚಕ್ರವ್ಯೂಹದಲ್ಲಿ ಸಿಕ್ಕು ನರಳುತ್ತಿದ್ದೇವೆ. ಭ್ರಷ್ಟಾಚಾರ ದೇಶವನ್ನು ಅಗ್ನಿ ಪರೀಕ್ಷೆಗೆ ಒಡ್ಡಿದೆ.   

ದಿನೇ ದಿನೇ ಒಂದಲ್ಲ ಒಂದು ಹಗರಣದಿಂದ ಕಂಗೆಟ್ಟ ದೇಶಕ್ಕೆ ಆಶಾ ದೀಪವಾಗಿ ಬಂದರು ಅಣ್ಣಾ ಹಜಾರೆ. ‘ಎನಫ್ ಈಸ್ ಎನಫ್’ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದರು. ಜನರೂ ಆರಂಭದಲ್ಲಿ ಹುಮ್ಮಸ್ಸು ತೋರಿಸಿದರು. ಅಣ್ಣಾ ಜನಪ್ರಿಯತೆ ಪಡೆಯುತ್ತಿದ್ದಂತೆ ಸರಕಾರ ಎಚ್ಚೆತ್ತು ಕೊಳ್ಳಲು ಆರಂಭಿಸಿತು. ಅಣ್ಣಾ ಜೊತೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಸಹ ಸೇರಿಕೊಂಡರು. ಇವರು ತಮ್ಮ ಅಧಿಕಾರಾವಧಿಯಲ್ಲಿ ಎಂಥೆಂಥ ಲಂಚಗುಳಿ ಅಧಿಕಾರಿಗಳನ್ನು ಕಂಡಿರಲಿಕ್ಕಿಲ್ಲ. ಬೇಡಿ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೊಲ್ಲೆತ್ತಿದ್ದು ನಾವೆಂದಾದರೂ ಕೇಳಿದ್ದೇವೆಯೇ? ಎಲ್ಲಿಂದ ಪುಟಿದೆದ್ದಿತು ಲಂಚದ ವಿರುದ್ಧ ಹೋರಾಡೋ ಹಂಬಲ? ಕಿರಣ್ ಬೇಡಿ ಮಧ್ಯೆ ಮತ್ತೊಂದು ವ್ಯಕ್ತಿ, ಅರವಿಂದ  ಕೇಜರಿವಾಲ ಅಂತೆ. ಸ್ವಾತಂತ್ರ್ಯ ಚಳುವಳಿಯಲ್ಲೋ, ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲೋ, ಬೇರೆಲ್ಲೂ ಈ ವ್ಯಕ್ತಿಯ ಹೆಸರು ಕೇಳಿದ್ದಿಲ್ಲ. ಯಾರೀತ? who is this kejriwala? ‘ವೋ, ಕೇಸರಿ ವಾಲ ಹೈ’ ಎಂದು ಮೂದಲಿಸಿತು ಕಾಂಗ್ರೆಸ್.   ಇವೆಲ್ಲಾ ಆದ ನಂತರ ಜನ ರೊಚ್ಚಿಗೆದ್ದಿದ್ದನ್ನು ಗಮನಿಸಿದ ಕೇಂದ್ರದ ಆಳುವ ಪಕ್ಷಕ್ಕೆ ಈಗ ದುರ್ಬೀನಿಟ್ಟು ನೋಡ ತೊಡಗಿತು. ಅಣ್ಣಾ ಜೊತೆ ವೇದಿಕೆಯ ಮೇಲೆ ಯಾರ್ಯಾರಿದ್ದಾರೆ? ಅವರ ಹಿನ್ನೆಲೆ ಏನು? ಯಾವ ಸಂಘಟನೆಗಳ ಒಲವು ಇವರಿಗೆ? ಹಿಡ್ಡನ್ ಅಜೆಂಡಾ ಏನಾದರೂ ಇದೆಯೇ ಈ ಚಳುವಳಿ ಹಿಂದೆ? ಹೀಗೆ ನೂರೆಂಟು ಅನುಮಾನಗಳನ್ನು ಹರಿ ಬಿಟ್ಟು ಜನರನ್ನು ಕನ್ಫ್ಯೂಸ್ ಮಾಡಿ ಬಿಟ್ಟರು.  ಎಡಬಿಡದ ವಾಕ್ಪ್ರಹಾರ, ಆರೋಪ ಪ್ರತ್ಯಾರೋಪಗಳ ಗದ್ದಲದಲ್ಲಿ ಚಳುವಳಿ ತನ್ನ ಮಹತ್ವ ಕಳೆದು ಕೊಂಡಿತು. ಈ ಚಳುವಳಿಯಲ್ಲೂ ನುಸುಳಲೇ ಬೇಕಿತ್ತೆ ರಾಜಕಾರಣ?

ದಿನನಿತ್ಯ ಬದುಕಿನ ಜಂಜಾಟದಲ್ಲಿ ಸಿಕ್ಕಿ ಕೊಂಡ ಸಾಮಾನ್ಯ ಪ್ರಜೆ ಲಂಚದ ವಿರುದ್ಧ ತನ್ನದೇ ಆದ ರೀತಿಯಲ್ಲಿ ಪ್ರತಿಭಟಿಸಿದ. ಲಂಚಕ್ಕಾಗಿನ ಅಧಿಕಾರಿಗಳ  ತೀರದ  ದಾಹಕ್ಕೆ ಬೇರೆ ದಾರಿ, ಕಾಣದೇ ಮೂರು ಗೋಣಿಚೀಲ ತುಂಬಾ ಸುಮಾರು ನಲವತ್ತು ತರಾ ವರಿ, ನಮೂನೆ ನಮೂನೆ (ಥೇಟ್ ಲಂಚಗುಳಿಗಳ ಥರ) ಹಾವುಗಳನ್ನು ಸರಕಾರೀ ಕಛೇರಿಯೊಳಕ್ಕೆ ತಂದು ಗೋಣಿ ಚೀಲ ಬರಿದು ಮಾಡಿ ಬಿಟ್ಟರು ರೈತರಾದ ಹುಕ್ಕುಲ್ ಖಾನ್ ಮತ್ತು ರಾಮ್ ಕುಲ್ ರಾಮ್. ಭಯಭೀತರಾದ ಅಧಿಕಾರಿಗಳು ಓಟ ಕಿತ್ತರು. ಇದು ಹತಾಶ ಪ್ರಜೆಯ ಹತಾಶ ಪ್ರತಿಕ್ರಿಯೆ. ಇದರಿಂದ ಅಧಿಕಾರಿಗಳು ಏನಾದರೂ ಕಲಿತಾರೆಯೇ ಪಾಠವನ್ನು? no chance. ಹಾವುಗಳನ್ನು ಹರಿ ಬಿಟ್ಟ ರೈತರನ್ನೇ ಖಳ ನಾಯಕರನ್ನಾಗಿಸಿ ಬಿಡುತ್ತಾರೆ, ಈ ಹಾವುಗಳಿಗಿಂತ ಅಪಾಯಕಾರಿಯಾದ ಅಧಿಕಾರಿಶಾಹಿ ಹಾವು.        

ಲಂಚದ ಹಾವಳಿ ವಿರುದ್ಧ ನಮ್ಮಲ್ಲಿ ಬಹಳಷ್ಟು ಕಾನೂನುಗಳಿವೆ. ಕಾನೂನಿನ ಪ್ರಕಾರ ಲಂಚ ಕೊಡುವುದು ಲಂಚ ತೆಗೆದುಕೊಳ್ಳುವಷ್ಟೇ ಅಪರಾಧ. ಲಂಚಗುಳಿಗಳ ವಿರುದ್ಧ ಸಮರ ಸಾರಿದ ಅಣ್ಣಾ ಲಂಚ ಕೊಡುವವರ ವಿರುದ್ಧ ಸೊಲ್ಲನ್ನೇಕೆ ಎತ್ತುತ್ತಿಲ್ಲ, ಇದು ಕೆಲವರ ಜಿಜ್ಞಾಸೆ. ಕೊಡುವವನಿಲ್ಲದಿದ್ದರೆ ಭವತಿ ಭಿಕ್ಷಾಂದೇಹಿ ಎನ್ನುವವನ ಅಸ್ತಿತ್ವ ಇರುವುದಿಲ್ಲ, ಅಲ್ಲವೇ?  

ನಾನು ಬ್ಯಾಂಕಿನ ಕೆಲಸದ ನಿಮಿತ್ತ ಹೊರಹೋದಾಗ ಜ್ಯೂಸ್ ಕೊಳ್ಳಲು ಹೋಗುವ ಪುಟ್ಟ ಬಕಾಲಾ ಎಂದು ಕರೆಯಲ್ಪಡುವ ಮಿನಿ ಮಾರ್ಕೆಟ್ ಇದೆ. ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ವ್ಯಕ್ತಿಯೊಬ್ಬ ಕಾಣದೇ ಇದ್ದುದರಿಂದ ವಿಚಾರಿಸಿದೆ. ಆಗ ಅಲ್ಲಿ ಕೆಲಸ ಮಾಡುವ ವ್ಯಕ್ತಿ ಹೇಳಿದ, ಅವರನ್ನು ಜೈಲಿಗೆ ಹಾಕಿದಾರೆ ಎಂದು. ಅರೆ, ಜೈಲಾ, ಅಂಥ ಮನುಷ್ಯ ಅಲ್ಲವಲ್ಲಾ ಈತ ಎಂದು ನನ್ನ ಅನುಮಾನವನ್ನು ವ್ಯಕ್ತ ಪಡಿಸಿದಾಗ ಆತ ಹೇಳಿದ ಪುರಸಭೆಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ೨೦೦ ರಿಯಾಲ್ ( ಸುಮಾರು ೨,೭೦೦ ರೂ. ) ಲಂಚ ಕೊಟ್ಟಿದ್ದು ಕಾರಣ ಎಂದು.

ನಮ್ಮ ಕಂಪೆನಿಯ ಮಾಲೀಕರ ಮಿತ್ರರಿಗೆ ಸಂಭವಿಸಿದ್ದು ಇದು. ಸುಮಾರು ಹತ್ತುವರ್ಷಗಳ ಹಿಂದೆ ಸೌದಿ ಅರೇಬಿಯಾದ ಮತ್ತೊಂದು ನಗರವಾದ ದಮ್ಮಾಮಿನ ಬಂದರಿನಲ್ಲಿ ವಿದೇಶದಿಂದ ಆಮದಾಗಿ ಬಂದ ಸರಕನ್ನು ಸ್ವಲ್ಪ ಬೇಗನೆ ಬಿಡಿಸಿ ಕೊಳ್ಳಲು ಅಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ಲಂಚ ಕೊಟ್ಟರು. ಹತ್ತು ವರ್ಷಗಳ ನಂತರ ಈ ವಿಷಯ ಬೆಳಕಿಗೆ ಬಂದು ಅವರನ್ನು ಕೂಡಲೇ ದೇಶದಿಂದ ಗಡೀ ಪಾರು ಮಾಡಿದರು. ಪಾಕಿಸ್ತಾನ ಮೂಲದ ಈ ವ್ಯಕ್ತಿ ಚಿಕ್ಕ ಆಸಾಮಿ ಅಲ್ಲ. ದಮ್ಮಾಮಿನ ಬಂದರಿನಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. ನಂತರ ತನಂದೆ ಆದ ಕಂಪೆನಿ ಸಹ ಆರಂಭಿಸಿದ್ದರು. ಏಕಾಯೇಕಿ ಅವರನ್ನು  ಗಡೀಪಾರು ಮಾಡಿತು ಸೌದಿ ಸರಕಾರ. ದಮ್ಮಾಮಿನ ಪಕ್ಕದ ಲ್ಲೇ ಇರುವ ಪುಟ್ಟ ಬಹರೇನ್ ದೇಶದಲ್ಲಿ ಕೂತು ತಮ್ಮ ವಹಿವಾಟನ್ನು ನಿಯಂತ್ರಿಸುತ್ತಿದ್ದಾರೆ. ಹೇಗಿದೆ, ನಮ್ಮ ಕಾನೂನು, ಅರೇಬಿಯಾದ ಸರ್ವಾಧಿಕಾರಿ ಕಾನೂನು? ಇಲ್ಲಿ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಸಿಗುವುದರಿಂದ ಜನರಿಗೆ ಫ್ರೀಡಂ, ಡೆಮಾಕ್ರಸಿ ಇವುಗಳ ಚಿಂತೆ ಇಲ್ಲ. ನಮಗೆ ಫ್ರೀಡಂ ಇದ್ದರೂ ಒಂದು ನಿಸ್ಶಹಾಯಕತೆ, ಕಟ್ಟಿ ಹಾಕಲ್ಪಟ್ಟ ಭಾವ.

ಸರಿ, ಸಮಾಜದ ಎಲ್ಲ ವರ್ಗದವರನ್ನೂ ಯಾವುದೆ ಬೇಧ ಭಾವ ಇಲ್ಲದೆ ಬಾಧಿಸುವ ಈ ಲಂಚಕೋರತನ ದ ವಿರುದ್ಧದ ಹೋರಾಟ ಏಕೆ ಬಿರುಸಾಗಿಲ್ಲ? ಜನ ಏಕೆ ದೊಡ್ಡ ರೀತಿಯಲ್ಲಿ ಭಾಗವಹಿಸುತ್ತಿಲ್ಲ? ಎಲ್ಲೋ ಒಂದೆರಡು ನಗರ ಪ್ರದೇಶಗಳಲ್ಲಿ ಒಂದು ರೀತಿಯ boredom ಕಳೆಯಲೆಂಬಂತೆ ಬಂದ ಒಂದಿಷ್ಟು ಯುವಜನರು. ಅಣ್ಣಾ ಮನವಿಗೆ ಜನ ಕಿವಿಗೊಡದಿರಲು ಕಾರಣ ಭ್ರ್ಹಷ್ಟಾಚಾರದ ಬಗ್ಗೆ ಜನರಿಗೆ ಇರುವ ಪರೋಕ್ಷ ಒಲವು ಕಾರಣ ಇರಬಹುದು. ಯಾವುದೇ ಕೆಲಸ ಕೈಗೆತ್ತಿಕೊಳ್ಳಬೇಕಾದರೂ ಆ ಕೆಲಸದಲ್ಲಿ ನಮಗೆ passion ಎನ್ನುವುದು ಇರಬೇಕು. ardent passion. ಅದು ನಮ್ಮಲ್ಲಿ ಕಾಣಲು ಸಿಗಲಿಲ್ಲ ಈ ಚಳುವಳಿಯಲ್ಲಿ. ಅದೇ ಸಮಯ ನಮಗಿಷ್ಟವಾದ, ಊಟ ನಿದ್ದೆಯನ್ನೂ ತ್ಯಜಿಸಿ ಆಸಕ್ತಿ ತೋರಿಸುವ ಕ್ರಿಕೆಟ್ ಆಟದ ಕಡೆ ನಮ್ಮ ಆಸಕ್ತಿ ಸ್ವಲ್ಪ ನೋಡಿ. ಯಾವುದಾದರೂ ಪಂದ್ಯದಲ್ಲಿ ಭಾರತ ಸೋತರೆ ಪ್ರತೀ ತಿಮ್ಮ, ಬೋರ, ವೆಂಕ ಎಕ್ಸ್ಪರ್ಟ್ ಆಗಿ ಬಿಡುತ್ತಾರೆ. ಥತ್, ನಾಯಕ  ಟಾಸ್ ಗೆದ್ದು ಬ್ಯಾಟಿಂಗ್ ತಗೋ ಬೇಕಿತ್ತು, ನಾವು ಚೇಸ್ ಮಾಡಲು ನಾಲಾಯಕ್ಕು ಅಂತ ಅವ್ನಿಗ್ ಗೊತ್ತಿಲ್ವಾ….ಪಿಚ್ ತುಂಬಾ ಸ್ಲೋ ಆಗೋಯ್ತು…. ಇಬ್ಬರು ಸ್ಪಿನ್ನರ್ ಗಳನ್ನು ಆಡಿಸಬೇಕಿತ್ತು ನೋಡು….. ಅಂಪೈರ್ ಕೈ ಕೊಟ್ಟ……..ಎಲ್ಲಿಂದ ಸಿಕ್ಕುದ್ನೋ ಈ ಕೋಚು?……. D/L ಮೆಥಡ್ ಸರಿಯಿಲ್ಲ, ನಮಗೆ ಅನುಕೂಲ ಆಗ್ಲಿಲ್ಲ ಡಕ್ವರ್ಥ್ ಲೀವೈಸ್ (D/L)……. ವಾವ್, ನೋಡಿದಿರಾ ಜ್ಞಾನವನ್ನು? ಇವರ ಅನಾಲಿಸಿಸ್ ಗಳಿಗೆ ಜೆಫ್ ಬಾಯ್ಕಾಟ್, ಹರ್ಷ ಭೋಗ್ಲೆ ಯಂಥವರು ಹಿಮ್ಮೆಟ್ಟುತ್ತಾರೆ. ಆ ಪಾಟಿ ಜ್ಞಾನ. ಜೀವಮಾನದಲ್ಲಿ ಬ್ಯಾಟ್ ಹಿಡಿದಿರದ, ಪಿಚ್ ಮೇಲೆ ಹೆಜ್ಜೆಯೂರಿಲ್ಲದವರ ಅನಾಲಿಸಿಸ್ಸು ಇದು. ಅದೇ ಸಮಯ ಅಣ್ಣಾ ಹಜಾರೆ ಹೆಸರು ಕೇಳಿದ ಕೂಡಲೇ ಯಾರಪ್ಪಾ ಈ ತಾತ ಎಂದು ಗೂಗ್ಲಿಸಿ ನೋಡುತ್ತಾರೆ. ಕ್ರಿಕೆಟ್ ನ ಗೂಗ್ಲೀ ಬಗ್ಗೆ ಸರಾಗವಾಗಿ ಮಾತನಾಡುವವರು ಅಣ್ಣಾ ಬಗ್ಗೆ ತಿಳಿಯಲು ಗೂಗ್ಲ್ ಮೊರೆ ಹೋಗುತ್ತಾರೆ. ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ. ದೇಶವನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟಾಚಾರದ ಬಗ್ಗೆ ಕ್ರಿಕೆಟ್ ಕಡೆ ತೋರಿಸುವ ಕಿಂಚಿತ್ ಆಸಕ್ತಿಯನ್ನಾದರೂ ಜನ ತೋರಿಸಿದ್ದಿದ್ದರೆ ಬೀದಿಗಳು ಪ್ರತಿಭಟಿಸುವ ಜನರಿಂದ ತುಂಬಿ ಹೋಗುತ್ತಿದ್ದವು.  ಒಂದು ದಿನದ ಕಡ್ಡಾಯ ಓವರ್ಗಳ ಪಂದ್ಯಕ್ಕಾಗಿ ಮೈದಾನ ತುಂಬುವಂತೆ.

ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು  ಮನವಿ ಮಾಡಿಕೊಂಡ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಡ ಎಂದು. ಬಹುಶಃ ಆಳಿಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಇನ್ನೂ ಬಂದಿಲ್ಲ ಎಂದು ಈ ಸಿಗಾರ್ ಪ್ರೇಮಿ ಮುತ್ಸದ್ದಿಗೆ ತೋರಿರಬೇಕು. ಹಳೇ ತಲೆಮಾರಿನ, ವಯಸ್ಸಾದ ಯಾರನ್ನೇ ಹೀಗೇ ಮಾತಿಗೆ ಕೇಳಿ, ಅಯ್ಯೋ ಬ್ರಿಟಿಷರ ಕಾರುಬಾರೆ ಚೆನ್ನಿತ್ತು ಎನ್ನದಿರಲಾರರು. ಈ ಮಾತನ್ನು ಹತಾಶ ಜನರ ಬಾಯಲ್ಲಿ ಹಾಕಿದವರು, ನಮ್ಮ ಖಾದಿಧಾರಿ ರಾಜಕಾರಣಿಗಳು. ಆದರೆ ಪ್ರಜಾ ಪ್ರಭುತ್ವಕ್ಕೆ ಅವರೇ ಜೀವಾಳ. ಶಪಿಸುತ್ತಾ, ರಮಿಸುತ್ತಾ ಅವರೊಂದಿಗೇ ಕಳೆಯಬೇಕು ಕಾಲವನ್ನು ನಾವು ಮತ್ತು ನಮ್ಮ ಪ್ರೀತಿಯ ದೇಶ.

Advertisements

One thought on “ಅ-ಣ್ಣಾ-ರಣ್ಯ ರೋದನ

 1. Narendra ಹೇಳುತ್ತಾರೆ:

  > ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ೧೯೪೨ ರಲ್ಲಿ ಆರಂಭವಾಯಿತು.
  > ಆರು ವರ್ಷಗಳ ಹೋರಾಟದ ನಂತರ ಬ್ರಿಟಿಷರು ನಮ್ಮನ್ನು ದಾಸ್ಯ ಮುಕ್ತ ಗೊಳಿಸಿದರು ೧೯೪೭ ರಲ್ಲಿ.
  ಈ ಚಳುವಳಿ ೧ ವರ್ಷವೂ ನಡೆಯಲಿಲ್ಲ. ಬ್ರಿಟಿಷರು ಭಾರತ ಬಿಟ್ಟು ಹೊರ ನಡೆದಾಗ “ಅಜಾದ್ ಹಿಂದ್ ಫ಼ೌಜ್”ನ ಸೈನಿಕರ ವಿಚಾರಣೆಯನ್ನು ವಿರೋಧಿಸಿ
  ಧಂಗೆಗಳೆದ್ದಿದ್ದವು. ಈ ಧಂಗೆಗಳು ಮತ್ತು ದ್ವಿತೀಯ ಮಹಾಯುದ್ಧದಿಂದಾದ ಆರ್ಥಿಕ ದಿವಾಳಿತನದಿಂದಾಗಿ ಬ್ರಿಟಿಷರು ಭಾರತ ಬಿಡಬೇಕಾಯಿತು.

  > ಎರಡನೇ ವಿಶ್ವ ಮಹಾಯುದ್ಧದ ಹೀರೋ ವಿನ್ಸ್ಟನ್ ಚರ್ಚಿಲ್ ಅಂದಿನ ಬ್ರಿಟಿಶ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಯನ್ನು ಮನವಿ ಮಾಡಿಕೊಂಡ
  “ನೀವು ಭಾರತದಿಂದ ಹೊರಡಲು ಕಾಂಗ್ರೆಸ್ಸಿನ ಚಳುವಳಿಗಳು ಕಾರಣವೇ” ಎಂದು ಪ್ರಶ್ನಿಸಿದಾಗ, ಕ್ಲೆಮೆಂಟ್ ಆಟ್ಲೀ “ಇಲ್ಲ” ಎಂದು ಉತ್ತರಿಸಿದ್ದು ದಾಖಲಾಗಿದೆ.
  “ಭಾರತಕ್ಕೆ ಸ್ವಾತಂತ್ರ್ಯ ಕೊಡದೆ ವಿಧಿಯಿಲ್ಲ. ನೌಕಾದಳ ಮತ್ತು ಅನೇಕ ಸೈನಿಕ ದಳಗಳು INA trial ವಿರೋಧಿಸಿ ಧಂಗೆ ಎದ್ದಿವೆ. ನಾವು ಸ್ವಾತಂತ್ರ್ಯ ಕೊಡದಿದ್ದರೆ, ಅವರೇ ಕಸಿದುಕೊಳ್ಳುತ್ತಾರೆ” ಎಂದು ಕ್ಲೆಮೆಂಟ್ ಆಟ್ಲೀ ಅವರು ವಿರೋಧ ಪಕ್ಷದ ನಾಯಕ ವಿನ್ಸ್ಟನ್ ಚರ್ಚಿಲ್ ಅವರಿಗೆ ಬ್ರಿಟನ್ನಿನ ಪಾರ್ಲಿಮೆಂಟಿನಲ್ಲಿ ಉತ್ತರಿಸಿದ್ದೂ ದಾಖಲಾಗಿದೆ.

  > ಈಗ ತಿಳಿಯಾಯಿತೆ ಮರ್ಮ? ಲಂಚದ ವಿರುದ್ಧದ ಜನರ ಆಸಕ್ತಿ ನಿರಾಸಕ್ತಿ, ಅನಾದಾರದ ಮರ್ಮ? ಇದೇ passion ತರುವ ಫಲಿತಾಂಶ.
  ನಿಜಕ್ಕೂ ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ದೇಶದ ಜನಕ್ಕೆ ಎಲ್ಲಿಯವರೆಗೆ ಲಂಚ ಬೇಕೆಂದೆನಿಸುವುದಿಲ್ಲವೋ, ಎಲ್ಲಿಯವರೆಗೆ ಅದನ್ನು ಹೊರದಬ್ಬಲು ಅವರು ಮನೆಬಿಟ್ಟು ಹೊರಬರುವುದಿಲ್ಲವೇ, ಅಲ್ಲಿಯವರೆಗೆ ಭ್ರಷ್ಟಾಚಾರ ಇದ್ದೇ ಇರುತ್ತದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಬದಲಾಗಬೇಕು – ಪ್ರತಿಯೊಬ್ಬನಿಗೂ, ಇದು ನನ್ನ ದೇಶ, ಇದನ್ನು ಚೆನ್ನಾಗಿಟ್ಟುಕೊಳ್ಳಬೇಕು, ಇದಕ್ಕಾಗಿ ಏನನ್ನಾದರೂ ಮಾಡಬೇಕು, ಅದು ನನ್ನ ಕರ್ತವ್ಯ ಎನ್ನಿಸಬೇಕು. ಅದಾಗದ ಹೊರತು, ದೇಶ ಮುಂದುವರೆಯುವುದು ಸಾಧ್ಯವಿಲ್ಲ; ಭ್ರಷ್ಟಾಚಾರವೇ ಮುಂತಾದ ಅನಿಷ್ಠಗಳು ತೊಲಗುವುದಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s