ಸಚಿನ್ ಮತ್ತೊಬ್ಬ ಬ್ಯಾಟ್ಸ್ಮನ್, ಅಷ್ಟೇಯ

ಸಚಿನ್ ಮತ್ತೊಬ್ಬ ಬ್ಯಾಟ್ಸ್ ಮ್ಯಾನ್ ಅಷ್ಟೇ, ಎಂದ ಆಸ್ಟ್ರೇಲಿಯದ ಪೋರ. sachin is just another batsman. ಸತ್ಯವನ್ನೇ ನುಡಿದ ಆಸೀ ಬೌಲರ್ ‘ಪೀಟರ್ ಸಿಡ್ಲ್’. ಸಿಡಿಲಿನಂಥ ಮಾತು ಸಿಡ್ಲ್ ನಿಂದ. “ಸಚಿನ್ ಒಬ್ಬ ದೊಡ್ಡ ಮಿಕ. ಆತನನ್ನು ಔಟ್ ಮಾಡೋದೆಂದರೆ ಖುಷಿಯೇ. ಆದರೆ ನನಗೆ ಆತ ಮತ್ತೊಬ್ಬ ಬ್ಯಾಟ್ಸ್ಮನ್” ಎಂದು ಹೇಳಿದ ಸಿಡ್ಲ್ ಮಾತುಗಳಲ್ಲಿ ಸಚಿನ್ ಬಗ್ಗೆ ಅಭಿಮಾನವೂ, ಅದರೊಂದಿಗೇ ಸ್ಪರ್ದಾತ್ಮಕ ಕ್ರೀಡೆಯ ವಾಸ್ತವದ ಬಗೆಗಿನ ಸ್ಪಷ್ಟ ಕಲ್ಪನೆಯೂ ಕಾಣಬಹುದಿತ್ತು. ನಿಸ್ಸಂಶಯವಾಗಿಯೂ ಸಚಿನ್ ಒಬ್ಬ ಮಾಂತ್ರಿಕ, ಚಮತ್ಕಾರಿಕ ಬ್ಯಾಟ್ಸ್ಮನ್. ಆತನ ಹಲಗೆಯಿಂದ ಬಂದ ಓಟಗಳು ಶತ್ರು ಎನ್ನುವ ಭೂತದ ಬೆನ್ನು ಹತ್ತುತ್ತಿತ್ತು. ಬೌಂಡರಿಗಳ, ಸಿಕ್ಸರಗಳ ಸುರಿಮಳೆ. ಎಲ್ಲವೂ ಸರಿ. ಆತ ಅಪ್ಪಟ ಚಿನ್ನ, ಸ್ವಭಾವದಲ್ಲಿ. ಕೀರುತಿ, ಕಾಂಚಾಣ ತನ್ನ ಕಾಲ ಬುಡದಲ್ಲಿ ಬಿದ್ದಿದ್ದರೂ ಅಹಂ ಎನ್ನುವ ನೆರಳೂ ಸಹ ಅವನ ಬಳಿ ಸುಳಿಯಲಿಲ್ಲ. ಸಾಮಾನ್ಯವಾಗಿ ಜನರಿಗೆ ಯಶಸ್ಸು ಬಹು ಬೇಗ ತಲೆಗೆ ಏರಿ ಬಿಡುತ್ತದೆ. ಆದರೆ ಸಚಿನ್ ವಿಷಯದಲ್ಲಿ ಹಾಗಾಗಲಿಲ್ಲ. ತಾನು ಸೀದಾ ಸಾದಾ ಆಗಿರಲು ಬಯಸಿದ, ಹಾಗೆಯೇ ಪ್ರಪಂಚಕ್ಕೆ ತೋರಿಸಿದ ಕೂಡಾ. ಆದರೆ ಆದದ್ದೇನೆಂದರೆ ಯಶಸ್ಸು ಅವನ ತಲೆಗೆ ಹತ್ತದಿದ್ದರೂ ನಮ್ಮ ತಲೆಗಂತೂ ಖಂಡಿತಾ ಏರಿತು, ಯಶಸ್ಸಿನ ಮದ. ಸಚಿನ್ ನಂಥವನು ಹುಟ್ಟೇ ಇಲ್ಲ ಎಂದು ಒಬ್ಬ ಹೇಳಿದರೆ, ಮತ್ತೊಬ್ಬ ಹೇಳಿದ ಸಚಿನ್ ನಂಥವರು ಹುಟ್ಟೋದಿಲ್ಲ ಎಂದು. ಸಚಿನ್ ನನ್ನು ಸೃಷ್ಟಿಸಿದ ದೇವರಿಗೆ ನೇರವಾದ ಸವಾಲು. ಸಚಿನ್ ಡೋನಾಲ್ಡ್ ಬ್ರಾಡ್ಮನ್ ಎಂದು ಒಬ್ಬ ಉಲಿದರೆ, ಮತ್ತೊಬ್ಬನಿಗೆ ಬ್ರಾಡ್ಮನ್ ಗಿಂತ ಆತ ಮಿಗಿಲು. ಕೊನೆಗೆ ಒಬ್ಬ ಹೇಳಿಯೇ ಬಿಟ್ಟ. ಹೇಳಬಾರದ್ದನ್ನ. ಏನಂತ……..? ಸಚಿನ್ ಈಸ್ ಗಾಡ್………ಒಹ್ ಮೈ ಗ್ಗಾಡ್ !  ವಿವೇಚನೆಯ ಶವಪೆಟ್ಟಿಗೆಗೆ ಕಟ್ಟ ಕಡೆಯ ಮೊಳೆ. ಜನರನ್ನು ಅಟ್ಟಕ್ಕೆ ಏರಿಸುವುದು ಅಥವಾ ಚಟ್ಟಕ್ಕೆ ಏರಿಸುವುದು ಹಳೆಯ ಚಾಳಿ. ಪ್ರದರ್ಶನ ಉತ್ತಮ, ಅಮೊಘವಾದರೆ ಹೊಗಳಿಕೆ ಕಿವಿ ಗಡಚ್ಚಿಕ್ಕುವ ಹಾಗೆ. ಯಾವುದಾದರೂ ಕಾರಣಕ್ಕೆ ಸ್ವಲ್ಪ ಎಡವಟ್ಟಾಯಿತೋ ಅಂತ್ಯ ಸಂಸ್ಕಾರ ಶುರು.

ಸಚಿನ್ ಶತಕದಿಂದ ಭಾರತಕ್ಕೆ ಆದ ಲಾಭ ನಷ್ಟಗಳನ್ನು ನೋಡಿದರೆ ಬ್ಯಾಲನ್ಸ್ ಡೆಬಿಟ್ ಆಗಿ ಕಾಣುತ್ತದೆ. hasty eighties, nervous nineties ದಾಟಿಕೊಂಡು ಮುಟ್ಟುವ ಯಾವುದೇ ಶತಕ ತಂಡದ ನೆರವಿಗೆ ಬರುವುದು ಸ್ವಲ್ಪ ಕಡಿಮೆಯೇ ಎನ್ನಬಹುದು. ಸ್ಕೋರ್ ಬೋರ್ಡ್ ಕಡೆ ಕಣ್ಣು ನೆಡದೆ ಕೈ ಹೊಸಕಿಕೊಳ್ಳುತ್ತಾ ಕಾತುರದಿಂದ ವಿಜಯದ ನಿರೀಕ್ಷೆ ಅಥವಾ ಸೋಲಿನ ದವಡೆಯಿಂದ ಪಾರಾಗಲು ಪ್ರಾರ್ಥಿಸುವವರನ್ನು ಗಮನದಲ್ಲಿಟ್ಟು ಕೊಂಡು ಆಡುವ ಆಟವೇ ಬೇರೆ. ಸಚಿನ್ ಎಲ್ಲಾ ಸಮಯವೂ ಸ್ವಾರ್ಥದಿಂದ ಆಡಿದ ಎಂದಲ್ಲ ನನ್ನ ಅಭಿಪ್ರಾಯ. ಸೋಲು ಗೆಲುವಿನ ದಾಖಲೆಗಳನ್ನು ನೋಡಿದಾಗ ಕಂಪೆನಿಗೆ ನಷ್ಟ, ನೌಕರನಿಗೆ ಲಾಭದ ರೀತಿಯ ಲೆಕ್ಕಾಚಾರ ಗೋಚರಿಸುತ್ತದೆ.

ಸಚಿನ್ ನ ನೂರನೇ ಶತಕಕ್ಕಾಗಿ ದೇಶ ಚಾತಕ ಪಕ್ಷಿ. ಆಸ್ಟ್ರೇಲಿಯಾದ ವಿರುದ್ಧದ ಮೊದಲ ಟೆಸ್ಟಿನಲ್ಲಿ ಭಾರತದ ಸೋಲು. ಬೆನ್ನಟ್ಟಲು ಇದ್ದಿದ್ದು ಮುನ್ನೂರಕ್ಕೂ ಕಡಿಮೆ ರನ್ನುಗಳು. ಬ್ಯಾಟಿಂಗ್ ಆಳ ನೋಡಿದರೆ ಅಟ್ಲಾಂಟಿಕ್ ಸಾಗರದ ಥರ. ಅಗಾಧ, ಆಳ. ಈ ಅಗಾಧ, ಆಳ, ಕಾಗದದ ಮೇಲೆ ಮಾತ್ರ ಎಂದು ನಮಗೆ ಅರಿವಾಗೋದು ತಂಡ ಮೈದಾನ ಪ್ರವೇಶಿಸಿದಾಗಲೇ. ಪೇಪರ್ ಟೈಗರ್ ಗಳು ಪೇಪರ್ ಮೇಲೆ ಆಡಬೇಕು ಕ್ರಿಕೆಟನ್ನ. ‘ಸುಡೋಕೋ’ ರೀತಿ. ಅದು ಬಿಟ್ಟು ನಮ್ಮಲ್ಲಿ ದಾಖಲೆಗಳ ಮೇಲೆ ದಾಖಲೆ ಇದೆ ಎಂದು ಮೈದಾನಕ್ಕೆ ಇಳಿದರೆ, ಅದೂ ಆಸ್ಟ್ರೇಲಿಯಾದ ರೀತಿಯ ಅತ್ಯಂತ ವೃತ್ತಿಪರ ತಂಡದ ಎದುರು ನಿಂತರೆ, ಸೋತು ಸುಣ್ಣವಾಗದೆ ಬೇರೆ ದಾರಿಯಿಲ್ಲ. ಆಸೀ ಗಳು ಮೈದಾನದ ಮೇಲೆ hungry wolves. ಹರಿದು ತಿನ್ನೋ ತೋಳಗಳು. ಒಂದಿಂಚು ಸ್ಥಳಾವಕಾಶ ನೀಡಿದಿರೋ, ಮೈಲುಗಟ್ಟಲೆ ಎಳೆದು ಬಿಡುತ್ತಾರೆ. ತಂಡ ಬಿಡಿಯಾಗಿ ಆಡೋದಿಲ್ಲ. ಹನ್ನೊಂದೂ ಜನ “ಏಕಲವ್ಯ” ರಾಗಿ ಆಡುತ್ತಾರೆ, ಛಲದಿಂದ. ಆದರೆ ನಮ್ಮ ಗಮನ? ಸಚಿನ್ ಈ ಸಲ ಹೊಡೀಬಹುದಾ ಸೆಂಚುರಿ? ಇಲ್ಲಿಗೆ ಸೀಮಿತ ನಮ್ಮ ಆಶಯ, ಆಕಾಂಕ್ಷೆ. ದೇಶದ ಈ ಒತ್ತಡ ಪಾಪ ಗಿಡ್ಡ ಸಚಿನ್ ಮೇಲೆ ಅಗಾಧವಾಯಿತು. ನೂರನೇ ಶತಕ ಮರೀಚಿಕೆಯಾಗಿಯೇ ಕಾಡಲು ತೊಡಗಿತು. ಒಂದು ಉಪಾಯ ನಮ್ಮ BCCI ಗೆ ಹೊಳೆಯಲಿಲ್ಲ. ಸಚಿನ್ ನಿಂದ ಆ elusive century ಸಾಕಾರಗೊಳಿಸಲೇ ಬೇಕು ಎಂದಾಗಿದ್ದರೆ, ತಂಡವನ್ನು ಆಸ್ಟ್ರೇಲಿಯಾಗೆ ಕಳಿಸೋ ಬದಲು ಕೆನಡಾ ದೇಶಕ್ಕೋ ಅಥವಾ ಮತ್ಯಾವುದಾದರೂ mediocre ತಂಡ ಇರೋ ದೇಶಕ್ಕೋ (ಪಾಕಿಸ್ತಾನ?) ಕಳಿಸಿ ಅಲ್ಲಿ ತಮ್ಮ ಅಜೆಂಡಾ ಕಾರ್ಯಗತವಾದ ಕೂಡಲೇ ಟಿಕೆಟ್ ಬುಕ್ ಮಾಡಿಸಬಹುದಿತ್ತು ಕಾಂಗರೂ ನಾಡಿಗೆ. ಹಾಗೆ ಆಗಲಿಲ್ಲ, ಸಚಿನ ಶತಕ ಬಾರಿಸಲಿಲ್ಲ.

ಎರಡನೇ ಟೆಸ್ಟ್ ಶೀಘ್ರದಲ್ಲೇ ಶುರುವಾಗುತ್ತದೆ. ಮತ್ತೊಮೆ ಸೊಪ್ಪು ಮಾರುವ ಮಲ್ಲಮ್ಮ ನಿಂದ ಹಿಡಿದು ದೊಡ್ಡ ದೊಡ್ಡ ಕಂಪೆನಿಗಳ CEO ಗಳ ತನಕ, ಎಲ್ಲರ ಗಮನ ಮತ್ತದೇ ಗುರಿಯ ಕಡೆ. ಮರೀಚಿಕೆಗೆ ಈ ಬಾರಿ ಬಾಣ ನಾಟುತ್ತದೋ, ಇಲ್ಲಾ ಆ ಬಾಣ ನಿಟ್ಟುಸಿರಾಗಿ ನಮ್ಮ ಕಡೆಯೇ ಮರಳುತ್ತದೋ, ಕಾದು ನೋಡೋಣ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s