ಎರಡು ಘಟನೆಗಳು, ಎರಡು ಸಾವು

ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ ಮಕ್ಕಳಿಗೆಂದು ಗೋಬಿ ಮಂಚೂರಿ ಕಟ್ಟಿಸಿಕೊಂಡು ಮನೆಗೆ ಹೋಗುತ್ತಾನೆ. ಅದನ್ನು ತಿಂದ ಮಕ್ಕಳು ತುಂಬಾ ಖಾರ ಆಯಿತು ಎಂದು ಅಪ್ಪನಲ್ಲಿ ದೂರುತ್ತಾರೆ. ಕೋಪಗೊಂಡ ಅಪ್ಪ ಗೋಬಿ ಮಾರಿದ ಹೋಟೆಲ್ ಗೆ ಬಂದು ಇದರ ಬಗ್ಗೆ ದೂರುತ್ತಾನೆ. ರಾತ್ರಿಯಾದ್ದರಿಂದ ಹೋಟೆಲ್ ಮುಚ್ಚುತ್ತಿದ ಯಜಮಾನ ದೂರಿದ ಗಿರಾಕಿಯ ಮೇಲೆ ಕೈ ಮಾಡುತ್ತಾನೆ, ಇನ್ನಷ್ಟು ತದುಕಲು ಕೆಲಸಗಾರರನ್ನೂ ಕರೆಸುತ್ತಾನೆ. ಎಲ್ಲರ ಬಡಿತ ತಿಂದ ಗಿರಾಕಿ ಕೊನೆಯುಸಿರೆಳೆಯುತ್ತಾನೆ. ಎಂಥ ದುರಂತ ನೋಡಿ. ಮಕ್ಕಳು ಆಸೆ ಪಡುತ್ತಾರೆ ಎಂದೋ ಅಥವಾ ಬೆಳಿಗ್ಗೆ ಮನೆಯಿಂದ ಹೊರಡುವಾಗ ಅಪ್ಪಾ, ಬರುವಾಗ ಗೋಬಿ ತಗೊಂಡು ಬಾ ಎಂದು ಹೇಳಿದ ಪುಟಾಣಿಗಳ ಆಸೆ ಪೂರೈಸಲು ಕಟ್ಟಿಸಿಕೊಂಡು ತಂದ ತಿಂಡಿ ಅವನ ಅವಸಾನಕ್ಕೆ ಕಾರಣ ವಾಗಬಹುದು ಎಂದು ಅವನಿಗೆ ಖಂಡಿತ ಹೊಳೆದಿರಲಿಕ್ಕಿಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆ ನಿಜಕ್ಕೂ ಗಾಭರಿ ಹುಟ್ಟಿಸುತ್ತದೆ. ಇಷ್ಟು ಕ್ಷುಲ್ಲಕ, ಸಾಧಾರಣ ಸಮಸ್ಯೆಯೊಂದು ಒಬ್ಬನ ಸಾವಿನಲ್ಲಿ ಸಮಾಪ್ತಿಯಾದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ನಮ್ಮ ಸಹನೆಯ ಮಿತಿ ಈ ರೀತಿ ತಳ ಮುಟ್ಟಲು ಕಾರಣವೇನು? ದಿನ ಬೆಳಗಾದರೆ ಈ ತೆರನಾದ ಮನಕಲಕುವ, ನಾಗರೀಕ ಸಮಾಜ ತಲೆ ತಗ್ಗಿಸುವ ಕೆಲಸಗಳು ದೇಶದ ಎಲ್ಲೆಡೆ ವರದಿ ಆಗುತ್ತಿದ್ದರೂ ನಮಗೆ ಅದು ಒಂದು ಪುಟ್ಟ distraction ಮಾತ್ರವಾಗಿ ಗೋಚರಿಸುವುದು ಖೇದಕರ.   

ಮೇಲಿನ ದುರಂತ ದಕ್ಷಿಣ ಭಾರತದ್ದಾದರೆ ಈಗ ಬನ್ನಿ ಉತ್ತರ ಭಾರತಕ್ಕೆ.

ತಾನು ಪ್ರೀತಿಸಿದವನನ್ನು ತನ್ನ ತಂದೆ ಇಷ್ಟ ಪಡಲಿಲ್ಲ ಎಂದು ಪ್ರಿಯಕರ ಮತ್ತು ಅವನ ಮಿತ್ರನನ್ನು ತನ್ನ ತಂದೆಯನ್ನು ಕೊಲ್ಲಲು ಮಗಳು ನಿಯಮಿಸುತ್ತಾಳೆ. ಅವರಿಬ್ಬರೂ ಸೇರಿ ಹುಡುಗಿಯ ತಂದೆಗೆ ಗತಿ ಕಾಣಿಸುತ್ತಾರೆ. ನಂಬಲು ಸಾಧ್ಯವೇ ಈ ಘಟನೆಯನ್ನು? ಇಂಥ ಪೈಶಾಚಿಕ ಪ್ರವೃತ್ತಿಗೆ ಕಾರಣವಾದರೂ ಏನಿರಬಹುದು? ಅಸಹನೆಯ ಕಿಡಿ, ಧ್ವೇಷದ ಮನೋಭಾವ ಇವಕ್ಕೆ ಕಾರಣ ಎಂದು ದೂರುವಂತಿಲ್ಲ. ಏಕೆಂದರೆ ಇವು ಆ ಕ್ಷಣದಲ್ಲಿ ಹುಟ್ಟಿಕೊಂಡ ವಿಕೃತ ಕೃತ್ಯ. ವ್ಯವಸ್ಥಿತವಾಗಿ ನಡೆಯುವ ಹಲ್ಲೆಗಳಿಗೆ ಪರಿಹಾರ ಹಾಗೂ ಹೀಗೂ ಕಂಡು ಕೊಳ್ಳಬಹುದು. ಜನರನ್ನು ಜಾಗೃತಿ ಗೊಳಿಸಬಹುದು. ಧ್ವೇಷ ದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ ಕೊಡಬಹುದು. ಅಂಥ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಕ್ರಮಗಳನ್ನು ಕೈಗೊಳ್ಳ ಬಹುದು. ಆದರೆ ಈ ರೀತಿ ಥಟ್ಟನೆ ಉದ್ಭವವಾಗುವ ಹಿಂಸೆಗೆ ಏನು ಪರಿಹಾರ?

ಮೇಲಿನ ಎರಡು ಪೈಶಾಚಿಕ ಘಟನೆಗಳು ಎಲ್ಲೋ ಒಂದೋ ಎರಡೋ ಆಗಿದ್ದಿದ್ದರೆ ನಿಟ್ಟುಸಿರು ಬಿಟ್ಟು ಮುಂದೆ ಸಾಗಬಹುದಿತ್ತು. ದಿನ ಬೆಳಗಾದರೆ ನಮಗೆ ಎದುರಾಗುವುದು ಇಂಥ ಅವಿವೇಕತನದಿಂದ ಕೂಡಿದ ಹಿಂಸೆಗಳೇ. ಚಿಲ್ಲರೆಗಾಗಿ ಕೊಲೆ, ಚೌಕಾಶಿ ಮಾಡಿದ್ದಕ್ಕೆ ಕೊಲೆ, ಇಟ್ಟುಕೊಂಡವಳಿಗಾಗಿ ಕೊಲೆ, ತನ್ನ ಸೋದರಿಯನ್ನು ಪ್ರೀತಿಸಿದ್ದಕ್ಕಾಗಿ ಕೊಲೆ…………ಅಸಹನೆಯ ಕೂಪಕ್ಕೆ ದಬ್ಬಲ್ಪಡುತ್ತಿರುವ ನಮ್ಮ ಸಮಾಜವನ್ನು, ಸಂಸ್ಕಾರವನ್ನು ಪಾರು ಮಾಡಲು ನಾವೇನು ಮಾಡಬಹುದು? ನಾಗರೀಕ, ಪ್ರಜ್ಞಾವಂತ ಸಮಾಜ ಕೇಳಿಕೊಳ್ಳಬೇಕಾದ ಪ್ರಶ್ನೆ.

Advertisements

2 thoughts on “ಎರಡು ಘಟನೆಗಳು, ಎರಡು ಸಾವು

 1. Kumar ಹೇಳುತ್ತಾರೆ:

  ನೀವು ತಿಳಿಸಿದ ಗೋಬಿ ಮಂಚೂರಿಯನ್ ಘಟನೆಯನ್ನು ನೆನ್ನೆ ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ್ದೆ.
  ಮತ್ತೆ ನೀವು ಬರೆದ ಬ್ಲಾಗ್ ಅಂಕಣದಲ್ಲಿ ಓದಿದೆ.
  ಇಂದು ಬೆಳಿಗೆ ಆಫೀಸಿಗೆ ಬರುವಾಗ ದಾರಿಯಲ್ಲಿ, “ಮೋಹನ್ ಕುಮಾರ್” ಎಂಬ ಹೆಸರಿನೊಡನೆ ಶ್ರದ್ಧಾಂಜಲಿ ಸಾರುವ
  ಆತನ ಚಿತ್ರವನ್ನು ರಸ್ತೆ ಬದಿಯ ದೀಪದ ಕಂಬಕ್ಕೆ ಹಾಕಿದ್ದನ್ನು ನೋಡಿದೆ. “ಮರಣ ೨೦.೦೭.೨೦೧೧” ಎಂದು ಇದ್ದದ್ದರಿಂದ ಆ ಘಟನೆಯ ಮೋಹನ ಕುಮಾರ್ ಅವನೇ ಇರಬೇಕೆಂದುಕೊಂಡೆ.
  ನಾನು ನಿಮ್ಮ ಬ್ಲಾಗಿನಲ್ಲಿ ಬಂದ ಈ ಘಟನೆಯ ವಿವರ ಹೇಳಿದಾಗ, ನನ್ನ ಹೆಂಡತಿ ತಾನು ಮತ್ತೊಂದು ಮೂಲದಿಂದ ಓದಿಕೊಂಡಿದ್ದ ವಿಷಯ ತಿಳಿಸಿದಳು.
  ಅದರ ಪ್ರಕಾರ, ಆ ಮೋಹನ ಕುಮಾರ್ ಅದೇ ಗೋಬಿ ಮಂಚೂರಿಯನ್ ಅಂಗಡಿಯಲ್ಲಿ ಆತ ಕೆಲಸಕ್ಕಿದ್ದ.
  ನಿತ್ಯವೂ ಕೆಲಸವಾದ ನಂತರ, ಅಲ್ಲೇ ಸ್ವಲ್ಪ ತಿಂದು, ಮನೆಗೂ ಸ್ವಲ್ಪ ತರುತ್ತಿದ್ದ.
  ಆ ದಿನ ತೆಗೆದುಕೊಂಡು ಹೋದದ್ದು ಮಕ್ಕಳಿಗೆ ಖಾರವಾಯಿತೆಂದು ಅಂಗಡಿಗೆ ವಾಪಸ್ ಹೋಗಿ ಗಲಾಟೆ ಮಾಡಿದ.
  ಆದರೆ, ಮನೆಗೆ ಹೋಗುವಾಗಲೇ ಆತ ಕುಡಿದಿದ್ದ – ಬುದ್ಧಿ ಸ್ಥಿಮಿತದಲ್ಲಿರಲಿಲ್ಲ!
  ಆ ಅಂಗಡಿಯ ಮಾಲೀಕನು ಕುಡಿದಿದ್ದಿರಬೇಕು. ಅಲ್ಲಿಯೇ ಇದ್ದ ಮತ್ತೊಬ್ಬ ಕೆಲಸದವನೂ ಆತನೊಡನೆ ಸೇರಿಕೊಂಡು ಮೋಹನ ಕುಮಾರ್‌ಗೆ ಹಾಕಿಕೊಂಡು ಹೊಡೆದರು.
  ಕುಡಿತದ ಅಮಲಿಗೆ ಸಿಕ್ಕಿದವರಿಗೆ ಏನಾಗುತ್ತಿದೆ ಎನ್ನುವುದು ತಿಳಿಯುವುದು ಅಮಲು ಇಳಿದ ಮೇಲೆಯೇ.
  ಆ ಸಮಯದಲ್ಲಿ ಅಲ್ಲಿರುವುದು ಮೃಗತ್ವವೇ ಹೊರತು ಮಾನವತ್ವವಲ್ಲವಲ್ಲ!

  ಇದನ್ನು ಕೇಳಿದ ಮೇಲೆ, ನಿಮಗೆ ಇದನ್ನು ತಿಳಿಸೋಣವೆನ್ನಿಸಿ ಬರೆಯುತ್ತಿರುವೆ.
  ಪ್ರ‍ಾಯಶಃ ಇದನ್ನು “ಕುಡಿತದ ದುಷ್ಪರಿಣಾಮಗಳು” ಎಂದು ಉದಾಹರಿಸಲರ್ಹ ಘಟನೆ ಎನ್ನಬಹುದಲ್ಲವೇ?

 2. bhadravathi ಹೇಳುತ್ತಾರೆ:

  ನರೇಂದ್ರ, ಕುಡಿತದ ಅಮಲಿನಲ್ಲಿದ್ದ ಯಜಮಾನನಿಗೆ ಗಿರಾಕಿಯಿಂದ ಹಣ ಪಡೆಯಲು ಸಾಧ್ಯವಾಗುತ್ತದೆ, ವ್ಯಾಪಾರ ಮುಗಿದ ನಂತರ ರಾತ್ರಿ ಮನೆಗೆ ಹೋಗುವಾಗ ತನ್ನ ಅಂಗಡಿಯ ಬಾಗಿಲು ಹಾಕಬೇಕು ಎನ್ನುವ ವಿವೇಚನೆಯೂ ಇರುತ್ತದೆ. ಆಗ ಅಮಲಿನ ಪ್ರಭಾವ ಅವನಿಗೆ ಇರುವುದಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s