ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೋ ನಗರ ದಲ್ಲಿ ಇದೇ ವರ್ಷದ ನವೆಂಬರ್ ತಿಂಗಳಿನಲ್ಲಿ “ಸುನ್ನತಿ” ಯನ್ನು ನಿಷೇಧಿಸುವ ಕುರಿತು ಜನಾಭಿಪ್ರಾಯ ಕೇಳಲಾಗುತ್ತದೆ. ಪುರುಷರ ಗುಪ್ತಾಂಗದ ತುದಿಯ ಚರ್ಮವನ್ನು ಕಳೆಯುವ ಈ ಆಚರಣೆ ಕ್ರೈಸ್ತರಲ್ಲಿ ವ್ಯಾಪಕವಾಗಿಯೂ, ಯಹೂದ್ಯ ಮತ್ತು ಇಸ್ಲಾಂ ಧರ್ಮೀಯರಲ್ಲಿ ಕಡ್ದಾ ಯವಾಗಿಯೂ ಆಚರಿಸಲ್ಪಡುತ್ತದೆ.
ಅಮೆರಿಕೆಯಲ್ಲಿ ಶೇಕಡ ಎಂಭತ್ತು ಅಮೆರಿಕನ್ನರು ಸುನ್ನತಿ ಮಾಡಿಸಿಕೊಂಡಿರುತ್ತಾರೆ. ಕ್ರೈಸ್ತ ಧರ್ಮ ಪಾಲಿಸಲ್ಪಡುವ ಫಿಲಿಪ್ಪೀನ್ಸ್ ನಂಥ ದೇಶಗಳಲ್ಲಿ ಎಲ್ಲಾ ಪುರುಷರೂ ಸುನ್ನತಿ ಮಾಡಿಸಿ ಕೊಂಡಿರುತ್ತಾರೆ. ಮತ್ತು ಸುನ್ನತಿ ಮಾಡಿಸಿಕೊಂಡವ ಪರಿಪೂರ್ಣ ಪುರುಷ ಎಂದು ಹೆಮ್ಮೆ ಪಡುತ್ತಾರೆ. ಇಸ್ಲಾಂ ಧರ್ಮದ ಪ್ರಭಾವದ ಕಾರಣ ಫಿಲಿಪ್ಪಿನ್ಸ್ ನಲ್ಲಿ ಸುನ್ನತಿ ಪದ್ಧತಿ ಜಾರಿಗೆ ಬಂದಿತು ಎಂದು ಅಲ್ಲಿನ ಇತಿಹಾಸಕಾರರೊಬ್ಬರ ಅಭಿಪ್ರಾಯ.
ಇಸ್ಲಾಂನ ಪವಿತ್ರ ಗ್ರಂಥ ‘ದಿವ್ಯ ಕುರಾನ್’ ನಲ್ಲಿ ಇದರ ಉಲ್ಲೇಖವಿಲ್ಲದಿದ್ದರೂ ಇಸ್ಲಾಂ ಧರ್ಮ ಕ್ರೈಸ್ತ ಮತ್ತು ಯಹೂದ್ಯ ಧರ್ಮಗಳ ತರಹ ಅಬ್ರಹಾಮಿಕ್ ಧರ್ಮವಾದ್ದರಿಂದ ಮತ್ತು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಈ ಮೂರೂ ಧರ್ಮಗಳವರ ಪಿತಾಮಹರಾದ್ದರಿಂದ ಮುಸ್ಲಿಮರೂ ಕಡ್ಡಾಯವಾಗಿ ಸುನ್ನತಿ ಮಾಡಿಸಿ ಕೊಳ್ಳುತ್ತಾರೆ. ಅಷ್ಟೇ ಅಲ್ಲ, ಕುರಾನಿನಲ್ಲಿ ಆ ಪ್ರಸ್ತಾಪ ಇಲ್ಲದಿದ್ದರೂ ಪ್ರವಾದಿಗಳು ವಿಶ್ವಾಸಿಗಳಿಗೆ ಇರಲೇ ಬೇಕಾದ “ಫಿತ್ರ” ಎಂದು ಕರೆಯಲ್ಪಡುವ ಶುಚಿತ್ವಕ್ಕೆ ಸಂಬಂಧಿಸಿದ “ನೈಜ” (natural) ಅಭ್ಯಾಸ ಅನುಸರಿಸಲೇಬೇಕು ಎಂದು ನಿರ್ದೇಶಿಸಿದ್ದಾರೆ. ಅವು, ೧. ಸುನ್ನತಿ ೨. ಗುಪ್ತಾಂಗದ ಸುತ್ತ ಶುಚಿ ೩. ಮೀಸೆ ಚಿಕ್ಕದಾಗಿ ಕತ್ತರಿಸುವುದು, ೪. ಉಗುರು ಕತ್ತರಿಸುವುದು ಮತ್ತು ೫. ಕಂಕುಳಿನ ಭಾಗದ ಕೂದಲನ್ನು ತೆಗೆಯುವುದು.
ಸುನ್ನತಿಯನ್ನು ಕೇವಲ ಧಾರ್ಮಿಕ ಕಟ್ಟಳೆಯಾಗಿ ಮಾತ್ರ ಮಾಡಿಸಿ ಕೊಳ್ಳದೆ ಶುಚಿತ್ವ ಮತ್ತು ಲೈಂಗಿಕ ಆರೋಗ್ಯದ ದೃಷ್ಟಿಯಿಂದಲೂ ಮಾಡಿಸಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮೀಯರಿಗೆ ಪ್ರತೀದಿನ ಕಡ್ಡಾಯವಾದ ಐದು ಹೊತ್ತಿನ ಆರಾಧನಾ ನಿರ್ವಹಣೆಗೆ ದೈಹಿಕ ಶುಚಿತ್ವದೊಂದಿಗೆ “ಶೌಚ” ಶುಚಿತ್ವ ಇರುವುದೂ ಅತೀ ಅವಶ್ಯ. ಮೂತ್ರ ವಿಸರ್ಜನೆ ನಂತರ ನೀರಿನೊಂದಿಗೆ ಶುಚಿ ಮಾಡಿಕೊಳ್ಳಲೇ ಬೇಕು, ಹಾಗೆ ಯಾವುದಾದರೂ ಕಾರಣಕ್ಕೆ ಶುಚಿ ಮಾಡಿ ಕೊಳ್ಳಲು ಆಗದ ಸಂದರ್ಭದಲ್ಲಿ ಮಸ್ಜಿದ್ ಒಳಗೆ ಪ್ರವೇಶಿಸುವಂತಿಲ್ಲ. ಹಾಗೆಯೆ ಸುನ್ನತಿ ಮಾಡಿಸಿಕೊಳ್ಳದಿದ್ದವರು ನಮಾಜ್ ಮಾಡುವುದಾಗಲೀ, ಮಸ್ಜಿದ್ ಒಳಗೆ ಪ್ರವೇಶಿಸುವುದಾಗಲೀ ಕೂಡದು. ಸುನ್ನತಿ ಮಾಡಿಕೊಳ್ಳದ, ಶೌಚ ಶುಚಿತ್ವ ಅನುಸರಿಸದವರು ಪವಿತ್ರ ಕುರಾನ್ ಸಹ ಮುಟ್ಟುವಂತಿಲ್ಲ ಎಂದು ಸಂಪ್ರದಾಯವಾದಿಗಳ ನಿಲುವು.
ಈಗ ಇದಕ್ಕೆ ಚ್ಯುತಿ ಅಮೆರಿಕೆಯ ರಾಜ್ಯವೊಂದರಲ್ಲಿ. ಮುಸ್ಲಿಂ ವಿರೋಧಿ ಅಥವಾ Islamophobia ಕಾರಣ ಈ ನಿಯಮವನ್ನು ಜಾರಿಗೊಳಿಸುತ್ತಿಲ್ಲವಾದರೂ ಬಹಳಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರ ವಿರೋಧ ಈ ನಿಯಮಕ್ಕೆ ಬರುತ್ತಿದೆ. ಕ್ರೈಸ್ತರೂ ಮತ್ತು ಯಹೂದ್ಯರೂ ಈ ಕ್ರಮವನ್ನು ಟೀಕಿಸಿ ಇದು ಅಮೆರಿಕೆಯ first amendment ನಲ್ಲಿ ನೀಡಲಾಗಿರುವ ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ವಾದಿಸುತ್ತಿದ್ದಾರೆ.
ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು. ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು, ಸೋಂಕು ತಗುಲಬಹುದು ಎನ್ನುವ ಭಯ. ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ. ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ. ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು ವೈದ್ಯರುಗಳ ಅಭಿಪ್ರಾಯ.
ಸುನ್ನತಿ ಶಸ್ತ್ರ ಚಿಕಿತ್ಸೆ ಅತ್ಯಂತ ವೇದನೆಯಿಂದ ಕೂಡಿದ್ದು, ಎಳೇ ಮಕ್ಕಳ ಮೇಲೆ ಇದನ್ನು ಅವರ ಸಮ್ಮತಿಯಿಲ್ಲದೆ ಹೇರಲಾಗುವುದರಿಂದ ಇದು ಕೂಡದು ಎನ್ನುವುದು ವಿರೋಧಿಗಳ ನಿಲುವು. ಸುನ್ನತಿ ಸಹಿಸಲಾಗದ ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ. ಹದಿನೈದು ಇಪ್ಪತ್ತು ವರ್ಷಗಳ ಮೊದಲು ಅರಿವಳಿಕೆ ನೀಡದೆ ಹೆಚ್ಚಾಗಿ ಕ್ಷೌರಿಕರು ಸುನ್ನತಿ ಮಾಡುತ್ತಿದ್ದರು. ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.
ಯಹೂದ್ಯರಲ್ಲಿ ಸುನ್ನತಿ ಮಾಡಿಸಿ ಕೊಳ್ಳುವುದು ದೇವರ ಮತ್ತು ಅಬ್ರಹಾಮರ ನಡುವಿನ ಒಪ್ಪಂದದ ಆಚರಣೆಯಾಗಿ. ಯಹೂದ್ಯರು ಗಂಡು ಮಗು ಜನಿಸಿದ ಎಂಟನೆ ದಿನ ಸುನ್ನತಿ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಮಗು ಹುಟ್ಟಿದ ಕೂಡಲೇ ಮಾಡುವುದಾದರೂ, ಅವರವರ ಅನುಕೂಲಕ್ಕೆ ತಕ್ಕಂತೆ ೧೦-೧೨ ವರ್ಷಗಳ ಒಳಗೆ ಮಾಡುತ್ತಾರೆ.
ಸುನ್ನತಿ ವಿರುದ್ಧ ವಾದಿಸುವವರು ಯಾವುದೇ ರೀತಿಯ ಕಾರಣಗಳನ್ನು ನೀಡಿದರೂ ವಿವೇಚನೆಗೆ ನಿಲುಕುವ ಯಾವುದೇ ಧಾರ್ಮಿಕ ಆಚರಣೆಗಳಿಗೆ ಯಾರದೇ ಶಿಫಾರಸ್ಸಿನ ಅಥವಾ ವಿರೋಧದ ಪರಿವೆ ಇರಕೂಡದು. ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಧರ್ಮಗಳಿಗೆ ಸಂಬಂಧಿಸಿದ ಪ್ರತಿಯೊಂದನ್ನು ಟೀಕಿಸುವುದು ಕೆಲವರ ಜಾಯಮಾನ ಸರಿಯಲ್ಲ. ಆಚರಣೆಗಳನ್ನು ವಿರೋಧಿಸುವವರಿಗೆ ವಿರೋಧಿಸಳು ಇರುವ ಹಕ್ಕಿನಂತೆಯೇ ಅದರ ಪರವಾಗಿ ನಿಲ್ಲುವವರಿಗೂ ಅದೇ ತೆರನಾದ ಹಕ್ಕಿದೆ ಎನ್ನುವದನ್ನು ಮನಗಾಣಬೇಕು.
ಸುನ್ನತಿ ಬಗ್ಗೆ ಒಂದು ಜೋಕು: ಒಮ್ಮೆ ಒಬ್ಬ ಹುಡುಗನಿಗೆ ಸುನ್ನತಿ ಮಾಡಿಸಲು ಮನೆಯವರು ನಿರ್ಧರಿಸುತಾರೆ. ಅವನು ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾಗಿರುತ್ತಾನೆ. ಅವನ ಮಿತ್ರರುಗಳು ತುಂಬಾ ನೋವಾಗುತ್ತೆ ಈ ವಯಸ್ಸಿನಲ್ಲಿ ಕತ್ತರಿಸಿಕೊಂಡಾಗ ಎಂದು ಹೆದರಿಸಿದ ಕಾರಣ ಅವನು ರಂಪಾಟ ಮಾಡುತ್ತಾನೆ. ಒಂದೇ ಸಮನೆ ಅಳುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಬೇಡುತ್ತಿದ್ದ ಅವನನ್ನು ಕಂಡು ಅವನ ತಾಯಿಗೆ ಮರುಕ ತೋರುತ್ತದೆ. ಆಕೆ ಕೂಗಿ ಹೇಳುತ್ತಾಳೆ, ಪಾಪ ಆ ಹುಡುನನ್ನು ಯಾಕೆ ಹಾಗೆ ಎಳೆದು ಕೊಂಡು ಹೋಗ್ತೀರಾ, ಮೊದಲು ಅವನ ಅಪ್ಪನಿಗೆ ಸುನ್ನತಿ ಮಾಡಿಸಿ, ನಂತರ ಮಗನಿಗೆ ಮಾಡಿಸುವಿರಂತೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸುತ್ತಾಳೆ. ಹುಡುಗನ ಬದಲಿಗೆ ಈಗ ಹರಕೆ ಕುರಿಯಾಗುವ ಸರತಿ ಅಪ್ಪನದಾಗುತ್ತದೆ.
> ಸುನ್ನತಿ ಸಹಿಸಲಾಗದ ನೋವನ್ನು ನೀಡುವುದಿಲ್ಲ ಎಂದು ಇದನ್ನು ಮಾಡಿಸಿ ಕೊಂಡ ಕೋಟ್ಯಂತರ ಜನರ ಅಭಿಪ್ರಾಯ.
> ಈಗ ವೈದ್ಯಕೀಯವಾಗಿ ಅರಿವಳಿಕೆ ನೀಡಿ ಯಾವುದೇ ತೆರನಾದ ಸೊಂಕಾಗಲೀ, ನೋವಾಗಲೀ ಆಗದಂತೆ ಸುನ್ನತಿಯನ್ನು ಮಾಡುತ್ತಾರೆ.
ಇವೆರಡೂ ವಿರೋಧಾಭಾಸದ ಮಾತುಗಳಲ್ಲವೇ?
ಸಹಿಸಲಸಾಧ್ಯವಾದ ನೋವೇನೂ ಇಲ್ಲವೆಂದು ಕೋಟ್ಯಂತರ ಜನ ಹೇಳುತ್ತಿರುವಾಗ, ಅರವಳಿಕೆ ಏತಕ್ಕೆ?
ಹಿಂದೆ ಉಪಯೋಗಿಸದಿದ್ದ ಅರವಳಿಕೆ ಇಂದು ಉಪಯೋಗಿಸುತ್ತಿರುವುದರ ಅರ್ಥವೇ, ನೋವು ತಿಳಿಯದಿರಲೆಂದಲ್ಲವೇ?
ಸಣ್ಣ-ಪುಟ್ಟ ಶಸ್ತ್ರಚಿಕಿತ್ಸೆಗಳಿಗೆಲ್ಲಾ ಅರವಳಿಕೆ ಉಪಯೋಗಿಸುವುದಿಲ್ಲ. ನೋವು ತಡೆದುಕೊಳ್ಳುವುದು ಕಷ್ಟವೆನಿಸಿದಾಗಲೇ ಅರವಳಿಕೆಯ ಪ್ರಯೋಗ.
ನರೇಂದ್ರ, ತುಂಬಾ ದಿನಗಳ ನಂತರ ಸೇತುವೆ ಸವಾರಿ ಮಾಡಿದ್ದೀರಾ, ಹೇಗಿದ್ದೀರಿ?
ನಾನು ಸುನ್ನತಿ ಮಾಡಿಸಿ ಕೊಂಡಾಗ ನನಗೆ ೧೨ ವರ್ಷ ವಯಸ್ಸು ಮತ್ತು ನನಗೆ ಅರಿವಳಿಕೆ ನೀಡಲಾಗಿರಲಿಲ್ಲ. ನನಗೆ ಸುನ್ನತಿ ಮಾಡಿದ್ದು ಸಾವಿರಾರು ಮಕ್ಕಳಿಗೆ ಸುನ್ನತಿ ಮಾಡಿ ಅನುಭವವಿದ್ದ ಕ್ಷೌರಿಕ. ಮೊದಲೆಲ್ಲಾ ಚುಚ್ಚುಮದ್ದು ನೀಡುವಾಗ ಒಂದೇ needle ಉಪಯೋಗಿಸುತ್ತಿದ್ದರು. ವೈದ್ಯನ ಕೊಠಡಿ ಯಲ್ಲಿ ಸ್ಟೌ ಇದ್ದು ಕುದಿಯುವ ನೀರಿನಲ್ಲಿ ಸೂಜಿಯನ್ನು sterilize ಮಾಡಿ ಉಪಯೋಗಿಸುತ್ತಿದ್ದರು. ಈಗ ಹಾಗಲ್ಲವಲ್ಲ. ಬದಲಾಗುವ ಕಾಲಕ್ಕೆ, technology ಗೆ ತಕ್ಕಂತೆ ಚಿಕಿತ್ಸೆ. ಈಗಲೂ ಸುನ್ನತಿ ಯನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡುವವರಿದ್ದಾರೆ. ವಂದನೆಗಳು.
> ನರೇಂದ್ರ, ತುಂಬಾ ದಿನಗಳ ನಂತರ ಸೇತುವೆ ಸವಾರಿ ಮಾಡಿದ್ದೀರಾ, ಹೇಗಿದ್ದೀರಿ?
ಅಬ್ದುಲ್, ನಿಮ್ಮ ಲೇಖನದ ಮಿಂಚೋಲೆ ನನ್ನ ಅಂಚೆಪೆಟ್ಟಿಗೆಯಲ್ಲಿ ಕಾಣಿಸಿಕೊಂಡಾಗಲೆಲ್ಲಾ “ಹಳೇ ಸೇತುವೆ” ನನ್ನನ್ನು ಕೈಬೀಸಿ ಕರೆಯುತ್ತದೆ.
ಹೀಗಾಗಿ, ಭದ್ರಾವತಿಯ ಸೇತುವೆಯ ಮೇಲೆ ನಾನು ಸಾಕಷ್ಟು ಬಾರಿ ಹಾದಿ ಸವೆಸಿದ್ದೇನೆ, ಲೇಖನಗಳ ಸವಿ ಉಂಡಿದ್ದೇನೆ, ಅನುಭವದ-ಮಾಹಿತಿಗಳ ಬುತ್ತಿಯನ್ನೂ ಕಟ್ಟಿಕೊಂಡಿದ್ದೇನೆ. ಪ್ರತಿಬಾರಿಯೂ ಸೇತುವೆಯ ಮೇಲೆ ಸಂತೋಷದಿಂದಲೇ ನಡೆದಾಡಿದ್ದೇನೆ, ಒಳ್ಳೆಯ ವಿಷಯಗಳೇ ಸಿಗುತ್ತಿವೆ.
ನೀವೂ ಸಂತೋಷದಿಂದಿರುವಿರಿ ಎಂದು ಭಾವಿಸುವೆ. ನಿಮ್ಮ ಲೇಖನದ ರಸಕವಳ, ತನ್ಮೂಲಕ ಕನ್ನಡಮ್ಮನ ಸೇವೆ ಇದೇ ರೀತಿ ಸದಾ ಮುಂದುವರೆಯುತ್ತಿರಲಿ ಎಂದು ಹಾರೈಸುವೆ.
ಅಪ್ರಾಪ್ತರಿಗೆ ಬೇಡ, ಬುದ್ಧಿ ಬಂದ ಮೇಲೆ ಸುನ್ನತಿ ಮಾಡಿಸಿಕೊಳ್ಳುವುದು ಅವರವರ ಇಷ್ಟಕ್ಕೆ ಅನ್ನಬಹುದೇನೋ.. ಈ ವಿಷಯದಲ್ಲಿ ಹೆಚ್ಚು ಹೇಳಲಾರೆ. ಆದರೆ ಧಾರ್ಮಿಕ ಆಚರಣೆಗಳ ಬಗ್ಗೆ ವಿರೋಧಗಳು ಸಾಮಾನ್ಯ ಅಥವಾ trend ಎನ್ನಬಹುದು. ಇದೇ ವಿರೋಧಿಸುವ ಗುಂಪು, ವಾರಗಟ್ಟಲೆ ನೋವು ಸಹಿಸಿಕೊಂಡು ಹಚ್ಚೆ ಹಾಕಿಸುವುದಿಲ್ಲವೇ? body piercing ಮಾಡಿಸುವುದಿಲ್ಲವೇ?
ಎಳೆಯ ಮಕ್ಕಳಿಗೆ ಕಿವಿ ಚುಚ್ಚಿಸುವುದಿಲ್ಲವೆ?
ನಂಬಿಕೆಗಳನ್ನು ಪ್ರಶ್ನಿಸಬಾರದು.
ಆದರೆ, ಪದ್ಧತಿಗಳೆಲ್ಲವನ್ನೂ ನಂಬಿಕೆಗಳೆಂದು ಕರೆಯಲಾಗುವುದಿಲ್ಲ.
ಕಾಲಾನುಕ್ರಮದಲ್ಲಿ ಅನೇಕ ಪದ್ಧತಿಗಳು ಹುಟ್ಟಿಕೊಳ್ಳುತ್ತವೆ; ಅದೇ ರೀತಿ ಕಾಲ ಕಳೆದಂತೆ ಅನೇಕ ಪದ್ಧತಿಗಳು ಇತಿಹಾಸದ ಕಸದ ಬುಟ್ಟಿಯನ್ನೂ ಸೇರುತ್ತವೆ.
ಪದ್ಧತಿಗಳಿಗೇ ಅಂಟಿಕೊಂಡು ಕೂರುವುದು ಒಳ್ಳೆಯದಲ್ಲ.
ಆದರೆ, ಯಾವುದು ವೈಜ್ಞಾನಿಕ ಹಿನ್ನೆಲೆಯಿಂದ ಬಂದದ್ದು, ಅವು ಉಳಿಯಬೇಕು.