೯೯೯೯

ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬಿಟ್ಟರೆ ಜನ ಹೌಹಾರುವರು ಎಂದು ೯೯.೯೯ ಅಂತ ಬೆಲೆ ಇಟ್ಟು ನೂರು ರೂಪಾಯಿ ಪೂರ್ತಿಯಾಗಿ ಪೀಕಿಸಿ ಕೊಂಡು ಒಂದು ಪೈಸೆಯ ಚೇಂಜ್ ಸಹ ಕೊಡದೆ ನೂರು ರೂಪಾಯಿ ಕೊಟ್ಟೆ ಈ ಚಪ್ಪಲಿಗೆ ಎಂದು ಹೇಳಲೂ ಭಯ ಆಗುವಂತೆ ಮಾಡಿದ್ದು ? ನೂರು ರೂಪಾಯಿಗೆ ಒಂದು ಪೈಸೆ ಕಡಿಮೆ ಕೊಟ್ಟು ನೂರು ಕೊಟ್ಟೆ ಎಂದು ಹೇಳೋದು ನಾಗರೀಕರ ಲಕ್ಷಣ ಅಲ್ಲ, ಅಲ್ಲವೇ? ಹಾಳು ಪುರಾಣ ಬಿಡಿ, ಈ ೯೯೯೯ ಬಾಟಾ ದ ಎಕ್ಕಡ ಬೆಲೆಯೂ ಅಲ್ಲ, ಯಾವುದೋ ಎಮೆರ್ಜೆನ್ಸಿ ನಂಬರ್ ಸಹ ಅಲ್ಲ. ಇದು ನನ್ನ ಪ್ರೀತಿಯ ಊರಿನ, ಪ್ರೀತಿಯ ಹಳೇ ಸೇತುವೆ ಮೇಲೆ ದೌಡಾಯಿಸಿದ ಜನರ ಸಂಖ್ಯೆ. ಅಂದರೆ ಹಳೇ ಸೇತುವೆ ಬ್ಲಾಗ್ ಅನ್ನು ಇದುವರೆಗೆ ೯೯೯೯ ಜನ ನೋಡಿದ್ದಾರೆ. ಒಂದು ರೀತಿಯ ಶುಭ ಸಂಖ್ಯೆ, ಈ ಶುಭ ಕಾಮನ ಹುಣ್ಣಿಮೆಯಂದು. ಸೂಪರ್ ಮೂನ್ ಹೇಳಿ ಕೊಳ್ಳುವಂಥ ಸೂಪರ್ ಆಗಿ ಕಂಗೊಳಿಸದಿದ್ದರೂ ಈ ಸಂಖ್ಯೆ ಮಾತ್ರ ನನ್ನಲ್ಲಿ ಒಂದು ತೆರನಾದ ಸಂಚಲನ ತಂದಿದ್ದಂತೂ ನಿಜವೇ.  

ನನ್ನ ಬರಹ ನೋಡಿದ ಜನರಿಗೆ ನಾನು ಬರಹಗಾರ ಅಲ್ಲ ಎಂದು ಅನ್ನಿಸಿದರೆ ನನ್ನ ಮೇಲೆ ಸೂಪರ್ ಮೂನ್ ಆಗಲಿ, ವಿಶಾಲವಾದ ಆಗಸವಾಗಲಿ ಕಳಚಿ ಬೀಳೋಲ್ಲ. ನನ್ನಲ್ಲಿ ಕೀಳರಿಮೆ ಸಹ ಮನೆ ಮಾಡೋಲ್ಲ. ಯಾರೋ ಒಬ್ಬರು ಹೇಳಿದಂತೆ ನಾನು ಗಟ್ಟಿ ಮನುಷ್ಯ. ಎಷ್ಟಿದ್ದರೂ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ನಗರಿಯವನಲ್ಲವೇ ನಾನು? 

ಪುಕ್ಕಟೆ ಸಿಗುವ ಆಸೆಗೆ ಬಲಿ ಬಿದ್ದು ಶುರು ಮಾಡಿದ್ದು ಈ ಧಂಧೆ. ಬರೆಯುವ ಧಂಧೆ.  ಅದೇನು ಪುಕ್ಕಟೆ ಅಂತ ಜೊಳ್ಳು ಸುರಿಸಿದಿರಾ? ನಾಚಿ ಕೊಳ್ಳಬೇಡಿ, ಮನುಷ್ಯನ ಜಾಯಮಾನವೇ ಅದು. ಪುಕ್ಕಟೆ ಸಿಕ್ಕಿದ್ದು ಬ್ಲಾಗ್ ಆರಂಭಿಸುವ ಸೌಲಭ್ಯ.  ಕರ್ನಾಟಕ ರಾಜ್ಯದ ೧೦ ಲಕ್ಷದ, ೧೦ ಲಕ್ಷ ಪೂರ್ತಿ ಕೈಗೆ ಬರದ  ಲಾಟರಿಯಂತೂ ಅಲ್ಲ. ವರ್ಡ್ಪ್ರೆಸ್, ಬ್ಲಾಗ್ಸ್ಪಾಟ್, “tumblr” ಮುಂತಾದವರು ಜನರಿಗೆ ತಮ್ಮ ಬರವಣಿಗೆಯ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಬ್ಲಾಗ್ ಸೈಟ್ ಆರಂಭಿಸಿಕೊಳ್ಳುವ ಸವಲತ್ತು ನೀಡಿದಾಗ ಮುಗಿಬಿದ್ದು ಕೈ ಚಾಚಿದವರಲ್ಲಿ ನಾನೂ ಒಬ್ಬ.  ಬ್ಲಾಗಿಗೊಂದು ಹೆಸರು ಕೊಡಬೇಕು. ಚಿತ್ರ ವಿಚಿತ್ರ ಹೆಸರುಗಳು ಮನಃ ಪಟಲದ ಮೇಲೆ ಹಾದು ಹೋದರೂ ಸೊರಗಿದ ಭದ್ರಾ ನದಿಯ ಸಂಗಾತಿ ಹಳೇ ಸೇತುವೆ ಹೆಸರನ್ನು ಇಟ್ಟೆ. ಶಾಲೆಗೆ ಚಕ್ಕರ್ ಹೊಡೆದು ಇದೇ ಹಳೇ ಸೇತುವೆ ದಾಟಿ ಕನಕ ಮಂಟಪಕ್ಕೆ ಬಂದು ಪುಢಾರಿಗಳ ಭಾಷಣ ಕೇಳುತ್ತಿದ್ದೆ. ಎಲ್ರೂ ಚಕ್ಕರ್ ಹೊಡೆದು ಸಿನೆಮಾಕ್ಕೂ, ಕ್ರಿಕೆಟ್ ಆಡೋಕ್ಕೂ ಹೋದ್ರೆ ಈ ಅಬ್ಬೇಪಾರಿ ಏನು ಪುಡ್ಹಾರಿ, ಗಿಡ್ಹಾರಿ ಅಂತಿದ್ದಾನೆ ಎಂದು ಮೂಗಿನ ಮೇಲೆ ಬೆರಳಿಡ ಬೇಡಿ. ರಾಜಕಾರಣ ಎಂದರೆ ೧೯೭೭ ರಿಂದ ನನಗೆ ತುಂಬಾ ಇಷ್ಟ. ನನ್ನ ಪಕ್ಷ ಜನತಾ ಪಕ್ಷ. ಮೊರಾರ್ಜಿ ಭಕ್ತ. ಚರಣ್ ಸಿಂಗ್ ಮೊರಾರ್ಜಿಗೆ ಕೈ ಕೊಟ್ಟಾಗ ತಲೆ ಮೇಲೆ ಕೈಹೊತ್ತು ಕೂತ ಮಿಡ್ಲ್ ಸ್ಕೂಲ್ ಬಾಲಕ ನಾನು. ಮಾರ್ವಾಡಿ ಸ್ನೇಹಿತನೊಬ್ಬ ಇಂದಿರಾ ನಮ್ ತಾಯಿ ಎಂದಾಗ, ನಾನೇಕೆ ಇವನನ್ನು ಮೀರಿಸಬಾರದು ಎಂದು ಮೊರಾರ್ಜಿ ನಮ್ಮಪ್ಪ ಎಂದು ಹೇಳಿ embarrass ಆದವನು.  ನನ್ನ ಬ್ಲಾಗ್ ನ “ಹಳೇ ಸೇತುವೆ” ಹೆಸರು ಕೆಲವರಿಗೆ ಹಿಡಿಸಿತೂ ಕೂಡಾ, ಅದರೊಂದಿಗೆ ಸವಾರಿಯಾಗಿ ಬಂದ ಬ್ಲಾಗ್ ಪೋಸ್ಟ್ ಗಳೂ ಕೆಲವರಿಗೆ ಇಷ್ಟವಾದವು. ಇನ್ನೂ ಕೆಲವರಿಗೆ “ತುಂಬಾ” ಇಷ್ಟವಾಗಿ ಅಜೀರ್ಣಕ್ಕೂ ದಾರಿ ಮಾಡಿ ಕೊಟ್ಟಿತು. ಒಂದಂತೂ ಸತ್ಯ, ಮೆಚ್ಚಿದವರು, ಮೆಚ್ಚದವರು ನನ್ನಲ್ಲಿ ಹುರುಪನ್ನಂತೂ ತುಂಬಿದರು ನನ್ನ ಬರಹ ಮುಂದುವರೆಯಲಿ ಎಂದು. ಕನ್ನಡಿಗ ಉದಾರಿ, ಸಹೃದಯಿ ಎನ್ನುವ ಮಾತಿಗೆ ನನ್ನ ಬಡ, ಸುಣ್ಣದ ಕಲ್ಲಿನ ಸೇತುವೆಗೆ ಬಂದ ಪ್ರತಿಕ್ರಿಯೆಗಳೇ ಸಾಕ್ಷಿ.   

ಮೆಚ್ಚಿದವರಿಗೂ, ಮೆಚ್ಚದವರಿಗೂ ನನ್ನ ಸವಿನಯ, ಗೌರವಪೂರ್ವಕ  ಪ್ರಣಾಮಗಳು.

Advertisements

5 thoughts on “೯೯೯೯

 1. Ravi ಹೇಳುತ್ತಾರೆ:

  ಈ ಓಪನ್ ಸೋರ್ಸ್ ಚಳುವಳಿ ಶುರುವಾದ ಮೇಲೆ ಅಂತರ್ಜಾಲವೆಲ್ಲ ಬಿಟ್ಟಿಮಯ. ನಿಮಗೆ ಬಿಟ್ಟಿ ಬ್ಲಾಗಿಸುವ ಸೌಕರ್ಯ ಸಿಕ್ಕಿತು, ನಮಗೆ ಬಿಟ್ಟಿ ಓದುವ ಸೌಕರ್ಯ. ಅದೇ ನೀವು ಪುಸ್ತಕ ಪ್ರಕಟಿಸಿದ್ದರೆ ನಾವು ಕೊಂಡು ಓದಬೇಕಿತ್ತು. ಬ್ಲಾಗು ಈ ಶತಮಾನದ ಹೊಸ ಮಧ್ಯಮ.
  ನಿಮ್ಮನ್ನು ಬರಹಗಾರ ಅಂತ ಉಳಿದವರು ಗುರುತಿಸುತ್ತಾರೆಯೇ? ಅಂತ ನಿಮಗೆ ಅಳುಕಿದ್ದಂತೆ ತೋರುತ್ತಿದೆ. ಬರಹಗಾರರೆಲ್ಲ ಕಾದಂಬರಿ ಬರೆಯಬೇಕಿಲ್ಲ, ಪುಸ್ತಕ ಪ್ರಕಟಿಸಬೇಕಿಲ್ಲ. ನಿಮ್ಮ ಬರಹ ಚೆನ್ನಾಗಿದೆ. ನಾನೇನು ಪಂಡಿತನಲ್ಲ ವಿಮರ್ಶಿಸಲು. ಪಾಮರ. ಪಂಡಿತರಿಗೆ ಇಷ್ಟವಾಗುವುದು ಪಾಮರರಿಗೆ ಅರ್ಥವಾಗಲ್ಲ. ಅದಕ್ಕೆ ನಾನು ಪಂಡಿತರ ಗೋಜಿಗೆ ಹೋಗಲ್ಲ. 🙂 ನನ್ನ ಪ್ರಕಾರ ಕಾದಂಬರಿಗಿಂತ ಮಕ್ಕಳ ಕಥೆ ಬರೆಯುವವರೇ ನಿಜವಾದ ಬರಹಗಾರರು. ಮಕ್ಕಳ ಮನಸು ಅರ್ಥಮಾಡಿಕೊಂಡು, ಅವರಿಗೆ ಖುಷಿಯಾಗುವಂತೆ, ಓದಿಸಿಕೊಂಡು ಹೋಗುವ ಎಷ್ಟು ಬರಹಗಾರರಿದ್ದಾರೆ? ಬಹಳ ಕಮ್ಮಿ. ಏಕೆಂದರೆ ಅದು ಕಷ್ಟದ ಕೆಲಸ. ಅಷ್ಟಕ್ಕೂ, ಹಳೆ ಸುಣ್ಣದ ಕಲ್ಲಿನ ಸೇತುವೆಯೇ ಸಿಕ್ಕಾಪಟ್ಟೆ ಗಟ್ಟಿ. ಕೊನೆಪಕ್ಷ ಪಳೆಯುಳಿಕೆಯಾಗಿ ಆದರೂ ನಿಂತಿರುತ್ತದೆ. ಹೊಸ ಸೇತುವೆಗಳು ಮುಗ್ಗರಿಸಿ ನದಿ ಪಾಲಾಗುತ್ತವೆ.

 2. ಅಬ್ದುಲ್ಲರೇ, ನಾವೀಗ ಪರಸ್ಪರ ದೂರದೂರುಗಳಲ್ಲಿದ್ದರೂ ಒ೦ದೇ ಊರಿನವರೆ೦ಬ ಹಾಗೂ ಒ೦ದೇ ಸೇತುವೆಯ ಮೇಲೆ ಓಡಾಡಿ ಬೆಳೆದವರೆ೦ಬ ಕಾರಣಕ್ಕೇನೋ, ನಿಮ್ಮ ಮೇಲೆ ಕಾಲದ ಕನ್ನಡಿಗೆ ವಿಶೇಷ ಆಸ್ಥೆ! ಅದೇ ಸಹಜ ಹಾಗೂ ನೈಜ ಪ್ರೇಮದಿ೦ದ ಈದಿನಕ್ಕೂ ಹಳೇಸೇತುವೆಯ ಮೇಲೆ ಖಾಯ೦ ಓಡಾಡುವವರಲ್ಲಿ ನಾನೂ ಒಬ್ಬ!
  ಪರಮಪೂಜ್ಯರಾದ ಆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ… ನಿಮ್ಮಲ್ಲಿನ ಲೇಖಕ ಇನ್ನೂ ಬೆಳೆಯಲಿ.. ನಿಮ್ಮಿ೦ದ ಇನ್ನೂ ಹಲವಾರು ವರ್ಷ ಕನ್ನಡ ಸಾಹಿತ್ಯ ಸೇವೆ ಜರುಗಲಿ. ಅ೦ತರ್ಜಾಲ ತಾಣದ ಕನ್ನಡ ಬ್ಲಾಗ್ ಲೋಕದಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗಲೆ೦ಬ ಹಾರೈಕೆ ನನ್ನದು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 3. ssnkumar ಹೇಳುತ್ತಾರೆ:

  ಅಬ್ದುಲ್,

  ನೀವು ಬರಹಗಾರರಲ್ಲವೆಂದು ಯಾರು ಹೇಳಿಯಾರು?
  ಬರೀ ಬರಹಗಾರರಲ್ಲ, “ಒಳ್ಳೆಯ ಬರಹಗಾರರು” ನೀವು.
  ನಿಮ್ಮ ಪ್ರತಿಯೊಂದು ಬರಹವನ್ನೂ ಪೂರ್ತಿಯಾಗಿ ಓದುವವನು ನಾನು. ಕೆಲವೊಂದಕ್ಕೆ ಮಾತ್ರ (ಪ್ರಾಯಶಃ ನನ್ನ ಮನಸ್ಸನ್ನು ಕುಕ್ಕುವ ವಿಷಯಗಳು) ಪ್ರತಿಕ್ರಿಯಿಸುತ್ತೇನೆ.
  ನನ್ನ ಮಿಂಚಂಚೆಗೆ ನಿಮ್ಮ ಪ್ರತಿಯೊಂದು ಬರಹವೂ ಬಂದು ಬೀಳುತ್ತದೆ. ಪ್ರತಿಕ್ರಿಯಿಸಲು ಮಾತ್ರ “ಹಳೇ ಸೇತುವೆ” ಪುಟಕ್ಕೆ (ಬ್ಲಾಗ್) ಬರುತ್ತೇನೆ.
  ಪ್ರಾಯಶಃ ನನ್ನಂತೆ ನಿಮ್ಮ ಪುಟಕ್ಕೆ ಬರದೆ ನಿಮ್ಮ ಬರಹ ಓದುವವರೂ ಸಾಕಷ್ಟು ಸಂಖ್ಯೆಯಲ್ಲಿರಬಹುದು.
  ಇಂತಹ ನಮ್ಮಂತಹವರ ಓದುವರೂ ನಿಮ್ಮ ಗಣಕದ ಗಮನಕ್ಕೆ ಬಂದು ಲೆಕ್ಕಕ್ಕೆ ತೆಗೆದುಕೊಂಡರೆ, ೯೯೯೯ ಸಣ್ಣ ಸಂಖ್ಯೆ ಎನಿಸಬಹುದೇನೋ ಅಲ್ಲವೇ!?
  ನಿಮ್ಮ ಗಣಕದ ಗಮನಕ್ಕೆ ಬರದೇ ಓದುವವರನ್ನು ನೀವು ಏನೆಂದು ಕರೆಯಬಹುದು – “ಕಳ್ಳ ಓದುಗರು”?

 4. bhadravathi ಹೇಳುತ್ತಾರೆ:

  ಕಳ್ಳ ಓದುಗರನ್ನು stealth readers ಎಂದು ಕರೆಯಬಹುದೇ ನರೇಂದ್ರ? ಮುಕ್ತ ಕಂಠದಿಂದ ನನ್ನ ಬರಹವನ್ನ ಪ್ರಶಂಸಿಸಿದ ತಮಗೆ ನನ್ನ ಅನಂತಾನಂತ ವಂದನೆಗಳು. ಇನ್ನೂ ಮುಂದಕ್ಕೂ ನನ್ನ ಸೇತುವೆ ಸಂಪರ್ಕ ಇಟ್ಟುಕೊಂಡು ವಿಮರ್ಶೆ ಬರೆಯಿರಿ, ನಿಜ ಹೇಳಬೇಕೆಂದರೆ bouquet ಗಳಿಗಿಂತ brickbats ಇಷ್ಟ ನನಗೆ.

 5. NilGiri ಹೇಳುತ್ತಾರೆ:

  ನಿಮ್ಮ ೯೯೯೯ ಗೆ ಅಭಿನಂದನೆ ಹೇಳೋಣ ಅಂತ ನಾನು ಬರೋಷ್ಟರಲ್ಲಿ ಆಗ್ಲೆ ನೀವು ೧೦೦೦೦+ ಆಗಿದೀರಾ!
  ೯೯೯೯ ಮತ್ತು ೧೦೦೦೦+ ಎರಡಕ್ಕೂ ನನ್ನ ಅಭಿನಂದನೆಗಳು. ಹೀಗೆ ಬೇಗ ೯೯೯೯೯ಆಗ್ಲಿ 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s