ಓರ್ವ ಧೀಮಂತ ಪತ್ರಕರ್ತ

ಇಂದು ಬೆಳಿಗ್ಗೆ ನನ್ನ ಮನಸ್ಸಿನ ಮೇಲೆ ವಿವಿಧ ಭಾವನೆಗಳು ಅಲೆಗಳಂತೆ ಅಪ್ಪಳಿಸುವಂತೆ ಮಾಡಿದ ವಿಚಿತ್ರ ವರದಿಯೊಂದು ಕಣ್ಣಿಗೆ ಬಿತ್ತು. ಆಘಾತ, ದಿಗ್ಭ್ರಮೆ, ಕನಿಕರ, ಹೇಸಿಗೆ ಹೀಗೆ ನಾನಾ ಭಾವನೆಗಳನ್ನು ಒಮ್ಮೆಗೇ ಹುಟ್ಟುಹಾಕಿದ ಒಂದು ವರದಿ;   ಒಬ್ಬ ಪತ್ರಕರ್ತ ತನ್ನ ಮನಃಪರಿವರ್ತನೆಯಾದ ಕಾರಣ ಪತ್ರಕರ್ತನ ಕಸುಬಿಗೆ “ಬೈ ಬೈ” ಹೇಳಿದ್ದು. ಇಂಗ್ಲೆಂಡಿನ ಟ್ಯಾಬ್ಲಾಯ್ಡ್ daily star ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದ “ರಿಚರ್ಡ್ ಪೆಪ್ಪಿಯಾಟ್” ಪತ್ರಿಕೆಯ ಧಣಿಗೆ ಬರೆದ ಬಹಿರಂಗ ಪತ್ರ ಪತ್ರಿಕಾ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ, ಹಾಗೆಯೇ ತಮ್ಮ ರಹಸ್ಯ ಅಜೆಂಡಾ ಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಸುದ್ದಿ ಮಾಧ್ಯಮಗಳು ಎಂಥ ನೀಚ ಕೃತ್ಯಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ಸ್ಥಿರೀಕರಿಸಿದೆ.      

ರಿಚರ್ಡ್ ಪೆಪ್ಪಿ ಯಾಟ್ ರಾಜೀನಾಮೆ ನೀಡಲು ಕಾರಣವಾದ ವರದಿಗಳನ್ನ ನೋಡಿ.

ಇಂಗ್ಲಿಷ್ ಡಿಫೆನ್ಸ್ ಲೀಗ್ (EDL) ಎನ್ನುವ ಸಂಘಟನೆ ಇಂಗ್ಲೆಂಡಿಗೆ ವಲಸೆ ಬರುವವರ ವಿರುದ್ಧ ಹೋರಾಡುತ್ತದೆ. ಬಿಳಿಯರ ಹಕ್ಕುಗಳು ಮಾಯವಾಗುತ್ತಿವೆ ಎಂದು ಪುಕಾರು ಹಬ್ಬಿಸುತ್ತದೆ. ಇದೊಂದು ಮುಸ್ಲಿಂ ವಿರೋಧಿ, ಬಲಪಂಥೀಯ ಸಂಘಟನೆ. ಈ ಸಂಘಟನೆಗೆ ರಾಜಕೀಯ ಪಸ್ಖವಾಗುವ ಇರಾದೆ ಇಲ್ಲ. daily star ನ ಪತ್ರಕರ್ತ edl ನಾಯಕನೊಬ್ಬನ ಸಂದರ್ಶನ ದಲ್ಲಿ ರಾಜಕೀಯ ಸೇರುವ ಬಗ್ಗೆ ಕೇಳಿದಾಗ ನಾಯಕ ಅಂಥ ಉದ್ದೇಶ ಸದ್ಯಕ್ಕಿಲ್ಲ ಎನ್ನುತ್ತಾನೆ. ಆದರೆ ಪತ್ರಿಕೆ ವರದಿ ಮಾಡಿದ್ದು edl ರಾಜಕೀಯ ಸೇರಲಿದೆ ಎಂದು. ಈ ಸುದ್ದಿ ಮುಖಪುಟದಲ್ಲಿ ರಾರಾಜಿಸಿದಾಗ ಭಯಗ್ರಸ್ಥನಾದ ಪತ್ರಿಕೆ ಮಾರುವ ಮುಸ್ಲಿಂ ವ್ಯಕ್ತಿಯ ಮುಖದ ಮೇಲಿನ ದುಗುಡ ನೋಡಿ ರಿಚರ್ಡ್ ಕೆಲಸಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸುತ್ತಾನೆ.

daily star ಪತ್ರಿಕೆ ತನ್ನ ವರದಿಗಾರಿಗೆ ಕೊಡುವ brief ಏನೆಂದರೆ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ (islamophobia) ಲೇಖನಗಳನ್ನು ಸೃಷ್ಟಿಸಿ ಕೊಡಬೇಕು. ಈ ಕೆಲಸಕ್ಕೆ ಪತ್ರಕರ್ತರ ಮನಃಸ್ಸಾಕ್ಷಿ ಒಪ್ಪದೇ ಇದ್ದ ಪಕ್ಷದಲ್ಲಿ ನೀನಲ್ಲದಿದ್ದರೆ ಮತ್ತೊಬ್ಬ ಎನ್ನುವ ಧೋರಣೆ ಆ ಪತ್ರಿಕೆಯದು. ಕೆಲಸದಿಂದ ವಜಾ ಆಗುವ ಭಯ ದಿಂದ ಪತ್ರಕರ್ತರು ಪತ್ರಿಕೆಯ ವಿರುದ್ಧ ಹೋಗಲು ತಯಾರಿಲ್ಲ. 

ಮುಸ್ಲಿಮರಿಗಾಗಿ ಮಾತ್ರ ಇರುವ ಶೌಚಗಳನ್ನು ನಮ್ಮ ತೆರಿಗೆ ಹಣದ ಖರ್ಚಿನಲ್ಲಿ ಕಟ್ಟಲಾಗುತ್ತಿದೆ ಎನ್ನುವ ಸುಳ್ಳು ವರದಿಯನ್ನು ತಾನು ಸೃಷ್ಟಿಸಿದೆ ಎನ್ನುವ ಈತನ ಮಾತನ್ನು ಕೇಳುವಾಗ ನಮ್ಮ ವರದಿಗಾರರು ಗಿಳಿ ಪಾಠದಂತೆ ಯಾವಾಗಲೂ ಪುನರಾವರ್ತಿಸುವ ಮುಸ್ಲಿಮರಿಗೆ ಮೀಸಲಾತಿ ಎನ್ನುವ ವರದಿಗಳು ಕಣ್ಣ ಮುಂದೆ ಬರುತ್ತವೆ. ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ  ಹಲವು ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ ಮತ್ತು ಮೀಸಲಾತಿ ಎನ್ನವುದು ಇವರಿಗೆ ತಿಳಿದಿದ್ದರೂ ತಿಳಿಯುವುದಿಲ್ಲ.

ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ “ ಅವರು, ಮತ್ತ ನಾವು (us and them) “ ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು. ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ. ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ. ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ. 

ಓರ್ವ ನಟಿ ತಾನು ಹೊರಹೋಗುವಾಗ ಮಾಡಿಕೊಳ್ಳುವ ಸಿದ್ಧತೆ ಗೆ ತೆಗೆದುಕೊಳ್ಳುವ ಸಮಯವನ್ನೂ ಕಡಿಮೆ ಮಾಡಲು “ಸಂಮೋಹನ” (hypno therapy) ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು  ಹುಟ್ಟಿಸಿ ಕೊಂಡು ಬರೆದಿದ್ದ ಈ ಪತ್ರಕರ್ತ ಹೇಳುತ್ತಾನೆ, “ಈ ಸಂಮೋಹನ ದ ಬಗ್ಗೆ ನನಗೆ ಹೇಗೆ ತಿಳಿಯಿತು? ಸಂಜೆ ಆರರ ಸಮಯ ಖಾಲಿ ಹಾಳೆ ನೋಡುತ್ತಾ ಮಗ್ನನಾಗಿದ್ದಾಗ ನನ್ನ ಕುಂಡೆ ಯೊಳಗಿಂದ ಎಳೆದು ತಂದೆ ಈ ಕಲ್ಪನೆಯನ್ನು ಎಂದು ಹೇಳುತ್ತಾನೆ. ಆದರೆ ಈ ಕಲ್ಪನಾ ಬರಹ ನನಗೆ ೧೫೦.೦೦ ಪೌಂಡ್ ಗಳ ಧನವನ್ನೂ ಒದಗಿಸಿತು ಎಂದು ಹೇಳುತ್ತಾನೆ.

ರಿಚರ್ಡ್ ಹೇಳುತ್ತಾನೆ, ನನಗೆ ಗೊತ್ತು ಡೈಲಿ ಮೇಲ್ ಪತ್ರಿಕೆ (ನೈತಿಕತೆ ಇಲ್ಲದ) ಕುರೂಪಿಗಳ ಹಿಂಡಿನಲ್ಲಿ ಎದ್ದು ಕಾಣುವ ಮತ್ತೊಂದು ಕುರೂಪಿ ಪತ್ರಿಕೆ ಎಂದು.

ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic (ಭ್ರಮಾ ಲೋಕದಲ್ಲಿರುವವ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು, ಆದರೆ ಈ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ನ ಅಭಿಪ್ರಾಯ. ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು.  ತಡವಾಗಿಯಾದರೂ ಬಂದ ಈ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ? ಆ ಸುದಿನಕ್ಕಾಗಿ ನಾವು ಕಾಯಬಹುದೇ?     

ನನಗೂ ಆಗಾಗ ಅನ್ನಿಸಿದ್ದಿದೆ. ಈ ರೀತಿ ಒಂದು ಧರ್ಮೀಯರ ಮೇಲೆ ಕಪೋಲ ಕಲ್ಪಿತ ವರದಿಗಳನ್ನು, ಊಹಾಪೋಹಗಳನ್ನು ಸೃಷ್ಟಿಸುತ್ತಾ ಸಮಾಜದಲ್ಲಿ ಗಲಭೆ, ಕ್ಷೋಭೆಗೆ ಕಾರಣವಾಗುವ ಲೇಖನಿ ಹಿಡಿದ ಈ so called journalist ಗಳಿಗೆ ಭಗವಂತನು ಆತ್ಮವೊಂದನ್ನು ಫಿಟ್ ಮಾಡಿದ್ದಿದ್ದರೆ ಅವರು ತಮ್ಮ ಕಸುಬಿಗೆ ಎಂದೋ ವಿದಾಯ ಹೇಳುತ್ತಿದ್ದರು ಎಂದು. ತಮ್ಮ ವರದಿ ಕಾರಣ ಜನರ ಸಂಶಯ ಗುಮಾನಿಗೆ ಒಳಪಟ್ಟು, ದಬ್ಬಾಳಿಕೆಗೆ ಶೋಷಣೆಗೆ ಗುರಿಯಾಗುವ ಅಮಾಯಕನನ್ನು ನೋಡಿದಾಗ ಅವರಿಗೆ ಏನೂ ಅನ್ನಿಸುವುದಿಲ್ಲವೇ? ಜೇಬು ಭರ್ತಿಯಾಗುತ್ತಿದ್ದಂತೆ ಬುದ್ಧಿ ದಿವಾಳಿತನದ ದಾರಿ ಹಿಡಿದ್ದು ಬಹುಶಃ ಅವರುಗಳಿಗೆ ಕಾಣುವುದಿಲ್ಲವೇನೋ.  

ಪತ್ರಿಕೆಗಳಲ್ಲ್ಲಿ ಯಾವುದಾದರೂ ಉತ್ಪನ್ನಗಳ ಬಗ್ಗೆ ಲೇಖನ ಬಂದರೂ ಆ ಲೇಖನದ ಹಿಂದೆ ಹಣದ ವಾಸನೆ ಬಡಿದೇ ತೀರುತ್ತದೆ. ವಿಮರ್ಶೆ ಮಾಡುವ ನೆಪದಲ್ಲಿ ಉತ್ಪಾದನೆಗಳ ಬಿಕರಿಗೆ ಕಂಪೆನಿಗಳಿಗೆ ಸಹಾಯ ಒದಗಿಸುವ ಪತ್ರಕರ್ತರಿದ್ದಾರೆಂದು ಕೇಳಿದ್ದೇನೆ. ವೈಯಕ್ತಿಕ ನಿಂದನೆ ಮತ್ತು ತೇಜೋವಧೆಯಂಥ  ಕೆಲಸವಂತೂ ಎಷ್ಟು ಸೊಗಸಾಗಿ ಮಾಡುತ್ತವೆ ಪತ್ರಿಕೆಗಳು ಎಂದು ಬೇರೆ ಹೇಳಬೇಕಿಲ್ಲ.  

ದಿನ ನಿತ್ಯದ ಆಗುಹೋಗುಗಳ ಬಗ್ಗೆ ನಿಗಾ ಇಟ್ಟುಕೊಂಡು ಕುತೂಹಲದಿಂದ ನಿರಂತರವಾಗಿ ಸುದ್ದಿಗಳೊಂದಿಗೆ ನಂಟು ಬಯಸುವ ಓದುಗ ಕೇವಲ ಸುದ್ದಿ ಮಾತ್ರವನ್ನಲ್ಲ ಅದರೊಂದಿಗೆ ಬರುವ ಹಲವು ವಿಚಾರಗಳನ್ನೂ ಅರಿಯುತ್ತಾ ಸಾಗುತ್ತಾನೆ. ಹಾಗಾಗಿ ಮಾಧ್ಯಮ ಎನ್ನವುದು ಒಂದು ರೀತಿಯ ಮುಕ್ತ ವಿಶ್ವ ವಿದ್ಯಾಲಯ. ಆದರೆ ಈ ಪವಿತ್ರ ಕಸುಬನ್ನು ಲಾಭ ಗಳಿಸುವ ಉದ್ದಿಮೆಯಾಗಿ ಮತ್ತು ತಮ್ಮ ರಾಜಕೀಯ ಚಿಂತನೆಗಳನ್ನು ಪ್ರಚುರಪಡಿಸಲು propaganda machinery ಆಗಿ ಉಪಯೋಗಿಸಿಕೊಂಡಾಗ ಆಗುವ ಅನಾಹುತವೇ ನಾವು ಇಂದು ಕಾಣುತ್ತಿರುವ ವೈಮನಸ್ಸು, ಸಂಶಯ ಮತ್ತು ಇವೆರೆಡರ ಕಾರಣ ನಡೆಯುವ ಗಲಭೆ, ಹಿಂಸೆ.

ನಾವು ಹಣ ಕೊಟ್ಟು ಕೊಳ್ಳುವ ವಸ್ತುಗಳ ಬಗ್ಗೆ ನಿಗಾ ಇಡುತ್ತೇವೆ. ವಸ್ತುವಿನ ಗುಣಮಟ್ಟ, ತಯಾರಾದ ತಾರೀಖು, ಕಂಪೆನಿ, ಅದರಲ್ಲಿರಬಹುದಾದ ingredients, ತಯಾರಿಸಿದ ಕಂಪೆನಿಯು ISO, HACCP ಮುಂತಾದ certification  ಗಳನ್ನು ಹೊಂದಿದೆಯೇ ಇತ್ಯಾದಿ. ಆದರೆ ನಾವು ಕೊಳ್ಳುವ ಪತ್ರಿಕೆಗಳ ಗುಣಮಟ್ಟದ ಬಗ್ಗೆ ನಾವೆಂದಾದರೂ ಯೋಚಿಸಿದ್ದೇವೆಯೇ?ಅದರಲ್ಲಿ ಬರುವ ಕಂಟೆಂಟ್ ಗಳ ಬಗ್ಗೆಯಾಗಲೀ, ಅದರಲ್ಲಿ ಬರುವ ವಿಷಯಗಳು, ಮತ್ತು ಆ ವಿಷಯಗಳ ಹಿಂದಿನ ಕರ್ತೃಗಳ ನಾವೇಕೆ ಅಸಡ್ಡೆ ತೋರಿಸುತ್ತೇವೆ? ಬೇರೆಲ್ಲಾ PRODUCT ಗಳಿಗೆ ಇರುವಂತೆ  ಪತ್ರಿಕೆಗಳಿಗೂ ಯಾಕೆ ಒಂದು CERTIFICATION ಇರಕೂಡದು? ಪ್ರಾಥಮಿಕ ಶಾಲೆಯ ಬಾಗಿಲನ್ನೂ ಕಾಣದವನೂ ಪತ್ರಕರ್ತನಾಗಿ ತನಗೆ ತೋಚಿದ ರೀತಿಯಲ್ಲಿ ವರದಿಗಳನ್ನು, ಜನರಿಗೆ ಬಡಿಸಿದರೆ ಅದರ ಪರಿಣಾಮ ಸಮಾಜದ ಮೇಲೆ ಹೇಗಾಗಬಹುದು?  journalistic standard, ethics ಮತ್ತು ಪತ್ರಿಕೋದ್ಯಮದ ಗುಣಶ್ರೇಷ್ಠತೆ (merit) ಇವುಗಳ ಅವಶ್ಯಕತೆ ಇಲ್ಲವೇ ಪ್ರಜಾಪ್ರಭುತ್ವದ ನಾಲ್ಕನೇ ವ್ಯವಸ್ಥೆ (fourth estate) ಎಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ? ಅಥವಾ ಹಣ ಮತ್ತು ಅಜೆಂಡಾದ ಹಿಂದೆ ಬಿದ್ದು “ಫಿಫ್ತ್ ಕಾಲಂ” ಆಗಿ ಕುಸಿದು ಬಿಟ್ಟಿತೆ ಪತ್ರಿಕೋದ್ಯಮ?

ಕೊನೆಯದಾಗಿ ತನ್ನ ಧಣಿಗೆ ರಿಚರ್ಡ್ ಹೀಗೆ ಹೇಳುತ್ತಾನೆ. “ನಿನ್ನ ಪತ್ರಿಕೆಯವರು ಹೆಣೆಯುವ ಪದಗಳು, ವಿಷಯಗಳು ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವ ಜ್ಞಾನ ನಿನಗಿಲ್ಲದಿದ್ದರೆ ಒಂದು ಕಾಮ ಪ್ರಚೋದಕ (porn) ಪತ್ರಿಕೆಯನ್ನು ಶುರು ಮಾಡು. ಅಥವಾ ಅವರು ಬರೆದ ಲೇಖನಗಳು ಪರಿಣಾಮ ಬೀರುತ್ತವೆ ಎಂದು ನಿನಗನ್ನಿಸಿಯೂ ಸಹ ನಿನ್ನ ಸಂಪಾದಕರು ಅನುಮತಿಸುವ ಪ್ರಚೋದಕ ಲೇಖನಗಳನ್ನು ತಡೆಯುವ ಮನಸ್ಸು ನಿನಗೆ ಇಲ್ಲದಿದ್ದರೆ ಬ್ರಿಟನ್ ನಂಥ ಒಂದು ಮಹೋನ್ನತ ದೇಶಕ್ಕೆ ನೀನೊಬ್ಬ ಕಂಟಕಪ್ರಾಯ ಎಂದು ತಿಳಿದುಕೋ”.

ಹತಾಶೆಯ ಮತ್ತು ಕ್ರೋಧ ತುಂಬಿದ ಮೇಲಿನ ಮಾತುಗಳು daily star ನ ಧಣಿಗೆ ಮಾತ್ರ ಅನ್ವಯವಾಗದೇ ಲೇಖನಿಯ ಪಾವಿತ್ರ್ಯದ ಅರಿವಿಲ್ಲದ ಎಲ್ಲರಿಗೂ ಅನ್ವಯವಾಗುತ್ತದೆ.         

fifth column: A fifth column is a group of people who clandestinely undermine a larger group such as a nation from within.

ಸಂಪೂರ್ಣ ಲೇಖನಕ್ಕೆ ಈ ಕೊಂಡಿ ಕ್ಲಿಕ್ಕಿಸಿ.

http://www.guardian.co.uk/media/2011/mar/04/daily-star-reporter-letter-full

Advertisements

4 thoughts on “ಓರ್ವ ಧೀಮಂತ ಪತ್ರಕರ್ತ

 1. Ravi ಹೇಳುತ್ತಾರೆ:

  ಮುಸ್ಲಿಮರ ಬಗ್ಗೆ ಹೀಗೆ ಹರಡುತ್ತಿರುವ ವಿರೋಧದ ಬಗ್ಗೆ ಖೇದವಿದೆ. ಹೀಗಾಗಲು ಕಾರಣೆ ಯಾರು ಎಂದು ಹುಡುಕುತ್ತ ಹೋದರೆ ಮುಸ್ಲಿಮರದ್ದೇ ಒಂದು ಗುಂಪು ಎಂದು ಕಾಣುತ್ತದೆ. ಅವರು ಸೃಷ್ಟಿ ಮಾಡಿದ ಜಾಗತಿಕ ಭೀತಿ ಈ ಥರ ಪರಿಣಾಮ ಬೀರಲು ಶುರು ಮಾಡಿದೆ. “ಜೆಹಾದ್” ಹೆಸರಿನಲ್ಲಿ ಮಾಡಿದ ನೂರಾರು ಕೃತ್ಯಗಳು ಮುಸ್ಲಿಮರಿಗೇ ತೊಂದರೆಯಾಗಿದೆ. ಮುಸ್ಲಿಮರನ್ನೆಲ್ಲ ಒಂದೇ ಬಣ್ಣದ ಕನ್ನಡಕದಲ್ಲಿ ನೋಡುವ ಹಾಗಾಗಿದೆ. ಕಾರಣಗಳೂ ಹಲವಿದೆ. ನಿಮ್ಮ ಲೇಖನದಲ್ಲಿ ಬಂಡೆದ್ದ ಪತ್ರಕರ್ತ ಒಬ್ಬ ಕ್ರಿಸ್ತಿಯನ್ ತರಹ ಕಾಣುತ್ತಾನೆ, ಆಟ ತನ್ನ ಮಾಲೀಕನನ್ನು ಪ್ರಶ್ನಿಸುತ್ತಾನೆ. ಧರ್ಮದ ವಿಷಯಕ್ಕೆ ಬಂದರೆ ಭಾರತದಲ್ಲೂ ಹಿಂದೂ ಆಚಾರಗಳನ್ನು ಪ್ರಶ್ನಿಸುವ ಹಿಂದೂಗಳೇ ಬಹು ಸಂಖ್ಯೆಯಲ್ಲಿ ಇದ್ದಾರೆ. ಆದರೆ ಹೀಗೆ ಪ್ರಶ್ನಿಸುವವರ ಸಂಖ್ಯೆ ಮುಸ್ಲಿಮರಲ್ಲಿ ಬಹಳ ಕಡಿಮೆ. ಧಾರ್ಮಿಕ ಸ್ವಾತಂತ್ರ್ಯ ಉಳಿದ ಧರ್ಮಗಳಿಗಿಂತ ತುಂಬಾ ಕಡಿಮೆ.

 2. Mahesh ಹೇಳುತ್ತಾರೆ:

  ಹೌದು, ಇಸ್ಲಾಮಿಯರಾರು ತಮ್ಮ ಆಚಾರಗಳನ್ನು ಪ್ರಶ್ಸಿಸುವದಿಲ್ಲ. ಅದರ ಅವಶ್ಯಕತೆ ಇಲ್ಲ. ಏಕೆಂದರೆ ಸಹಜವಾಗಿ ಯಾವುದು ಪರಿಪೂರ್ಮವೋ ಅದನ್ನು ಯಾಕೆ ಪ್ರಶ್ನಿಸಬೇಕು.?

  1. Ravi ಹೇಳುತ್ತಾರೆ:

   ಮಹೇಶ್ ಅವರೇ, ತಾವು ಇಸ್ಲಾಂ ಧರ್ಮೀಯರಾಗಿ ಈ ಮಾತು ಹೇಳಿದಿರೋ, ಇಲ್ಲ ಇಸ್ಲಾಂ ಓದಿ ಹೇಳಿದಿರೋ ಗೊತ್ತಿಲ್ಲ. ನಾನು ಇಸ್ಲಾಂ ಓದಿಲ್ಲ. ಆದುದರಿಂದ ಅದರ ಪರಿಪೂರ್ಣತೆಯ ಬಗ್ಗೆ ಮಾತಾಡುವ ಹಕ್ಕು ನನಗಿಲ್ಲ. ಆದರೂ ಒಂದು ಪ್ರಶ್ನೆ ಇದೆ: ಯಾವುದೇ ಒಂದು ಮತ, ತತ್ವ ಅಥವಾ ವಾದವನ್ನೇ ಆಗಲಿ ಪ್ರಶ್ನಿಸದೇ ಪರಿಪೂರ್ಣವೆಂದು ಒಪ್ಪಿಕೊಳ್ಳುವುದು ಸಾಧ್ಯವೇ?

 3. ssnkumar ಹೇಳುತ್ತಾರೆ:

  > ಯಾವುದು ಪರಿಪೂರ್ಮವೋ ಅದನ್ನು ಯಾಕೆ ಪ್ರಶ್ನಿಸಬೇಕು
  ಯಾವುದು ಪರಿಪೂರ್ಣ? ಭಗವಂತನನ್ನು ಬಿಟ್ಟು ಇನ್ಯಾವುದೂ ಪರಿಪೂರ್ಣವಲ್ಲ.
  ಇಸ್ಲಾಂ ಮೊದಲ್ಗೊಂಡು ಪ್ರತಿಯೊಂದು ಮತ-ಧರ್ಮಗಳೂ ಮಾನವನಿರ್ಮಿತ ಮತ್ತು ಮಾನವ ಪ್ರೇರಿತ.
  ಇವು ಪರಿಪೂರ್ಣವಾಗಲು ಹೇಗೆ ಸಾಧ್ಯ?
  ಎಲ್ಲಿ ಪ್ರಶ್ನೆಗಳಿಲ್ಲವೋ ಅಲ್ಲಿ ಉತ್ತರಗಳೂ ಇಲ್ಲ, ಸುಧಾರಣೆಗಳೂ ಇಲ್ಲ.

  > ಮುಸ್ಲಿಮರಿಗೆ ಮಾತ್ರವಲ್ಲ ಮೀಸಲಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು, ಹಿಂದುಳಿದ ಜಾತಿ ಮುಂತಾದ ಹಲವು
  > ಸಾಮಾಜಿಕ ಗುಂಪುಗಳಿಗೂ ಇವೆ ರಿಯಾಯಿತಿ
  ಭಾರತದಲ್ಲಿರುವ ಮೀಸಲಾತಿಗೆ ಐತಿಹಾಸಿಕ ಕಾರಣಗಳಿವೆ.
  ಹಿಂದುಗಳು ಶತಮಾನಗಳವರೆಗೆ ನಡೆಸಿದ (ಇಂದಿಗೂ ಕೆಲವೆಡೆ ಆಚರಣೆಯಲ್ಲಿರುವ) “ಅಸ್ಪೃಶ್ಯತೆ”ಯ ಪಾಪದಿಂದ ತಮ್ಮನ್ನು ತಾವೇ
  ತೊಳೆದುಕೊಳ್ಳಲು ಈ ಮೀಸಲಾತಿ ಬೇಕಾಗಿರುವುದು.
  ಇದಕ್ಕೂ ಮುಸಲ್ಮಾನ/ಕ್ರೈಸ್ತ ಸಮಾಜಗಳಿಗೂ ಯಾವ ಸಂಬಂಧವೂ ಇಲ್ಲ.
  ಇಸ್ಲಾಂ ಮತ್ತು ಕ್ರೈಸ್ತ ಮತಗಳು, ತಾವು “ಸಾಮಾಜಿಕ ಸಮಾನತೆ” ನೀಡುತ್ತೇವೆ ಎಂದು ಹೇಳಿಕೊಳ್ಳುತ್ತವಷ್ಟೆ.
  ಹಾಗಿದ್ದ ಮೇಲೆ, ದಲಿತನೊಬ್ಬ ಮುಸಲ್ಮಾನನಾದರೆ, ಆತ ದಲಿತನಾಗಿ ಉಳಿಯಲು ಸಾಧ್ಯವಿಲ್ಲ ಅಲ್ಲವೆ?
  ಆತನಿಗೆ ಯಾವ ಆಧಾರದ ಮೇಲೆ ಮೀಸಲಾತಿ ನೀಡಬೇಕು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s