ಈಜಿಪ್ಟ್ ಕ್ರಾಂತಿ

ಕಳೆದ ತಿಂಗಳ ಟುನೀಸಿಯಾ ಕ್ರಾಂತಿ ಅಲ್ಲಿನ ಅಧ್ಯಕ್ಷ ಪದವಿ ತೊರೆದು ಸೌದಿ ಸೇರುವುದರೊಂದಿಗೆ ಮುಕ್ತಾಯಗೊಂಡು ಅದರ ಪರಿಣಾಮ ಮಧ್ಯ ಪ್ರಾಚ್ಯ ದೇಶಗಳ ಇತರೆ ಸರ್ವಾಧಿಕಾರಿಗಳ ಮೇಲೂ ಬೀಳಲು ಆರಂಭಿಸಿತು. ಹೊಸ್ನಿ ಮುಬಾರಕ್ ಈಜಿಪ್ಟ್ ನ ಮಾಜಿ ಅಧ್ಯಕ್ಷ ಅನ್ವರ್ ಸಾದಾತ್ ರ ವಧೆಯ ನಂತರ ಗದ್ದುಗೆಗೆ ಏರಿದ ಕೂಡಲೇ ಇಳಿದು ಹೋಗುವ ದಾರಿ ಮರೆತು ಬಿಟ್ಟ. ತನ್ನ ದೀರ್ಘಾವಧಿ ಆಡಳಿತದ ಅವಧಿಯಲ್ಲಿ ತನ್ನ ದೇಶದ ವಿದ್ಯಾವಂತ ಸಮುದಾಯವನ್ನು ಒಂದು ಒಳ್ಳೆಯ ಗುಣಮಟ್ಟದ ಬದುಕಿನ ಕಡೆಗೆ ನಡೆಸುವ ಪ್ರಯತ್ನ ಮಾಡಲಿಲ್ಲ ಮುಬಾರಕ್. ಅವನ ದೂರದೃಷ್ಟಿತ್ವ ಕೇವಲ ತನ್ನ ಮಗ “ಗಮಾಲ್” ನನ್ನು ಪಟ್ಟಕ್ಕೆ ಏರಿಸುವುದೇ ಆಗಿತ್ತು. ಇದನ್ನು ಕಂಡು ರೋಸಿದ ಜನ ಒಳಗೊಳಗೇ ಕುದಿಯುತ್ತಿದ್ದರು. ಸಹನೆಯ ಕಟ್ಟೆ ಕೊನೆಗೂ ಒಡೆದು ಮುಬಾರಕ್ ನನ್ನು ಪದಚ್ಯುತಿಗೊಳಿಸಲು ತೀರ್ಮಾನಿಸಿದರು. ಮೊದ ಮೊದಲು “ಟ್ವಿಟ್ಟರ್” ಮತ್ತು “ಫೇಸ್ ಬುಕ್” ಸಹಾಯದಿಂದ ಜನರನ್ನು ಕಲೆ ಹಾಕಿ ನಂತರ ಬೀದಿಗೆ ಇಳಿದ ಜನ ಪೊಲೀಸರ ದಬ್ಬಾಳಿಕೆಗೆ ಜಪ್ಪಯ್ಯ ಅನ್ನದೆ ಬೀದಿ ಹೋರಾಟಕ್ಕೆ ನಿಂತರು. ಈ ಹೋರಾಟದಲ್ಲಿ ಜನರ ಕೈ ಮೇಲಾಗಿ ಪೊಲೀಸರು ಕಾಲು ಕಿತ್ತರು. ಈಗ ಸೈನ್ಯದ ಸರತಿ. ಆದರೆ ಸೈನ್ಯ ಜನರ ವಿರುದ್ಧ ಗುಂಡು ಹಾರಿಸಲಿಲ್ಲ. ಚೀನಾದ ತಿಯಾನನ್ಮೆನ್ ಚೌಕದಲ್ಲಿ ನಡೆದ ರಕ್ತದೋಕುಳಿ ಇಲ್ಲ ಮರುಕಳಿಸಲಿಲ್ಲ. ೩೦ ವರ್ಷಗಳ ಕಾಲ ಅಧಿಕಾರದಲ್ಲಿರುವ ಮುಬಾರಕ್ ಗೆ ಈ ಜನ ವಿರೋಧವನ್ನೂ ಯಾವ ರೀತಿಯಲ್ಲಿ ಹತ್ತಿಕ್ಕಬೇಕು ಎಂದು ಯಾರೂ ಪಾಠ ಹೇಳಬೇಕಿರಲಿಲ್ಲ. ರಾತ್ರಿ ಹೊತ್ತು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡಿ ಜನರನ್ನು ಲೂಟಿ ಮಾಡಲು ಪರೋಕ್ಷವಾಗಿ ಪ್ರೇರೇಪಿಸಿದ. ಇದನ್ನು ನೋಡಿದವರು ತಿಳಿಯಬೇಕು ಲೂಟಿಕೋರರ, ದಂಗೆಕೋರರ ಗಲಭೆ ಎಂದು. ಹೇಗಿದೆ ಟ್ರಿಕ್ಕು? ಸೌದಿ ಅರೇಬಿಯಾದ ದೊರೆ ಸಹ ಈ ಕ್ರಾಂತಿಯನ್ನು ಟೀಕಿಸಿ ಇದು ಅಲ್ಲಿನ ಪುಂಡರ ಕೃತ್ಯ ಎಂದು ತನ್ನ ಆಪ್ತ ಮಿತ್ರ ಮುಬಾರಕ್ ನ ಪರವಾಗಿ ಹೇಳಿಕೆ ನೀಡಿದರು. ಅದಕ್ಕೆ ಅಲ್ಲಿನ ಜನ ಕೊಟ್ಟ ಉತ್ತರ, ದೊರೆಗಳೇ, ತಾವು ಒಂದು ದಿನಕ್ಕೆ ೨ ಡಾಲರ್ ದುಡಿಮೆಯಲ್ಲಿ ದಿನ ಕಳೆಯಿರಿ ಆಗ ತಿಳಿಯುತ್ತದೆ ನಮ್ಮ ಕಷ್ಟ ಎಂದು. ಈಜಿಪ್ಟ್ ನ ಶೇಕಡಾ ೪೦ ರಶ್ಟು ಜನ ೨ ಡಾಲರ್ ಗಿಂತ ಕಡಿಮೆ ದುಡಿಯುತ್ತಾರಂತೆ. ನಿರೋದ್ಯೋಗ ಮುಗಿಲು ಮುಟ್ಟಿದ್ದು ಜನ ಹೇಗೂ ಬೀದಿ ಪಾಲಾಗಿದ್ದರು, ಅದರೊಂದಿಗೆ ಒಂದಿಷ್ಟು ಘೋಷಣೆಗಳನ್ನು ಕೂಗಿ, ಇಟ್ಟಿಗೆ ತುಂಡುಗಳನ್ನು ಪೊಲೀಸರ ಕಡೆ ಬೀಸಿ ಒಗೆದಾಗ ಹುಟ್ಟಿಕೊಂಡಿತು ಜನ ಕ್ರಾಂತಿ. ದಿನವೂ ಜನರು ಈಜಿಪ್ಟ್ ನ ರಾಜಧಾನಿ ಕೈರೋ ನಗರದ “ತೆಹ್ರೀರ್” ಚೌಕದಲ್ಲಿ ಸೇರಲು ತೊಅಗಿದರು. ಕೆಲವರಂತೂ ಟೆಂಟು ಗಳನ್ನು ಹಾಕಿ ಕೊಂಡು ಅಲ್ಲೇ ವಾಸಿಸುತ್ತಿದ್ದರು. ತಾತ್ಕಾಲಿಕ ಆಸ್ಪತ್ರೆಗಳೂ, ಔಷಧದಂಗಡಿ ಗಳೂ ತೆರೆದು ಕೊಂಡವು ಪ್ರತಿಭಟನಾಕಾರರ ಅವಶ್ಯಕತೆ ಪೂರೈಸಲು. ಇದನ್ನೆಲ್ಲಾ ನೋಡುತ್ತಿದ್ದ ಮುಬಾರಕ್ ಸಮಯ ತನ್ನ ಸಹಾಯಕ್ಕೆ ಬರಬಹುದು ಎಂದು ಲೆಕ್ಕ ಹಾಕುತ್ತಿದ್ದ. ಮುಬಾರಕ್ ಠಕ್ಕ ಮಾತ್ರವಲ್ಲ ಜಾಣ ನರಿಯೂ ಕೂಡಾ. ಎಷ್ಟಿದ್ದರೂ ರಾಜಕಾರಣಿಯಲ್ಲವೇ. ರಾಜಕಾರಣದ ಜೊತೆಗೇ ತಾನು ಸೇವೆ ಸಲ್ಲಿಸುತ್ತಿದ್ದ ಸೈನ್ಯದ ಕಾಠಿಣ್ಯ ಸಹ ಅವನಿಗೆ ಬಳುವಳಿಯಾಗಿ ಬಂದಿತ್ತು. ವಾಯುಸೇನೆಯ ನಿವೃತ್ತ ಫೈಟರ್ ಪೈಲಟ್ ಮುಬಾರಕ್. ವಿವಿಧ ಕ್ಷೇತ್ರಗಳಲ್ಲಿ ತಾನು ಕಲಿತ ವಿದ್ಯೆಯನ್ನು ದುಡಿಸಿ ಕೊಳ್ಳಲು ನೋಡಿದ. ಊಹೂಂ. ಜನ ಮೊಂಡು. ಕ್ರಾಂತಿಯ ಮೊದಲ ದಿನಗಳಲ್ಲಿ ಅವರ ಬೇಡಿಕೆ ಸರಳವಾಗಿತ್ತು. ನೀನು ತೊಲಗಿದರೆ ಸಾಕು, ಬೇರೇನೂ ಬೇಡ ಎಂದು. ದಿನ ಗಳೆದಂತೆ, ಹೊಸ ಹೊಸ ಸೂರ್ಯನ ಕಿರಣಗಳು ಚೌಕದ ಮೇಲೆ ಬೀಳುತ್ತಿದ್ದಂತೆ ತಲೆಯಲ್ಲಿ ಹೊಸ ಹೊಸ ವಿಚಾರಗಳು ಹುಟ್ಟಿಕೊಂಡವು. ಸಂವಿಧಾನ ಬದಲಿಸಬೇಕು, ನಿನ್ನ ಸಂಗಾತಿಗಳು ಉತ್ತರಾಧಿಕಾರಿ ಆಗಬಾರದು, ನೀನು ತೊಲಗಿದರೆ ಮಾತ್ರ ಸಾಲದು, ಕಟಕಟೆಯ ಹಿಂದೆ ನಿಂತು ಆಡಳಿತ ದುರುಪಯೋಗದ ಮತ್ತು ಖಜಾನೆ ಲೂಟಿಯ ಬಗ್ಗೆ ಉತ್ತರ ಕೊಡಬೇಕು ಎಂದು ದೊಡ್ಡ ಪಟ್ಟಿ ಮಾಡಿದರು. ಯಾವುದೇ ಪರಿಣಾಮ ಕಾಣದಾದಾಗ ಆಡಳಿತಾರೂಢ ಪಕ್ಷದ ಕೇಂದ್ರ ಕಛೇರಿಯನ್ನು ಜನ ಅಗ್ನಿಗೆ ಅರ್ಪಿಸಿದಾಗ ಭಯಬಿದ್ದ ಮುಬಾರಕ್ ಜನರನ್ನುದ್ದೇಶಿಸಿ ಮಾತನಾಡಿ ಎಲ್ಲ ರೀತಿಯ ಆಶ್ವಾಸನೆಗಳನ್ನು ಜನರಿಗೆ ನೀಡಲು ತೊಡಗಿದ. ಅವನ ಬತ್ತಳಿಕೆಯಲ್ಲಿನ ಬಾಣಗಳು ಖಾಲಿಯಾದವೇ ಹೊರತು ಜನರ ಬೇಡಿಕೆ ಮಾತ್ರ ಸ್ಪಷ್ಟವಾಗಿತ್ತು. Mubarak, we hate you.

೧೧.೨.೨೦೧೧ ಶುಕ್ರವಾರ. ಶುಭ ಶುಕ್ರವಾರ ಈಜಿಪ್ಷ್ಯನ್ನರಿಗೆ. ಗುರುವಾರ ರಾತ್ರಿಯಷ್ಟೇ ನಾನು ರಾಜೀನಾಮೆ ನೀಡಲಾರೆ ಎಂದು ಹಠ ಹಿಡಿದಿದ್ದ ಮುಬಾರಕ್ ಕೊನೆಗೂ ಶರಣಾದ ಜನರ ಬೇಡಿಕೆಗಳಿಗೆ, ಭಾವನೆಗಳಿಗೆ.

೨೫.೧.೨೦೧೧ ಕ್ಕೆ ಆರಂಭವಾದ ಈಜಿಪ್ಟ್ ಕ್ರಾಂತಿ ಪರ್ವಯವಸಾನ ಕಂಡಿದ್ದು ಹೀಗೆ. ಜನರ ಆಸೆಗಳಿಗೆ, ಆಕಾಂಕ್ಷೆಗಳಿಗೆ ಸ್ಪಂದಿಸದ ಎಂಥದ್ದೇ ದೊಡ್ಡ ಸರ್ವಾಧಿಕಾರಿಯೂ ಹೆಚ್ಚು ದಿನ ಆಳಲಾರ. ದೀರ್ಘಾವಧಿ ಅಧಿಕಾರದ ಗದ್ದುಗೆ ಮೇಲೆ ಕೂತ ವ್ಯಕ್ತಿ ಶುದ್ಧ ಸೋಮಾರಿಯಾಗಿ ಬಿಡುತ್ತಾನೆ. ಕಿವುಡೂ ತನ್ನನ್ನು ಸುತ್ತುವರೆದುಕೊಳ್ಳುತ್ತದೆ. ಮಧ್ಯ ಪ್ರಾಚ್ಯದಲ್ಲಿ ಇಂಥ ಸೋಮಾರಿಗಳ ದೊಡ್ಡ ದಂಡೇ ಇದೆ. ಬಹುಶಃ ತುನೀಸಿಯಾದ ಮತ್ತು ಈಜಿಪ್ಟ್ ನ ಬೀದಿಗಳು ಅವರಿಗೆ ಪಾಠಗಳಾಗ ಬಹುದು. ಈ ಕ್ರಾಂತಿಗಳಿಂದ ಮೈಮುರಿಯುತ್ತಾ ಏಳುತ್ತಿರುವ ಸಿರಿಯಾ, ಜೋರ್ಡನ್, ಯೆಮನ್ ದೇಶಗಳು ಈಗಾಗಲೇ ಜನರಿಗೆ ರಿಯಾಯಿತಿ ನೀಡಲು ಆರಂಭಿಸಿವೆ. ಈ ಕ್ರಾಂತಿಯ ವೇಳೆ ಸೌದಿ ದೊರೆ ಬೆನ್ನು ನೋವಿನಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಮೊರೋಕ್ಕೋ ದೇಶದ ತನ್ನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆತಂಕದಿಂದ ದೊರೆ ಮರಳಿ ತನ್ನ ದೇಶಕ್ಕೆ ಧಾವಿಸಿ ಬರಬಹುದು ಎಂದು ಇಲ್ಲಿ ಜನ ತಿಳಿದಿದ್ದರು. ಆದರೆ ಇಲ್ಲಿನ ದೊರೆಯ ಕಾರ್ಯಶೈಲಿ ಸ್ವಲ್ಪ ಭಿನ್ನ, ಮುಬಾರಕ್ ನಂಥವರಿಗಿಂತ. ದೇಶದ ಸಂಪತ್ತನ್ನು ದೋಚಿಕೊಂಡು ಜನರಿಗೆ ಏನನ್ನೂ ಮಾಡದೆ ಕೂತು ಬಿಡುವುದಿಲ್ಲ. ತನ್ನ ಜನರಿಗೂ ಒಂದಿಷ್ಟು ಒಳಿತನ್ನೇ ಮಾಡುತ್ತಾರೆ. ಈ ಕ್ರಾಂತಿಗಳ ನಂತರ ಸೌದಿಯಲ್ಲಿಯೂ ಸಹ ಜನರ ಮನೆ ಸಾಲವನ್ನು ಸರಕಾರ ಮನ್ನಾ ಮಾಡಿದೆ. ಇನ್ನೂ ಕೆಲವು sop ಗಳು ಬರಲಿವೆ ಎಂದು ಜನ ಜೊಳ್ಳು ಸುರಿಸುತ್ತಾ ಕಾಯುತ್ತಿದ್ದಾರೆ. ಇದ್ಯಾವುದೂ ಸಾಲದು ಎಂದೇನಾದರೂ ಜನ ಗೊಣಗುವ ಯತ್ನ ನಡೆಸಿದರೆ ಸದೆ ಬಡಿಯಲು ಧಾರ್ಮಿಕ ಗುರುಗಳನ್ನು ಬಳಸಿಕೊಳ್ಳುತ್ತಾರೆ. ಶ್ರದ್ಧಾವಂತ ಸೌದಿ ಜನತೆ ಇಲ್ಲಿನ ಪುರೋಹಿತ ಶಾಹಿಗಳಿಗೆ ಹೆದರುತ್ತಾರೆ, ಪುರೋಹಿತಶಾಹಿಗಳು ಸರಕಾರೀ ಆಶ್ರಯದಲ್ಲಿ ತಮಗೆ ಬೇಕಾದನ್ನು ಪಡೆದು ನಿಷ್ಠೆಯ ಬಾಡಿಗೆ ವಸೂಲು ಮಾಡುತ್ತಾರೆ. demand and supply policy.

ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಶೀತವಾದರೆ ಮೊದಲು ಸೀನುವುದು ಅಮೆರಿಕ ಎನ್ನುವ ವಿಚಾರ ಎಲ್ಲರಿಗೂ ತಿಳಿದದ್ದೇ. ಕ್ರಾಂತಿಯ ಮೊದ ಮೊದಲ ದಿನಗಳಲ್ಲಿ ದೊಡ್ಡ ರೀತಿಯ ಸುದ್ದಿ ಮಾಡದೆ ಮೌನವಾಗಿ ನೋಡಿದ ಅಮೇರಿಕಾ ಕೆಮ್ಮಲು ಆರಂಭಿಸಿತು. ಕೆಮ್ಮು ಜನರ ಪರವಾಗಿರಲಿಲ್ಲ. ಮುಬಾರಾಕ್ ಪರವಾಗಿತ್ತು. ಪ್ರತಿಭಟನೆ ಜೋರಾದಾಗ ವಿಚಲಿತವಾದ ಅಮೇರಿಕಾ ಹೇಳಿದ್ದು ನಮಗೆ ಈಜಿಪ್ಟ್ ಶಾಂತವಾಗಿರುವುದು ಬಹು ಮುಖ್ಯ, ಅಲ್ಲಿನ ಸರಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು. ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನೀಡಿದ ಅರ್ಧ ಡಜನ್ ಗೂ ಹೆಚ್ಚು ಪತ್ರಿಕಾ ಹೇಳಿಕೆಗಳಲ್ಲಿ ಎಲ್ಲಿಯೂ ಮುಬಾರಕ್ ನ ರಾಜೀನಾಮೆ ಕೇಳಲಿಲ್ಲ. ಅಮೆರಿಕೆಗೆ ಮುಬಾರಕ್ ಬೇಕು. ಇಲ್ಲದಿದ್ದರೆ ಅಮೇರಿಕಾ ಮತ್ತು ಇತರೆ ದೇಶಗಳು ಹೆದರುವ muslim brotherhood ಎನ್ನುವ ಸಂಘಟನೆ ಅಧಿಕಾರಕ್ಕೆ ಬರುವ ಅಪಾಯ ವಿದ್ದು ಈ ಸಂಘಟನೆಯನ್ನು ಮುಬಾರಕ್ ಹದ್ದುಬಸ್ತಿನಲ್ಲಿ ಇಟ್ಟಿದ್ದ. ಪ್ರತಿಭಟನಾಕಾರರಲ್ಲಿ ಗಡ್ಡ ಬಿಟ್ಟವರ ಸಂಖ್ಯೆ ಹೆಚ್ಚಿತ್ತೋ ಎಂದು ಅಮೆರಿಕೆಯ ಮಾಧ್ಯಮಗಳು ದುರ್ಬೀನಿಟ್ಟು ನೋಡಿದವು ತಹ್ರೀರ್ ಚೌಕದ ಸುತ್ತ. ಶಕ್ತಿಶಾಲಿ ಅಮೇರಿಕಾ ಶತ್ರುವಿನ ಅತ್ಯಾಧುನಿಕ ಕ್ಷಿಪಣಿಗಳನ್ನೂ, ಯುದ್ಧ ನೌಕೆಗಳನ್ನೂ, ಸಮರ ಟ್ಯಾಂಕುಗಳನ್ನೂ ಬಹು ಸಲೀಸಾಗಿ ನಿಭಾಯಿಸಬಲ್ಲುದು. ಆದರೆ ಗಡ್ಡವನ್ನು ಕಂಡರೆ ಮಾತ್ರ ಕರುಳಿಗೆ ಚಳಿ ಹಿಡಿಯುತ್ತದೆ. muslim brotherhood ತನಗೆ ರಾಜಕೀಯದಲ್ಲಿ ವಿಶೇಷವಾದ ಆಸಕ್ತಿಯಿಲ್ಲ ಎನ್ನುವ ಹೇಳಿಕೆ ನೀಡಿದರೂ “hidden agenda” ಇಟ್ಟುಕೊಂಡು ಕೆಲಸ ಮಾಡುವ ಸಂಘಟನೆಗಳನ್ನು ನಂಬುವುದು ಕಷ್ಟದ ಮಾತೇ.

ಈಜಿಪ್ಟ್ ಶನಿವಾರದಿಂದ ಒಂದು ಹೊಸ ಸೂರ್ಯನನ್ನು ಸ್ವಾಗತಿಸಲಿದೆ. ಹೊಸ ಸ್ವಾತಂತ್ರ್ಯ, ಹೊಸ ಸಂಭ್ರಮ. ಎರಡು ವಾರಗಳ ಬೀದಿ ಹೋರಾಟ ಒಂದು ಹೊಸ ಅಧಾಯವನ್ನು ಆರಂಭಿಸಲು ಸಹಾಯ ಮಾಡಿದೆ. ಸಾಮಾಜಿಕ ವೆಬ್ ತಾಣಗಳ (twitter, facebook) ಮೂಲಕ ಯುವಜನ ಆರಂಭಿಸಿದ ನವಯುಗದ ಹೋರಾಟ ಫಲ ನೀಡಿದೆ. ಈ ಹೋರಾಟದಲ್ಲಿ ಯಾರ್ಯಾರು ಪಾಠ ಕಲಿಯಲಿದ್ದಾರೆ ಎಂದು ಕಾಲವೇ ಉತ್ತರ ಹೇಳಲಿದೆ.

ಚಿತ್ರ: ಅಲ್-ಜಜೀರ

Advertisements

3 thoughts on “ಈಜಿಪ್ಟ್ ಕ್ರಾಂತಿ

  1. Mahesh ಹೇಳುತ್ತಾರೆ:

    ಅಂತರ್ಜಾಲ ಆಧಾರಿತ ವ್ವವಸ್ಧೆಯಲ್ಲಿ ಅತಿ ಉತ್ತಮ ಉದಾಹರಣೆಯೆಂದರೆ ಇದೇ ಇರಬಹುದೇನೋ. ಜಗತ್ತಿನಲ್ಲಿರುವ ಸರ್ವಾಧಿಕಾರಿಗಳಿಗೆಲ್ಲರಿಗೂ ಅಂತಿಮ ಕಾಲ ಸನ್ನಿಹಿತವಾಗಿದೆ. ಈಜಿಪ್ತಿಯನ್ನರಿಗೆ ಜಯವಾಗಲಿ.

  2. Pramod ಹೇಳುತ್ತಾರೆ:

    ಈಜಿಪ್ಟ್ ಜನರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಇದರಿ೦ದ ಪ್ರೇರೇಪಿತರಾಗಿ ಅಲ್ಜಿರಿಯಾ ಹಾಗೂ ಇರಾನ್ ನಲ್ಲಿ ಇದೇ ಮಾದರಿಯ ಕ್ರಾ೦ತಿ ಶುರುವಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s