ಕೇಂದ್ರದ ಮಾಜಿ ಸಚಿವ ಶಶಿ ತರೂರ್ ತಮ್ಮ ‘ಟ್ವಿಟ್ಟರ್’ ಪುಟದಲ್ಲಿ ಕೇರಳದ ದೇವಾಲಯವೊಂದರ ಸ್ವಾರಸ್ಯದ ಬಗ್ಗೆ ಬರೆದಿದ್ದರು. ಅವರು ನೋಡಿದ ದೇವಾಲಯದಲ್ಲಿ ಗಣೇಶ ಮತ್ತು ಶ್ರೀ ಕೃಷ್ಣರ ವಿಗ್ರಹಗಳು ಒಟ್ಟಿಗೆ ಇದ್ದು, ಹೀಗೆ ಈ ಎರಡು ದೇವರುಗಳು ಜೊತೆಯಾಗಿ ಇರುವ ದೇವಾಲಯ ಬೇರೆಯೂ ಇದೆಯೇ ಎಂದು ಕೇಳಿದ್ದರು.
ಕೇರಳದ ಕೋಟ್ಟಯಂ ಜಿಲ್ಲೆಯ ಕುರುಪ್ಪಂತರ ಸ್ಥಳದಲ್ಲಿ ಇರುವ ಈ ಅಪರೂಪದ ದೇವಾಲಯದ ಬಗ್ಗೆ ನನಗೂ ಆಸಕ್ತಿ ಹುಟ್ಟಿತು ಮಧ್ಯ ರಾತ್ರಿ ಯಲ್ಲಿ. ನೆಟ್ ಬಂಟ ಗೂಗ್ಲ್ ನಮಗಾಗಿ ಮತ್ತು ಇಂಥ ಕುತೂಹಲ ತಣಿಸಲು ತಾನೇ ಇರುವುದು? ಕೆಲವೇ ಸೆಕೆಂಡುಗಳಲ್ಲಿ ದೇವಾಲಯ ತೆರೆದು ಕೊಂಡಿತು. “ಮಳ್ಳಿಯೂರ್ ಶ್ರೀ ಗಣೇಶಾಯ ನಮಃ, ಅವಿಘನಮಸ್ತು ಶ್ರೀ ಕೃಷ್ಣಾಯ ನಮಃ” ಎನ್ನುವ ಬ್ಯಾನರ್ ಹೊತ್ತ ಈ ವೆಬ್ ತಾಣದಲ್ಲಿ ಸುಂದರ ಮಂದಿರದ ಚಿತ್ರವಿದೆ. ಈ ಮಂದಿರದಲ್ಲಿ ಶ್ರೀ ಗಣೇಶನ ತೊಡೆಯ ಮೇಲೆ ಶ್ರೀ ಕೃಷ್ಣ ಆಸೀನನಾಗಿದ್ದಾನೆ. ಈ ದೇವಾಲಯದ ವೆಬ್ ತಾಣ ದ ವಿಳಾಸ,
http://www.malliyoortemple.com/docs/Main.asp
ಮತ್ತೊಂದು ವಿಶೇಷ. ಕೇರಳದ ಶಬರಿ ಮಲೆ ಮೇಲೆ ಇರುವ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ ಹೋಗೋ ಮೊದಲು ಬೆಟ್ಟದ ಅಡಿಯಲ್ಲಿರುವ ವಾವರ್ ಎನ್ನುವ ಸೂಫಿ ಸಂತರ ಸಮಾಧಿಗೆ ಪೂಜೆ ಸಲ್ಲಿಸಿಯೇ ಅಯ್ಯಪ್ಪನಲ್ಲಿಗೆ ಹೋಗಬೇಕಂತೆ. ವಾವರ್ ಎನ್ನುವ ಮುಸ್ಲಿಂ ಯೋಧ ಅಸುರ ಮಹಿಷಿ ಯನ್ನು ಕೊಲ್ಲಲು ಸ್ವಾಮೀ ಅಯ್ಯಪ್ಪನಿಗೆ ಸಹಾಯ ಮಾಡಿದ ಕಾರಣಕ್ಕೆ ಅಯ್ಯಪ್ಪನ ಭಕ್ತರು ವಾವರ ರ ಮಸೀದಿಗೆ ಭೇಟಿ ನೀಡುತ್ತಾರೆ. ವಿವಿಧ ಮತಗಳ ಅನುಯಾಯಿಗಳೊಂದಿಗೆ ಸಾಮರಸ್ಯ ಸಾರುವ, ಹಳೆಕಾಲದ ಈ ತೆರನಾದ ನಂಬಿಕೆಗಳು ನಮ್ಮ ದೇಶದಲ್ಲಿ ಹೇರಳ. ಅದಕ್ಕೊಂದು ಉದಾಹರಣೆಯಾಗಿ ನಮಗೆ ಕಾಣಲು ಸಿಗುತ್ತದೆ ಅಯ್ಯಪ್ಪ ಸ್ವಾಮಿಯ ಜಾತ್ರೆ.