ಒಬಾಮಾ ಬಂದ್ರು, ಹೋದ್ರು , period .

ಅಮೆರಿಕೆಯ ಅಧ್ಯಕ್ಷ ಮಹೋದಯರು ಭಾರತದಲ್ಲಿ. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು, ಗಗನಚುಂಬಿ ಕಟ್ಟಡಗಳು ಮತ್ತು ಸಾಫ್ಟ್ವೇರ್ ಕ್ಷೇತ್ರದಲ್ಲಿ ನಾವು ಸಾಧಿಸಿದ ಅಭಿವೃದ್ಧಿಯನ್ನ ನೋಡಿ ಪ್ರಶಂಸಿಸಲು ಮತ್ತು ಮುಂಬೈಗೆ ಬಂದಿಳಿದ ಒಬಾಮ ಮುಂಬೈ ನರಹತ್ಯೆಯ ರೂವಾರಿ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ನಾಮಕರಣ ಮಾಡಬಹುದು ಎಂದು. ಆದರೆ ಒಬಾಮರಿಗೆ ಅಥವಾ ಅಮೆರಿಕನ್ನರಿಗೆ ಮುಂಬೈ ನರಹತ್ಯೆ ದೊಡ್ಡ ವಿಷಯವಲ್ಲ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಮತ್ತು ರಾಷ್ಟ್ರರಾಷ್ಟ್ರ ಗಳ ನಡುವಿನ ಸಂಬಂಧದಲ್ಲಿ ಅನುಭವವಾಗುವ collateral damage ಅಷ್ಟೇ ಮುಂಬೈಯಲ್ಲಿ ನಡೆದ ನಗ್ನ ಹಿಂಸೆ. ಪಾಕಿಗಳನ್ನು ವಿಚಾರಿಸಿ ಕೊಳ್ಳಲು ನಾವು ಅಮೆರಿಕೆಯನ್ನಾಗಲೀ ಇನ್ಯಾವುದೇ ರಾಷ್ಟ್ರವನ್ನಾಗಲಿ ಅವಲಂಬಿಸಕೂಡದು ಎಂದು ಚಾಣಕ್ಯಪುರಿಗೆ ಯಾವಾಗ ಹೊಳೆಯುತ್ತದೋ ನೋಡೋಣ. ಹಾಗೇನಾದರೂ ಸುದೈವವಶಾತ್ ಹೊಳೆದಲ್ಲಿ ಅಷ್ಟು ಹೊತ್ತಿಗೆ ನಾವೆಲ್ಲಾ ಪಾಕಿ ಭಯೋತ್ಪಾದಕರಿಗೆ  ಬಲಿಯಾಗದೆ ಜೀವಂತವಾಗಿದ್ದರೆ ನಮ್ಮ ಪುಣ್ಯ ಸಹ ಹೌದು.

ಈ ಮಧ್ಯೆ ಪತ್ರಿಕೆಗಳು ಮತ್ತು ಟೀವೀ ಮಾಧ್ಯಮಗಳು ಒಬಾಮಾ ಪಾಕ್ ಬಗ್ಗೆ ಏನೂ ಹೇಳಲೇ ಇಲ್ಲ ಎಂದು ಮುನಿಸಿಕೊಂಡವು. ನಾವೆಲ್ಲಾ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡಬೇಡಿ ಎಂದು ಪಾಕಿಗಳಿಗೆ ತಾಕೀತು ಮಾಡಬಹುದು ಎಂದು ಬಗೆದಿದ್ದೆವು ಆದರೆ ಅಮೇರಿಕಾ ಎಂದಿಗೂ ಪಾಕಿನ ಮಿತ್ರ ಎಂದು ಸಾಬೀತು ಪಡಿಸಿತು ಎಂದು ಹಲುಬಿದವು ಮಾಧ್ಯಮಗಳು. ಒಂದು ರೀತಿಯ ದೈನಂದಿನ ಬದುಕಿನ ದೃಶ್ಯದ ಥರ ಕಾಣುತ್ತಿಲ್ಲವೇ ಇದು? ಕಮಲಮ್ಮನ ಮನೆಗೆ ಪಕ್ಕದ ಮನೆಯ ಜಾನಕಮ್ಮ ಬಂದು ಸರಸಮ್ಮನ ಬಗ್ಗೆ ಏನೂ ಚಾಡಿ ಹೇಳಿಲ್ಲ ಎಂದು ದೂರುವ ಹಾಗೆ ವರ್ತಿಸಿದವು ಮಾಧ್ಯಮಗಳು ಮತ್ತು ಒಬಾಮಾರ ಭೇಟಿಯ ಬಗ್ಗೆ ಮಾತನಾಡಲು ಬಂದ ಪಂಡಿತರು. ಅಮೇರಿಕಾ ಪಾಕಿನ ಬಗ್ಗೆ ಅಷ್ಟು ಸುಲಭವಾಗಿ ದೂರಲು ಹೋಗೋದಿಲ್ಲ. ಕೆಲವಾರಗಳ ಹಿಂದೆ ಬ್ರಿಟಿಶ್ ಪ್ರಧಾನಿ ಕಮೆರೂನ್ ಬಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದು ಕೊಂಡಿದ್ದರು. ಭಯೋತ್ಪಾದಕತೆ ಶುರು ಆಗೋದೆ ಪಾಕಿನಿಂದ ಎನ್ನುವರ್ಥದ ಮಾತನ್ನು ಹೇಳಿದರು. ಹಾಗೆ ಹೇಳಿದ್ದಕ್ಕೆ ಪಾಕಿನಿಂದ ಉಗ್ರ ಪ್ರತಿಭಟನೆ ಬಂದರೂ ಕಮೆರೂನ್ ಜಗ್ಗಲಿಲ್ಲ. ಆದರೆ ಇದನ್ನು ವೀಕ್ಷಿಸಿದ್ದ ಅಮೆರಿಕೆಗೆ ಇದು ಎಚ್ಚರಿಕೆ ಗಂಟೆಯಾಯಿತು. ಕೆಮೆರೂನ್ ಏನೇ ಹೇಳಿದರೂ ಅವರಿಗೆ ನಷ್ಟವಿಲ್ಲ ಏಕೆಂದರೆ ಆಫ್ಘಾನಿಸ್ತಾನದಲ್ಲಿ ಅವರ ಪಾತ್ರ ದೊಡ್ಡದಲ್ಲ. ಆದರೆ ಅಮೆರಿಕೆಯ ವಿಷಯ ಹಾಗಲ್ಲ. ಕಂದಹಾರದ ಉಗ್ರರನ್ನು ಬಲಿ ಹಾಕಬೇಕೆಂದರೆ ಪಾಕಿನ ಸಹಕಾರ ಬೇಕೇ ಬೇಕು. ನಾವ್ಯಾಕೆ ಬೇಡದ ಉಸಾಬರಿಗೆ ಕೈ ಹಾಕಿ ಕಷ್ಟದಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕು. ನಾವು ಬಂದಿರೋದು ವ್ಯಾಪರಕ್ಕೊಸ್ಕರ. ವ್ಯಾಪಾರ ಕುದುರಿಸಿ ಒಂದಿಷ್ಟು ಡಾನ್ಸ್ ಮಾಡಿ ಭಾರತೀಯರನ್ನು ಮೋಡಿ ಮಾಡಿದರೆ ಸಾಕು ಎಂದು ಅಮೆರಿಕೆಯ ಎಣಿಕೆ. ಈ ಕಾರಣಕ್ಕಾಗಿಯೇ ಅಮೆರಿಕೆಯ ದಿವ್ಯ ಮೌನ ಪಾಕ್ ಭಯೋತ್ಪಾದಕತೆ ಬಗ್ಗೆ. ಒಬಾಮ ಬಂದ ಮೊದಲ ದಿನವೇ 10 billion ಡಾಲರ್ಗಳ ವ್ಯಾಪಾರ ಮಾಡಿತು ಅಮೇರಿಕ.

NPR ಅಮೆರಿಕೆಯ ಪ್ರಸಿದ್ಧ ರೇಡಿಯೋ ಮಾಧ್ಯಮ. ಒಬಾಮಾ ಜೊತೆಗೆ ಬಂದಿದ್ದ npr ವರದಿಗಾರ st. xaviers college ನಲ್ಲಿ ನಡೆದ ಅಧ್ಯಕ್ಷರ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ ದ ವೇಳೆ ೧೯ ರ ಓರ್ವ ತರುಣಿ ಪಾಕಿನ ಭಯೋತ್ಪಾದನೆ ಬಗ್ಗೆ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದರ ಬಗ್ಗೆ ಹೇಳುತ್ತಾ “ಭಾರತಕ್ಕೆ ಪಾಕಿಸ್ತಾನ ಎಂದರೆ ಒಂದು ರೀತಿಯ jealous and rivalry ಎಂದು ಹೇಳಿದ. rivalry ಏನೋ ಸರಿಯೇ. ಆದರೆ jealous ಯಾವುದರ ಬಗ್ಗೆಯೋ ತಿಳಿಯುತ್ತಿಲ್ಲ. ಎಲ್ಲಾ ತೀರ್ಮಾನಗಳಿಗೂ, ನಿರ್ಧಾರಗಳಿಗೂ ಇಸ್ಲಾಮಾಬಾದ್ ಅಮೆರಿಕೆಯ ವಾಷಿಂಗ್ಟನ್ ನಿಂದ dictation ತೆಗೆದು ಕೊಳ್ಳುತ್ತದಲ್ಲಾ, ಪಾಕಿಗಳ ಈ ಬೆನ್ನುಲುಬಿಲ್ಲದ ನಡವಳಿಕೆ ಬಗ್ಗೆ ಇರಬೇಕು ನಮಗೆ ಮತ್ಸರ, jealousy.           

ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕಾರಣಿಗಳಂತೆಯೇ ಭರವಸೆಯನ್ನ ನೀಡಲು ಮರೆಯಲಿಲ್ಲ ಒಬಾಮಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಬೆಂಬಲ ಸೂಚಿಸಿದ ಒಬಾಮ ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತ ಜಗಾರೂಕತೆಯಿಂದ ವರ್ತಿಸುವಂತೆ ಸೂಕ್ಷ್ಮವಾಗಿ ಸೂಚಿಸಿದರು. ಆದರೆ ಈ ಆಶ್ವಾಸನೆಯ ಬೆನ್ನಲ್ಲೇ ಬಂದವು ಅಪಸ್ವರಗಳು, ಜರ್ಮನಿ ಮತ್ತು ಜಪಾನ್ ದೇಶಗಳಿಂದ. ಒಬಾಮಾ ನೀಡಿದ್ದು ಆಶ್ವಾಸನೆ ಮಾತ್ರ, ಈ ಆಶ್ವಾಸನೆ ವಿರುದ್ಧವೇ ತಕರಾರು ಬಂದರೆ ಇನ್ನು ವಿಶ್ವಸಂಸ್ಥೆಯಲ್ಲಿ ನಮಗೆ ಯಾವ ರೀತಿಯ ಬೆಂಬಲ ಸಿಕ್ಕೀತು ಎಂದು ಊಹಿಸಲು ನಮಗೆ ರಾಜನೀತಿಯಲ್ಲಿ ಡಾಕ್ಟರೇಟ್ ಪದವಿಯ ಅವಶ್ಯಕತೆಯಿಲ್ಲ.  

ಒಟ್ಟಿನಲ್ಲಿ ಒಬಾಮ ಬಂದರು, ಮಾಧ್ಯಮಗಳಿಗೆ ಸುಗ್ಗಿಯೋ ಸುಗ್ಗಿ. ಒಬಾಮ ಎಲ್ಲಿಗೆಹೋದರು, ಏನನ್ನು ತಿಂದರು,  ಹೇಗೆ ಕುಣಿದರು ಇತ್ಯಾದಿ ಇತ್ಯಾದಿ ಪುಂಖಾನುಪುಂಖವಾಗಿ ವರದಿ ಮಾಡಿದವು. ನಮಗೂ ಒಂದು ರೀತಿಯ ಪುಳಕ. ಬಿಳಿಯರ ನಾಡಿನಿಂದ ಒಂದು ಕಾಗೆ ಬಂದಿಳಿದರೂ ನಮ್ಮ ಬದುಕು ಸಾರ್ಥಕವಾಗಿ “ಅತಿಥಿ ದೇವೋ ಭವನನ್ನು ಸಂತುಷ್ಟ ನನ್ನಾಗಿಸಿದ ಭಾವನೆಯಲ್ಲಿ ಧನ್ಯರಾಗಿ ಬಿಡುತ್ತೇವೆ.

Advertisements

4 thoughts on “ಒಬಾಮಾ ಬಂದ್ರು, ಹೋದ್ರು , period .

 1. Narendra ಹೇಳುತ್ತಾರೆ:

  ನಿಮ್ಮ ಮಾತುಗಳಿಗೆ ನನ್ನ ಶತ-ಪ್ರತಿಶತ ಸಹಮತವಿದೆ.
  ಅಮೆರಿಕದ ಆತ್ಮ ವ್ಯಾಪಾರ.
  ಅದು ಏನೇ ಮಾಡಿದರೂ, ವ್ಯಾಪಾರದ ಕಡೆಯೇ ದೃಷ್ಟಿಯಿರುತ್ತದೆ.
  ವ್ಯಾಪಾರ ಮಾಡುವಾತ ಎಂದಿಗೂ ತನ್ನ ಎದುರಿರುವವನ ಹಿತವನ್ನು ಕಾಯುವ ಚಿಂತನೆ ನಡೆಸುವುದಿಲ್ಲ.
  “ವ್ಯಾಪಾರಂ ದ್ರೋಹ ಚಿಂತನಂ” ಎನ್ನುತ್ತಾರೆ.
  ಹೀಗಾಗಿ ಅಮೆರಿಕಾ ಭಾರತದ ಹಿತವನ್ನು ಕಾಯುತ್ತದೆ ಎಂದು ಅಪೇಕ್ಷಿಸಿದರೆ, ಅದಕ್ಕಿಂತ ಮುಠ್ಠಾಳತನ ಮತ್ತೊಂದಿಲ್ಲ.

  ಇನ್ನು ಪಾಕಿಸ್ತಾನದ ಕುರಿತಾಗಿ, ನಮ್ಮ ಸರಕಾರದ ನಿಲುವೇ ಅರ್ಥವಾಗುವುದಿಲ್ಲ.
  ಪಾಕಿಸ್ತಾನ ನಮ್ಮ ಶತೃ ರಾಷ್ಟ್ರ ಎಂದು ಆಗಾಗ ಹೇಳುತ್ತಿರುತ್ತದೆ.
  ಅದಕ್ಕೆ ಬುದ್ಧಿ ಹೇಳುವಂತೆ ಅಮೆರಿಕಕ್ಕೆ ಕೇಳಿಕೊಳ್ಳುತ್ತದೆ.
  ಆದರೆ, ಸರಿಯಾದ ನಿರ್ಣಾಯಕ ಸಮಯದಲ್ಲಿ, ಅದನ್ನು ಮಿತ್ರನಂತೆ ನೋಡಿಬಿಡುತ್ತದೆ.
  ಪಾಕಿಸ್ತಾನದೊಡನೆ ಯುದ್ಧಗಳಾಗಿವೆ, ಅವೆಲ್ಲದರಲ್ಲೂ ನಾವು ಜಯ ಗಳಿಸಿದ್ದೇವೆ.
  ಆದರೆ, ಪೃಥ್ವಿರಾಜ ಚೌಹ್ಣಾಣನು ಮಹಮ್ಮದ್ ಘೋರಿಯನ್ನು ಸೋಲಿಸಿ ನಂತರ ಕ್ಷಮಿಸಿ ಬಿಟ್ಟಂತೆ, ನಾವೂ ಮಾಡುತ್ತಿದ್ದೇವೆ.
  ಆದರೆ, ಪೃಥ್ವೀರಾಜನು ತನ್ನ ಈ ಮೂರ್ಖತನದ ಕಾರಣಕ್ಕಾಗಿ ದೇಶದ ಹಿತವನ್ನೇ ಬಲಿಗೊಟ್ಟನು.
  ನಮ್ಮ ಸರಕಾರವೂ ಅದನ್ನೇ ಮಾಡಲು ಹೊರಟಿದೆ.
  ಪದೇ ಪದೇ ನಮಗೆ ತೊಂದರೆ ಕೊಡುತ್ತಿರುವ ಪಾಕಿಗೆ, ಮತ್ತೆಂದೂ ನಮಗೆ ತೊಂದರೆ ಕೊಡದಂತೆ ಪಾಠ ಕಲಿಸುವುದನ್ನು ಬಿಟ್ಟು, ಅವರೊಡನೆ ಮಾತುಕತೆಗೆ ಕುಳಿತು, ಸೈನಿಕರು ಗೆದ್ದದ್ದನ್ನು ಬಿಟ್ಟುಕೊಡುವ ಮುಠ್ಠಾಳರು ನಮ್ಮ ಆಳುಗರು.
  ಇನ್ನು ಪಾಕಿಸ್ತಾನದೊಡನೆ ಯುದ್ಧ ಮಾಡಿದರೆ, ನಮ್ಮಲ್ಲಿರುವ ಮುಸಲ್ಮಾನರು ಬೇಸರಿಸಿಕೊಂಡು ಚುನಾವಣೆಯಲ್ಲಿ ಮತ ನೀಡುವುದಿಲ್ಲವೆಂದೂ ನಮ್ಮ ಜಾತ್ಯಾತೀತವಾದಿಗಳು ಭಯ ಬೀಳುತ್ತಾರೆ.
  ಒಟ್ಟಿನಲ್ಲಿ, ಪಾಕಿಸ್ತಾನಕ್ಕೆ ನಾವು ಪಾಠ ಕಲಿಸಲಾಗದೆ, ಅಮೆರಿಕದಿಂದ ಅದನ್ನು ನಿರೀಕ್ಷಿಸುವುದು, ಹೇಡಿತನ ಮತ್ತು ಅವಿವೇಕದ ಪರಮಾವಧಿ.

  1. bhadravathi ಹೇಳುತ್ತಾರೆ:

   ನರೇಂದ್ರ, ನಮಸ್ಕಾರಗಳು. ಎಂದಿನಂತೆ ಮತ್ತೊಮ್ಮೆ ಮುಸ್ಲಿಮರನ್ನು ಎಲ್ಲದಕ್ಕೂ ಎಳೆದು ತರುವ ಪ್ರಯತ್ನ. ಅಲ್ಲಾ, ನರೇಂದ್ರ ಇದುವರೆಗೆ ಪಾಕಿಸ್ತಾನದೊಂದಿಗೆ ಯುಉದ್ಧಗ ಳಾಗಿವೆ, ನಾವು ಗೆದ್ದಿದ್ದೇವೆ ಎಂದೂ ಹೇಳುತ್ತೀರಾ, ನಂತರ ಪಾಕಿನೊಂದಿಗೆ ಯುಧ ಮಾಡಿದರೆ ಮುಸ್ಲಿಂ ವೋಟುಗಳು ತಪ್ಪಿ ಹೋಗುವ ಭಯ ಸರಕಾರಕ್ಕೆ ಎಂದೂ ಹೇಳುತ್ತೀರಾ, ಒಂದು ರೀತಿಯ ದ್ವಂದ್ವ ಇಲ್ಲವೇ ಇಲ್ಲಿ? ಪಾಕಿನೊಂದಿಗೆ ಯುದ್ಧ ಮಾಡಿದರೆ ಮುಸ್ಲಿಮರಿಗೆ ಯಾವ ತೊಂದರೆಯೂ ಇಲ್ಲ. ಅಷ್ಟಕ್ಕೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಪ್ರಥಮ ಸೈನಿಕ ಕ್ಯಾಪ್ಟನ್ ಹನೀಫುದ್ದೀನ್. ನಮಗೆ ನಮ್ಮ ತಾಯಿ ನಾಡು ಮುಖ್ಯ, ತಾಯಿ ನಾಡಿಗಾಗಿಯೇ ನಮ್ಮ ಬಲಿದಾನವೂ ಕೂಡಾ. ಇನ್ನು ಆಳಲು ಕುಳಿತಿರುವವರ ಅಯೋಗ್ಯತನಕ್ಕೆ ಮುಸ್ಲಿಮರನ್ನು ದೂರಿ ಫಲವಿಲ್ಲ, ಅಲ್ಲವೇ? ಚರ್ಚಿಲ್ ಹೇಳಿದ ಮಾತು ಇಂದಿಗೂ ಎಷ್ಟು ಪ್ರಸ್ತುತ ನೋಡಿ, ಫಕೀರರು (ಭಾರತೀಯರು) ಆಳಲು ಅಯೋಗ್ಯರು, ಇವರಿಗೆ ಸ್ವಾತಂತ್ರ್ಯ ಕೊಡಬಾರದು ಎಂದು ಅಂದಿನ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಮೇಲೆ ಒತ್ತಾಯ ಹೇರಿದ್ದ, ಚರ್ಚಿಲ್.

 2. Narendra ಹೇಳುತ್ತಾರೆ:

  ಇಲ್ಲಿ ನೀವು ಗಮನಿಸದ ಸಂಗತಿಯೆಂದರೆ, ನಾನೆಲ್ಲೂ ಮುಸಲ್ಮಾನರನ್ನು ಧೂಷಿಸಿಲ್ಲ.
  ನನ್ನ ಅಳಲಿರುವುದು “ಜಾತ್ಯಾತೀತ”ವಾದದ ಹೆಸರಿನಲ್ಲಿ, ಕೇವಲ ಮತಗಳ ಆಸೆಗಾಗಿ ತುಷ್ಟೀಕರಣ ಮಾಡುತ್ತಿರುವುದರ ಬಗ್ಗೆ.
  ಪಾಕಿಸ್ತಾನದೊಡನೆ ಯುದ್ಧಗಳಾಗಿವೆ. ಆದರೆ, ಅವಾವುದೂ ನಾವಾಗಿ ಪ್ರಾರಂಭಿಸಿದ್ದಲ್ಲ.
  ಅವೆಲ್ಲವೂ ನಮ್ಮ ಮೇಲೆ ಹೇರಿದ್ದು. ಕುತ್ತಿಗೆಗೆ ಬಂದಾಗ ಏನಾದರೂ ಮಾಡಲೇಬೇಕಲ್ಲವೇ – ಸರಕಾರ ಯುದ್ಧ ಘೋಷಿಸಬೇಕಾಯಿತು.
  ಆದರೆ, ಯುದ್ಧವನ್ನು ಗೆದ್ದ ನಮ್ಮ ವರ್ತನೆ ಹೇಗಿರಬೇಕು? ಮುಂದೆ ಯುದ್ಧಗಳಾಗದಂತೆ ಮಾಡಲು ಏನು ಕ್ರಮಗಳನ್ನು ಕೈಗೊಳ್ಳಲಾಯಿತು?
  ೧೯೬೫ರ ಯುದ್ಧವನ್ನು ನಾವು ಗೆದ್ದರೂ ನಮ್ಮ ಪ್ರಧಾನಮಂತ್ರಿಗಳನ್ನೇ ಕಳೆದುಕೊಂಡೆವು, ಜೊತೆಗೆ ಗೆದ್ಧ ಭಾಗಗಳನ್ನೂ.
  ೧೯೭೧ರ ಯುದ್ಧದಲ್ಲಿ ನಮ್ಮ ಶೂರ ಸೈನಿಕರು ೯೫,೦೦೦ ಪಾಕಿಸ್ತಾನಿ ಸೈನಿಕರನ್ನು ಸೆರೆ ಹಿಡಿದರು. ಆದರೆ ಸರಕಾರ ಮಾಡಿದ್ದೇನು – ಮತ್ತೊಂದು ಶತೃರಾಷ್ಟ್ರ ಹುಟ್ಟುಹಾಕಿದರು.

  ಇನ್ನು ಈಗ ನೋಡಿ. ರಾಹುಲ್ ಗಾಂಧಿ “ಆರೆಸ್ಸೆಸ್” ಮತ್ತು “ಸಿಮಿ” ಎರಡೂ ಒಂದೇ ರೀತಿಯವು ಎಂದು ಘೋಷಿಸಿದ್ದಾರೆ. ಅವರಿಗೆ ಆರೆಸ್ಸೆಸ್ ಕುರಿತಾಗಿ ತಿಳಿದಿಲ್ಲವೆಂದಲ್ಲ. ಸ್ವತಃ ಅವರ ಸಹೋದರಿ ಪ್ರಿಯಾಂಕಾರ ಪತಿಯವರ ಮನೆಯವರೇ ಆರೆಸ್ಸೆಸ್‍ನ ಒಂದು ಶಾಲೆ ನಡೆಸುತ್ತಾರೆ. ಲಕ್ಷಾಂತರ ಹಳ್ಳಿಗಳಲ್ಲಿ, ಕೋಟ್ಯಂತರ ವನವಾಸಿಗಳ ನಡುವೆ ಆರೆಸ್ಸೆಸ್ ಮಾಡುತ್ತಿರುವ ಕೆಲಸವನ್ನು ಯಾವ ಸರಕಾರವೂ ಮಾಡಲಾರದು. ಆರೆಸ್ಸೆಸ್, ಉಗ್ರಗಾಮಿ ಸಂಸ್ಥೆಯಾಗಬೇಕಿದ್ದರೆ, ಇವೆಲ್ಲಾ ಸೇವಾಕಾರ್ಯಗಳನ್ನು ನಡೆಸುವ ಆವಶ್ಯಕತೆಯಿರಲಿಲ್ಲ. ಇಂತಹ ಆರೆಸ್ಸೆಸ್ ಕುರಿತಾಗಿ ಇದ್ದಕ್ಕಿದ್ದಂತೆ ಅಂತಹ ಆರೋಪಗಳು ಹೇಗೆ? ಇದಕ್ಕೆ ಪುರಾವೆಯಾದರೂ ಏನು?
  ಅವರಿಗೆ ಪುರಾವೆ ಬೇಕಿಲ್ಲ. ತಮ್ಮ ಮಾತುಗಳನ್ನು ತಿರುಚಿದರು ಎಂದು ಮುಂದೊಮ್ಮೆ ಹೇಳಿಕೆ ನೀಡಿಬಿಟ್ಟರಾಯಿತು. ಆದರೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವವರಿಗೆ ಆ ರೀತಿಯ ಅವಹೇಳನಗಳು ಸುಲಭದಲ್ಲಿ ಮರೆಯುವುದಿಲ್ಲ. ರಾಹುಲ್ ಗಾಂಧಿಯ ಹೇಳಿಕೆ ಸುಖಾಸುಮ್ಮನೆ ಹೇಳಿದ್ದಲ್ಲ. ಅವರ ಎಲ್ಲಾ ಗಮನ ಈಗ ಬಿಹಾರದ ಚುನಾವಣೆಯ ಮೇಲಿದೆ ಮತ್ತು ಉತ್ತರಪ್ರದೇಶದ ಮುಂದಿನ ಚುನಾವಣೆಯ ಮೇಲಿದೆ. ಅವರು ಆ ಎರಡು ರಾಜ್ಯಗಳನ್ನು ಗೆಲ್ಲದೆ, ಕಾಂಗ್ರೆಸ್ ಸರಕಾರ ಮಾಡಲಾಗುವುದಿಲ್ಲ. ಅಲ್ಲಿ ಗೆಲ್ಲಲು, ಅವರಿಗೆ ಮುಸಲ್ಮಾನರ ಮತಗಳು ಬೇಕೇಬೇಕು. ಆರ್.ಜೆ.ಡಿ, ಎಸ್.ಪಿ, ಬಿ,ಎಸ್.ಪಿ. ಗಳಿಂದ ಮುಸಲ್ಮಾನರ ಮತಗಳನ್ನು ಹೇಗಾದರೂ ಲಪಟಾಯಿಸಲು, ಅವರು ನಡೆಸುತ್ತಿರುವ ಷಡ್ಯಂತ್ರವಿದು.

  ಇನ್ನು ನಿಮ್ಮಂತಹ ವಿದ್ಯಾವಂತ ಮುಸಲ್ಮಾನರು, ರಾಹುಲ್ ಗಾಂಧಿಯವರ ಮಾತುಗಳನ್ನು ನಿನವೆನ್ನುವಂತೆ ಬಿಂಬಿಸಲು ಯತ್ನಿಸುತ್ತೀರಿ. ಕೆಲವು ಉಗ್ರಗಾಮಿ ಕೆಲಸಗಳನ್ನು ಹಿಂದುಗಳ ತಲೆಗೆ ಕಟ್ಟಲು ಯತ್ನಿಸಿದ್ದಾರೆ. ಆದರೆ, ಅವುಗಳಾವುದರಲ್ಲೂ ಒಂದಿನಿತೂ ಪುರಾವೆ ದೊರೆತಿಲ್ಲ. ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜೈಲು ಸೇರಿ ವರ್ಷಗಳಾದುವು. ಅವರ ಮೇಲೆ ಚಾರ್ಜ್‍ ಶೀಟ್ ಕೂಡಾ ಹಾಕಲಾಗಿಲ್ಲ. ಒಂದೇ ಒಂದು ಆರೋಪವನ್ನೂ ಸಾಬೀತು ಪಡಿಸಲಾಗಿಲ್ಲ. ಹಾಗಿದ್ದ ಮೇಲೆ, ಅವರನ್ನು ಜೈಲಿನಲ್ಲಿ ಕೊಳೆಸುವುದಕ್ಕೆ ಅರ್ಥವಾದರೂ ಏನು?
  ಇದನ್ನೆಲ್ಲಾ ನೋಡಿದಾಗ, ಈ ದೇಶವನ್ನು ಪ್ರೀತಿಸುವ ಯಾರಿಗಾದರೂ ಸಂಕಟವಾಗದೇ ಇರುವುದಿಲ್ಲ.

  ನನ್ನ ಕೋಪವಿರುವುದು ಮುಸಲ್ಮಾನರ ಮೇಲಲ್ಲ. ಬದಲಾಗಿ ಉಗ್ರಗಾಮಿಗಳ ಮೇಲೆ ಮತ್ತು ಅವರನ್ನು ತಮ್ಮವರೆಂದು ಹೇಳಿಕೊಳ್ಳುವವರ ಮೇಲೆ ಮತ್ತು “ಜಾತ್ಯಾತೀತ”ವಾದದ ಹೆಸರಿನಲ್ಲಿ ಅವರನ್ನು ಬೆಂಬಲಿಸುವವರ ಮೇಲೆ. ಇಂತಹವರಿಂದ ಈ ದೇಶಕ್ಕೆ ಒಳ್ಳೆಯದಾಗಲು ಸಾಧ್ಯವಿಲ್ಲ.

  ಹೀಗಾಗಿ, ನನ್ನ ಕೋರಿಕೆ ಇಷ್ಟೇ. ನನ್ನನ್ನು “ಮುಸಲ್ಮಾನ ಧ್ವೇಷಿ” ಎಂದು ನೀವು ತಿಳಿದುಕೊಂಡಿದ್ದರೆ, ಅದು ತಪ್ಪು. ದಯವಿಟ್ಟು ನಿಮ್ಮ ಆ ಭಾವನೆಗಳನ್ನು ಬದಲಿಸಿಕೊಳ್ಳಿ. ನೀವು ಕ್ಯಾಪ್ಟನ್ ಹನೀಫುದ್ದೀನ್ ಉದಾಹರಣೆ ನೀಡಿದಿರಿ. ನಾನು ಅಶ್ವಾಖ್ ಉಲ್ಲಾ ಖಾನನ ಉದಾಹರಣೆ ನೀಡುತ್ತೇನೆ. ಉಸ್ತಾದ್ ಅಮ್ಜದ್ ಆಲಿಖಾನ್, ಉಸ್ತಾದ್ ಜಾಕಿರ್ ಹುಸೇನ್ ಅವರ ಸಂಗೀತ ನನಗೆ ಅಚ್ಚುಮೆಚ್ಚಿನದ್ದು. ಡಾ||ಅಬ್ದುಲ್ ಕಲಾಂ ನನ್ನ ನೆಚ್ಚಿನ ರಾಷ್ತ್ರಾಧ್ಯಕ್ಷರು. ಮುಸಲ್ಮಾನರ ಕುರಿತು ಧ್ವೇಷವಿದ್ದಿದ್ದರೆ ಇದು ಸಾಧ್ಯವಿರುತ್ತಿರಲಿಲ್ಲ.
  ಆದರೆ, ನಮ್ಮ ದೇಶದ ಎಲ್ಲಾ ಮುಸಲ್ಮಾನರೆಲ್ಲರೂ ಈ ದೇಶದ ಮಕ್ಕಳಂತೆ ಇರಬೇಕೆಂಬುದು ನನ್ನ ಅಪೇಕ್ಷೆ. ಆ ರೀತಿ ಅನೇಕರು ಜೀವಿಸುತ್ತಿಲ್ಲ. ಅದು ನಿಮಗೂ ತಿಳಿದಿದೆ.
  ಈ ದೇಶದ ಮಕ್ಕಳಿಗೆ, ಇಲ್ಲಿನ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಕುರಿತಾಗಿ ಗೌರವವಿರಬೇಕು. ಇಲ್ಲಿನ ಶತೃಗಳು, ಅವರ ಮತವೇನೇ ಇರಲಿ, ಅವರು ನಮಗೂ ಶತೃಗಳು ಎನ್ನುವ ಭಾವನೆಯಿರಬೇಕು. ಇಲ್ಲಿನ ಮಿತ್ರರೆಲ್ಲರೂ ಮಕ್ಕಳಿಗೂ ಮಿತ್ರರಾಗಬೇಕು.
  ಬಾಬರ್ ಎಂದೆಂದಿಗೂ ಈ ದೇಶದ ಶತೃ. ಅವನು ದೇಶಕ್ಕೆ ಮಾಡಿದ ಅಪಮಾನ, ಈ ದೇಶದ ಪ್ತತಿಯೊಬ್ಬ ಪುತ್ರ/ಪುತ್ರಿಯರಿಗೂ ಮಾಡಿದ ಅಪಮಾನ. ಅವನನ್ನು ತನ್ನವನೆಂದುಕೊಂಡರೆ, ಆತ ಈ ದೇಶದ ಮಗ/ಮಗಳಾಗಲು ಸಾಧ್ಯವಿಲ್ಲ.
  ಈ ರೀತಿ ಮುಸಲ್ಮಾನರು ಈ ದೇಶದ ಮಕ್ಕಳಂತೆ ಬದುಕಿದರೆ, ನಮ್ಮ ದೇಶ ಬಂಗಾರವಾದೀತು.

 3. Narendra ಹೇಳುತ್ತಾರೆ:

  ಕನ್ನಡದ ನಿಮ್ಮ ಬರಹಗಳು ಬಹಳ ಚೆನ್ನಾಗಿವೆ. ನಿಮ್ಮ ಭಾಷೆ, ಬರೆಯುವ ರೀತಿ ಸೊಗಸಾಗಿದೆ.
  ನನ್ನ ಅನೇಕ ಮುಸಲ್ಮಾನ ಸ್ನೇಹಿತರ ಕುರಿತಾಗಿ ನನ್ನ ಒಂದು complaint ಅಂದರೆ, ಅವರಿಗೆ ಕನ್ನಡ ಬರುವುದಿಲ್ಲ. ಕನ್ನಡವನ್ನು ಕೆಟ್ಟದಾಗಿ ಮಾತನಾಡುತ್ತಾರೆ, ಬರೆಯುವುದಂತೂ ಮರೆತೇ ಬಿಡಿ.
  ಎಲ್ಲಕ್ಕಿಂತ ಹೆಚ್ಚಾಗಿ, ಅವರಿಗೆ ಕನ್ನಡದ ಬಗ್ಗೆ ಗೌರವವೇ ಇಲ್ಲ.

  ಇಂದಿನ ಹಿಂದುಗಳ ಕುರಿತಾಗಿಯೂ ನನಗೀ ವಿಷಯದಲ್ಲಿ ಬೇಸರವಿದೆ.
  ಅವರಿಗೆ ಕನ್ನಡ ಬೇಕಾಗಿಲ್ಲ, ಕನ್ನಡದ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದಿಲ್ಲ.
  ಕನ್ನಡ ಹಾಳಾದರೆ ತಮಗೇನು ಎನ್ನುವ ತಾತ್ಸಾರ ಭಾವನೆ. ಇಂಗ್ಲಿಷಿನಲ್ಲಿ ಮಾತನಾಡಿದರೆ ಎನೋ ಒಂದು ಹೆಮ್ಮೆ…..ಈ ರೀತಿಯ ಜನಗಳಿಂದ ಕನ್ನಡದ ಉದ್ದಾರ ಸಾಧ್ಯವಿಲ್ಲ.

  ಇಂದಿನ ಸ್ಥಿತಿ ನೋಡಿದರೆ, ಕನ್ನಡದ ಅವಸಾನ ದೂರವಿಲ್ಲ.
  ಇಂತಹ ಕಾಲದಲ್ಲಿ ನಿಮ್ಮಂತಹ ಬರಹಗಾರರನ್ನು ಕಂಡರೆ ನನಗೆ ಬಹಳ ಸಂತೋಷ.
  ನಿಮ್ಮ ಬರವಣಿಗೆ ಮುಂದುವರೆಯಲಿ; ಉತ್ತಮ ಬರವಣಿಗೆಗಳು ನಿಮ್ಮಿಂದ ಮೂಡಿಬರಲಿ, ನಿಮ್ಮಂತಹ ಬರಹಗಾರರು ಹೆಚ್ಚಾಗಲಿ, ದೇಶದ ಕುರಿತಾಗಿ ನಿಮ್ಮಂತೆ ಚಿಂತಿಸುವವರೂ ಹೆಚ್ಚಾಗಲಿ, ಎಂದು ಹಾರೈಸುವೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s