ಭಾರತದ ವಿಜಯ

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳು ತಮ್ಮ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “

ವಸುಧೈವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಸದ್ದಿಲ್ಲದೇ ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು ಸರಕಾರದ ಕಟ್ಟುನಿಟ್ಟಾದ ನಿರ್ದೇಶನದ ನಡುವೆಯೂ “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಈ ತೆರನಾದ, ಉದ್ರೇಕಿಸುವ ಪತ್ರಿಕೆಗಳ ತಲೆಬರಹಗಳನ್ನು ನಿರ್ಲಕ್ಷಿಸಿ ನ್ಯಾಯಾಲಯದ  ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ.  ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕುತೂಹಲದಿಂದ ನೋಡುತ್ತಾ ಕೂತ ನಮಗೆ ಕಿಟಕಿಯ ಮೂಲಕ ಕಾಣಲು ಸಿಕ್ಕಿದ್ದು, ನನ್ನ ಎರದುಉವರೆ ವರ್ಷದ ಪುಟ್ಟ ಪೋರಿ ಕಾಲುದ್ದ ಮಾಡಿಕೊಂಡು ನನ್ನ ಮೇಜಿನ ಮೇಲಿನಿಂದ ಎಗರಿಸಿದ ಪುಟ್ಟ ಭಾರತದ ಧ್ವಜದಿಂದ ತನ್ನ ಮುಖಕ್ಕೆ ತಂಗಾಳಿಯನ್ನು ಬೀಸಿಕೊಳ್ಳುತ್ತಾ ಮಂದಿರ ಮಸೀದಿ ವಿವಾದ ನನಗೆ ನಗಣ್ಯ ಎನ್ನುವ ಥರ ಕೂತಿದ್ದಳು.

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಮುಸ್ಲಿಮರಲ್ಲಿ ಕಾಣಲು ಸಿಕ್ಕಿದ ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..

Advertisements

One thought on “ಭಾರತದ ವಿಜಯ

 1. Narendra ಹೇಳುತ್ತಾರೆ:

  ನನಗೆ ಇಲ್ಲಿಯವರೆಗೂ ಅರ್ಥವಾಗದ ಸಂಗತಿಯೊಂದಿದೆ. ಆ ಪ್ರಶ್ನೆಯನ್ನು ಯಾರೂ ಮಾದ್ಯಮಗಳಲ್ಲೂ ಕೇಳಿದ ನೆನಪಿಲ್ಲ.
  ಮುಸಲ್ಮಾನರು ಹಾಗೂ ಹಿಂದೂಗಳು ಒಟ್ಟಾಗಿ ಬಾಳಬೇಕು ಎಂಬುದು ಬಹಳ ಹಿಂದಿನಿಂದಲೂ ನಮ್ಮ ಅನೇಕ ಹಿರಿಯರ ಅಪೇಕ್ಷೆ.
  ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ; ಹಿಂದೂಗಳ ಜೊತೆ ಬಾಳಲು ಸಾಧ್ಯವಿಲ್ಲ; ಇತ್ಯಾದಿ ವಾದಗಳನ್ನಿಟ್ಟು ತಾಯಿ ಭಾರತಿಯನ್ನು ಕತ್ತರಿಸಿ ತುಂಡು ಮಾಡಿ ಪಾಕಿಸ್ತಾನವನ್ನು ದಕ್ಕಿಸಿಕೊಂಡಾಗಲೂ, ನಮ್ಮೊಡನೆಯೇ ಇರಿ, ಅಣ್ಣ-ತಮ್ಮಂದಿರಂತೆ ಬಾಳೋಣ ಎಂದವರು ನಮ್ಮ ದೇಶದ ಹಿರಿಯರು. ಪ್ರಾರಂಭದಿಂದಲೇ ನಮ್ಮೊಡನೆ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೂ ಸಹಾಯ ಮಾಡಬೇಕೆಂದು ಉಪವಾಸ ಕುಳಿತ ಹಿರಿಯರ ದೇಶಕ್ಕೆ ಸೇರಿದವರು ನಾವು. ಹೀಗಾಗಿ ಹಿಂದೂಗಳು ಹಾಗೂ ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಬಾಳಬೇಕೆಂಬ ಅವರ ಇಚ್ಚೆ ಪ್ರಾಮಾಣಿಕವಾದದ್ದೇ ಎನಿಸುತ್ತದೆ.
  ಹೀಗಿದ್ದಾಗ್ಯೂ ಎಂದೂ ಈ ಎರಡೂ ಕೋಮುಗಳು ಒಂದಾಗಿ ಬಾಳಿದ್ದು ಕಂಡುಬರುವುದಿಲ್ಲ (ಒಂದೆರಡು ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ಬದಿಗಿಟ್ಟು). ಪ್ರಾಯಶಃ ಮಹಮ್ಮದ್ ಆಲಿ ಜಿನ್ನಾ ಹೇಳಿದ್ದೇ ಸರಿಯೇನೋ ಎನಿಸಿಬಿಡುತ್ತದೆ (ಮುಸಲ್ಮಾನರೇ ಪ್ರತ್ಯೇಕ ರಾಷ್ಟ್ರ). ಇನ್ನು ಅಯೋಧ್ಯೆಯ ವಿಚಾರವಂತೂ ಶತಮಾನಗಳಿಂದ ಎರಡು ಕೋಮುಗಳ ನಡುವೆ ಕಂದಕವನ್ನೇ ನಿರ್ಮಿಸಿಬಿಟ್ಟಿದೆ.
  ಈ ಅಯೋಧ್ಯಯಲ್ಲಿದ್ದ ಬಾಬರೀ ಕಟ್ಟಡದ ಕುರಿತಾಗಿ ನನ್ನ ಒಂದು ಸಂದೇಹ. ಹಿಂದೂಗಳು ಹೇಳುವಂತೆ, ಬಾಬರ್ ಅಲ್ಲೊಂದು ದೇವಸ್ಥಾನವನ್ನು ಒಡೆಯಲಿಲ್ಲ ಎಂದಿಟ್ಟುಕೊಳ್ಳೋಣ. ಅಲ್ಲಿ ಆತ ಕಟ್ಟಿಸಿದ್ದು ಮಸೀದಿ ಎಂದೇ ಇಟ್ಟುಕೊಳ್ಳೋಣ. ಆದರೆ, ಬಾಬರ್‌ನ ಕುರಿತಾಗಿ ಹಾಗೂ ಮೊಗಲರ ಕುರಿತಾಗಿ ನಮ್ಮ ಭಾರತೀಯ ಮುಸಲ್ಮಾನರಿಗೆ ಏಕಿಷ್ಟು ಪ್ರೀತಿ? ನಮ್ಮ ಮುಸಲ್ಮಾನರು ಇಲ್ಲಿನ ರಾಷ್ಟ್ರೀಯರು. ಈ ದೇಶದ ಒಳಿತು ಕೆಡಕುಗಳಲ್ಲಿ ಒಂದಾಗಿರುವವರು. ಸಮಾನ ಶತೃ-ಮಿತ್ರ ಭಾವನೆ ಹೊಂದಿರುವವರು. ಇತಿಹಾಸದ ಕುರಿತಾಗಿ ಸಮಾನ ದೃಷ್ಟಿಕೋನವುಳ್ಳವರು. ಬಾಬರ್ ಒಬ್ಬ ಆಕ್ರಮಣಕಾರ ಎಂಬುದು ಎಲ್ಲರೂ ಒಪ್ಪುವ ಸಂಗತಿ. ಅರ್ಥಾತ್ ಆತ ಈ ದೇಶದ ಶತೃ. ಅಂದರೆ, ಈ ದೇಶದ ಪ್ರತಿಯೊಬ್ಬ ರಾಷ್ಟ್ರೀಯನಿಗೂ ಆತ ಶತೃವೇ. ಆತನ ಕುರಿತಾಗಿ ಇಲ್ಲಿನ ಮುಸಲ್ಮಾನರಲ್ಲಿ ಇಷ್ಟೊಂದು ಪ್ರೀತಿ ನನಗೆ ಅರ್ಥವಾಗದ ಸಂಗತಿ. ಬಾಬರ್ ಒಬ್ಬ ಮಹಾಪುರುಷನಾದರೆ, ನಮ್ಮ ದೇಶಕ್ಕಾಗಿ ಹೋರಾಡಿದ ರಾಣಾ ಸಂಗ, ಹೇಮು ಇತ್ಯಾದಿಗಳೆಲ್ಲಾ ಏನಾಗುತ್ತಾರೆ? ಮೊಗಲರು ಎಂದೂ ಈ ದೇಶದವರಾಗಲು ಸಾಧ್ಯವಿಲ್ಲ. ಅವರ ಮನಸ್ಸಿನಲ್ಲೂ ಆ ಭ್ರಮೆ ಇರಲಿಲ್ಲ. ಅವರ ಮತ್ತು ನಮ್ಮ ಮುಸಲ್ಮಾನರ ಜಾತಿ ಒಂದೆನ್ನುವುದನ್ನು ಬಿಟ್ಟರೆ, ಇಬ್ಬರಲ್ಲೂ ಯಾವ ಸಮಾನ ಅಂಶವೂ ಇಲ್ಲ. ಅವರ ಕುರಿತಾಗಿ ನಮ್ಮ ಮುಸಲ್ಮಾನರಲ್ಲಿ ಮಿತ್ರತ್ವದ ಭಾವನೆ ಏಕೆ?
  ನಮ್ಮಲ್ಲಿರುವ ಮುಸಲ್ಮಾನರಲ್ಲಿ ಹಾಗೂ ಹಿಂದೂಗಳಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಇಬ್ಬರ ಪೂರ್ವಜರೂ ಒಬ್ಬರೇ. ಮತ ಬದಲಾವಣೆಯಾದ ಕೂಡಲೇ ಪೂರ್ವಜರಾಗಲೀ, ಇತಿಹಾಸವಾಗಲೀ ಬದಲಾವಣೆಯಾಗಲು ಸಾಧ್ಯವಿಲ್ಲವಲ್ಲ? ಇದರ ಕುರಿತಾಗಿ ಯಾರೂ ಏತಕ್ಕಾಗಿ ಪ್ರಶ್ನಿಸುತ್ತಿಲ್ಲ?
  ಸೋಮನಾಥದಲ್ಲಿದ್ದ ಬೃಹತ್ ಮಸೀದಿಯನ್ನು ಸ್ವತಃ ಸರ್ದಾರ್ ಪಟೇಲ್, ಮಹಾತ್ಮಾ ಗಾಂಧೀಜಿ, ಡಾ|| ಅಂಬೇಡ್ಕರ್ ಇತ್ಯಾದಿ ಮಹಾಮಹಿಮರೇ ಸೇರಿ ಕೆಡವಿ ಮಂದಿರ ನಿರ್ಮಾಣ ಮಾಡಿದ್ದು ನಿಮಗೆ ತಿಳಿದಿರಬೇಕು. ಅದನ್ನು ಯಾರೂ ವಿರೋಧಿಸಲಿಲ್ಲ. ಮಹಾತ್ಮಾ ಗಾಂಧೀಜಿಯವರೂ ಅದನ್ನು ಬೆಂಬಲಿಸಿದರೆಂದರೆ ಆಶ್ಚರ್ಯವಲ್ಲವೇ? ಅವರಾರೂ ಅದನ್ನು ಮುಸಲ್ಮಾನ ವಿರೋಧಿ ಎಂದು ತಿಳಿಯಲಿಲ್ಲ. ಏಕೆಂದರೆ, ಅಲ್ಲಿದ್ದ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟಿಸಿದ್ದು ಔರಂಗಜೇಬ್; ಆತ ಈ ದೇಶದ ಶತೃ; ಈ ದೇಶವನ್ನು ಗೆದ್ದೆನೆಂಬುದನ್ನು ಸಾಬೀತುಪಡಿಸಲು, ಈ ದೇಶಕ್ಕೆ ಅಪಮಾನ ಮಾಡಲು ಮಾಡಿದ ಕೃತ್ಯ ಅದಾಗಿತ್ತು. ಸ್ವಾತಂತ್ರ್ಯ ಬಂದಕೂಡಲೇ ನಮಗಾದ ಅಪಮಾನಗಳನ್ನು ತೊಳೆದುಕೊಳ್ಳುವುದು ನಮ್ಮ ಕರ್ತವ್ಯವೆಂದು ಅಂದಿನ ಲೋಕಸಭೆ ಭಾವಿಸಿತು; ಗಾಂಧೀಜಿಯವರೂ ಭಾವಿಸಿದರು. ಅದೇ ಸೂತ್ರ ಅಯೋಧ್ಯೆಗೂ ಹೊಂದಬೇಕಲ್ಲವೇ?
  ಬಾಬರ್‌ನ ಹೆಸರಿನ ಜೊತೆ ನಮ್ಮ ಮುಸಲ್ಮಾನರನ್ನು ಜೋಡಿಸುತ್ತಿರುವುದು, ನಮ್ಮ ಮುಸಲ್ಮಾನರಿಗೆ ಮಾಡುತ್ತಿರುವ ಅಪಮಾನ. ಅದನ್ನು ಸರ್ವದಾ ವಿರೋಧಿಸಬೇಕೆಂದು ನಮ್ಮ ವಿದ್ಯಾವಂತ ಮುಸಲ್ಮಾನರಿಗೂ ಅನ್ನಿಸದಿರುವುದು ಆಶ್ಚರ್ಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s