ಬುರ್ಖಾ ನಿಷೇಧ

ಯೂರೋಪಿನಲ್ಲಿ ಈಗ ಬುರ್ಖಾ ನಿಷೇಧಿಸುವ ಕುರಿತ ಚರ್ಚೆ. ಇನ್ನು ಕೆಲವೇ ದಿನಗಳಲ್ಲಿ ಫ್ರಾನ್ಸ್ ಸಂಸತ್ತು ಬುರ್ಖಾವನ್ನು ನಿಷೇಧಿಸಲಿದೆ. ಎಂಥ ವೈಚಿತ್ರ್ಯ ಇದು. ಒಂದು ಕಡೆ ಮಹಿಳೆಯ ಜನ್ಮಸಿದ್ಧ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು, ಚಟುವಟಿಕೆಗಳು ಜರಗುತ್ತಿದ್ದರೆ ಮತ್ತೊಂದು ಕಡೆ ತಾನು ಮಾನವಾಗಿ ತನ್ನ ಶರೀರವನ್ನು ಮುಚ್ಚಿಕೊಂಡು ಓಡಾಡುತ್ತೇನೆ ಎಂದು ಹೇಳುವ ಮಹಿಳೆಯರ ಮೇಲೆ ಸಮಾಜದ ದಿಗ್ಬಂಧನ, ಕಾನೂನು. ಫ್ರಾನ್ಸ್ ನ ಅಧ್ಯಕ್ಷ ಮಹಾಶಯನ ಲೈಂಗಿಕ ಚಟುವಟಿಕೆ ತಿಳಿದವರಿಗೆ ಅಲ್ಲಿನ ಸಂಸತ್ತಿನಲ್ಲಿ ಅವನಂಥ ಎಷ್ಟು ಸದಸ್ಯರು ತಮ್ಮ ಅಧ್ಯಕ್ಷನ ರೀತಿ ಹೆಣ್ಣನ್ನು ತಮ್ಮ ತೃಷೆಗಾಗಿ ಉಪಯೋಗಿಸಿಕೊಳ್ಳುತ್ತಿರಬಹುದು ಎಂದು ಯೋಚಿಸಿದರೆ ತಪ್ಪಿಲ್ಲ. ಇದೇ ನಡತೆಗೆಟ್ಟ ಗಂಡಸರು ಹೆಣ್ಣು ವಿವಸ್ತ್ರಳಾಗೋದನ್ನು ಬಯಸುತ್ತಾ ಮಾನವಾಗಿ ನಡೆಯಲಿಚ್ಚಿಸುವ ಮಹಿಳೆಯರ ಮೇಲೆ ಕಾನೂನಿನ ತೂಗುಗತ್ತಿಯನ್ನು ಇಳಿ ಬಿಡುತ್ತಾರೆ. ಇವರಿಗೆ ಮಹಿಳೆ ಮೈತುಂಬಾ ಹೊದ್ದು ಕೊಳ್ಳುವುದು ಗುಲಾಮಗಿರಿಯ ಸಂಕೇತ. ಶೋಷಣೆಯ ಹೆಗ್ಗುರುತು. ಹೆಣ್ಣು ಕನಿಷ್ಠ ಉಡುಗೆ ತೊಡುವುದು ultimate civilization.     

ಬೆತ್ತಲೆ, ಕನಿಷ್ಠ ಉಡುಗೆ ಇಷ್ಟ ಪಡುವ ವಿಶ್ವ. ದೊಡ್ಡ ಕೋಲಾಹಲವನ್ನೇ ಸೃಷ್ಟಿಸುತ್ತಿದೆ ಈ ಸುಮಾರು ಐದು ಮೀಟರು ಬಟ್ಟೆ. ಮೂರೂ ಬಿಟ್ಟು, ಕನಿಷ್ಠ ಉಡುಗೆ ತೊಟ್ಟು ತಮ್ಮ ಶರೀರ ದಾರಿಹೋಕರ ಕಣ್ಣುಗಳಿಗೆ ಎಂದು ಬಿಂಕದಿಂದ ನಡೆಯುವ ಉದಾರವಾದಿ ಮಹಿಳೆ ಮತ್ತು ಇಂಥ ಉಡುಗೆಗಳಲ್ಲಿ ಪರಸ್ತ್ರೀಯರನ್ನು ನೋಡಿ ನಾಲಗೆ ಚಪ್ಪರಿಸಿ ಸವಿಯುವ  ಪುರುಷರಿಗೆ ಈ ಬುರ್ಖಾ ಎನ್ನುವ ವಸ್ತ್ರ ಸಹ್ಯವಾದರೂ ಹೇಗಾದೀತು? ಸೌಂದರ್ಯ ಸ್ಪರ್ದೆಯ ಹೆಸರಿನಲ್ಲಿ ಹೆಣ್ಣನ್ನು ನಾನಾ ಬಗೆಯ  ಉಡುಗೆಗಳಲ್ಲಿ ಅತ್ತಿಂದಿತ್ತ ಓಡಾಡಿಸಿ ಕ್ಯಾಮೆರಾ ಕಣ್ಣುಗಳಿಂದ ಅವಳ ಉಬ್ಬು ತಗ್ಗುಗಳನ್ನು ವಿವಿಧ ಕೊನಗಳಲ್ಲಿ ಸೆರೆಹಿಡಿದು, ಅವಳ ಅಂಗ ಸೌಷ್ಟವದ ಅಳತೆ ತೆಗೆದು ತಾವು ಕಲ್ಪಿಸಿಕೊಂಡ ಮಾನ ದಂಡಕ್ಕೆ ಅವಳ ಅಳತೆಯಿದ್ದರೆ ಅವಳನ್ನು ವಿಶ್ವ ಸುಂದರಿ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಮಿಸ್ ದ್ಯಾಟ್, ಮಿಸ್ ದಿಸ್ ಎಂದು ಪ್ರಶಸ್ತಿ ಕೊಟ್ಟು ನಗ್ನತೆಯನ್ನು, ಬಹಿರಂಗ ಸೌಂದರ್ಯವನ್ನು ಸನ್ಮಾನಿಸುವ, ಆದರಿಸುವ ಸಮಾಜಕ್ಕೆ ಖಂಡಿತವಾಗಿಯೂ ಪಥ್ಯವಲ್ಲ ಬುರ್ಖಾ. ಈ ರೀತಿಯ ಅಳತೆಗೆ ನಿಲುಕದ ಬಹುಪಾಲು ಮಹಿಳೆಯರು  ಕೀಳರಿಮೆಯಿಂದ ಬಳಲುತ್ತಿದ್ದರೆ ಅದೊಂದು ಸಮಸ್ಯೆ ಅಲ್ಲ ಇವರಿಗೆ. size and beauty obssessed ಸಮೂಹಕ್ಕೆ.

ಬುರ್ಖಾ ನಿಷೇಧಿಸುವಲ್ಲಿ  ಫ್ರಾನ್ಸ್ ಕಾನೂನನನ್ನು ಜಾರಿ ಗೊಳಿಸಿದಂತೆ ಇಂಗ್ಲೆಂಡ್ ಸಹಾ ಬುರ್ಖಾ ನಿಷೇಧ ಕಾನೂನನ್ನು ತರಬೇಕೆಂದು ಒತ್ತಾಯಿಸುತ್ತಿರುವ ಜನರು ಹೆಣ್ಣನ್ನು ಸೌಂದರ್ಯ  ಪ್ರಸಾಧನ ಉತ್ಪಾದಿಸುವವರ, ಕಾಮ ಪಿಪಾಸುಗಳ ಆಟಿಕೆಯಾಗಿ ಬಳಸಿಕೊಳ್ಳುತ್ತಾ ತಮ್ಮನ್ನು ತಾವು ನಾಗರೀಕರು ಎಂದು ಬೆನ್ನು ತಟ್ಟಿ ಕೊಳ್ಳುವವರ ದಾರ್ಷ್ಟ್ಯತನವನ್ನು ಮೆಚ್ಚಲೇ ಬೇಕು. ಬುರ್ಖಾ ಗುಲಾಮಗಿರಿಯ ಸಂಕೇತ, ಪುರುಷರ ಒತ್ತಾಯಕ್ಕೆ ಮಣಿದು ಮಹಿಳೆಯರು ಧರಿಸುತ್ತಾರೆ ಎಂದು ವಾದಿಸುವ ಸಮೂಹಕ್ಕೆ ಈ ಸತ್ಯದ ಅರಿವಾದದ್ದು ಯಾವಾಗಲೋ ಏನೋ? ಅವರಿಗೆ ಹೇಗೆ ಗೊತ್ತು ಇದು ಪುರುಷ ಹೇರಿದ ಕಟ್ಟಳೆ ಎಂದು? ಸ್ವಂತ ಇಷ್ಟದಿಂದ ಹಿಜಾಬ್ ಧರಿಸುವ ಮಹಿಳೆಯರನ್ನು ನಾನು ನೋಡಿದ್ದೇನೆ. ತನ್ನ ತಾಯಿ ಧರಿಸುವ ಹಿಜಾಬನ್ನು ನೋಡಿ ಪುಟ್ಟ ಮಗುವೂ ತಾಯಿಯನ್ನು ಅನುಕರಿಸಲು ನೋಡುತ್ತದೆ. ಹೊರಗೆ ಮಹಿಳೆಯರು ತಮಗಿಷ್ಟದ, ನವೀನ ಶೈಲಿಯ ಬಟ್ಟೆ ಧರಿಸಿ ಹೋಗುವುದನ್ನು ಕಂಡರೂ ಆ ಪುಟ್ಟ ಮಗುವಿಗೆ ತನ್ನ ತಾಯಿ ಧರಿಸುವ ಕಪ್ಪು ಬಣ್ಣದ ಬುರ್ಖಾ ಕರಾಳವಾಗಿ ಕಾಣೋದಿಲ್ಲ. ಇಲ್ಲಿ ಆ ಮುಗ್ಧ ಮಗು ಕಾಣೋದು ತನ್ನ ತಾಯಿಯ ನಾರ್ಮಲ್ ಉಡುಗೆ ಮಾತ್ರ. ಬುರ್ಖಾ ಪದ್ಧತಿ ಇಸ್ಲಾಮಿನ ನಿಯಮವೋ, ಕಟ್ಟಳೆಯೋ ಅಲ್ಲ. ಪವಿತ್ರ ಕುರಾನಿನಲ್ಲಿ ದೇವರು ನಿರ್ದೇಶಿಸಿದ್ದು ಹೆಣ್ಣು ಮತ್ತು ಗಂಡು ಮೈ ತುಂಬಾ ಉಡಲು. ಅಂಗ ಸೌಷ್ಟವ ಪ್ರದರ್ಶಿಸದಂತೆ ತಾಕೀತು. ಹೆಣ್ಣು ಗಂಡು ಇಬ್ಬರೂ ತಮ್ಮ ದೃಷ್ಟಿಗಳನ್ನು ಅನಾವಶ್ಯವಾಗಿ ಬೇಕೆಂದಲ್ಲಿ ಹರಿಬಿಡದೆ ನಡೆಯಲು ಅಪೇಕ್ಷೆ, ನೆಲ ನೋಡಿ ವಿನೀತರಾಗಿ ನಡೆಯಲು ಸೂಚನೆ. ಇವು ಮಾತ್ರ ಇರುವುದು ಕುರಾನಿನಲ್ಲಿ. ಬಟ್ಟೆ ಹೀಗೆ ಇರಬೇಕು, ಇಂಥ ಬಣ್ಣದ್ದೇ ಆಗಿರಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಿದ್ದರೆ ಬುರ್ಖಾ ಸಾರ್ವತ್ರಿಕವಾಗಿರುತ್ತಿತ್ತು. ವಿಶ್ವದ ಬಹುಪಾಲು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ದೂರದ ದೇಶಗಳ ಮಾತೇಕೆ ನಮ್ಮ ಪಕ್ಕದ ಕೇರಳದಲ್ಲೂ ಬಹುಪಾಲು ಮಹಿಳೆಯರು ಬುರ್ಖಾ ಧರಿಸುವುದಿಲ್ಲ. ಉದ್ದದ ತೋಳಿನ ರವಿಕೆ, ಮೈ ತುಂಬಾ ಸೀರೆ ಉಟ್ಟು ಕೊಳ್ಳುತ್ತಾರೆ. ಅಲ್ಲಿ ಯಾವ ಮುಲ್ಲಾ ಮಹಾಶಯರೂ ಫತ್ವಾ ಹೊರಡಿಸಲಿಲ್ಲ, ಕಪ್ಪು ಬಟ್ಟೆಯಿಂದ ಬಿಗಿದು ಕೊಳ್ಳಿ ನಿಮ್ಮ ಶರೀರವನ್ನು ಎಂದು. ಬುರ್ಖಾ ಒಂದು ಸಾಮಾಜಿಕ, ಸಾಂಸ್ಕೃತಿಕ ಉಡುಗೆ. ಸುಡಾನಿನ ಮಹಿಳೆಯರು ಸೀರೆ ಥರಾ ಕಾಣುವ  ಬಟ್ಟೆಯನ್ನು ಮೈ ತುಂಬಾ ಹೊದ್ದು ಕೊಳ್ಳುತ್ತಾರೆ. ಇರಾನಿನಲ್ಲಿ ಎಲ್ಲಾ  ಮಹಿಳೆಯರೂ ಧರಿಸುವುದಿಲ್ಲ. ಶೇಕಡಾ ೯೮ ಮುಸ್ಲಿಮರಿರುವ ತುರ್ಕಿ, ಟುನೀಸಿಯಾ ದೇಶಗಳ ಮಹಿಳೆಯರೂ ಸಹ ಬುರ್ಖಾ ಧಾರಿಗಳಲ್ಲ. ಅಲ್ಲಿ ಮುಲ್ಲಾಗಳ ಹಾವಳಿ ಇಲ್ಲ ಎಂದಲ್ಲ, ಆದರೆ ಇದೊಂದು ಧಾರ್ಮಿಕ ಉಡುಗೆ ಯಲ್ಲ ಎನ್ನುವ ಅರಿವಿರುವುದರಿಂದಲೇ ಅವರು ಅಲ್ಲಿನ ಮಹಿಳೆಯರ ಮೇಲೆ ಈ ವಸ್ತ್ರವನ್ನು ಹೇರದಿರುವುದು.

ಈ ಮೇಲಿನ ಮಾತಿಗೆ ಪುಷ್ಟಿಯಾಗಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನಿಮ್ಮ ಅವಗಾಹನೆಗೆ ತರಲು ಇಚ್ಛಿ ಸುತ್ತೇನೆ. ಪುರಾತನ ನಾಗರೀಕತೆಯ ತವರಾದ ಈಜಿಪ್ಟ್ ದೇಶ ಇಸ್ಲಾಂ ಧರ್ಮವನ್ನ ಅನುಸರಿಸುವ ದೇಶ. ಅಲ್ಲಿನ ವಿಶ್ವವಿಖ್ಯಾತ ವಿಶ್ವ ವಿದ್ಯಾಲಯ ಅಲ್- ಅಜ್ಹರ್ ಸ್ಥಾಪಿತ ವಾಗಿದ್ದು ಕ್ರಿ. ಷ ೯೫೦ ರಲ್ಲಿ. ಅಲ್ಲಿನ “ರೆಕ್ಟರ್” ಆಗಿದ್ದ ಇತ್ತೀಚೆಗೆ ದಿವಂಗತರಾದ ಶೇಖ್ ತಂತಾವೀ. ಇವರು ಜಗದ್ವಿಖ್ಯಾತ ಮುಸ್ಲಿಂ ವಿಧ್ವಾಂಸ. ಅತ್ಯಂತ ಕ್ಲಿಷ್ಟ ಶರಿಯಾ ದ ಸಮಸ್ಯೆಗಳಿಗೆ ಮುಸ್ಲಿಂ ವಿಶ್ವ ಉತ್ತರ ಅರಸೋದು ಇವರಲ್ಲಿ. ಆರು ತಿಂಗಳ ಹಿಂದೆ ನಡೆದ ವಿಶ್ವ ವಿದ್ಯಾಲಯದ ಸಮಾರಂಭವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಭಿಕರಲ್ಲಿ ಒಬ್ಬ ಹದಿ ಹರೆಯದ ಯುವತಿಯೊಬ್ಬಳು ಹಿಜಾಬ್ ಮಾತ್ರವಲ್ಲದೆ ಕಣ್ಣು ಮಾತ್ರ ಕಾಣುವಂಥ “ನಿಕಾಬ್” ಸಹ ಧರಿಸಿದ್ದಳು. ಭಾಷಣ ಮಾಡುತ್ತಿದ್ದ ತಂತಾವೀ ಯುವತಿಗೆ ಹೇಳಿದರು ಮುಖದ ಮೇಲಿನ ನಿಕಾಬ್ ತೆಗೆಯುವಂತೆ. ಆಕೆ ಒಪ್ಪಲಿಲ್ಲ. ಒತ್ತಾಯಿಸಿದಾಗ ಆಕೆ ಹೇಳಿದಳು ಇದು ನನ್ನ ಧಾರ್ಮಿಕ ಉಡುಗೆ, ನನ್ನ ಸ್ವಂತ ಇಷ್ಟದಿಂದ ಧರಿಸಿದ್ದು ಎಂದು. ಇದನ್ನು ಕೇಳಿ ಕುಪಿತರಾದ ತಂತಾವೀ ಹೇಳದರು, ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿರುವ ಈ ಸುಪ್ರಸಿದ್ಧ ವಿದ್ಯಾಲಯದ ಕುಲಪತಿಯಾದ ನನಗಿಂತ ನಿನಗೆ ಗೊತ್ತೋ ಇಸ್ಲಾಮಿನ ಉಡುಗೆ ಬಗ್ಗೆ? ನೀನು ಧರಿಸುತ್ತಿರುವ ಮುಖ ಮುಚ್ಚಿ ಕೊಳ್ಳುವ ನಿಕಾಬ್ ಇಸ್ಲಾಮಿನ ಕಾನೂನಲ್ಲ, ಅದೊಂದು ಸಾಮಾಜಿಕ ಉಡುಗೆ ಎಂದು ಹೇಳಿ ಆಕೆಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. ಅದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತು ಮುಸ್ಲಿಂ ಜಗತ್ತಿನಲ್ಲಿ, ವಿಶೇಷವಾಗಿ ಅರಬ್ ವಲಯಗಳಲ್ಲಿ. ಆಕೆ ಯಾರ ಬಲವಂತವೂ ಇಲ್ಲದೆ ತನ್ನ ಇಷ್ಟಾನುಸಾರ ಧರಿಸಿದ ವಸ್ತ್ರಕ್ಕೆ ಈ ವಿಧ್ವಾಂಸರ  ಆಕ್ಷೇಪವೇಕೆ ಎಂದು ಅವರನ್ನು ಟೀಕಿಸಲಾಯಿತು.

ಕುವೈತ್ ಅರಬ್ ಮುಸ್ಲಿಂ ರಾಷ್ಟ್ರ. ಅಲ್ಲಿನ ಸಂಸತ್ತಿನಲ್ಲಿ ಕೆಲವರು ಮಹಿಳಾ ಸದಸ್ಯೆಯರೂ ಇದ್ದಾರೆ. ಅವರಲ್ಲಿ ಇಬ್ಬರು ಸಂಸದೆಯರು ಹಿಜಾಬ್ ಧರಿಸುವುದಿಲ್ಲ. ಅರಬ್ ರಾಷ್ಟ್ರವಾದ ಮೇಲೆ ಧರ್ಮಗುರುಗಳ ವರ್ಚಸ್ಸು ಇಲ್ಲದ್ದಿಲ್ಲ, ಆದರೂ ಯಾವುದೇ ಧರ್ಮ ಗುರುವೂ ಇದುವರೆಗೆ ಆ ಸಂಸದೆಯರ ವಿರುದ್ಧ ಫತ್ವ ಹೊರಡಿಸಲಿಲ್ಲ.

ಮಧ್ಯ ಪ್ರಾಚ್ಯದ “ಜೋರ್ಡನ್” ದೇಶ ಪುರಾತನ ವಂಶಸ್ಥರ ರಾಜಮನೆತನ ಆಳುವ ದೇಶ. ಇಲ್ಲಿನ ರಾಜ ಅಬ್ದುಲ್ಲಾ ರ ಪತ್ನಿ “ರಾನಿಯಾ” ಹಿಜಾಬ ಧರಿಸುವುದಿಲ್ಲ. ಜೋರ್ಡನ್ ದೇಶದ ಧರ್ಮಗುರುಗಳು ಆಕೆಯ ವಿರುದ್ಧ ಫತ್ವ ಹೊರಡಿಸಲಿಲ್ಲ. ಜೋರ್ಡನ್ ದೇಶದ ರಾಣಿ ಮಾತು ದಿವಂಗತ ಬೆನಜೀರ್ ಭುಟ್ಟೋ ಹಿಜಾಬ್ ಧರಿಸದೆಯೂ ಮುಸ್ಲಿಮರಾಗಿರಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟು ಇಸ್ಲಾಂ ಯಾವ ರೀತಿ ಶಿಷ್ಟಾಚಾರ ಮತ್ತು ಆಧುನಿಕತೆಯೊಂದಿಗೆ ಹೆಜ್ಜೆ ಹಾಕಬಲ್ಲದು ಎಂದು ತೋರಿಸಿ ಕೊಟ್ಟ ಮುಸ್ಲಿಂ ಮಹಿಳೆಯರು.    

ಒಬ್ಬ ಮಹಿಳೆ ಹಿಜಾಬ್ ಧರಿಸಿದ ಮಾತ್ರಕ್ಕೆ ಪರಿಪೂರ್ಣ ಮುಸ್ಲಿಮಳಾಗುವುದಿಲ್ಲ. ಹಿಜಾಬ್ ಧರಿಸದೆಯೂ ಮುಸ್ಲಿಂ ಮಹಿಳೆ ತನ್ನ ಇಸ್ಲಾಮೀ ಸಂಸ್ಕೃತಿಯನ್ನು ಹೆಮ್ಮೆಯಿಂದ ಕೊಂಡಾಡಬಹುದು. ಆದರೆ ಆಕೆ ಏನನ್ನು ಧರಿಸಬೇಕು ಏನನ್ನು ಧರಿಸಬಾರದು ಎಂದು ನಿರ್ಧರಿಸುವ ಸಮಾಜ ಅವಳಿಗೂ ಅವಳದೇ ಆದ ಹಕ್ಕುಗಳಿವೆ, ಆ ಹಕ್ಕನ್ನು ಚಲಾಯಿಸಿಕೊಳ್ಳುವ ಅವಕಾಶವನ್ನೂ ಆಕೆಗೆ ನೀಡಬೇಕು ಎನ್ನುವುದನ್ನು ಮರೆಯಬಾರದು.    

ಇನ್ನು ಓರ್ವ ಮಹಿಳೆ ತನಗಿಷ್ಟವಾದ ಬಟ್ಟೆ ತೊಟ್ಟರೆ ಅವಳ ಸ್ವಾತಂತ್ರ್ಯಕ್ಕೆ ಹೇಗೆ ಅವಳು ಧರಿಸುವ ವಸ್ತ್ರ ಮುಳುವಾಗುತ್ತದೆ ಅನ್ನೋದೇ ಒಂದು ದೊಡ್ಡ ಒಗಟು.        

ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಅತೀವ ಕಾಳಜಿ ತೋರಿಸುವ ಸಮಾಜ ಗಲಭೆ, ಜನಾಂಗ ಧ್ವೇಷ ಗಳಂಥ ಸಂದರ್ಭಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ರಾಜಾರೋಷ ಅತ್ಯಾಚಾರ ಕಣ್ಣಿಗೆ ಗೋಚರಿಸೋಲ್ಲ ಏಕೆಂದರೆ ತಮಗೆ ಎಲ್ಲಿ ಬೇಕು ಅಲ್ಲಿ ಮಾತ್ರ  ಕಣ್ಣುಗಳನ್ನು ತೆರೆಯುತ್ತಾರೆ, ಬೇಡದೆಡೆ ತಾತ್ಕಾಲಿಕ, ಕುರುಡನ್ನು ಪ್ರದರ್ಶಿಸುತ್ತಾರೆ.   

ಸ್ವಾತಂತ್ರ್ಯದ ಹರಣದ ಬಗ್ಗೆ ಮಾತನಾಡುವ ಜನರಿಗೆ ಈವಾನ್ ಗೊಎಥ್ ಹೇಳಿದ ಮಾತು ನೆನಪಿಗೆ ತರಬೇಕು; “ತಾವು ಎಲ್ಲರಿಗಿಂತ ಸ್ವತಂತ್ರರು ಎಂದು ಭಾವಿಸಿ ನಡೆಯುವ ಜನರಷ್ಟು ಗುಲಾಮಗಿರಿಯಲ್ಲಿ ಬಂಧಿಸಲ್ಪಟ್ಟವರು  ಬೇರಾರಿಲ್ಲ”.

“None are more hopelessly enslaved than those who falsely believe they are free.”
von Goethe

 

ಹಿಜಾಬ್ ವಿವಿಧ ಧರ್ಮಗಳಲ್ಲಿ: ಯಹೂದ್ಯರು ತಮ್ಮ ಮಹಿಳೆಯರು ಶರೀರವನ್ನು ಸಂಪೂರ್ಣವಾಗಿ ಮುಚ್ಚುವಂಥ ವಸ್ತ್ರ ಧರಿಸಲು ಉತ್ತೆಜಿಸುತ್ತಿದ್ದರು. ಕೂದಲನ್ನು ಪ್ರದರ್ಶಿಸಿ ನಡೆಯುವುದು ಅಪರಾಧ. ಉಚ್ಚ ಕುಲೀನ ಸ್ತ್ರೀಯರು ತಲೆಯ ಮೇಲೆ ಬಟ್ಟೆ ಧರಿಸುತ್ತಿದ್ದರು ಮತ್ತು ಸಮಾಜದ ಕೆಳಸ್ತರದ ಮಹಿಳೆಯರು ಪ್ರತಿಷ್ಠೆ ಗಾಗಿ ತಲೆ ಕೂದಲನ್ನು ಮುಚ್ಚುತ್ತಿದ್ದರು. ಯಹೂದ್ಯ ಸಮಾಜದಲ್ಲಿ ವೇಶ್ಯೆಯರು ತಲೆ ಕೂದಲನ್ನು ಮರೆ ಮಾಚುವಂತಿಲ್ಲ.

ಕ್ರೈಸ್ತ ಧರ್ಮದಲ್ಲಿ: ಸಂತ “ಪಾಲ್” ಹೊಸ ಒಡಂಬಡಿಕೆಯಲ್ಲಿ ಹೇಳಿದ್ದು ಹೀಗೆ: ಪ್ರತೀ ಗಂಡಿನ ತಲೆಯೂ ಕ್ರೈಸ್ತನದು ಮತ್ತು ಪ್ರತೀ ಹೆಣ್ಣಿನ ತಲೆ ಗಂಡಿನದು ಮತ್ತು ಕ್ರಿಸ್ತನ ತಲೆ ದೇವರದು. ಪ್ರತೀ ಹೆಣ್ಣು ತಲೆ ಕೂದಲನ್ನು ಮರೆ ಮಾಚಲೇ ಬೇಕು ಇಲ್ಲಾ ತಲೆ ಬೋಳಿಸಿ ಕೊಳ್ಳಬೇಕು. ಗಂಡು ತಲೆ ಕೂದಲನ್ನು ಮರೆಮಾಚೋ ಅಗತ್ಯ ಇಲ್ಲ ಏಕೆಂದರೆ ಗಂಡು ದೇವರ ಪ್ರತಿ ರೂಪ. ಆದರೆ ಹೆಣ್ಣು ಗಂಡಿನ ಗೌರವ, ಘನತೆ. ಕ್ರೈಸ್ತ ಧರ್ಮ ಗುರುಗಳ ಪ್ರಕಾರ ಹೆಣ್ಣು ತಲೆ ಕೂದಲನ್ನು ಮರೆಮಾಚುವುದು ಆಕೆ ಗಂಡಿಗೆ ಮತ್ತು ದೇವರಿಗೆ ವಿಧೇಯಳಾಗಿರಬೇಕಾದ ಕುರುಹು.  ಯಹೂದ್ಯ ಮತ್ತು ಕ್ರೈಸ್ತ ಧರ್ಮದಲ್ಲಿ ಹಿಜಾಬ್ ಗಂಡಿಗೆ ಮತ್ತು ಸಮಾಜಕ್ಕೆ ಹೆಣ್ಣು ವಿಧೇಯಳಾಗುವ ನಿಟ್ಟಿನಲ್ಲಿ ಆಗ್ರಹಿಸಿದರೆ, ಬಯಸಿದರೆ ಇಸ್ಲಾಮ್ ಹಿಜಾಬನ್ನು ಬಯಸಿದ್ದು ಹೆಣ್ಣಿನ ನಮ್ರ ನಡತೆಯನ್ನು ಉತ್ತೇಜಿಸಲು ಮತ್ತು ಪರಪುರುಷರ ಆಸಕ್ತ ಕಣ್ಣುಗಳಿಂದ ರಕ್ಷಿಸಿಕೊಳ್ಳಲು.      

 

ಕೆನಡಾದ ಕ್ವೀನ್ಸ್ ವಿಶ್ವ ವಿದ್ಯಾಲಯ ಹೊರಡಿಸಿದ ಒಂದು ಪತ್ರದಲ್ಲಿ ಈ ಆಘಾತಕಾರಿ ಅಂಶಗಳು ಒಳಗೊಂಡಿದ್ದವು.  ಪ್ರತೀ ೬ ನಿಮಿಷ ಗಳಿಗೊಮ್ಮೆ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ;

ಪ್ರತೀ ಮೂರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ.

ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಜೀವಿತ ಕಾಲದಲ್ಲಿ ಬಲಾತ್ಕಾರದ ಅಪಾಯಕ್ಕೆ ಸಿಲುಕಿರುತ್ತಾಳೆ.

ಪ್ರತೀ ಎಂಟು ಮಹಿಳೆಯರಲ್ಲಿ ಒಬ್ಬ ಮಹಿಳೆ ತನ್ನ ಕಾಲೇಜು ವ್ಯಾಸಂಗದ ವೇಳೆ ಲೈಂಗಿಕ ಶೋಷಣೆಗೆ ಒಳಪತ್ತಿರುತ್ತಾಳೆ.

ಆಧುನಿಕ ವಿಶ್ವದಲ್ಲಿ ಆಧುನಿಕ ಮನೋಭಾವದ ವ್ಯಕ್ತಿಗಳು ತಮ್ಮ ಆಧುನಿಕತೆಗೆ ವಸ್ತ್ರ ವನ್ನು ಮಾನದಂಡ ವಾಗಿರಿಸ ಕೂಡದು. ಗಂಡು ಮುಚ್ಚಿದಷ್ಟೂ gentleman ಮತ್ತು ಹೆಣ್ಣು ತೆರೆದಷ್ಟೂ cultured lady. ಈ ಮಾನ ದಂಡವನ್ನು ಎಲ್ಲರ ಮೇಲೂ ಹೇರಕೂಡದು.

ವೈಯಕ್ತಿವಾಗಿ ನಾನು ನಿಕಾಬ್ ಅಭಿಮಾನಿಯಲ್ಲ. ಬುರ್ಖಾ ಧರಿಸದೆಯೂ ಹೆಣ್ಣು ತನ್ನ ಅಂಗ ಸೌಷ್ಠವ ಪ್ರದರ್ಶಿಸದೆ ಬದುಕಬಹುದು. ಇತ್ತೀಚೆಗೆ ವಿವಾಹಿತರಾದ ಮಹೇಂದ್ರ ಸಿಂಗ್ ಧೋನಿ ಯವರ ಪತ್ನಿ ತುಂಬು ತೋಳಿನ ( full sleeved) ಚೂಡಿದಾರ್ ಧರಿಸಿ ತಲೆಯ ಮೇಲೆ ದುಪಟ್ಟಾ ಹಾಕಿಕೊಂಡು ಅಭಿನಂದಿಸಲು ಬಂದ ಜನರನ್ನು ಸ್ವೀಕರಿಸಿದರು ಎಂದು ಯಾರೋ ಹೇಳಿದರು. ಇಲ್ಲಿ ಈ ನವವಿವಾಹಿತೆ ತನಗರಿವಿಲ್ಲದೆಯೇ ಇಸ್ಲಾಮೀ ಸಂಸ್ಕೃತಿಯ ಉಡುಗೆಗೆ ಮಾರು ಹೋಗಿರಬೇಕು.       

ಈ ಲೇಖನ ಬರೆಯುತ್ತಿರುವಾಗ ನನ್ನ ಪತ್ನಿ ಕೇಳಿದಳು ಯಾವುದರ ಬಗ್ಗೆ ಬರೆಯುತ್ತಿದ್ದೀರಿ ಎಂದು. ಯೂರೋಪಿನಲ್ಲಿ ಬುರ್ಖಾ ಬ್ಯಾನ್ ಮಾಡ್ತಾರಂತೆ, ಅದರ ಬಗ್ಗೆ ಬರೆಯುತ್ತಿದ್ದೇನೆ ಎಂದೆ. ಅರ್ಥವಾಗದೆ ಕೇಳಿದಳು, ಬುರ್ಖಾ ಬ್ಯಾನ್ ಮಾಡ್ತಾರ? ಏಕೆ? ಕಾರಣ ಏನು?

ಕಾರಣ ನನಗೂ ಗೊತ್ತಿಲ್ಲ. ಕೆಲವೊಮ್ಮೆ  ಸಿಂಪಲ್ ಪ್ರಶ್ನೆಗಳಿಗೆ ಸಿಂಪಲ್ ಉತ್ತರ not so simple.

Advertisements

4 thoughts on “ಬುರ್ಖಾ ನಿಷೇಧ

 1. Narendra ಹೇಳುತ್ತಾರೆ:

  ನಾನು ಹಲವು ವರ್ಷಗಳ ಕಾಲ ಕಾರವಾರ ಜಿಲ್ಲೆಯಲ್ಲಿದ್ದೆ.
  ಹೀಗಾಗಿ ಭಟ್ಕಳಕ್ಕೆ ನೂರಾರು ಸಲ ಹೋಗಿ ಬರುವ ಅವಕಾಶ ಸಿಕ್ಕಿತ್ತು.
  ನಾನು ಹಾಗೆ ಹೋದಾಗಲೆಲ್ಲಾ, ಈ ಒಂದು ಅಂಶವನ್ನು ಗಮನಿಸಿದ್ದೆ.
  ಇಂದಿಗೂ ಭಟ್ಕಳವೆಂದರೆ ನನಗೆ ಮೊದಲಿಗೆ ನೆನಪಿಗೆ ಬರುವುದು ಈ ಕೆಳಗಿನ ದೃಶ್ಯವೇ. ಇದನ್ನು ನಾನು ಹತ್ತಾರು ಬಾರಿ ಗಮನಿಸಿದ್ದರಿಂದ ಇದು ಮನಸ್ಸಿನಲ್ಲಿ ಅಚ್ಚುಳಿದಿದೆ.
  ಭಟ್ಕಳದ ಅನೇಕ ವಿದ್ಯಾರ್ಥಿಗಳು ಬಸ್‍ನಲ್ಲಿ ಶಾಲೆ ಹಾಗೂ ಕಾಲೇಜಿಗೆ ಹೋಗಿಬರುತ್ತಾರೆ. ಇಲ್ಲಿ ಭಟ್ಕಳ ಎಂದರೆ, ನಗರದ ಜೊತೆಗೆ ಸುತ್ತಲಿನ ಗ್ರಾಮಗಳೂ ಸೇರಿದಂತೆ. ಕೆಲವರು ಗ್ರಾಮಗಳಿಂದ ನಗರಕ್ಕೆ ಬರುತ್ತಾರೆ; ಮತ್ತೆ ಕೆಲವರು ಭಟ್ಕಳದಿಂದ ಅಂಕೋಲಾ ಹಾಗೂ ಕುಮಟಾಕ್ಕೆ ಹೋಗುತ್ತಾರೆ.
  ಭಟ್ಕಳದಿಂದ ಹೊರಡುವಾಗ ಬಸ್ಸಿಗೆ ಹತ್ತುವ ಹೆಣ್ಣುಮಕ್ಕಳೆಲ್ಲಾ ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾರೆ. ಬಸ್ ಹೊರಟು ಹತ್ತು-ಹದಿನೈದು ನಿಮಿಷಗಳಾದ ಕೂಡಲೇ ಅವರದನ್ನು ಕಳಚುತ್ತಾರೆ. ನನಗದನ್ನು ನೋಡಿ ಆಶ್ಚರ್ಯ. ಬುರ್ಖಾದ ಒಳಗೆ ಒಂದು ಸಲ್ವಾರ್ ಕಮೀಸ್ ಅಥವಾ ಸೀರೆ ಇರುತ್ತದೆ ಎಂಬುದು ನನಗೆ ತಿಳಿದದ್ದು ಅದೇ ಮೊದಲು.
  ಅದೇ ರೀತಿ ಭಟ್ಕಳಕ್ಕೆ ವಾಪಸ್ಸಾಗುವ ಬಸ್ಸಿನಲ್ಲಿ, ಭಟ್ಕಳ ಹತ್ತಿರ ಬರುತ್ತಿದ್ದಂತೆ ತಮ್ಮ ಕೈಚೀಲಗಳಿಂದ ಕಪ್ಪು ಬಣ್ಣದ ಬುರ್ಖಾ ತೆಗೆದು ಹಾಕಿಕೊಳ್ಳುತ್ತಾರೆ.
  ಏಕೆ ಹೀಗೆ? ಅವರು ಇದನ್ನು ಯಾರದೋ ಒತ್ತಾಯಕ್ಕೆ ಒಳಗಾಗಿ ಹಾಕಿಕೊಳ್ಳುತ್ತಿರುವರು ಎನಿಸುವುದಲ್ಲವೇ? ಯಾರು ಒತ್ತಾಯ ಮಾಡುವವರು? ತಮ್ಮಿಷ್ಟದಂತೆ ಬೇರೆ ವಸ್ತ್ರವನ್ನು ಹಾಕಿಕೊಂಡರೆ ಏನು ಮಾಡುತ್ತಾರೆ?

  ಬುರ್ಖಾ ಬಿಟ್ಟು ಉಳಿದೆಲ್ಲಾ ವಸ್ತ್ರಗಳು ಮಹಿಳೆಯನ್ನು ನಗ್ನಳನ್ನಾಗಿ ತೋರಿಸುತ್ತವೆಯೇ? ಬುರ್ಖಾ ಕುರಿತಾಗಿ ಏಕಿಷ್ಟು ಪ್ರೀತಿ?
  ಮಹಿಳೆಯ ಮೇಲೆ ಮಾತ್ರ ಯಾಕೆ ಈ ನಿರ್ಬಂಧ? ಗಂಡಸರನ್ನು ನಿರ್ಬಂಧಿಸುವುದು ಸಾಧ್ಯವಿಲ್ಲವೆಂದೇ?

  ಮಹಿಳೆಗೆ ತನಗಿಷ್ಟ ಬಂದ ವಸ್ತ್ರವನ್ನು ಧರಿಸಲು ಏಕೆ ಸ್ವಾತಂತ್ರ್ಯವಿಲ್ಲ?ಭಟ್ಕಳದ ದೃಶ್ಯ ಕಣ್ಮುಂದೆ ಬಂದಾಗೆಲ್ಲಾ ನನಗನ್ನಿಸುವುದು, ಮುಸಲ್ಮಾನ ಸಮಾಜದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಕಡಿಮೆ. ಭಟ್ಕಳದ ಕಾಲೇಜಿನ ವಿದ್ಯಾರ್ಥಿಗಳ ನಡುವೆಯೂ ನಾನು ಓಡಾಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲೂ ಇದೇ ರೀತಿಯ ಅಭಿಪ್ರಾಯಗಳನ್ನು ಕೇಳಿದ್ದೇನೆ. ನನಗೆ ಆಶ್ಚರ್ಯ ತರಿಸಿದ ಸಂಗತಿಯೆಂದರೆ, ಅನೇಕ ಮುಸಲ್ಮಾನ ವಿದ್ಯಾರ್ಥಿನಿಯರು ಹಿಂದೂ ಹುಡುಗರನ್ನು ಮದುವೆಯಾಗಲು ಇಚ್ಚೆ ವ್ಯಕ್ತಪಡಿಸಿದ್ದು!

  ಇನ್ನು ಬುರ್ಖಾದಿಂದಾಗಿ ಆಗಿರುವ ಸಮಸ್ಯೆಗಳನ್ನು ನೀವು ಚರ್ಚಿಸಿಲ್ಲ. ನಿಮಗದು ತಿಳಿದಿಲ್ಲವೆಂದೇ ಭಾವಿಸುವೆ.
  ಮೊದಲನೆಯದಾಗಿ, ಪಾಠ-ಪ್ರವಚನಗಳಲ್ಲಿ, ಮಾತನಾಡುತ್ತಿರುವ ವ್ಯಕ್ತಿಗೆ ತಾನು ಯಾರನ್ನು ಸಂಬೋಧಿಸುತ್ತಿದ್ದೇನೋ ಅವರ ಕಣ್ಣನ್ನು ನೋಡುವುದು ಆವಶ್ಯಕ. ಪರಿಣಾಮಕಾರೀ ಭಾಷಣಗಳಿಗೆ ಈ eye-to-eye contact ತೀರಾ ಆವಶ್ಯಕ. ಬುರ್ಖಾ ಧರಿಸಿದ ವ್ಯಕ್ತಿಗೆ ಇದು ಅಸಾಧ್ಯ.
  ಪ್ರಾಯಶಃ ಶೇಖ್ ತಂತಾವಿ ಇದಕ್ಕಾಗಿಯೇ ಬುರ್ಖಾ ಧರಿಸಿದ್ದನ್ನು ಖಂಡಿಸಿರಬೇಕು. ಮತ್ತು ಆ ಘಟನೆಯಲ್ಲಿ, ಬುರ್ಖಾ ಧರಿಸಿದ್ದ ವಿದ್ಯಾರ್ಥಿನಿ ಅದನ್ನು ತೆಗೆದಿದ್ದರೆ ಆಗುತ್ತಿದ್ದ ಅನಾಹುತವೇನು? ಅಲ್ಲಿನ ಸಂದರ್ಭಕ್ಕೆ ಬುರ್ಖಾದ ಆವಶ್ಯಕತೆ ಇರಲಿಲ್ಲ ಎಂದೇ ನನ್ನ ಗಟ್ಟಿ ಅಭಿಪ್ರಾಯ.

  ಎರಡನೆಯದಾಗಿ, ಬುರ್ಖಾವನ್ನು ಅನೇಕ ಜನ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅನೇಕ ಕಡೆ ಬುರ್ಖಾ ಒಳಗೆ ಗಂಡಸರಿದ್ದದ್ದು ಕಂಡು ಬಂದಿದೆ. ಬುರ್ಖಾ ತೆಗೆಯದೆ ಅದು ತಿಳಿಯುವುದಿಲ್ಲ. ತೆಗೆದರೆ ತಮ್ಮ ಮತ-ಸಂಪ್ರದಾಯಕ್ಕೆ ಮಾಡಿದ ಅಪಮಾನ ಎಂದು ಮುಸಲ್ಮಾನರು ಕೂಗಾಡುತ್ತಾರೆ. ಇದಕ್ಕೆ ಏನು ಪರಿಹಾರ?
  ಇದಕ್ಕಾಗಿಯೇ ಚುನಾವಣಾ ಗುರುತು ಪತ್ರಕ್ಕೆ ಬುರ್ಖಾ ತೆಗೆದು ಚಿತ್ರ ತೆಗೆಯಬೇಕೆಂದು ತಿಳಿಸಿರುವುದು. ಇದು ಇಸ್ಲಾಂನ ಕಟ್ಟಳೆಯಲ್ಲಿ ಇಲ್ಲವೆಂದು ನೀವೇ ತಿಳಿಸಿರುವಿರಿ. ಹೀಗಿರುವಾಗ ಮುಸಲ್ಮಾನ ಮೌಲ್ವಿಗಳು ಇದನ್ನು ವಿರೋಧಿಸುತ್ತಿರುವುದು ಏಕೆ? ನಮ್ಮ ಚುನಾವಣಾ ಪ್ರಕ್ರಿಯೆಗೆ, ನಮ್ಮ ಕಾನೂನಿಗೆ, ನಮ್ಮ ಆಡಳಿತಕ್ಕೆ, ನಮ್ಮ ಆಂತರಿಕ ಭಧ್ರತೆಗೆ ಅನುಕೂಲವಾಗಿ ನಾವು ನಡೆದುಕೊಳ್ಳಬೇಕಲ್ಲವೇ? ಅದಕ್ಕನುಕೂಲವಾಗಿ ನಮ್ಮ ಮತ-ಧರ್ಮ-ಸಂಪ್ರದಾಯಗಳನ್ನು ಮಾರ್ಪಡಿಸಬೇಕಲ್ಲವೇ? ಅದರಲ್ಲಿ ತಪ್ಪೇನಿದೆ?
  ಮೂರನೆಯದಾಗಿ, ಭಾರತದ ಹೆಚ್ಚಿನ ಸ್ಥಳಗಳು ಬಿಸಿ ಪ್ರದೇಶಗಳು. ಚಳಿಗಾಲವನ್ನು ಹೊರತು ಪಡಿಸಿ, ಉಳಿದೆಲ್ಲಾ ಸಮಯದಲ್ಲೂ ಇಲ್ಲಿ ಹಗುರವಾದ, light coloured ಉಡುಪು ಧರಿಸುವುದು ಒಳ್ಳೆಯದು. Dark coloured ಅದರಲ್ಲೂ ಕಪ್ಪು ಬಣ್ಣದ್ದಂತೂ ಚಿತ್ರಹಿಂಸೆ. ಹೀಗಾಗಿ ಇಲ್ಲಿನ ಹವಾಮಾನಕ್ಕೆ ಇದು ಅನುಕೂಲವಾಗಿಲ್ಲ ಅಲ್ಲವೇ?

  ಇದೆಲ್ಲಾ ಯೋಚಿಸಿದಾಗ ನನಗನ್ನಿಸುವುದು, ಬುರ್ಖಾ ಬಗ್ಗೆ ಮುಸಲ್ಮಾನ ಸಮಾಜ ಇಷ್ಟೆಲ್ಲಾ ಒತ್ತಡ ತರುವುದು ತರವಲ್ಲ. ಮುಸಲ್ಮಾನ ಸಮಾಜ ಮುಕ್ತವಾದರೆ ಈ ರೀತಿಯ ಸಮಸ್ಯೆಗಳು ತನ್ನಿಂತಾನೇ ಪರಿಹಾರವಾಗುತ್ತವೆ. ಕನಿಷ್ಠಪಕ್ಷ ವಿದ್ಯಾವಂತ ಮುಸಲ್ಮಾನರಾದರೂ ಇದನ್ನರಿತು ಸುಧಾರಣೆ ಕಂಡುಕೊಳ್ಳಲಿ. ಯಾವುದೋ ದೇಶದಲ್ಲಿ, ಯಾವೊದೋ ಕಾಲದಲ್ಲಿ, ಯಾವುದೋ ಸನ್ನಿವೇಶದಲ್ಲಿ, ಉಂಟಾದ ಪದ್ಧತಿಗಳೇ ಎಲ್ಲ ದೇಶ, ಎಲ್ಲ ಕಾಲಕ್ಕೂ ಅನ್ವಯವಾಗಬೇಕು ಎಂದು ಪಟ್ಟುಹಿಡಿಯುವುದು ಅವೈಜ್ಞಾನಿಕ, ಅದು ಸಲ್ಲದು.

 2. bhadravathi ಹೇಳುತ್ತಾರೆ:

  ನರೇಂದ್ರ, ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಧರ್ಮ ಹೆಣ್ಣಿನ ಮೇಲೆ ಕಟ್ಟಳೆ ಗಳನ್ನು ವಿಧಿಸದಿದ್ದರೂ ಗಂಡು ತನ್ನ ಸ್ವಾರ್ಥ ಸಾಧನೆಗಾಗಿ ಹೆಣ್ಣನ್ನು ನಿಗ್ರಹಿಸಲು ನೋಡುತ್ತಾನೆ. ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂದು ಹೆಣ್ಣನ್ನು ಮೂಲೆ ಗುಂಪು ಮಾಡಲಿಲ್ಲವೇ? ಹೆಂಡತಿ ಸತ್ತರೆ ಗಂಡ ಮರು ಮದುವೆ ಆಗಬಹ್ದು, ವಿಧವೆಗೆ ಮರು ವಿವಾಹ ಇರಲಿ, ಕಡೆ ಪಕ್ಷ ಸ್ತ್ರೀಯ ಸೌಂದರ್ಯಕ್ಕೆ ಮುಕುಟ ಪ್ರಾಯವಾದ ಕೇಶವನ್ನೇ ಮುಂಡನ ಮಾಡಿಸಿ ಮೂಲೆಗೆ ತಳ್ಳಲಿಲ್ಲವೇ? ಇವೆಲ್ಲಾ ಎಲ್ಲಾ ಸಮಾಜದಲ್ಲೂ ಇವೆ, ಇಸ್ಲಾಂ ಮಾತ್ರ ಹೊರತಲ್ಲ. ನಮಸ್ಕಾರಗಳೊಂದಿಗೆ

  1. Narendra ಹೇಳುತ್ತಾರೆ:

   ನನ್ನ ಮೊದಲ ಉತ್ತರ ಈ ಕೆಳಗಿದೆ.
   ಅದರ ಜೊತೆಗೆ ಇದನ್ನೂ ಹೇಳಬೇಕೆನ್ನಿಸಿತು, ಸೇರಿಸುತ್ತಿರುವೆ.

   ಹಿಂದೂಗಳು ಮೂಢನಂಬಿಕೆಯವರಾಗಿದ್ದಾರೆ, ಸುಧಾರಣೆಯ ವಿರೋಧಿಗಳಾಗಿದ್ದಾರೆ, ಕಾಲಬಾಹ್ಯ ಪದ್ಧತಿಗಳನ್ನಿಟ್ಟುಕೊಂಡಿದ್ದಾರೆಂದ ಮಾತ್ರಕ್ಕೆ ಎಲ್ಲರೂ ಇಟ್ಟುಕೊಳ್ಳಬೇಕೆಂದೇನಿಲ್ಲವಲ್ಲ.
   ಕನಿಷ್ಠ ನಿಮ್ಮ ಸಮಾಜವನ್ನಾದರೂ ಸುಧಾರಿಸಲು ಪ್ರಯತ್ನಿಸಬಹುದಲ್ಲ? ಸುಧಾರಿಸುವ ಪ್ರಯತ್ನವಿರಲಿ, ತಪ್ಪಾಗಿದೆ ಸುಧಾರಿಸೋಣ ಎಂಬ ಮಾತಾದರೂ ಆಡಬಹುದಲ್ಲ!?

 3. Narendra ಹೇಳುತ್ತಾರೆ:

  “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” – ಈ ಶ್ಲೋಕ ಎಲ್ಲಿದೆ, ಯಾವ ಸಂದರ್ಭದಲ್ಲಿ ಬಂದಿದೆ ಎಂಬುದು ತಿಳಿದಿದೆಯೇ?
  ಆ ಶ್ಲೋಕದ ಸಂದರ್ಭವನ್ನು ಅರ್ಥ ಮಾಡಿಕೊಂಡರೆ, ಅದು ಸ್ತ್ರೀಯರ ಸ್ವಾತಂತ್ರ್ಯದ ಕುರಿತಾದ್ದಲ್ಲ ಎಂಬುದು ನಿಮಗೆ ತಿಳಿಯುತ್ತಿತ್ತು.
  ಅನೇಕ ಬುದ್ಧಿಜೀವಿಗಳು ಈ ಶ್ಲೋಕವನ್ನು ಉದ್ಧರಿಸುತ್ತಿರುತ್ತಾರೆ. ಅವರೇನೂ ಅದನ್ನು ಸ್ವತಃ ಓದಿ ತಿಳಿದಿರುವುದಿಲ್ಲ. ಯಾರೋ ಹೇಳಿದ್ದನ್ನು ಎರವಲು ಪಡೆದು ಗಿಳಿಪಾಠ ಒಪ್ಪಿಸುತ್ತಿರುತ್ತಾರೆ.
  ತಮ್ಮಂತಹ ತಿಳಿದವರೂ ಹಾಗೇ ಮಾಡುತ್ತಿರುವುದು ದುರ್ದೈವ ಎನ್ನಬೇಕಷ್ಟೇ.

  ನಮ್ಮ ದೇಶಕ್ಕೆ ಸಂಬಂಧಿಸಿದಂತೆ, ವಿಧವೆಯ ಮುಂಡನ ಪ್ರಾರಂಭವಾದದ್ದು ಕೆಲವು ನೂರು ವರ್ಷಗಳ ಹಿಂದಷ್ಟೇ. ಮೊಗಲರು ಮತ್ತು ಇತರ ಆಕ್ರಮಕರು ಯುದ್ಧದಲ್ಲಿ ವಿಜಯಿಗಳಾದ ನಂತರ ಸುಂದರ ಸ್ಥ್ರೀಯರನ್ನು ತಮ್ಮ ಜಹಾನಾಕ್ಕೆ ಸೇರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಇದನ್ನು ತಪ್ಪಿಸಲು ಜೌಹರ್ ಮತ್ತು ಮುಂಡನದ ಪದ್ಧತಿ ಪ್ರಾರಂಭವಾಯಿತು – ಕುರೂಪಿ ಹೆಂಗಸರನ್ನು ಯಾರು ತಾನೇ ಮುಟ್ಟುವರು, ಹೀಗಾಗಿ ಅವರ ಮಾನ ಉಳಿಯುತ್ತಿತ್ತು.

  ಆದರೆ, ಹಿಂದೆ ಬಂದಂತಹ ಪದ್ಧತಿಯೇ ಇಂದಿಗೂ ಸರಿ ಎಂದರೆ ತಪ್ಪಾದೀತು. ಇಂದು ಆ ರೀತಿಯ ಆಕ್ರಮಣಗಳಾಗಲೀ, ಸ್ತ್ರೀ ಅಪಹರಣಗಳಾಗಲೀ ಇಲ್ಲ. ಹೀಗಾಗಿ ಮುಂಡನದ ಹಾಗೂ ಜೌಹರ್ ನ ಆವಶ್ಯಕತೆ ಇಲ್ಲ.
  ಇಂದಿನ ವಿಧವಾ ಸ್ತ್ರೀಯರು ಮುಂಡನ ಮಾಡಿಸಿಕೊಳ್ಳುತ್ತಿಲ್ಲ; ಜೌಹರ್ ಹೋಗುತ್ತಿಲ್ಲ.
  ಇದನ್ನು “ಧರ್ಮ ವಿರೋಧೀ” ಎಂದು ಯಾರೂ ವಿರೋಧಿಸಿಲ್ಲ ಅಲ್ಲವೆ?
  ಹಿಂದೂ ಸಮಾಜದಲ್ಲಿ ಈ ರೀತಿಯ ಸುಧಾರಣೆಗಳಿಗೆ ಅವಕಾಶಗಳಿವೆ.

  ಈ ರೀತಿಯ ಅನಾವಶ್ಯಕ, ಕಾಲಬಾಹ್ಯ ಪದ್ಧತಿಗಳನ್ನು ಎಲ್ಲಾ ಮತ-ಧರ್ಮದವರೂ ತೆಗೆದು ಹಾಕಿದರೆ ಸುಂದರ ಸಮಾನ ನಿರ್ಮಾಣಗೊಳ್ಳುತ್ತದೆ ಎಂಬುದು ನನ್ನ ಅನಿಸಿಕೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s