ಯಾರೀ “ಸೈತಾನ”?

ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು.  ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ  ಸಂವಾದವನ್ನು ಆಲಿಸಿ ತಂದೆ ಉಪಯೋಗಿಸಿದ ಸೈತಾನ್ ಪದದ ಬಗ್ಗೆ ದುಃಖಿತರಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಮ್ಮ ಇಷ್ಟ ದೇವರನ್ನು ಸೈತಾನ ಎಂದು ಕರೆದ ವ್ಯಕ್ತಿಯ ನಂಬುಗೆಯ ಬಗ್ಗೆ ರಂಗು ರಂಗಿನ ಕಾಮೆಂಟುಗಳೂ ಬಂದವು. ನಾನಂತೂ ಇದು ಶುದ್ಧ ಸುಳ್ಳು ಎಂದು ಜೇನುಗೂಡಿಗೆ ಕಲ್ಲು ಬೀಸಿದ್ದೇ ತಡ ಬಂದೆರಗಿದವು  ದಂಡು. ನೆಚ್ಚಿನ ನಟನ autograph ಪಡೆಯಲು ಮುತ್ತಿಕ್ಕುವ ಅಭಿಮಾನಿಗಳಂತೆ. ಈ storm in a tea cup ತೆರನಾದ ವಿವಾದವನ್ನ ಎಬ್ಬಿಸಿದ ಸೈತಾನ್ ನನ್ನ ಹಿಂದೆಯೂ ಬಿದ್ದ ತನ್ನ ಬಗ್ಗೆ ಸಹಾ ಒಂದಿಷ್ಟು ಬರಿ ಎಂದು.  

ಸೈತಾನ್ ಮತ್ತು ಶೈತಾನ್ ಇವೆರಡೂ ಒಂದೇ ಪದಗಳು, ಉಚ್ಛಾರ ಮಾತ್ರ ಬೇರೆ. ಅರಬ್ಬೀ ಮೂಲದ ಈ ಪದಗಳು ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥ ಬರುವ ರೀತಿಯಲ್ಲಿ ಬಳಸುತ್ತಾರೆ. satanic verses ಬರೆದ ರುಶ್ಡಿ ತನ್ನ ಲೇಖನಿಯಿಂದ ಹೊರಹೊಮ್ಮಿದ ಸೈತಾನನ ದೆಸೆಯಿಂದ ತನ್ನ ತಲೆಗೆ ಭಾರೀ ಮೊತ್ತದ ಬಹುಮಾನವನ್ನು  ಕಟ್ಟಿಕೊಂಡ. ರುಶ್ಡಿ ಗೆ ತಗುಲಿಕೊಂಡ ಸೈತಾನನೇ ಕುಂಚವೀರ ಹುಸೇನನಿಗೂ ತಗುಲಿಕೊಂಡು ದೇಶಾಂತರ ಹೋಗಲು ಮಾಡಿದ್ದು. ನೋಡಿದಿರಾ ಸೈತಾನನ ಮಹಿಮೆಯನ್ನು. ವಿಕ್ರಮನ ಬೆಂಬಿಡದ ಭೇತಾಳನಂತೆ ಈತ ಕೂಡಾ.     

ಮಕ್ಕಳು ತುಂಬಾ ತುಂಟತನ ಮಾಡಿದಾಗ ಎಂಥ ಸೈತಾನ ಹುಡುಗ ಅಪ್ಪ ಇವನು ಎಂದು ಮೂದಲಿಸುವುದನ್ನು ಕೇಳಿದ್ದೇನೆ. ಮಕ್ಕಳನ್ನು ಸೈತಾನ ಎಂದು ಕರೆಯಬಾರದು ಎಂದು ಹಿರಿಯರು ನಯವಾಗಿ ಗದರುವುದೂ ಇದೆ. ದೇವರು ಮನುಷ್ಯನನ್ನು ಸೃಷ್ಟಿಸುವ ನಿರ್ಣಯ ಮಾಡಿದಾಗ ಸಕಲ ದೇವದೂತ ಸಮೂಹ ದೇವರನ್ನು ಉದ್ದೇಶಿಸಿ ಹೇಳುತ್ತದೆ, ಪ್ರಭು, ನಿನ್ನನ್ನು ಆರಾಧಿಸಲು, ನಿನ್ನ ಆಜ್ಞೆಗಳನ್ನು ಶಿರಸಾ ಪಾಲಿಸಲು ನಾವಿರುವಾಗ ಈ ಮನುಷ್ಯನನ್ನು ಸೃಷ್ಟಿಸಿ ಭೂಲೋಕಕ್ಕೆ ಕಳಿಸಿ ದೊಡ್ಡ ಗಂಡಾಂತರಕ್ಕೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಅಲ್ಲವೇ ಎಂದಾಗ ದೇವರು ಹೇಳುತ್ತಾನೆ, ನನ್ನ ಆಜ್ಞಾನುವರ್ತಿ ದಾಸರೇ, ನಿಮಗೆ ಅರಿವಿಲ್ಲದ್ದು ನನಗೆ ತಿಳಿದಿದೆ, ನಿಮ್ಮನ್ನೂ ಸಹಾ ನಾನೇ ಅಲ್ಲವೇ ಸೃಷ್ಟಿಸಿದ್ದು ಎಂದು ಹೇಳಿ ಮಣ್ಣಿನಿಂದ ಸೃಷ್ಟಿಸಿದ ಮನುಷ್ಯನಿಗೆ ಸಾಷ್ಟಾಂಗ ಮಾಡುವಂತೆ ಅಪ್ಪಣೆ ಕೊಡುತ್ತಾನೆ. ಸಮಸ್ತ ದೇವದೂತ ಸಮೂಹ ಕೂಡಲೇ ಮನುಷ್ಯನಿಗೆ ಸಾಷ್ಟಾಂಗ ಎರಗುತ್ತವೆ, ಒಬ್ಬನನ್ನು ಹೊರತು ಪಡಿಸಿ. ಅವನೇ ದೇವದೂತರ ನಾಯಕ ಇಬ್ಲಿಸ್. ಇಬ್ಲಿಸ್ ಹೇಳುತ್ತಾನೆ, ಪ್ರಭು, ನನ್ನನ್ನು ನೀನು ಸೃಷ್ಟಿಸಿದ್ದು ಹೊಗೆಯಿಲ್ಲದ ಅಗ್ನಿಯಿಂದ, ಜೇಡಿ ಮಣ್ಣಿನಿಂದ ಸೃಷ್ಟಿಸಿದ ಈ ಮನುಷ್ಯನಿಗೆ ನಾನು ಸಾಷ್ಟಾಂಗ ಎರಗಲು ನೀನು ಕೇಳುವುದು ಯಾವ ನ್ಯಾಯ ಎಂದು ತನ್ನ ಒಡೆಯ, ತನ್ನನ್ನು ಸೃಷ್ಟಿಸಿದ ಸಕಲ ಲೋಕಗಳ ಪ್ರಭುವಿಗೆ ಮರುತ್ತರ ನೀಡುತ್ತಾನೆ. ಕುಪಿತನಾದ ದೇವರು ಅವನನ್ನು ದೇವಲೋಕದಿಂದ ಅಟ್ಟುತ್ತಾನೆ. ಪ್ರಥಮ ಮಾನವ ಜೋಡಿ “ಆದಂ” ಮತ್ತು “ಹವ್ವಾ” (adam and eve) ರನ್ನು ಸಂಬೋಧಿಸುವ ದೇವರು ನೀವು ಸ್ವರ್ಗ  ಲೋಕದಲ್ಲಿ ಬೇಕಾದ್ದನ್ನು ಮಾಡಿರಿ, ಸುಖಿಸಿ ಆದರೆ ಆ ವೃಕ್ಷದ ಫಲ ಮಾತ್ರ ತಿನ್ನಬೇಡಿ ಎಂದು ತಾಕೀತು ಮಾಡುತ್ತಾನೆ. ಈಗ ಆಗಮನವಾಗುತ್ತದೆ ಸ್ವರ್ಗಲೋಕದಿಂದ ಹೊರದಬ್ಬಲ್ಪಟ್ಟ “ಇಬ್ಲಿಸ್” ನದು. ನೀವೆಷ್ಟೆಲ್ಲ ರೀತಿಯ ಸುಖ ಅನುಭವಿಸುತ್ತಿರುವಾಗ ಈ ವೃಕ್ಷದ ಹಣ್ಣನ್ನು ತಿನ್ನಬೇಡಿ ಎಂದು ಪ್ರಭು ಹೇಳಲು ಏನು ಕಾರಣ, ನೀವು ತಿನ್ನಿ ಎಂದು ಅವರಿಗೆ ಆಮಿಷ ಒಡ್ಡುತ್ತಾನೆ. ಮನುಷ್ಯ ಚಂಚಲ, ಸ್ವರ್ಗದಲ್ಲಿ ಇಷ್ಟೆಲ್ಲಾ ಇದ್ದರೂ ಯಾವುದು ಪ್ರತಿಬಂಧಿಸಲ್ಪಟ್ಟಿದೆಯೋ ಅದನ್ನು ತಿನ್ನಬೇಕು. ಸರಿ ಆ ಫಲವನ್ನ ತಿಂದಿದ್ದೇ ತಡ ದೇವರು ಹೇಳುತ್ತಾನೆ, ಧಿಕ್ಕಾರಿಗಳಾದ ನೀವಿಬ್ಬರೂ ಸ್ವರ್ಗ ಬಿಟ್ಟು ತೊಲಗಿ, ಭೂಲೋಕಕ್ಕೆ ಹೋಗಿ ನೆಲೆಸಿ ಎಂದು ಅವರನ್ನು ಕಳಿಸುತ್ತಾನೆ. ಈ ಘಟನೆಗೆ ಆಮಿಷ ತೋರಿಸಿದ “ಇಬ್ಲಿಸ್” ಕಾರಣ ಮತ್ತು ಇವನನ್ನೇ ಸೈತಾನ್ ಎಂದೂ ಕರೆಯುತ್ತಾರೆ.

ಮುಸ್ಲಿಮರು ಏಕದೇವೋಪಾಸನೆಯಲ್ಲಿ ನಿರತರಾಗಿರುವಾಗಲೂ ಸೈತಾನ ಬಂದು ತನ್ನ ಕುಚೇಷ್ಟೆಗಳನ್ನು ತೋರಿಸುತ್ತಾನೆ ಎಂದು ನಂಬುಗೆ. ಹೇಗೆಂದರೆ, ಧ್ಯಾನ ನಿರತರಾಗಿದ್ದಾಗ ಅವರ ಮನಸನ್ನು ಇನ್ನೆಲ್ಲಿಗಾದರೂ ಸೆಳೆಯುವುದು, ನಮಾಜಿನ ಲಹರಿಯಲ್ಲಿ ಏರು ಪೇರುಂಟು ಮಾಡುವುದು, ಇಲ್ಲಸಲ್ಲದ ಆಲೋಚನೆಗಳನ್ನು ಬಿತ್ತುವುದು, ಈ ರೀತಿಯ ಕುಚೇಷ್ಟೆ ತೋರಿಸುತ್ತಾನೆ. ಅದಕ್ಕಾಗಿ ಆರಾಧನೆ ಆರಂಭದಲ್ಲಿ “ಅಊದು ಬಿಲ್ಲಾಹಿ ಮಿನ ಶೈತಾನಿ ರಜೀಮ್” ಎಂದು ಹೇಳಿಯೇ ನಮಾಜ್ ಆರಂಭಿಸುವುದು. ಈ ಸೂಕ್ತದ ಅರ್ಥ ” ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಅರಸುತ್ತೇನೆ” ಎಂದು. ಇಸ್ಲಾಮಿನಲ್ಲಿ ಕಡ್ಡಾಯ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಮಾಡಬೇಕೆಂದು ನಿಯಮವಿದೆ. ತಮ್ಮ ಹಿಂದೆ ಸಾಲಾಗಿ ನಿಲ್ಲುವ ಆರಾಧಕರನ್ನು ಉದ್ದೇಶಿಸಿ ಇಮಾಂ ಹೇಳುತ್ತಾರೆ, ನೇರವಾಗಿ ನಿಲ್ಲಿ, ಇಬ್ಬರ ಮಧ್ಯೆ ಸೈತಾನನಿಗೆ ನಿಲ್ಲಲು ಅವಕಾಶ ಮಾಡಬೇಡಿ ಎಂದು. ಮನೆಯಲ್ಲಿ ಒಬ್ಬರೇ ನಮಾಜ್ ಮಾಡಿದ ನಂತರ ನೆಲದ ಮೇಲೆ ಹರಡುವ ಚಿಕ್ಕ ಕಂಬಳಿಯನ್ನು (prayer mat) ಮಡಚಿ ಇಟ್ಟು ಹೋಗುತ್ತಾರೆ ಸೈತಾನ ಬಂದು ಉಪಯೋಗಿಸಬಹುದು ಎಂದು ಹೆದರಿ. “ಸೈತಾನನ ಚೇಷ್ಟೆಯಿಂದ ಅಲ್ಲಾಹನ ಅಭಯ ಕೇಳುವ ಪುಟ್ಟ ಪ್ರಾರ್ಥನೆ ಮುಸ್ಲಿಮರ ನಾಲಗೆಯ ತುದಿಯಲ್ಲಿ ಯಾವಾಗಲೂ ಇರುತ್ತದೆ.        

ಈ ಮೇಲಿನ ಸಂದರ್ಭದಲ್ಲಿ ಸೈತಾನ ಎಂದರೆ ಒಂದು ರೀತಿಯ distraction. ಶ್ರದ್ಧೆ ತಪ್ಪುವಂತೆ ಮಾಡುವುದು ಅವನ pastime.

ರಾತ್ರಿ ಮಕ್ಕಳು ಕಾಲು ತೊಳೆಯದೆ ಮಲಗಲು ಹೋದರೆ  ಇದ್ದರೆ ತಾಯಿ ಗದರಿಸುತ್ತಾಳೆ , ನಿಮ್ಮ ಕಾಲುಗಳನ್ನು ಸೈತಾನ ಬಂದು ನೆಕ್ಕುತ್ತಾನೆ ಎಂದು. ಭಯದಿಂದ ಮಕ್ಕಳು ತೆಪ್ಪಗೆ ಬಚ್ಚಲ ಮನೆಯ ಕಡೆ ಪ್ರಯಾಣ ಬೆಳೆಸುತ್ತಾರೆ. ಮನಸ್ಸಿಗೆ ಯಾವುದಾದರೂ ವಿಷಯದಲ್ಲಿ ಅನುಮಾನ ತೋರಿದಾಗ, ಜನರ ಬಗ್ಗೆ ಅನಾವಶ್ಯಕ ಗುಮಾನಿ ಮೂಡಿದಾಗಲೂ ದೂರುವುದು ಸೈತಾನನನ್ನೇ.  

ವಿವಾಹಿತರಾಗದ  ಹೆಣ್ಣು ಗಂಡು ಏಕಾಂತದಲ್ಲಿದ್ದರೆ ಮೂರನೆಯ ವ್ಯಕ್ತಿಯಾಗಿ ಹಾಜರಿರುತ್ತಾನಂತೆ ಸೈತಾನ.  ಸೈತಾನ ಬಂದು ಅವರೀರ್ವರ ಅಥವಾ ಅವರಲ್ಲೊಬ್ಬರ ಮನಸ್ಸಿನಲ್ಲಿ ಕೊಳಕು ಆಲೋಚನೆ ಬಿತ್ತುತ್ತಾನೆ ಎಂದು ವಿಧ್ವಾಂಸರು ಹೇಳುತ್ತಾರೆ. ಇದರರ್ಥ ಏನೆಂದರೆ ಅನಾವಶ್ಯಕವಾಗಿ ವಿರುದ್ಧ ಲಿಂಗದವರು ಒಟ್ಟಿಗೆ ಸೇರಬಾರದು ಎಂದು.

ಈ ಮೇಲಿನ ಉದಾಹರಣೆಯಲ್ಲಿ ಸೈತಾನ ಮಾಡುವ ಕೆಲಸ ಮನಸ್ಸಿನಲ್ಲಿ ಲಾಲಸೆ ಉಂಟು ಮಾಡುವುದು.

ಭೂತ, ಪ್ರೇತ, ಪಿಶಾಚಿ, ಮೋಹಿನಿ, ದೆವ್ವಾದಿಗಳಿಗೂ ಸೈತಾನ ಎಂದು ಕರೆಯುತಾರೆ. ವರುಷಗಳ ಹಿಂದಿನ ಮಾತು. ಹಳ್ಳಿಯೊಂದರಲ್ಲಿದ್ದ ನಮ್ಮ ತೆಂಗಿನ ತೋಟದಲ್ಲಿ ಒಂದು ಕೇರಳ ಮೂಲದ ಕುಟುಂಬ ತೋಟವನ್ನು ಕಾಯುವ ಕೆಲಸ ಮಾಡುತ್ತಿತ್ತು. ಪ್ರತೀ ರಂಜಾನ್, ಬಕ್ರೀದ್ ಹಬ್ಬಗಳಿಗೆ ಆ ಮನೆಯ ಯಜಮಾನ ಪಟ್ಟಣದಲ್ಲಿದ್ದ ನಮ್ಮ ಮನೆಗೆ ಬರುತ್ತಿದ್ದರು. ಅವರು ಹಿಂದಿರುಗುವಾಗ ನಮ್ಮಮ್ಮ ಅವರ ಮನೆಯವರಿಗೆಂದು ಬಿರಿಯಾನಿ ಕಟ್ಟಿ ಕೊಡುತ್ತಿದ್ದರು. ಒಮ್ಮೆ ಈ ರೀತಿ ಬುತ್ತಿಯನ್ನು ಸೈಕಲ್ ಕ್ಯಾರಿಯರ್ ಮೇಲೆ ಇಟ್ಟುಕೊಂಡು ಆ ವ್ಯಕ್ತಿ ತಮ್ಮ ಮನೆಗೆ ಹೋಗುತ್ತಿದ್ದರು. ಅವರು ವಾಸಿಸುತ್ತಿದ್ದ ಸ್ಥಳ ನಿರ್ಜನ. ಹೋಗುವ ದಾರಿಯಲ್ಲಿ ಸಿಗುವ  ರೈಲ್ವೆ ಕ್ರಾಸಿಂಗ್ ದಾಟಿ ಇಳಿಜಾರಿನಲ್ಲಿ ಸರಾಗವಾಗಿ ಹೋಗುತ್ತಿದ್ದ ಸೈಕಲ್ ಅನ್ನು ಯಾರೋ ಹಿಡಿದು ಹಿಂದಕ್ಕೆಳೆದ ಅನುಭವ ಅವರಿಗೆ. ಹಿಂದಿರುಗಿ ನೋಡಿದಾಗ ಯಾರೂ ಕಾಣಲಿಲ್ಲ. ಏನೋ ಭ್ರಮೆ ಇರಬೇಕು ಎಂದು ಮತ್ತೊಮ್ಮೆ ಸೈಕಲ್ ಹತ್ತಿ ಮುಂದಕ್ಕೆ ಹೋಗಲು ಹೊರಟಾಗ ಅದೇ ರೀತಿಯ ಅನುಭವ. ಹೀಗೆ ಮೂರ್ನಾಕು ಸಲ ಆದ ಕೂಡಲೇ ಬೇಸತ್ತ ಅವರು ಇದು ಸೈತಾನನ ಆಟ ಇರಬೇಕು, ಬಿರಿಯಾನಿ ತಿನ್ನಲು ಮನಸ್ಸಾಗಿದೆ ಸೈತಾನನಿಗೆ, ಅದಕ್ಕೇ ಎಳೆಯುತ್ತಿದೆ ಸೈಕಲ್ ಅನ್ನು ಎಂದು ಒಂದು ಡಬ್ಬದಷ್ಟು ಬಿರಿಯಾನಿಯನ್ನು ರಸ್ತೆಗೆ ಬಿಸಾಡಿದ ನಂತರವೇ ಸೈಕಲ್ ಸರಾಗವಾಗಿ ಓಡಿದ್ದು. ನಮಗೆ ಅಷ್ಟೇನೂ ರುಚಿಕರವಾಗಿ ಕಾಣದಿದ್ದರೂ ಸೈತಾನನಿಗಾದರೂ ಇಷ್ಟವಾಯಿತಲ್ಲ ನಮ್ಮಮ್ಮನ ಬಿರಿಯಾನಿ ಎಂದು ಈ ಕತೆ ಕೇಳಿದ ನಾವು ಅಂದು ಕೊಂಡು ಭಯದಿಂದ ಮುದುಡಿ ಮಲಗಿದ್ದೆವು ರಾತ್ರಿ.    

ಸೈತಾನ ಎಂದರೆ ಪ್ರೇತ ಎಂದೂ ಹೇಳಲಾಗುತ್ತದೆ. ಒಂದಾನೊಂದು ಕಾಲದಲ್ಲಿ ಉಕ್ಕಿನ ಕಾರ್ಖಾನೆಯ ಹತ್ತಿರ ಇದ್ದ  ನನ್ನ ಅಜ್ಜಿಯ ಮನೆಯಲ್ಲಿ ಸೈತಾನನ ಹಾವಳಿ ಇತ್ತಂತೆ. ತಡ ರಾತ್ರಿ ತನಕ ನನ್ನ ಅಜ್ಜ ರೇಡಿಯೋ ಕೇಳುತ್ತಿದ್ದರು. ಮಲಗಲು ಹೋದ ನಂತರ ಸೈತಾನ ಬಂದು ಮತ್ತೊಮ್ಮೆ ರೇಡಿಯೋ ಆನ್ ಮಾಡುತ್ತಿದ್ದನಂತೆ. ಮಾಡುತ್ತಿದ್ದನಂತೆ? ಮಾಡುತ್ತಿದ್ದಳಂತೆ ಏಕಾಗಬಾರದು? ಚಂಡಮಾರುತಗಳಿಗೆ ಸ್ತ್ರೀಯರ ಹೆಸರೇ ಏಕೆ ಎಂದು ಪ್ರತಿಭಟಿಸಿದ ನಾರೀಮಣಿಗಳ ಥರ ನಾವೂ ಪ್ರತಿಭಟಿಸಬೇಕು ನೋಡಿ ಸೈತಾನನ ಪುಲ್ಲಿಂಗ ಪ್ರಯೋಗದ ಬಗ್ಗೆ.              

ಒಂದು ಸಮುದಾಯಕ್ಕೆ ಸೇರಿದವರ ಇಷ್ಟ ದೇವರನ್ನು ಸೈತಾನ ಎಂದು ಜರೆದ ತಂದೆ ಮಗಳ ಸಂವಾದ ಆಲಿಸಿ ಅಳಲನ್ನು ತೋಡಿಕೊಂಡ ಸಂಪದಿಗರಿಗೆ ಸೈತಾನನ ಪ್ರಭಾವದಿಂದ ತಪ್ಪು ಗ್ರಹಿಕೆ ಆಗಿರಲಿಕ್ಕೂ ಸಾಕು. ಏಕೆಂದರೆ ಕೇಳಿದ್ದೆಲ್ಲಾ ಸತ್ಯವೇ ಆಗ ಬೇಕೆಂದಿಲ್ಲವಲ್ಲ. “ನೋಡಿದ್ದು  ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ, ನಿಜವು ತಿಳಿವುದು” ಎನ್ನುವ ನೀತಿ ಬೋಧನೆಯ ಹಾಡೇ ಇಲ್ಲವೇ? ಬಹುಶಃ ಬೇರಾವುದಾದರೂ ವಸ್ತುವನ್ನು ತೋರಿಸಿ ಸೈತಾನ ಎಂದು ತಂದೆ ತನ್ನ ಪ್ರೀತಿಯ ಮಗಳಿಗೆ ಹೇಳುತ್ತಿರುವಾಗ coincidentally ಅದೇ ಸಂದರ್ಭದಲ್ಲಿ ದೇವರ ಮೆರವಣಿಗೆ ಬಂದಿರಬೇಕು. possibilities are endless, you see? ಇದೂ ಒಂದು ರೀತಿಯ ಸೈತಾನನ ಆಟವೇ ಆಗಿರಬೇಕು, ಜನರ ನಡುವೆ ಸಂಶಯದ ಬೀಜ ಬಿತ್ತುವುದು. ಹಾಗೇನಾದರೂ ಆ ವ್ಯಕ್ತಿ ಹೇಳಿದ್ದು ಅವರ ದೇವರ ಬಗ್ಗೆಯೇ ಆಗಿದ್ದರೂ ಅದನ್ನು ಅವರಿಗೆ ಅರ್ಥವಾಗುವ ಹಾಗೆ ತಿಳಿ ಹೇಳಬೇಕು, ಎಲ್ಲಾ ಜನರ ನಂಬಿಕೆಗಳನ್ನೂ, ದೇವರುಗಳನ್ನೂ ಗೌರವಿಸಬೇಕಪ್ಪಾ ದೊರೆ ಎಂದು. ಅದಕ್ಕೇ ಅಲ್ಲವೇ ಮನುಷ್ಯನಿಗೆ ದೇವರು ಮಾತು ಎನ್ನುವ faculty ದಯಪಾಲಿಸಿದ್ದು? ಪ್ರಾಣಿಗಳಿಗಿಲ್ಲದ ಈ ಅದ್ಭುತ ಸೌಲಭ್ಯವನ್ನ ಆ ಕರುಣಾಮಯನಾದ ದೇವರು ಮನುಷ್ಯನಿಗೆ ದಯಪಾಲಿಸಿರುವಾಗ ಅದನ್ನು ಯಥೇಚ್ಚವಾಗಿ ಉಪಯೋಗಿಸಿಲ್ಲದಿದ್ದರೆ ನಾಳೆ “ಮಾತು” ಅನ್ನುವ ಪ್ರಯೋಗವನ್ನೇ ಮನುಷ್ಯ ಮರೆತು ಬಿಡಬಹುದು (ಸಂಸ್ಕೃತ ಭಾಷೆಯನ್ನೂ ಹೆಚ್ಚೂ ಕಡಿಮೆ ಕಳೆದುಕೊಂಡಂತೆ). ಸಂವಾದ ಬರೀ ಜಗಳ ಕಾಯಲು ಮಾತ್ರವಲ್ಲದೆ ಜನರಿಗೆ ತಿಳಿ ಹೇಳಲು, ವಿವರಿಸಲು, ಉಪದೇಶಿಸಲು, ಒಳ್ಳೆಯ ಮಾತುಗಳನ್ನಾಡಲು ಉಪಯೋಗಿಸಿದಾಗ ಎಲ್ಲಾ ರೀತಿಯ ಸಂಶಯಗಳೂ ಪರಿಹಾರ ಕಾಣುವುವು. ಮಾತೇ ಆಡದಿದ್ದರೆ ಯಾರೋ ಹೇಳಿದ ಸುಳ್ಳುಗಳನ್ನು ಸತ್ಯ ಎಂದು ನಂಬಿ, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಬೇಡದ ಆಲೋಚನೆ, ಕಲ್ಪನೆ ಮಾಡಿ ಕೊಂಡು ಅನುಮಾನಗಳನ್ನೂ, ಸಂಶಯಗಳನ್ನೂ ಎದೆಯಲ್ಲಿ ಇಟ್ಟು ಕೊಂಡು ನಡೆದರೆ ಆರೋಗ್ಯಕ್ಕೂ, ಚಿತ್ತ ಸ್ವಾಸ್ಥ್ಯಕ್ಕೂ ಒಳ್ಳೆಯದಲ್ಲ ಎಂದು ಹಿರಿಯರು ಹೇಳುವರು.

ಬನ್ನಿ ಮಾತನಾಡೋಣ, ಸೈತಾನ್ ಹತ್ತಿರ ಸುಳಿಯೋದಿಲ್ಲ, ಏಕೆಂದರೆ ಸೈತಾನರು ಮನೆ ಮಾಡಿಕೊಂಡಿರುವುದು ಸ್ಮಶಾನದಂಥ ನಿರ್ಜನ ಸ್ಥಳಗಳಲ್ಲೂ, (scheming empty minds) ಬರಿದಾದ ಮನಸ್ಸಿನಲ್ಲೂ ಅಲ್ಲವೇ?

ನೋಡಿ ಸೈತಾನನ ಕೆಲಸ, ನಾನು ನಿಜವಾಗಿ ಬರೆಯಲು ಹೊರಟಿದ್ದು ಈಗ ನನ್ನ ಕೈಯಲ್ಲಿರುವ “ಕವಲು” ಕಾದಂಬರಿಯ ಬಗ್ಗೆ, ಆದರೆ ಗೀಚಿದ್ದು ಉಲ್ಟಾ ಕಾಲುಗಳ ಸೃಷ್ಟಿಗಳ ಬಗ್ಗೆ.

ವ್ಯಂಗ್ಯ ಚಿತ್ರ ಕೃಪೆ: joel roi aronowitz

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s