ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

 

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಬದುಕಿನಲ್ಲಿ ಸೋಲು, ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಮೂಡಿದಾಗ ಬಹಳಷ್ಟು ಜನ ಸಾವಿನ ಮೊರೆ ಹೋಗುತ್ತಾರೆ. ಯಾವ ಧರ್ಮವೂ ಆತ್ಮಹತ್ಯಗೆ ಬೆಂಬಲ ನೀಡದೆ ಇದ್ದರೂ ಬದುಕು ದುಸ್ತರ, ದುರ್ಭರವಾದಾಗ ಯಾವ ಉಪದೇಶವೂ ಕೆಲಸಕ್ಕೆ ಬಾರದು. ಕೆಲವರು ವಿಷ ಸೇವಿಸಿ ಬದುಕಿಗೆ ಬೈ ಹೇಳಿದರೆ ಇನ್ನೂ ಕೆಲವರು ರೈಲು, ಹಗ್ಗ ಹೀಗೆ ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಎತ್ತರದ ಬಂಡೆ ಅಥವಾ ಕಣಿವೆಯ ತುದಿಯ ಮೇಲಿನಿಂದ ಜಿಗಿದು ಪ್ರಾಣ ಕಳೆದು ಕೊಳ್ಳುತ್ತಾರೆ. ಇಂಥ “ಸಾವಿನ  ತಾಣ” ಗಳಲ್ಲಿ ಪ್ರಾಣ ಕಳೆದುಕೊಳ್ಳುವವರ ನಿರೀಕ್ಷೆಯಲ್ಲಿ ಒಬ್ಬ ವ್ಯಕ್ತಿ ಹತ್ತಾರು ವರ್ಷಗಳಿಂದ ದಿನ ಕಳೆಯುತ್ತಾನೆ. ಜನ ಕೆಳಕ್ಕೆ ಜಿಗಿದು ತಲೆ ಒಡೆದುಕೊಂಡು ಚೀರಿಡುತ್ತಾ ಸಾಯುವುದನ್ನು ನೋಡಿ ಆಸ್ವಾದಿಸಲು ಅಲ್ಲ. ಆತನ ಉದ್ದೇಶ ಬೇರೆಯೇ.

೮೪ ವರ್ಷ ಪ್ರಾಯದ ರಿಚೀ ಯಮನಿಗೆ ಪ್ರಿಯವಾದ ತಾಣಗಳಲ್ಲಿ ಕಾಲ ಕಳೆಯುತ್ತಾ ಯಮನ ಗಿರಾಕಿಗಳನ್ನು ತನ್ನೆಡೆ ಎಳೆದುಕೊಂಡು ಜೀವ ಉಳಿಸಿದ್ದು ಇದುವರೆಗೂ ಹೆಚ್ಚೂ ಕಡಿಮೆ ೧೬೦ ಜನರನ್ನು. ಯಮಧರ್ಮ ರಾಯನ ವ್ಯಾಪಾರ ಸಾವಾದರೆ ಈತನ ವ್ಯಾಪಾರ ಬದುಕಿನತ್ತ ಮತ್ತೊಂದು ನೋಟ ಹರಿಸಿ ಎರಡನೇ ಇನ್ನಿಂಗ್ಸ್ ಗೆ ಅವಕಾಶ ಮಾಡಿ ಕೊಡುವುದು. ಆಸ್ಟ್ರೇಲಿಯಾದ ಈ ಮಹಾತ್ಮ ತನ್ನ ೫೦ ವರ್ಷಗಳ ಈ “ಆತ್ಮ” ಸೇವೆಗೆ ತನ್ನನ್ನು ಮುಡಿಪಾಗಿರಿಸಿಕೊಂಡು ಸಮಾಜದ ಪ್ರಶಂಸೆಗೆ ಕಾರಣವಾಗಿರುವುದು ಅಚ್ಚರಿಯೇನಲ್ಲ ಅಲ್ಲವೇ? “the gap” ಎಂದು ಕರೆಯಲ್ಪಡುವ ಈ ಆತ್ಮಹತ್ಯೆಯ ಸ್ಪಾಟ್ ಇರುವುದು ಸಿಡ್ನಿ ಬಂದರು ಪ್ರದೇಶದಲ್ಲಿ. ಈ ಇಳಿ ಪ್ರಾಯದವನಿಗಾಗಿ ಯಮ ಅವನ ಮನೆ ತಡಕಾಡುತ್ತಿ ದ್ದರೆ ಈತ ಈ ದುರ್ಗಮ ಸ್ಥಳಕ್ಕೆ ಬಂದು ಜೀವನ ಶೂನ್ಯ ಎನ್ನುವವರಿಗೆ ಊರುಗೋಲಾಗಿ ನಿಲ್ಲುತ್ತಾನೆ. ಮೇಲೆ ಹೇಳಿದ ಕಣಿವೆಯ ತುದಿಗೆ ಬಂದು ಇನ್ನೇನು ಕೆಳಕ್ಕೆ ಹಾರಿ  ಪ್ರಾಣ ಕಳೆದುಕೊಳ್ಳ ಬೇಕು ಎನ್ನುವವರಿಗೆ ಇದ್ದಕ್ಕಿದ್ದಂತೆ ಅಶರೀರ ವಾಣಿಯಂತೆ ಸೌಮ್ಯವಾದ, ಸ್ನೇಹಮಯವಾದ ಸ್ವರ ಕೇಳಿಬರುತ್ತದೆ; “ಒಂದು ಲೋಟ ಚಹಾ ಗಾಗಿ ನನ್ನಲ್ಲಿಗೆ ಬರಬಾರದೇ?” ಇದೇ ಆ ವಾಣಿ. ಪಕ್ಕದ ಸಾಗರದ ಸೌಮ್ಯ ಅಲೆಗಳು ರಿಚಿ ಯ ಸೌಮ್ಯವಾದ ಮಾತುಗಳನ್ನ ಸಾಯ ಬೇಕೆನ್ನುವವರ ಕಿವಿಗಳನ್ನು ತಲುಪಿಸಿ ಒಂದು ಕ್ಷಣ ತಬ್ಬಿಬ್ಬಾಗಿಸುತ್ತದೆ.  ಸಾವಿನಂಗಡಿಯ ಹೊಸ್ತಿಲಿನಲ್ಲಿ ನಿಂತ ವ್ಯಕ್ತಿಗೆ ಮತ್ತೊಮ್ಮೆ ಇದೇ ವಾಣಿ ಕೇಳಿಬರುತ್ತದೆ. why dont you come and have a cup of tea? ಓಹ್, ಇದುವರೆಗೂ ಯಾರೂ ಕೇಳಿರಲಿಲ್ಲ ಹೀಗೆ. ರೈಲು ನಿಲ್ದಾಣಗಳಲ್ಲೂ, ಇತರೆ ಸಾರ್ವಜನಿಕ ಸ್ಥಳಗಳಲ್ಲೂ ತಲೆಯನ್ನು ಕೈಯ್ಯಲ್ಲಿ ಹೊತ್ತು ಗಳಗಳ ಅಳುತ್ತಾ ಕೂತರೂ, ವ್ಯವಹಾರದ ಮತ್ತು ಇನ್ನಿತರ ಕೆಲಸ ನಿಮಿತ್ತ ಗಡಿ ಬಿಡಿಯಲ್ಲಿ ಓಡಾಡುವ ಸಾವಿರಾರು ಜನರನ್ನು ತಾನು ದೀನ ನೋಟದಿಂದ ನೋಡಿದರೂ ಅಲಕ್ಷಿಸಿ ಮುನ್ನಡೆವ ಈ ಜಗತ್ತಿನಲ್ಲಿ ಈ ತೆರನಾದ ಕೋರಿಕೆ? why dont you come and have a cup of tea? ಒಂದು ಕಪ್ ಚಹಾಕ್ಕೆ ಯಾಕೆ ಬರಬಾರದು? ಈ ವಾಣಿ ಬಂದ ಕಡೆ ತಿರುಗಿ ನೋಡಿದಾಗ ಸ್ನೇಹಮಯಿ ನಿಂತಿದ್ದಾನೆ, ತನ್ನ ಸುಕ್ಕುಗಟ್ಟಿದ ಕೈಗಳ ತುಂಬಾ ಬದುಕಿನ ಭರವಸೆಗಳನ್ನು ಇಟ್ಟುಕೊಂಡು. ರಿಚಿಯ ನಿಷ್ಕಳಂಕ ಸುಕ್ಕಿಲ್ಲದ ನಗು ಅವರ ಕೈಗಳಿಂದ ಸಾವಿನ ಅಸ್ತ್ರ ಕಳೆದು ಕೊಳ್ಳುವಂತೆ ಮಾಡುತ್ತದೆ. ಹೌದು ಕೆಲವೊಮ್ಮೆ ಒಂದು ಸರಳ, ಸ್ವಚ್ಚ ನಗು ಮಾಂತ್ರಿಕ ಶಕ್ತಿಯನ್ನೂ ಹೊಂದಿರುತ್ತದೆ. ಎಮ್ಮೆಯ ಮೇಲೆ ಕೂತು ಮೀಸೆ ತಿರುವುತ್ತಾ ಆಸೆಗಣ್ಣುಗಳಿಂದ ಗಿರಾಕಿಯ ನಿರೀಕ್ಷೆಯಲ್ಲಿ ಜವರಾಯ ಕೂತಿದ್ದರೆ ತನ್ನ ಹಸಿರು ಬಣ್ಣದ ತೊಗಲು ಕುರ್ಚಿಯಲ್ಲಿ ರಿಚಿ ಕೂತಿರುತ್ತಾನೆ, ಗಾಳ ಹಿಡಿದು. ಬದುಕಿನ, ಭರವಸೆಯ, ನಿರೀಕ್ಷೆಗಳ, ಹೊಂಗನುಸುಗಳ ಗಾಳ ಹಿಡಿದು. ಆತ ಹೇಳುವುದು, “ಅವರನ್ನು ಉಳಿಸಲೇಬೇಕು, ಇದು ಸುಲಭ ಸಾಧ್ಯ” ಎಂದು.its pretty simple ಈತನ ಪಾಲಿಗೆ. ಅದು ನಿಜವೂ ಕೂಡಾ.

೧೮ ನೇ ಶತಮಾನದಿಂದ ಇಲ್ಲಿಗೆ ಬರುತ್ತಿದ್ದಾರಂತೆ ಜನರು ಸಾವನ್ನು ಅರಸುತ್ತಾ. ವಾರಕ್ಕೊಂದರಂತೆ ಸಾವನ್ನು ಕಾಣುತ್ತಿರುವ ಈ ಸ್ಥಳವನ್ನು ಜನರಿಂದ ದೂರ ಇಡಲು ಸರಕಾರ ದೊಡ್ಡ ಮೊತ್ತದ ಹಣವನ್ನೂ ವ್ಯಯಿಸುತ್ತಿದೆಯಂತೆ.

ಯಾರಾದರೂ ಈ ಸಾವಿನ ಕಣಿವೆಯ ತುದಿಗೆ ಬಂದು ನಿಂತರೂ ಹತ್ತಿರದಲ್ಲೇ ಇರುವ ತನ್ನ ಮನೆಯಿಂದ ಧಾವಿಸುವ ಈತ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಕೆಲವೊಮ್ಮೆ ಈತನ ನಯವಾದ ಮಾತಿಗೆ ಮರುಳಾಗಿ ತಮ್ಮ ಬದುಕಿಗೆ ಮತ್ತೊಮ್ಮೆ “ಹಾಯ್” ಹೇಳಲು ಮರಳಿದವರೂ ಇದ್ದಾರೆ. ಒಮ್ಮೆ ಊರುಗೋಲಿನ (crutches) ಸಹಾಯದಿಂದ ಬಂದ ವ್ಯಕ್ತಿ ಯೊಬ್ಬ ತುದಿಯಲ್ಲಿ ನಿಂತಿದ್ದನ್ನು ಕಂಡ ರಿಚಿ ಅಲ್ಲಿಗೆ ಧಾವಿಸುತ್ತಾನೆ, ಆದರೆ ಅವನು ಅಲ್ಲಿಗೆ ತಲುಪುವಷ್ಟರಲ್ಲಿ ಆ ವ್ಯಕ್ತಿ ತನ್ನ ಊರುಗೋಲನ್ನು ತನ್ನ ಬದುಕನ್ನು ದುಸ್ತರವಾಗಿಸಿದ ಲೋಕಕ್ಕೆ ಕಾಣಿಕೆಯಾಗಿ ಬಿಟ್ಟು ಪ್ರಪಾತಕ್ಕೆ ಜಿಗಿದಿರುತ್ತಾನೆ.        

ಈ ರೀತಿಯ ಸೇವೆ ರಿಚಿಗೆ ಇಳಿ ವಯಸ್ಸಿನಲ್ಲಿ ಸಿಕ್ಕಿದ್ದಲ್ಲ. ಯೌವ್ವನದಿಂದಲೇ ಈತ ಜನರನ್ನು ಸಾವಿನಂಚಿನಿಂದ ದೂರ ಇಡಲು ಪ್ರಯತ್ನಿಸುತ್ತಿದ್ದ. ಕೆಲವೊಮ್ಮೆ ಜನರನ್ನು ಅವರ ಅಂತ್ಯದಿಂದ ರಕ್ಷಿಸಲು ಹೋಗಿ ತನ್ನ ಜೀವವನ್ನೂ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾನೆ ಸಹ ಈ ಮಹಾತ್ಮ. ನೋವು, ಹಿಂಸೆ, ಅಸಮಾನತೆ ಕಂಡು ರೋಸಿದ ವಿಶ್ವಕ್ಕೆ ರಿಚಿ ಯಂಥ ವ್ಯಕ್ತಿಗಳು ಹೊಂಗಿರಣದಂತೆ ಕಂಗೊಳಿಸುತ್ತಾರೆ.

Advertisements

2 thoughts on “ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s