ನಲವತ್ತು ಸಂವತ್ಸರಗಳು, ಒಂದು ವಿಚ್ಛೇದನ

ನಲವತ್ತು ವಸಂತಗಳು, ಎಂಥ ಮೊಂಡು ಮರವನ್ನೂ ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು….ಅವುಗಳ ಬಗ್ಗೆ ಊಹಿಸುವುದೂ ಕಷ್ಟ.

ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

ಅಮೆರಿಕೆಯ ಮಾಜಿ ಅಧ್ಯಕ್ಷ ಅಲ್-ಗೋರ್ ತಮ್ಮ ಪತ್ನಿ ಮೇರಿ ಎಲಿಜಬೆತ್ ಟಿಪ್ಪರ್ ರಿಂದ  ವಿಚ್ಚೇದಿತರಾಗುತ್ತಿದ್ದಾರೆ.   ನಲವತ್ತು ವರ್ಷಗಳ ಬಾಳ ಸಂಗಾತಿಯನ್ನು ತೊರೆದು ನಿಸರ್ಗದ ಏಕಾಂತದ ಅನುಭವಕ್ಕಾಗೋ ಏನೋ. ವಿವಾಹ ಮತ್ತು ವಿಚ್ಚೇದನ ಜನರಿಗೆ ಅತಿ ವೈಯಕ್ತಿಕ ವಿಷಯ. ಅದರ ಚರ್ಚೆ ನಮಗೇಕೆ ಎಂದು ನಿಮಗೆ ಅನ್ನಿಸಬಹುದು. ಆದರೆ ಇಲ್ಲಿ ಕಾಣ ಸಿಕ್ಕಿರುವ ಪಾತ್ರಗಳು ಸಾರ್ವಜನಿಕ ಬದುಕಿನಲ್ಲಿರುವವರು. ಇಂಥವರ ಬೇರೆಲ್ಲಾ ಲೀಲೆಗಳನ್ನೂ ಚರ್ಚಿಸುವ ನಾವು ಅವರ ಸಂಕಷ್ಟಗಳ ಬಗ್ಗೆಯೂ ಯೋಚಿಸಿ ಅದರಲ್ಲಿ ನಮಗೇನಿದೆ ಕಲಿಯಲು ಎಂದು ಸೂಕ್ಷ್ಮವಾಗಿ ನೋಡಿದಾಗ ಅರಿವಾಗುತ್ತದೆ ಈ ವಿಷಯ ನಮಗೆ ಪ್ರಸ್ತುತ ಎಂದು.     

“Everyone you meet is fighting some kind of battle.” – ಎಷ್ಟು ಸತ್ಯ ನೋಡಿ ಈ ಮಾತು. “ನಾವು ಭೆಟ್ಟಿಯಾಗುವ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಧದ ಸೆಣಸಿನಲ್ಲಿರುತ್ತಾರೆ”- ಹೌದು ಒಂದಲ್ಲ ಒಂದು ರೀತಿಯ ಹೋರಾಟ ಪ್ರತಿಯೊಬ್ಬರದೂ. ನಲವತ್ತು ವರುಷಗಳ ಸಂಬಂಧ ಈ ರೀತಿ ಕಳಚಿ ಕೊಂಡು ಬಿದ್ದರೆ ಅನಂತತೆಯ ಮಾತು ದೂರ ಉಳಿಯಿತು. ಹಾಗಾದರೆ ವಿವಾಹ ಸಂಬಂಧ ನಿರಂತರ, ಶಾಶ್ವತ (ಸಾವನ್ನು ಬಿಟ್ಟು) ವಾಗಿರಿಸಲು ಸಾಧ್ಯವಿಲ್ಲವೇ? ಕೆಲವರು ಹೇಳ್ತಾರೆ time is a great healer ಅಂತ. ಆದರೆ ಇಲ್ಲಿ ಆ ಹೀಲಿಂಗ್ ಕಾಣ್ತಾ ಇಲ್ಲ. ಇಲ್ಲಿ ಕಾಣ್ತಾ ಇರೋದು drifting. ಅಬ್ಬರದ ಅಲೆಗೆ ನಲುಗುವ ದೋಣಿಯಂತೆ. ವೈಯಕ್ತಿಕ ಬದುಕಿನ ಚರ್ಚೆ ನಮಗೆ ಬೇಡವೆಂದರೂ ಈ ತೆರನಾದ ಸುದ್ದಿಗಳು ನಮ್ಮನ್ನು ಖಂಡಿತ ಗಲಿಬಿಲಿಗೊಳಿಸುತ್ತವೆ. ವಿಶ್ವದ ತಾಪ ಮಾನ ಹೆಚ್ಚಳದ ಬಗ್ಗೆ ಪುಸ್ತಕ ಬರೆದು, ನೊಬೆಲ್ ಗಿಟ್ಟಿಸಿಕೊಂಡ ವ್ಯಕ್ತಿ ತನ್ನ ಮಗ್ಗುಲಲ್ಲೇ ಇದ್ದ ವ್ಯಕ್ತಿಯನ್ನು ಅರಿಯದಾದನೆ? ಹವಾಮಾನ ಬಿಕ್ಕಟ್ಟು (climate crisis), ಅಲ್-ಗೋರ್ ಅವರ ಧ್ಯೇಯ, ಆದರೆ ಮನೆಯೊಳಗಿನ ಹವಾಮಾನ ತಣ್ಣಗೆ ಕೈ ಕೊಡುತ್ತಿದ್ದನ್ನು ಕಾಣದೆ ಎಡವಿದರು ಅಮೆರಿಕೆಯ  ಮಾಜಿ ಉಪಾಧ್ಯಕ್ಷರು. ಹವಾಮಾನದ ಏರು ಪೇರಿನ ಮೇಲೆ ಬಹಳಷ್ಟು ಅಧ್ಯಯನ ನಡೆಸಿದ್ದ ಅಲ್-ಗೋರ್ ಒಂದು ಪುಸ್ತಕ ಸಹ ಬರೆದಿದ್ದರು. ಅದರ ಹೆಸರು An Inconvenient Truth. ಈ ಶೀರ್ಷಿಕೆ ಹವಾಮಾನಕ್ಕೆ ಮಾತ್ರವಲ್ಲ ತಮ್ಮ ವೈಯಕ್ತಿಕ ಬದುಕಿಗೂ ಅನ್ವಯಿಸಬಹುದು ಎಂದು ಬಹುಶಃ ಅವರಿಗೆ ತಿಳಿದಿರಲಿಲ್ಲವೇನೋ? ಅವರ ಇತ್ತೀಚಿನ ಪುಸ್ತಕದ ಹೆಸರು The Assault on Reason. ಶೀರ್ಷಿಕೆಗಳನ್ನು ಗಮನಿಸಿದಿರಿ ತಾನೇ?    

Familiarity breeds contempt ಎನ್ನುತ್ತಾರೆ. ಆದರೆ ಈ ವಿವಾಹದ ಸಲುಗೆಯ ಬೆಸುಗೆ ಸಡಿಲವಾಗಿ ಕಳಚಿ ಬೀಳಲು ತೆಗೆದುಕೊಂಡವು ಪೂರ್ತಿ ನಲವತ್ತು ವರ್ಷಗಳು. ಅಷ್ಟಕ್ಕೂ ವಿವಾಹದಲ್ಲಿ ಇರಬಾರದ ಸಲುಗೆ ಬೇರೆಲ್ಲಿ ಸಿಗಬಹುದು ಹೇಳಿ? all is fair in love and war ಅಲ್ವಾ? ಒಂದು ಜೋಡಿ ಗೃಹಸ್ಥಾಶ್ರಮಕ್ಕೆ ಮಧುರ ಭಾವನೆಗಳನ್ನು, ಹೊಂಗನಸುಗಳನ್ನು ಇಟ್ಟುಕೊಂಡು ಪ್ರವೇಶಿಸುತ್ತದೆ. ತನ್ನ ಹಿರಿಯರು, ಪೂರ್ವಜರು ಆರಿಸಿಕೊಂಡ ದಾರಿಯನ್ನೇ ಕ್ರಮಿಸಲು ಹೊರಡುವ ಜೋಡಿಗೆ ಆರಂಭದ ಪ್ರೇಮದ ಹುಚ್ಚು ಹೊಳೆ ಈಜಿ ದಡ ಸೇರಿದ ನಂತರ ಒಂದೊಂದೇ ಮುಳ್ಳುಗಳು ಕಾಣಲು, ಪೀಡಿಸಲು ತೊಡಗುತ್ತವೆ. ಆದರೆ ತಮ್ಮ ಪೂರ್ವಜರ ನಿರೀಕ್ಷೆ, ಮಿತಿ ಅರಿತು ಕೊಂಡ, ಜೋಡಿ ಅವನ್ನು ಹೇಗೆ ತನ್ನ ಪೂರ್ವಜರು ನಿಭಾಯಿಸಿದರು ಕಂಡುಕೊಂಡ ಜೋಡಿಗೆ ಸಂಕಷ್ಟಗಳು ತೋರದು. ತೋರಿದರೂ ಅದೂ ಬದುಕಿನ ಅವಿಭಾಜ್ಯ ಅಂಗ ಎಂದು ಕೊಂಡು ತಮ್ಮ ಅಪ್ಪುಗೆಯಲ್ಲಿ ತೊಡಕುಗಳನ್ನೂ ಸೇರಿಸಿಕೊಂಡು ಮುನ್ನಡೆಯುತ್ತಾರೆ. ಅದರಲ್ಲೂ ಆ ವೈವಾಹಿಕ ಬದುಕು ಒಂದೆರಡು, ಮೂರು ಮೊಗ್ಗುಗಳನ್ನು ನೀಡಿದರಂತೂ ಅವರ ಲಾಲನೆ ಪಾಲನೆಯಲ್ಲೂ, ತಮಗಾಗಿ ಅಲ್ಲದಿದ್ದರೂ ತಮ್ಮ ಮಕ್ಕಳಿ ಗಾಗಿಯಾದರೂ ಸಂಬಂಧವನ್ನೂ ಖಾಯಂ ಆಗಿ ಇರಿಸಲು ಪಣ ತೊಡುತ್ತಾರೆ.      

ಅಲ್-ಗೋರ್ ಅವರದು ವಿಶಿಷ್ಟ ವ್ಯಕ್ತಿತ್ವ. ಅಲ್-ಗೋರ್ ಅವರಿಗೆ ಹಿನ್ನಡೆ ಮತ್ತು ಪೆಟ್ಟುಗಳು ಹೊಸತಲ್ಲ. ಇಂಥ ಮತ್ತೊಂದು ಮರ್ಮಾಘಾತ ಅವರಿಗೆ ರಾಜಕೀಯ ಜೀವನದಲ್ಲಿ ಸಿಕ್ಕಿತ್ತು. ೨೦೦೧, ಅಮೆರಿಕೆಯ ಅಧ್ಯಕ್ಷೀಯ ಚುನಾವಣೆ. ಜಾರ್ಜ್ ಬುಶ್ ಎದುರಿಗೆ ಸೆಣಸಲು ಡೆಮೊಕ್ರಾಟಿಕ್ ಪಕ್ಷ ಅಲ್-ಗೋರ್ ಅವರನ್ನು ಆರಿಸಿತು. ಪರಸ್ಪರ ಕೆಸರೆರೆಚಾಟ ಜೋರಾಗಿ ನಡೆದು ಅಲ್-ಗೋರ್ ಗೆಲ್ಲಬಹುದು ಎಂದು ಅಮೇರಿಕಾ ಮತ್ತು ವಿಶ್ವ ಭಾವಿಸಿತು. ಮತಗಣನೆ ಪೂರ್ತಿಯಾದ ಕೂಡಲೇ ನಾನು ಸೋತೆ, ಅಭಿನಂದನೆಗಳು ಎಂದು ಬುಶ್ ತನ್ನ ಪ್ರತಿಸ್ಪರ್ದಿ ಗೋರ್ ಅವರಿಗೆ ಫೋನಾಯಿಸಿ ಶುಭ ಕೋರುತ್ತಾರೆ. ಆದರೆ ಮಾರನೆ ದಿನ ಎಣಿಕೆಯಲ್ಲಿ ಎಡವತ್ತಾಗಿದ್ದನ್ನು ಅರಿತ ಬುಶ್ ಪ್ಲೇಟ್ ಬದಲಿಸಿ ಮರು ಎಣಿಕೆ ಆಗಬೇಕು ಎಂದು ಪಟ್ಟು ಹಿಡಿಯುತ್ತಾರೆ. ಸಾಂವಿಧಾನಿಕ ಬಿಕ್ಕಟ್ಟು ಅಮೆರಿಕೆಯನ್ನು ಆವರಿಸುತ್ತದೆ ಸುಮಾರು ಆರು ವಾರಗಳ ನಂತರ ಸರ್ವೋಚ್ಚ ನ್ಯಾಯಾಲಯದ ಸಹಾಯದಿಂದ ಬುಶ್ ಗದ್ದುಗೆಗೆ ಏರುತ್ತಾರೆ ತನ್ನ ಕಪಟ ತಂತ್ರ ತೋರಿಸಿ. Bush stole the election ಎಂದು ಹಲವರು ಬೊಬ್ಬೆ ಇಟ್ಟರೂ ಏನೂ ಫಲಿಸುವುದಿಲ್ಲ. ಈ ಆಘಾತದಿಂದ ಚೇತರಿಸಿಕೊಂಡ ಅಲ್-ಗೋರ್ ಗೆ ಸಾಂತ್ವನ ನೀಡಿ ತನ್ನ ಪರವಾಗಿ ಹೋರಾಡುವಂತೆ ಕೋರಿತು ನಿಸರ್ಗ ಅಲ್-ಗೋರ್ ಅವರಲ್ಲಿ.

ಅಲ್-ಗೋರ್ ಅಂತರ್ಜಾಲ ತಂತ್ರಜ್ಞಾನ ಅಮೆರಿಕೆಯ ಮೂಲೆ ಮೂಲೆ ತಲುಪುವಂತೆ ಮಾಡಿದ ವ್ಯಕ್ತಿ. ಹವಾಮಾನ, ನಿಸರ್ಗಕ್ಕಾಗಿ ಹೋರಾಡಿದ ಅಲ್-ಗೋರ್ ನೊಬೆಲ್ ಪ್ರಶಸ್ತಿ ವಿಜೇತರು. ಈ ವೈವಾಹಿಕ ಸಂಕಷ್ಟದಲ್ಲಿ ಸಿಲುಕಿರುವ ಈ ಲವಲವಿಕೆಯ ಜೋಡಿಗೆ ತಾವು ಆರಿಸಿಕೊಂಡ ದಾರಿ ಸುಗಮವಾಗಲೆಂದು ಹಾರೈಸೋಣವೇ?

ಒಬ್ಬ ಒಳ್ಳೆಯ, ಮನಸ್ಸಿಗೆ ಒಪ್ಪುವ ವ್ಯಕ್ತಿಯನ್ನು ನಾವು ಸ್ಮರಿಸಬೇಕಾದರೆ ಅವನು ಸಾಯಬೇಕು, ಅಥವಾ ಗೋರ್ ರೀತಿಯಲ್ಲಿ ಬದುಕಿನಲ್ಲಿ ದೊಡ್ಡ ಏಟನ್ನು ಅನುಭವಿಸಬೇಕು. ಅವರ ವ್ಯಕ್ತಿತ್ವದ ಬಗ್ಗೆ ಅರಿಯಲು ನಮಗೆ ತೋಚಿದ ಸಮಯ ಅವರು ನ್ಯಾಯಾಲಯದ ಮೆಟ್ಟಿಲು ಹತ್ತುವ ಸಮಯ, ತನ್ನ ವೈವಾಹಿಕ ಬದುಕನ್ನು (ವಿವಾಹಗಳು ಸ್ವರ್ಗದಲ್ಲಿ ಏರ್ಪಡುತ್ತವೆ, ಬಾಕಿ ಕಾರ್ಯಗಳು ಕೋರ್ಟ್ ಗಳಲ್ಲಿ ) dissolve  ಮಾಡಲು ನ್ಯಾಮೂರ್ತಿಯನ್ನು ಕೇಳುವ ಸಮಯ. ಸ್ವರ್ಗದಲ್ಲಿ ಶುಭ್ರ, ಶ್ವೇತ ದೇವದೂತರ ಸಮ್ಮುಖದಲ್ಲಿ ಜರುಗುವ ಮದುವೆ ಕಪ್ಪು ಕೋಟುಗಳನ್ನು ತೊಟ್ಟ ವಕೀಲರ ಮಧ್ಯೆ ಪರ್ಯವಸಾನ.   

ದಶಕಗಳ ಹಿಂದೆ ನನ್ನ ಶಾಲಾ ಮೇಷ್ಟರೊಬ್ಬರು ಹೇಳಿದ ಮಾತು. ವಿಚ್ಚೇದನ ಸರ್ವೇ ಸಾಮಾನ್ಯ ಪಾಶ್ಚಾತ್ಯರಲ್ಲಿ. ಒಬ್ಬಾಕೆ ತನ್ನ ಗಂಡನನ್ನು ತೊರೆದು ಇನ್ನೊಬ್ಬ ನನ್ನು ಮದುವೆಯಾಗುತ್ತಾಳೆ. ಆತನೂ ವಿಚ್ಛೇದಿತ. ಇಬ್ಬರಿಗೂ ತಮ್ಮ ಮಾಜಿ ಸಂಗಾತಿಗಳಿಂದ ಮಕ್ಕಳಿರುತ್ತವೆ. ಇವರು ಮದುವೆಯಾದ ನಂತರ ಇವರಿಗೂ ಮಕ್ಕಳಾಗುತ್ತವೆ. ಆಗ ಮಕ್ಕಳು ಜಗಳವಾಡುವಾಗ ಹೆಂಡತಿ ತನ್ನ ಗಂಡನನ್ನು ಉದ್ದೇಶಿಸಿ ಹೀಗೆ ಹೇಳುತ್ತಾಳೆ ” honey, my children and your children are fighting with “OUR” children” ಅಂತ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s