ನಿನ್ನೆ ಉತ್ತರ ಕೊರಿಯಾ ವಿಶ್ವದ ಮನವಿಯನ್ನೂ ಮತ್ತು ಎಚ್ಚರಿಕೆಯನ್ನೂ ಕಡೆಗಣಿಸಿ ಕ್ಷಿಪಣಿ ಪರೀಕ್ಷಣೆ ನಡೆಸಿತು. ಉತ್ತರ ಕೊರಿಯದ ಆಸುಪಾಸಿನಲ್ಲಿರುವ ದಕ್ಷಿಣ ಕೊರಿಯಾ ಮತ್ತು ಜಪಾನ್ ಮತ್ತು ಇತರ ರಾಷ್ಟ್ರಗಳಿಗೆ ಆತಂಕ ಹುಟ್ಟಿಸಿದ ಈ ಪರೀಕ್ಷೆ ಅಮೆರಿಕೆಯ ತಾಕೀತಿನಿಂದಲೂ ನಿಲ್ಲಲಿಲ್ಲ. G20 ದೇಶಗಳ ಶೃಂಗ ಸಭೆಯಲ್ಲಿ ಭಾಗವಹಸಲು ಬಂದ ಅಮೆರಿಕೆಯ ಅಧ್ಯಕ್ಷ ಒಬಾಮ ಕೊರಿಯದ ಈ ನಿಲುವನ್ನು, ವಿಶ್ವಕ್ಕೆ ಹೊಡೆದ ಸದ್ದನ್ನು ಖಂಡಿಸಿ ಇದು ವಿಶ್ವ ಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾದ ನಡವಳಿಕೆ ಎಂದು ಟೀಕಿಸಿದರು. ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಹೇಗೆ ಪಾಲಿಸಬೇಕೆಂಬ ಪಾಠವನ್ನು ಅಮೇರಿಕ ವಿಶ್ವಕ್ಕೆ ಹೇಳಿ ಕೊಡುವ ಅರ್ಹತೆಯನ್ನು ಎಂದೋ ಕಳೆದುಕೊಂಡಿತು. ಕಳೆದ ೩೦ ವರ್ಷಗಳಲ್ಲಿ ಸತತವಾಗಿ ತನ್ನ ದುಸ್ಸಾಹಸಗಳಿಗೆ ಮತ್ತು ತನ್ನ ಆಪ್ತ ಮಿತ್ರ ಇಸ್ರೇಲ್ ನ ಪುಂಡಾಟಿಕೆಗೆ ಅಡ್ಡ ಬರುವ ವಿಶ್ವ ಸಂಸ್ಥೆಯ ನಿರ್ಣಯಗಳನ್ನು ರಾಜಾರೋಷವಾಗಿ ಉಲ್ಲಂಘಿಸುತ್ತಾ ಬಂದ ಅಮೇರಿಕ ಈಗ ಉತ್ತರ ಕೊರಿಯಾಕ್ಕೆ ಉಪದೇಶ ಹೇಳಲು ಹೊರಟಿದ್ದು ಹಾಸ್ಯಸ್ಪದವೇ.
ಸುಳ್ಳಿನ ಕಂತೆಗಳ ಆಧಾರದ ಮೇಲೆ, ತನ್ನ ಬಾಲಂಗೋಚಿ ಮಿತ್ರ ಇಂಗ್ಲೆಂಡ್ನೊಂದಿಗೆ ಸೇರಿ ಇರಾಕನ್ನು ಸರ್ವ ನಾಶ ಮಾಡಿದ ಅಮೇರಿಕ ಅಂದಿನ ವಿಶ್ವ ಸಂಸ್ಥೆಯ ನಿರ್ಣಯಗಳನ್ನು ಮಾತ್ರವಲ್ಲ, ವಿಶ್ವ ರಾಷ್ಟ್ರಗಳ ಮನವಿಗಳನ್ನು ಧಿಕ್ಕರಿಸಿ ಲಕ್ಷಾಂತರ ಜನರನ್ನು ಇರಾಕಿನಲ್ಲಿ ವಧಿಸಿತು. ಅಮೆರಿಕೆಯ ಈ ಎಲ್ಲಾ ಗೂಂಡಾ ವರ್ತನೆಗಳಿಗೆ ಸಾಕು ನಾಯಿಯಂತೆ ಬೆಂಬಲಕ್ಕೆ ನಿಂತದ್ದು ಇಂಗ್ಲೆಂಡ್. ಈ ಎರಡು ರಾಷ್ಟ್ರಗಳ ಪುಂಡಾಟಿಕೆಗಳಿಗೆ ಇತಿಶ್ರೀ ಹಾಡದಿದ್ದರೆ ವಿಶ್ವ ಇನ್ನಷ್ಟು ಗಂಡಾಂತರವನ್ನು ಎದುರಿಸಬೇಕಾದೀತು.