ಹಳೇ ಸೇತುವೆ

ಸ್ನೇಹವನ್ನು ಕಂಡು ನಲಿದ ಸೇತುವೆ… ಹಗೆಯನ್ನು ಕಂಡು ಅತ್ತ ಸೇತುವೆ “so many gods, so many creeds, so many paths that wind and wind; when just the art of being kind is all this sad world needs"

* ಮಾರ್ವಾಡಿ ಮತ್ತು ಅರಬ್ February 9, 2010

ಮಾರ್ವಾಡಿಯೊಬ್ಬ ಅರಬ ನೊಬ್ಬನಿಗೆ ರಕ್ತ ದಾನ ಮಾಡುತ್ತಾನೆ. ಸಂತುಷ್ಟನಾದ ಶ್ರೀಮಂತ, ವಿಶಾಲ ಹೃದಯದ ಅರಬ್ ಮಾರವಾಡಿಗೆ ಬೆಲೆಬಾಳುವ “ಫೆರ್ರಾರಿ” ಕಾರನ್ನು ಕೊಡುತ್ತಾನೆ. ಮಾರವಾಡಿ ಮತ್ತೊಮ್ಮೆ ಅರಬನಿಗೆ ರಕ್ತ ದಾನ ಮಾಡಿದಾಗ ಅರಬ್ ಆತನಿಗೆ ಒಂದು ರೂಪಾಯಿ ಕೊಡುತ್ತಾನೆ. ಇದೇಕೆ ಹೀಗೆ ಎಂದು ಬೇಸರಗೊಂಡ  ಮಾರ್ವಾಡಿ ಕೇಳಿದಾಗ ಅರಬ್ ಹೇಳುತ್ತಾನೆ,
“ಈಗ ನನ್ನ ರಕ್ತ ನಾಳಗಳಲ್ಲಿ ನಿನ್ನ ರಕ್ತ ಹರಿಯುತ್ತಿದೆ” ಎಂದು.
 

* ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ February 9, 2010

ನಾಗಪುರದ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರದರ್ಶನ ವೀಕ್ಷಿಸಿದವರಿಗೆ ಬಾಕಿ ಎರಡು ಪಂದ್ಯಗಳ ಹಾದಿ ಯಾವುದು ಎಂದು ತಿಳಿಯಲು ಯಾವ ಜ್ಯೋತಿಷಿಯ ಭವಿಷ್ಯದ ಅವಶ್ಯಕತೆ ಬರದು. ಆಟದ ಎಲ್ಲಾ ರಂಗಗಳಲ್ಲೂ - ಫೀಲ್ಡಿಂಗ್, ಬೌಲಿಂಗ್, ಬ್ಯಾಟ್ಟಿಂಗ್ ಮತ್ತು ನಾಯಕತ್ವ - ದಕ್ಷಿಣ ಆಫ್ರಿಕಾ ತಾನು ಉಚ್ಚ ಮಟ್ಟದ ತಂದ ಎಂದು ಜಗಜ್ಜಾಹೀರು ಮಾಡಿತು. ಸೋತ ಕಾರಣ ಸಾಮಾನ್ಯವಾಗಿ ನಮ್ಮ ಮಾಧ್ಯಮದವರು ಅನುಸರಿಸುವ ದಾರಿ ನಾನು ಹಿಡಿಯುವುದಿಲ್ಲ.   ಸೋತ ಕೂಡಲೇ ಭಾರತ ಮಣ್ಣು ಮುಕ್ಕಿತು, ಹೀನಾಯ ಸೋಲು…. ಹಾಗೆ ಹೀಗೆ ಎಂದು ಪುಂಖಾನು ಪುಂಖವಾಗಿ ಬರೆದು ತಂಡದ ಮನೋಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನೂ ಮಾಡುವುದಿಲ್ಲ. ಸೋಲು ಗೆಲುವು ಪಂದ್ಯದಲ್ಲಿ ಇದ್ದದ್ದೇ. ಕ್ರಿಕೆಟ್ನ ವಿಶೇಷತೆ ಏನಂದರೆ ಅದು ಮೂರನೆಯ ಸಂಭವನೀಯತೆಯನ್ನು ನೀಡುತ್ತದೆ; ಅದೇ ಡ್ರಾ. ಎಷ್ಟಿದ್ದರೂ cricket is a gentlemen’s game ಅಲ್ಲವೇ? ಡ್ರಾ ಬಿಡಿ ಹತ್ತು ನಿಮಿಷ ಹೆಚ್ಚಾಗಿ ಬ್ಯಾಟ್ ಮಾಡಿದ್ದರೆ ಪ್ರೋಟೀಯಾಗಳು ಮತ್ತೊಂದು ಇನ್ನಿಂಗ್ಸ್ ಆಡಿ ಇನ್ನಿಂಗ್ಸ್ ಸೋಲಿನ ಪ್ರತಿಷ್ಠೆಯಿಂದ ನಾವು ಪಾರಾಗಬಹುದಿತ್ತು. 
 
ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದ ಕೂಡಲೇ ಸಂತಸದಿಂದ ಬೀಗಿದ ನಾನು ಏನಾದರೂ ಸಾಹಸ ಮಾಡಿ ಏನಿಲ್ಲವೆಂದರೂ ಟೆಸ್ಟ್ ಅನ್ನು ಉಳಿಸಬಹುದೇನೋ ಎನ್ನುವ ಆಸೆ ಈಡೇರಲಿಲ್ಲ. ಸಹೋದ್ಯೋಗಿಯೊಬ್ಬ ಹೇಳಿದ ಮಾತು ಇಷ್ಟವಾಗದಿದ್ದರೂ ಸರಿ ಎನ್ನಿಸಿತು. ಆತ ಹೇಳಿದ್ದು ಸಚಿನ್ ನ ಸೆಂಚುರಿ ”ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ” ಎಂದು. ಮಾತು ಖಾರವಾದರೂ ಆ ಸೆಂಚುರಿ ಯಾವ ಫಲವನ್ನೂ ನೀಡಲಿಲ್ಲ. ಗಾವಸ್ಕರನ ಸೆಂಚುರಿಗಳೂ ಹಾಗೇ ಅಲ್ಲವೇ? ಏನಾದರೂ ಪ್ರಯೋಜನ ಕಂಡಿದ್ದೀವಾ? 
 
ಮುಂದಿನ ಪಂದ್ಯ ಕ್ರಿಕೆಟ್ನ ಸ್ವರ್ಗ ಈಡನ್ ಗಾರ್ಡನ್ಸ್ ನಲ್ಲಿ. ನಮ್ಮ ತಂಡದವರು ಅಲ್ಲಿ ನಮಗೆ ನರಕದ ರುಚಿ ತೋರಿಸದಿದ್ದರೆ ಸಾಕು.      
 

* ಫೇಸ್ ಬುಕ್ ಮುಸ್ಲಿಂ ವಿರೋಧಿ ? February 9, 2010

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ ”ಫತ್ವ” ವನ್ನು ತಪ್ಪಾಗಿ  (ಉದ್ದೇಶಪೂರ್ವಕ?) ಅರ್ಥೈಸಿ ಬರೆದಾಗ ಮೇಲೆ ತೋರಿಸಿದ ತಲೆ ಬರಹ ಎಲ್ಲರ ಗಮನ ಸೆಳೆಯುತ್ತದೆ. ಮೈಸೂರು ಪ್ರಕಾಶನದ ಈ ಪತ್ರಿಕೆ ಸಾಧಾರಣವಾಗಿ ಯಾರಿಗೂ ನೋವಾಗದಂಥ, ಅನಾವಶ್ಯಕ ಕುತೂಹಲ ಕೆರಳಿಸದಂಥ ಸುದ್ದಿಗಳನ್ನು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ ”ಫ್ಯಾಷೆನ್ ಟ್ರೆಂಡ್” ಅನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ನೋಡಿ. ಆದರೆ ಇಂಥ ವರದಿಗಳನ್ನು ಮುದ್ರಿಸಿ ಪತ್ರಿಕೆ ತನ್ನ ಆತ್ಮವನ್ನು ಕಳೆದುಕೊಳ್ಳಬಹುದು ಎನ್ನುವ ಸಾಮಾನ್ಯ ಜ್ಞಾನ ಸಂಪಾದಕನಿಗೆ ಇದ್ದರೆ ಆತ ಜಾಗರೂಕತೆ ತೋರಿಸುತ್ತಾನೆ. 

ಈಜಿಪ್ಟ್ ದೇಶದ ಈ ಧರ್ಮ ಗುರು ಫೇಸ್ ಬುಕ್ ಮುಸ್ಲಿಂ ವಿರೋಧಿ ಅಂದ ಕೂಡಲೇ ನಾನಾಗಲಿ, ಲಕ್ಷಾಂತರ ಮುಸ್ಲಿಮರಾಗಲಿ ಫೇಸ್ ಬುಕ್ ನಿಂದ ಹೊರನಡೆಯುವಷ್ಟು ಬಾಲಿಶರಲ್ಲ. ಅಷ್ಟಕ್ಕೂ ಆ ಧರ್ಮ ಗುರು ನೀಡಿದ ವಿವರಣೆ ಸ್ವಲ್ಪ ನೋಡೋಣ. ಫೇಸ್ ಬುಕ್ ಮೂಲಕ ಅನೈತಿಕ ಸಂಬಂಧ ಅರಸಿ ವೈವಾಹಿಕ ಸಂಬಂಧವನ್ನು ಹಾಳುಗೆಡವುವರ ಬಗ್ಗೆ ಮಾತ್ರ ಈ ಎಚ್ಚರಿಕೆ. ಧರ್ಮ ಸಂದೇಶಗಳನ್ನೂ ಸಾರಲೂ, ವ್ಯಾವಹಾರಿಕವಾಗಿಯೋ, ಬರೀ ಸ್ನೇಹಕ್ಕಾಗಿಯೋ ಉಪಯೋಗಿಸುವವರ ವಿರುದ್ಧ ಅಲ್ಲ ಈ  ”ಫತ್ವ”. 

ಇಸ್ಲಾಂ ಧರ್ಮದಲ್ಲಿ ಶೋಷಣೆಗೆ ಎಡೆ ಮಾಡುವ ಪುರೋಹಿತಶಾಹಿ ಇಲ್ಲ. ಹಾಗೂ  ಫತ್ವ ಹೊರಡಿಸುವ ಅಧಿಕಾರ ಪ್ರತಿ ಮುಲ್ಲಾಗೂ ಇಲ್ಲ. ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕೂತು ಯಾರಾದರೂ ತಮಗಿಷ್ಟ ಬಂದಂತೆ ಧರ್ಮದ ಬಗ್ಗೆ ಹೇಳಿಕೆ ನೀಡಿದ ಕೂಡಲೇ ಅದನ್ನು ವಿಶೇಷ ವರದಿಯನ್ನಾಗಿ ಪ್ರಕಟಿಸಿ ಬೊಬ್ಬೆ ಹೊಡೆಯುವ ಪತ್ರಿಕೆಗಳಿಗೆ ಮಾಡಲು ಬೇಕಷ್ಟು ಕೆಲಸಗಳಿವೆ. ಸಾಮಾಜಿಕ ಸಂಪರ್ಕ ಮಾಧ್ಯಮಗಳ ಸಂಕೀರ್ಣ ವ್ಯವಸ್ಥೆಗೆ ಬಳಿ ಬಿದ್ದು ತಮ್ಮ ವೈಯಕ್ತಿಕ ಜೀವನವನ್ನು ಹಾಳು  ಮಾಡಿಕೊಂಡವರು ಹಲವರು. ವಿವಾಹಿತರಾಗಿಯೂ ಸಂಬಂಧಗಳನ್ನು ಹುಡುಕಿಕೊಂಡು ನಡೆಯುವ, ಸುಳ್ಳು ಪ್ರೊಫೈಲ್ ಗಳನ್ನು ನಂಬಿ ತಮ್ಮ ಬದುಕನ್ನು ಕೆಡಿಸಿ ಕೊಂಡವರೂ ಇದ್ದಾರೆ. ಟೀವೀ ಬಂದ ಹೊಸತರಲ್ಲೂ ಕೆಲವು ಧರ್ಮ ಗುರುಗಳು ಈ “ಶನಿ ಪೆಟ್ಟಿಗೆ” ಸಮಾಜವನ್ನು ಕಲುಷಿತಗೊಳಿಸಬಹುದು ಎಂದು ಎಚ್ಚರಿಸಿದ್ದರು. ಹಾಗೆ ಸಂಭವಿಸಿತೂ ಕೂಡಾ. ೮ - ೧೦ ವರ್ಷದ ಮಕ್ಕಳು ಅಶ್ಲೀಲ ಸೀರ್ಯಲ್ಲುಗಳನ್ನು, ಮೂವಿಗಳನ್ನು ನೋಡಿ ಪ್ರೇಮ ಪತ್ರ ಬರೆಯಲು ತೊಡಗಿದರು.  ಹದಿಹರೆಯದ ಹೊತ್ತಿಗೆ ಎಲ್ಲ ರೀತಿಯ ಅನುಭವಗಳನ್ನು ಪಡೆಯಲು ತೊಡಗಿದರು. ಹಿಂಸಾಪ್ರಿಯರೂ ಆದರು. 

ಹಾಗೆಂದು ತಂತ್ರ ಜ್ಞಾನಕ್ಕೆ ಬೆನ್ನು ತಿರುಗಿಸಿ ಬದುಕಬೇಕೆಂದಲ್ಲ. ಮಿತಿಯನ್ನು ಅರಿತು ಪ್ರಜ್ಞಾ ಶೀಲತೆ ಮೆರೆದರೆ ಅದೇ ಚೆಂದ.          

 

 

 

* ಜಂಭದ ಬ್ಯಾಗ್ February 6, 2010

ವ್ಯಾನಿಟಿ ಬ್ಯಾಗ್ ಬಗ್ಗೆ ಒಂದು ಸ್ವಾರಸ್ಯಕರವಾದ ಲೇಖನ ಸಂಪದದಲ್ಲಿ ಪ್ರಕಟವಾಯಿತು. ವ್ಯಾನಿಟಿ ಬ್ಯಾಗ್ ಒಳಗೆ ಏನಿದೆ ಎಂದು ಕೇಳುವುದೂ, ಚೋಲಿ ಕೆ ಪೀಛೆ ಕ್ಯಾ ಹೈ ಎಂದು ಕೇಳುವುದೂ ಒಂದೇ ಎಂದು ನನ್ನ ಅಭಿಪ್ರಾಯ. ಹೆಂಗಳೆಯರು ತಮ್ಮ ಬ್ಯಾಗ್ ಬಗ್ಗೆ ತುಂಬಾ protective. ಅದರಲ್ಲೇನು ಬದನೆ ಕಾಯಿ ಇದ್ದರೂ ಗುಟ್ಟನ್ನು ಮಾತ್ರ ಬಿಟ್ಟು ಕೊಡುವುದಿಲ್ಲ. ಹೆಣ್ಣೇ ರಹಸ್ಯ ಅಲ್ಲವೇ? ಇನ್ನು ಬ್ಯಾಗ್ ತಾನೇ ಹೇಗೆ ಭಿನ್ನವಾದೀತು? ನಾನು ಪ್ರೌಢ ಶಾಲೆಯಲ್ಲಿದ್ದಾಗ ಕನ್ನಡ ಪಂಡಿತರೊಬ್ಬರು ಹೇಳಿದ್ದು ನೆನಪಿಗೆ ಬಂತು; ವ್ಯಾನಿಟಿ ಬ್ಯಾಗ್ ಅಂದ್ರೆ ಏನು ಗೊತ್ತೇನ್ರೋ, “ಜಂಭದ ಬ್ಯಾಗ್” ಅಂತ. ಅದನ್ನು ಹಿಡ್ಕೊಂಡು ಕಾಡು ಕುದ್ರೆ ಥರ ಹೋಗೋ ಹೆಂಗಸರನ್ನು ನೋಡಿದ್ದೀರಾ ಎಂದು ತಮಾಷೆಯಾಗಿ ಹೇಳಿದ್ದರು. ಅದೇನೇ ಇರಲಿ ನನಗಂತೂ ವ್ಯಾನಿಟಿ ಬ್ಯಾಗು ಮಹಿಳೆಯರಷ್ಟೇ ಸಂಕೀರ್ಣ. ಅದರೊಳಗೆ ಏನಿದೆ ಎಂದು ಕೇಳಿದರೆ ನಿಮ್ಮ ವಯಸ್ಸೆಷ್ಟು ಎಂದು ಕೇಳಿದರೆ ಎಷ್ಟು ಕೋಪ ಬರುತ್ತೋ ಅದಕ್ಕಿಂತ ಹೆಚ್ಚು ಕೋಪ ಬರುತ್ತದೆ. ಪಾಶ್ಚಾತ್ಯ ಮಹಿಳೆಯರ ಬ್ಯಾಗಿನಲ್ಲಿ ಟೂತ್ ಬ್ರಶ್ ಮತ್ತು ಕಾಂಡೋಮ್, ಪಿಲ್ಸ್ ಇರುತ್ತದೆ ಎಂದು ಎಲ್ಲೋ ಓದಿದ ನೆನಪು. ನಮ್ಮ ಮಹಿಳೆಯರ ಬ್ಯಾಗ್ನಲ್ಲಿ ನನಗೆ ತಿಳಿದಂತೆ ಬಾಯಿ ವಾಸನೆ ಹೋಗಲಾಡಿಸುವ “ಮಿಂಟ್” ಗಳು, ಕುಂಕುಮದ ಡಬ್ಬಿ, ಒಂದಿಷ್ಟು ಪೌಡರ್ರು, ಪುಟಾಣಿ ಮಗು ಇದ್ದರೆ diapers ಇತ್ಯಾದಿ. ಊಪ್ಸ್, ಮರೆತೆ. ತಮ್ಮ ಗಂಡಂದಿರ ಜೇಬಿನಿಂದ ಕದ್ದ ಹಣ? ಓಹ್, ಅದು ಬ್ಯಾಗ್ನಲ್ಲಿರೋಲ್ಲ, ಬದಲಿಗೆ ಕುಪ್ಪುಸದ ಒಳಗೆ ಇರುತ್ತೆ.
ನನಗಂತೂ ನಮ್ಮ ಹಳೆ ಕಾಲದ ಸಾಮಾನ್ಯವಾಗಿ ಅಜ್ಜಿಯರು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಳ್ಳುವ ಪುಟಾಣಿ, embroidery ಮಾಡಿದ ಬಟ್ಟೆಯ ಚೀಲ (pouch) ಇದೆಯಲ್ಲ, ಅದೇ ಇಷ್ಟ. ಅದರಲ್ಲಿ ಒಂದೆರಡು ಅಡಿಕೆಯ ತುಂಡುಗಳು, ಒಣಗಿದ ವೀಳ್ಯ, ಒಂದಿಷ್ಟು ಪುಡಿಗಾಸು… pouch ನಷ್ಟೇ ನೇರ, ಸರಳ.   
 

* ಸೂರ್ಯ ಚಂದಿರರಿರೋ ತನಕ.. February 6, 2010

ದೀರ್ಘಾಯುಷಿಗಳಾಗಬೇಕೇ? ಇಲ್ಲಿದೆ ನೋಡಿ ರೆಸಿಪಿ. ದೀರ್ಘಾಯುಷಿಗಳನ್ನು, ಅವರು ವಾಸಿಸುವ ಸ್ಥಳಗಳು, ಅವರ ಜೀವನ ರೀತಿಯನ್ನು ನೋಡಿ ಕಲಿತರೆ ಸೂರ್ಯ ಚಂದಿರರಿರೋ ತನಕ ಬದುಕಬಹುದಂತೆ. ಇದೆಂಥ ರೆಸಿಪಿ, ಎಲ್ಲರಿಗೂ ಗೊತ್ತಿರೋ ವಿಷಯವೇ ಎಂದು ಮೂಗೆಳೆಯಬೇಡಿ. ಈ ಕುರಿತ ಲೇಖನ ಅಮೆರಿಕೆಯ ಹಫ್ಫಿಂಗ್ಟನ್ ಪೋಸ್ಟ್ ನಲ್ಲಿ ಪ್ರಕಟವಾಗಿ ಸ್ವಾರಸ್ಯಕರ ಉತ್ತರಗಳು ಬಂದವು ವಾಚಕ ಪ್ರಭುಗಳಿಂದ. ಒಬ್ಬ ಹೇಳಿದ ನನ್ನ ಸೋದರನಿಗೆ ಈಗ  ೬೦ ನೋಡಲಿಕ್ಕೆ ಇನಷ್ಟು ವಯಸ್ಸಾದವರ ಹಾಗೆ ಕಾಣುತ್ತಾನೆ, ವ್ಯಾಯಾಮ ಮಾಡುವುದಿಲ್ಲ, ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ತಿನ್ನುತ್ತಾನೆ, ಕೇಳಿದಾಗ ಅವನು ಹೇಳೋದು, ನನಗೇನೂ ನೂರು ವರ್ಷ ಬದುಕಬೇಕಾಗಿಲ್ಲ, ಯಾವಾಗ ಬೇಕಾದರೂ ಜಾಗ ಖಾಲಿ ಮಾಡಲು ತಯಾರು ಎಂದು. ಹೋಗುವ ದಿನ ಬುಕ್ ಮಾಡೋ ಸೌಲಭ್ಯವೂ ಇದ್ದಿದ್ದರೆ ಅದನ್ನೂ ಸಹ ಮಾಡುತ್ತಿದ್ದನೇನೋ ಎಂದು ತಮಾಷೆಯಾಗಿ ಹೇಳಿದ. 
ಬೇರೆಯವರ ಜೀವನ ರೀತಿ ನೋಡಿ ಕಲಿಯಲು ಅಮೆರಿಕನ್ನರಿಗೆ ತಮ್ಮ ದೇಶದ ಹೊರಗೂ ಜನ ಬದುಕುತ್ತಿದ್ದಾರೆ ಎನ್ನುವ ಅರಿವಾದರೂ ಬೇಕಲ್ಲ ಎಂದು ಮತ್ತೊಬ್ಬನ ಅಮೆರಿಕೆಯವನೆ ಆದವನ ಕುಹಕ. ಒಟ್ಟಿನಲ್ಲಿ ಅಮೆರಿಕೆಯಲ್ಲಿ ಈಗ ಒಬಾಮ ಹೊಸ ಆರೋಗ್ಯ ನೀತಿಒಂದನ್ನು ತಂದಿದ್ದಾನೆ. ಅದರ ಬಗೆಗಿನ ಚರ್ಚೆಯಲ್ಲಿ ದೀರ್ಘಾಯುಷಿಗಳಾಗಿ, ಆರೋಗ್ಯವಂತರಾಗಿ  ಇರುವುದರ ಬಗ್ಗೆಯೂ ಚರ್ಚೆ. ಮಾಂಸ, ಕುಡಿತ ಬೇಡ ಎಂದರೆ ಅಮೇರಿಕನ್ನರಾದರೂ ಹೇಗೆ ಕೇಳಿಯಾರು? ಇವೆರಡೂ ತಮ್ಮ ಎರಡು ಕಣ್ಣುಗಳಿದ್ದಂತೆ ಅವರಿಗೆ. ಅಷ್ಟೊಂದು ಜೋಪಾನ. ಸೊಪ್ಪು ತಿನ್ನು ಎಂದರೆ ಹೇಗೆ ಹೇಳಿ ನೋಡೋಣ.
ಒಬ್ಬ ಜೀವನ ಪೂರ್ತಿ ಬಂದರಿನಲ್ಲಿ ದುಡಿದು, ಸಾಕಷ್ಟು ಕುಡಿದು, ಜೂಜಾಡಿ, ಹ್ಯಾಮ್ಬರ್ಗರ್ ತಿಂದು, ವೇಶ್ಯಾ ಸಹವಾಸ ಮಾಡಿ, ಸಿಗಾರ್ ಸೇದಿ, ಇಷೆಲ್ಲಾ ಅವಾಂತರ ಮಾಡಿಯೂ ದೀರ್ಘಾಯುಷಿಯಾಗಿದ್ದಾನೆ ಎಂದು ತಾವೂ ಅದೇ ರೀತಿ ಬದುಕುತ್ತೇವೆ ಎಂದು ಮೊಂಡು ಹಿಡಿದು ಕೂರುವ ಮಂದಿಯೂ ಇದ್ದಾರೆ.         
 

* ಗುಬ್ಬಚ್ಚಿಯ ವಯೋವೃದ್ಧ ಅಭಿಮಾನಿ February 4, 2010

ನಮ್ಮ ಭಾವನೆಗಳನ್ನು, ಅನುಭವಗಳನ್ನು, ಸಿಹಿ - ಕಹಿಯನ್ನು ಕೇವಲ ೧೪೦ ಅಕ್ಷರಗಳಲ್ಲಿ ಒದರಿ ಹಂಚಿಕೋ ಎನ್ನುವ ಪುಟ್ಟ ಗುಬ್ಬಿ twitter ನ ಮೋಡಿಗೆ ಬೀಳದವರು ವಿರಳ. ನಮ್ಮ ಯುವ ರಾಜಕಾರಣಿ ಶಶಿ ತರೂರ್ ಆಗಾಗ ಏನನ್ನಾದರೂ ವಟಗುಟ್ಟಿ ಎಲ್ಲರನ್ನೂ ತಬ್ಬಿಬ್ಬು ಮಾಡುವುದಲ್ಲದೆ ಸ್ವತಹ ತಾವೇ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಾರೆ. twitter ಬಳಗಕ್ಕೆ ಈಗ ಕಿಂಗ್ ಖಾನ್ ಶಾರುಕ್ ಸಹ ಸೇರಿಕೊಂಡಿದ್ದಾನಂತೆ. ಹದಿಹೆರೆಯದವರಿಂದ ಆರಂಭಗೊಂಡು ಮುಪ್ಪಿನವರೆಗಿನ ಪ್ರಭಾವ twitter ನದು. twitter ನ ಅತಿ ವಯಸ್ಸಾದ ಅಭಿಮಾನಿ  ಇಂಗ್ಲೆಂಡಿನ ”ಐಯ್ವಿ  ಬೀನ್” ಎನ್ನುವ ಮಹಿಳೆ. ಈ ವಯೋವೃದ್ಧ ಮಹಿಳೆಗೆ ೧೦೪ ವರ್ಷ ಮತ್ತು ೫೫,೦೦೦ ಅಭಿಮಾನಿಗಳಂತೆ twitter ನಲ್ಲಿ.
ನೀವೂ ಇದ್ದೀರಾ ತಾನೇ ವಿದ್ಯುತ್ ತಂತಿಯ ಅಥವಾ ಬೇಲಿಯ ಮೇಲೆ ಸಾಲಾಗಿ ಶಿಸ್ತಾಗಿ ಕೂತು ಹರಟೆ ಕೊಚ್ಚುವ ಗುಬ್ಬಚ್ಚಿಗಳೊಂದಿಗೆ?   
ಚಿತ್ರ ಕೃಪೆ: independent ಪತ್ರಿಕೆ

     

 

* ಆಸ್ಟ್ರೇಲಿಯಾ February 3, 2010

ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ ಮಾಡಿಕೊಡುತ್ತಿದೆ. ಭಾರತೀಯರ ವಿರುದ್ಧದ ಪ್ರತಿ ಆಕ್ರಮಣಕ್ಕೂ “ಜನಾಂಗ ಬೇಧ “ನೀತಿಯ ಅರ್ಥ ಕಲ್ಪಿಸಬೇಡಿ ಎಂದು ಅಲ್ಲಿನ ಮಂತ್ರಿ ಮಹೋದಯರ ಹೇಳಿಕೆ ಓದುತ್ತಿದ್ದಾಗಲೇ ಆಸ್ಟ್ರೇಲಿಯಾ ದೇಶದ ಮನಮೋಹಕ, ರಮಣೀಯ ಚಿತ್ರಗಳ ಬ್ಲಾಗ್ ಒಂದು ಕಣ್ಣಿಗೆ ಬಿತ್ತು. ತನ್ನದೇ ಸೃಷ್ಟಿಗಳಾದ ಮನುಷ್ಯನಲ್ಲಿ ಅಸಹನೆಯನ್ನೂ, ಕ್ರೌರ್ಯವನ್ನೂ, ಮತ್ತು ನಿಸರ್ಗದಲ್ಲಿ ಬೆರಗನ್ನೂ, ಬೆಡಗನ್ನೂ ಇಟ್ಟ ಆ ಭಗವಂತನ ಮರ್ಮವಾದರೂ ಏನಿರಬಹುದು?      

ಕೆಳಗಿನ ಕೊಂಡಿ ಕ್ಲಿಕ್ಕಿಸಿ, ನೋಡಿ ಕಾಂಗರೂ ನಾಡಿನ ಬೆಡಗನ್ನು.
 

* intellectual terrorists January 31, 2010

A book must be the ax for the frozen sea within us.
  —
Franz Kafka
 ”ನಮ್ಮ ಅಂತರಾಳದಲ್ಲಿ ಹೆಪ್ಪುಗಟ್ಟಿದ ಸಮುದ್ರವನ್ನು ಒಡೆಯಲು ಕೊಡಲಿಯಾಗಬೇಕು ಗ್ರಂಥಗಳು”.  

ಎಷ್ಟು ಅರ್ಥಗರ್ಭಿತ ಈ ಮಾತುಗಳು. ಆದರೆ ನಾವು ಇಂದು ಕಾಣುತ್ತಿರುವ ಸಾಹಿತ್ಯ ನೋಡಿದರೆ ಅಂತರಾಳವನ್ನು ನರಕವಾಗಿಸುವುದರಲ್ಲಿ ಪುಸ್ತಕಗಳು ನಾಮುಂದು ತಾಮುಂದು ಎಂದು ಬರುತ್ತಿವೆ. ಧ್ವೇಷ ಕಾರುವ, ಜನರಲ್ಲಿ ವೈಮನಸ್ಸನ್ನು ಹುಟ್ಟಿಸುವ ಕೃತಿಗಳನ್ನು ರಚಿಸಿ ಭೇಷ್ ಎಂದು ಪ್ರಶಂಸೆ ಗಳಿಸುತ್ತಿರುವ,  ನಾಡಿನ ಶ್ರೇಷ್ಠ ಬರಹಗಾರರೆಂದು ಬೀಗಿ ನಡೆಯುತ್ತಿರುವ ಸಾಹಿತಿಗಳು ತಾವು ರಚಿಸುತ್ತಿರುವ ಕೃತಿಗಳು, ಬರಹಗಳು ಭಯೋತ್ಪಾದಕನ ಗುಂಡುಗಳಿಗಿಂತ ಅಪಾಯಕಾರಿ ಎಂದು ಕಾಣಲು ವಿಫಲರಾಗುತ್ತಿರುವುದು ನಮ್ಮ ದೌರ್ಭಾಗ್ಯ ಎಂದೇ ಹೇಳಬೇಕು. ಈ ರೀತಿ ಮನುಷ್ಯರ ಮಧ್ಯೆ, ಸಮುದಾಯಗಳ ನಡುವೆ ಒಡಕನ್ನು ತಂದು ನಿಲ್ಲಿಸುವವರು ”ಬೌದ್ಧಿಕ ಭಯೋತ್ಪಾದಕರು” (intellectual terrorists) ಮತ್ತು ಈ ಸಾಹಿತಿಗಳ ಭಯೋತ್ಪಾದನೆ ದೇಶಕ್ಕೆ ಗಂಡಾಂತರಕಾರಿ ಎಂದು ನಾವು ಅರಿತುಕೊಳ್ಳುವುದು ಸಮಯ ಮೀರಿದಾಗಲೋ? ಏಕೆಂದರೆ ಓರ್ವ ಭಯೋತ್ಪಾದಕ ತನ್ನ ಕೋವಿಯಿಂದ ಒಂದಿಷ್ಟು ಗುಂಡುಗಳನ್ನು ಹರಿ ಬಿಟ್ಟು ಒಬ್ಬಿಬ್ಬರದೋ, ನಾಲ್ಕಾರು ಜನರದೋ ಜೀವಗಳನ್ನು ಆಹುತಿ ತೆಗೆದುಕೊಳ್ಳಬಹುದು, ಆದರೆ ಬುದ್ಧಿಜೀವಿಯೆಂದು ಸಮಾಜದ ಮುಂದೆ ನಿಂತು ತಮ್ಮ ಕೊಳಕು, ಅಸಹ್ಯ ಹುಟ್ಟಿಸುವ ವಿಚಾರಗಳನ್ನು ಪ್ರಸ್ತುತಪಡಿಸಿ ಅವನ್ನು ಪುಸ್ತಕ ರೂಪಕ್ಕೂ ಇಳಿಸುವ ಗೋಮುಖ ವ್ಯಾಘ್ರರು ಸಮಾಜವನ್ನು ಒಡೆಯುವಲ್ಲಿ ಯಶಸ್ಸನ್ನು ಕಾಣುತ್ತಿದ್ದಾರೆ. 

ಈ ವಿಷ ಜಂತುಗಳ ಬಗ್ಗೆ ಜನಸಾಮಾನ್ಯರು ಮತ್ತು ಸುಶಿಕ್ಷಿತ ವ್ಯಕ್ತಿಗಳು ಜಾಗೃತರಾಗಿ ಅವರನ್ನು ಮೂಲೆಗುಂಪು ಮಾಡಬೇಕಾದ ಅವಶ್ಯಕತೆ ದೇಶದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು.     

ಮೇಲಿನ Franz Kafka ಆಂಗ್ಲ ನುಡಿಗಳ ಕನ್ನಡ ಭಾಷಾಂತರ ಎಷ್ಟು ಹತ್ತಿರ ಎಂದು ನನಗೆ ಖಾತರಿಯಿಲ್ಲ ಆದರೂ ಪ್ರಯತ್ನವನ್ನಂತೂ ಮಾಡಿದ್ದೇನೆ.

 

ಮುಟ್ಟಿದ್ದೆಲ್ಲಾ ಚೈನಾ… January 27, 2010

Filed under: Uncategorized — bhadravathi @ 5:42 pm
Tags: , , ,

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.

ಮಾರುಕಟ್ಟೆಯಲ್ಲಿ ಕೇಳಿಬರುವ ಒಂದು ಉದ್ಗಾರ ಇದೂ ಚೈನಾನಾ? ಏನೇನನ್ನೆಲ್ಲಾ ತಯಾರು ಮಾಡ್ತಾರಪ್ಪಾ ಈ ಚೈನಾದವರು ಎಂದು ಅರ್ಧ ಮೆಚ್ಚುಗೆಯಿಂದಲೂ ಇನ್ನರ್ಧ ಮತ್ಸರದಿಂದಲೂ ಕೇಳಿಬರುವ ಉದ್ಗಾರ.  ಅಷ್ಟೊಂದು ಪ್ರಬಲವಾದ ubiquitous ಹಿಡಿತ ಚೀನೀಯರದು. ಒಂದು ಕಾಲವಿತ್ತು. ಚೈನಾ ಎಂದರೆ ಬರೀ ಕಳಪೆ ಮತ್ತು ಅಗ್ಗದ ವಸ್ತು ತಯಾರಿಸುವ ದೇಶ ಎಂದು. ಆದರೆ ಪರಿಸ್ಥಿತಿ ಬದಲಾಗಿ ಇಂದು ವಿಶ್ವದ ಬಹುತೇಕ ಕಂಪೆನಿಗಳು ಚೈನಾವನ್ನು ತಮ್ಮ ಸರಕುಗಳನ್ನು ಉತ್ಪಾದಿಸುವ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ೧೮ ವರ್ಷಗಳ ಹಿಂದೆ ನಾನು ಸೌದಿಗೆ ಬಂದ ಹೊಸತು. ಮಾರುಕಟ್ಟೆಯಲ್ಲಿ ಚೈನಾದ ಸ್ವರ ಕ್ಷೀಣ. ಎಲೆಕ್ಟ್ರೋನಿಕ್ ವಸ್ತುಗಳು ನೇರವಾಗಿ ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳಿಂದಲೇ ಬರುತ್ತಿದ್ದವು. ನನ್ನ ಮೊಟ್ಟ ಮೊದಲ ಸಂಬಳದಿಂದ ಕೊಂಡ ಅಲಾರ್ಮ್ ಗಡಿಯಾರ ಜರ್ಮನಿಯದು. ಆಗ ಬಟ್ಟೆ ಬರೆಗಳಲ್ಲಿ ಥೈಲ್ಯಾಂಡ್ ಮುಂದು. ಅಪ್ಪಿ ತಪ್ಪಿ ಯಾವುದಾದರೂ ಚೈನಾ ನಿರ್ಮಿತ ವಸ್ತು ಕಂಡರೂ ಕೊಳ್ಳುವವರು ತುಂಬಾ ಕಡಿಮೆ. ಅಂದಿನ ಪರಿಸ್ಥಿತಿಗೂ ಇಂದಿನ ಬೆಳವಣಿಗೆಗೂ ಎಷ್ಟೊಂದು ವ್ಯತ್ಯಾಸ? ಸೌದಿ – ಥಾಯಿಲೆಂಡ್ ಸಂಬಂಧ ಒಂದು ದರೋಡೆಗೆ ಸಂಬಂಧಿಸಿದ ಘಟನೆಯೊಂದಿಗೆ ಹಳಸಾಗಿ ಅಲ್ಲಿಂದ ಬರುವ ಸಾಮಗ್ರಿಗಳು ಸೌದಿಗೆ ಬರುವುದು ನಿಂತಿತು. ಈ ಸಂದರ್ಭದಲ್ಲಿ ಚೀನಾ ದೇಶದ ಆಗಮನ.

ಈಗ ತಾನೇ ಮುಗಿದ ೨೦೦೯ ರಲ್ಲಿ ರಫ್ತು ಮಾಡುವ ರಾಷ್ಟ್ರಗಳ ಪೈಕಿ ಅಗ್ರಗಣ್ಯ ರಾಷ್ಟ್ರ ಜರ್ಮನಿಯನ್ನು ಚೀನಾ ಹಿಂದಿಕ್ಕಿತು. ಚೀನಾ ರಫ್ತು ಮಾಡಿದ ಮೌಲ್ಯ ಒಂದು ಟ್ರಿಲ್ಲಿಯನ್ ಡಾಲರ್. ಒಂದು (೧) ಬರೆದ ನಂತರ ಹನ್ನೆರಡು ಸೊನ್ನೆ ಹಾಕಿದರೆ ಟ್ರಿಲ್ಲಿಯನ್. ಒಂದು ಡಾಲರ್ಗೆ ೪೫ ರುಪಾಯಿಯಂತೆ ಲೆಕ್ಕ ಹಾಕಿದರೆ ನಾಲ್ಕು ಲಕ್ಷದ ಐವತ್ತು ಸಾವಿರ ಕೋಟಿ ರೂಪಾಯಿ, ಒಂದು ಟ್ರಿಲ್ಲಿಯನ್ ಗೆ.

ಅಮೇರಿಕಾ ವಿಶ್ವದ ಅತಿ ದೊಡ್ಡ ವಾಣಿಜ್ಯೋದ್ಯಮ ರಾಷ್ಟ್ರ. ನಂತರದ ಸ್ಥಾನ ಜಪಾನಿಗೆ. ಆದರೆ ಪಂಡಿತರ ಪ್ರಕಾರ ಶೀಘ್ರದಲ್ಲೇ ಜಪಾನಿನ ಸ್ಥಾನವನ್ನು ಚೀನಾ ಆಕ್ರಮಿಸಲಿದೆ. ಯಾವ ಕಾರಣಕ್ಕೂ ಅಮೇರಿಕ ತನ್ನ ಪಾರುಪತ್ಯ ಬಿಟ್ಟು ಕೊಡುವುದಿಲ್ಲ, ಹಾಗೇನಾದರೂ ಯಾರಾದರೂ ಹತ್ತಿರ ಬರುವ ಸೂಚನೆ ತೋರಿದರೂ ಯಾವುದಾರೂ ರಾಜಕೀಯ ಸಮಸ್ಯೆ ಹುಟ್ಟು ಹಾಕಿ ಆ ದೇಶವನ್ನು ಕಡಿಮೆ ಎಂದರೂ ಹತ್ತು ವರ್ಷ ಹಿಂದಿಕ್ಕಲೂ ತಯಾರು ನಮ್ಮ ಅಂಕಲ್.

ಮೊನ್ನೆ ನಮ್ಮಲ್ಲಿನ ಪಂಡಿತ ರೊಬ್ಬರು ಭಾರತ ಚೀನಾ ಹಿಂದಿಕ್ಕಿ ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಈ ಭವಿಷ್ಯ ವಾಣಿಯನ್ನು ಸುಮಾರು ಏಳೆಂಟು ವರ್ಷಗಳಿಂದ ಕೇಳುತ್ತಿದ್ದೆ. ಮನಸ್ಸಿನಲ್ಲೇ ಮಂಡಿಗೆ ತಿನ್ನುವ ಜಾಯಮಾನದ ಫಲವೋ ಏನೋ ಈ ಭವಿಷ್ಯವಾಣಿಗಳು. ಆದರೂ ಕಳೆದ ದಶಕಗಳಿಗೆ ಹೋಲಿಸಿದರೆ we have come a long way ಎಂದೇ ಹೇಳಬಹುದು. ಊಹಿಸಿ, ಒಂದೊಮ್ಮೆ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಗಳಾಗಿದ್ದಾಗ ದೇಶದಲ್ಲಿ ತಿನ್ನಲು ಧವಸ ಧಾನ್ಯಗಲಿಲ್ಲದೆ miss-a-day meal (ಒಂದು ದಿನದ ಉಪವಾಸ) ಅನುಸರಿಸಲು ಸರಕಾರ ಜನರನ್ನು ಕೋರಿತ್ತು.ಇಂದಿರಾ ಗಾಂಧಿ ಯವರು ಪ್ರಧಾನಿ ಆದ ನಂತರ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯುಂಟಾಗಿ ಹೆಚ್ಚುವರಿ ಆಹಾರ ಉತ್ಪಾದಿಸಲು ಸಾಧ್ಯವಾಯಿತು. ಈ ಹೆಚ್ಚುವರಿ ಆಹಾರ ಬಡಬಗ್ಗರಿಗೆ ತಲುಪದಿದ್ದರೇನಂತೆ FCI Godown ಗಳಲ್ಲಿ ಶೇಖರಿಸಲ್ಪಟ್ಟ ಧಾನ್ಯಗಳನ್ನು ”ಮೂಷಕ”ಪಡೆ ಗಳು ತಿಂದು ಕೊಬ್ಬಿದ್ದಂತೂ ಸತ್ಯ.

made in japan ಸರಕುಗಳದು ರಾಜ್ಯಭಾರ ಅಂದಿನ ದಿನಗಳಲ್ಲಿ. ಎಲ್ಲಾದರೂ ಅಪ್ಪಿತಪ್ಪಿ ತಾವು ಕೊಳ್ಳುವ ವಸ್ತುಗಳ ಮೇಲೆ made in japan ಶಬ್ದಗಳು ಕಾಣದಿದ್ದರೆ ಜನ ಕಂಗಾಲು. ಕೆಲವು ಜಪಾನಿ ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಸಿಂಗಪುರದಲ್ಲೂ, ಮಲೆಶ್ಯಾದಲ್ಲೂ ತೆರೆದು ಆಲಿಂದ ರಫ್ತು ಮಾಡುತ್ತಿದ್ದರು. ಅಂತ ಉತ್ಪನ್ನಗಳ ಮೇಲೆ made in japan ಮುದ್ರೆ ಇರುತ್ತಿರಲಿಲ್ಲ. matsushita electric co, japan ಅಂತ ಬರೆದು ಬೇರೆಲ್ಲಾದರೂ ಮೂಲೆಯಲ್ಲಿ made in malaysia ಎಂದು ಇರುತ್ತಿತ್ತು. ಇದನ್ನು ನೋಡಿದ ಜನ ಜಪಾನೀ ವಸ್ತುಗಳನ್ನು ಕೊಳ್ಳಲು ತಕರಾರು ಮಾಡಿದಾಗ ಜಪಾನೀ ಕಂಪೆನಿಗಳು ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಜಪಾನೀ ಕಾರ್ಖಾನೆಯ ವಸ್ತುಗಳು ಎಲ್ಲೇ ನಿರ್ಮಿತವಾದರೂ ಅವು ಉತ್ಕೃಷ್ಟ ಮಟ್ಟದಿಂದ ಕೂಡಿದ್ದು ಎಂದವು. ಹಾಗಾದರೆ ಜಪಾನೀ ವಸ್ತುಗಳಿಗಿಂತ ಇವೇಕೆ ಅಗ್ಗ ಎಂದಾಗ ಜಪಾನಿನಲ್ಲಿ ಕೂಲಿ ವೇತನ ಜಾಸ್ತಿ, ಮತ್ತು ಕಚ್ಚಾ ಪದಾರ್ಥಗಳೂ ದುಬಾರಿ, ಹಾಗಾಗಿ ಇವು ಕೈಗೆಟಕುವ ದರದಲ್ಲಿ ಲಭ್ಯ ಎಂದು ಸಮಜಾಯಿಷಿ ನೀಡಬೇಕಾಯಿತು. ಜಪಾನ್ ನಂತರ ದಕ್ಷಿಣ ಕೊರಿಯಾ ಮಾರುಕಟ್ಟೆಗೆ ಆಗಮಿಸಿ ಜಪಾನಿನ ಮೇಲಿನ ವ್ಯಾಮೋಹ ಕ್ರಮೇಣ ಜನರಲ್ಲಿ ಕಡಿಮೆಯಾಗುವಂತೆ ಮಾಡಿತು. ಕೊರಿಯಾದ ಕೈಗಾರಿಕಾ ಕ್ರಾಂತಿಯೂ ಸಹ ಭಾರತದಂಥ ರಾಷ್ಟ್ರಗಳಿಗೆ ಅನುಕರಣೀಯ. ೧೯೪೫ ರಲ್ಲಿ ವಿಶ್ವದ ಬಡ ರಾಷ್ಟ್ರಗಲ್ಲೊಂದಾಗಿದ್ದ ಕೊರಿಯಾ ತನ್ನ ಪರಿಶ್ರಮದ, ಛಲದ ಪರಿಣಾಮ ಇಂದು ಸಿರಿವಂತ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 

ಈಗ ಜಪಾನ್, ಕೊರಿಯಾ, ಇಂಡೋನೇಷ್ಯ  , ಮಲೇಷ್ಯಾ ಹೋಗಿ ಚೀನಾ ಗೋಡೆ ಮಾರುಕಟ್ಟೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.       

ಪಕ್ಕದ ದೇಶದ ಸಂಪತ್ತನ್ನು ನೋಡಿ ಸಂತಸ ಪಡೋಣ ಎಂದರೆ ಆ ದೇಶಕ್ಕೆ ನಮ್ಮ ಮೇಲೆ ಅದೆಂಥದ್ದೋ ಹಗೆ, ಸಂಶಯ. ಧನದೊಂದಿಗೆ ದುರಹಂಕಾರವೂ ಬರಲೇ ಬೇಕೇನೋ. ಪ್ರಕೃತಿ ನಿಯಮದಂತೆ. ನಮ್ಮ ಪ್ರಧಾನಿ ಅರುಣಾಚಲಕ್ಕೆ ಹೋಗಬಾರದು, ನಾವು ಕಾಶ್ಮೀರದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಬಾರದು…. ಹೀಗೆ ಅವರ ಆಜ್ಞೆಗಳ ಪಟ್ಟಿ. ಅದಕ್ಕೆ ಕೋಲೆ ಬಸವನಂತೆ ಗೋಣು ಹಾಕಲು ಚಾಣಕ್ಯಪುರಿಯ ಸಾಹೇಬರುಗಳು. ಈ ರೀತಿ ಎಡ ಬಲ (ಪಾಕ್) ದಲ್ಲಿ ಶನಿಗಳು ವಕ್ಕರಿಸಿಕೊಂಡಿರುವಾಗ ಅಭಿವೃದ್ಧಿಯ ಮಾತು ದೂರವೇ  ಉಳಿಯುವುದೋ ಏನೋ?

 

ಒಂದು ಎರಡು ಬಾಳೆಲೆ ಹರಡು.. January 23, 2010

ನನ್ನ ಮಗಳು “ಇಸ್ರಾ” ಈಗ ಎರಡು ವರ್ಷದ ಪುಟಾಣಿ. ಪುಟು ಪುಟು ಮನೆತುಂಬಾ ಓಡಾಡುತ್ತಾ ತನ್ನ ಅಣ್ಣನನ್ನು ಕೆಣಕಿ ಸತಾಯಿಸುತ್ತಾ ಕಾಲ ಕಳೆಯುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮನೆಯ ಹೊರಗೆ ಕಾರಿನ ಶಬ್ದ ಕೇಳುತ್ತಲೇ ತಾನೇ ಬಾಗಿಲು ತೆರೆದು ಜಿಗಿದುಬಂದು ಗೇಟಿನ ಹತ್ತಿರ ನಿಂತು ನನ್ನನ್ನು ಬರಮಾಡಿಕೊಂಡಾಗ ಎಲ್ಲಾ ಆಯಾಸವೂ ಮಾಯ. ಮಕ್ಕಳು ಮನೆಯಲ್ಲಿ ಸಡಗರವನ್ನೂ, ನಮ್ಮ ಮನದಲ್ಲಿ ಸಂತಸವನ್ನೂ ತುಂಬಿ ನಮ್ಮನ್ನು ನಮ್ಮ ಕೆಳೆದುಹೋದ ಬಾಲ್ಯದ ಕಡೆ ನೆನಪುಗಳು ಹರಿಯುವಂತೆ ಮಾಡುತ್ತಾರೆ. ಮಕ್ಕಳೊಂದಿಗೆ ಮಗುವಾಗಿ ಆಡದವರು ಯಾರು? ಒಮ್ಮೆ ಪ್ರವಾದಿಗಳು ಮಕ್ಕಳೊಂದಿಗೆ ನಗುತ್ತಾ ಮಾತನಾಡುತ್ತಾ ಅವರೊಂದಿಗೆ ಮಕ್ಕಳಂತೆ ಬೆರೆತಿದ್ದನ್ನು ನೋಡಿ ಒಬ್ಬರು ಹೇಳಿದರು, ಪ್ರವಾದಿಗಳೇ ನನಗಂತೂ ಮಕ್ಕಳೊಂದಿಗೆ ಹೀಗೆ ಇರುವುದು ಬಿಡಿ ಅವರೊಂದಿಗೆ ತಾಳ್ಮೆಯೊಂದಿಗೆ ಇರಲೂ ಸಾಧ್ಯವಿಲ್ಲ ಎಂದು. ಅದಕ್ಕೆ ಪ್ರವಾದಿಗಳು ಆ ಕರುಣಾಮಯನಾದ ಅಲ್ಲಾಹನೇ ನಿಮ್ಮ ಮನಸ್ಸಿನಲ್ಲಿ ಕರುಣೆಯನ್ನು ಹಾಕದಿದ್ದರೆ ನನ್ನಿಂದೇನು ಮಾಡಲು ಸಾಧ್ಯ ಎಂದುತ್ತರಿಸಿದರು. ನನ್ನ ಮಗಳು ಮಾತಿನಲ್ಲಿ ಸ್ವಲ್ಪ ಹಿಂದೆಯೇ ಎನ್ನಬಹುದು. ಅವಳಿಗಿಂತ ಕೇವಲ ಎರಡು ವಾರಗಳ ಹಿರಿಯನಾದ ನನ್ನ ತಂಗಿಯ ಮಗ “ಅಹ್ಮದ್” ಮಾತಿನ ಗಣಿ. ಮನೆಯಲ್ಲಿ ಕೆಲಸಕ್ಕಿರುವ ಇಂಡೊನೆಷ್ಯಾ ದೇಶದ ಮೇಡ್ ಒಂದಿಗೆ ಸೇರಿ ಅರಬ್ಬೀ ಭಾಷೆಯನ್ನೂ ಉಲಿಯುತ್ತಾನೆ. ನನ್ನ ತಂಗಿಗೆ ತನ್ನ ಮಕ್ಕಳಿಗೆ ಕನ್ನಡದ ಚಿಕ್ಕ ಪುಟ್ಟ ಕವನ ಹೇಳಿಕೊಡುವ ಚಪಲ. ತನ್ನ ಮೊದಲ ಮಗ ” ಅಯ್ಮನ್” ಒಂದು ಎರಡು ಬಾಳೆಲೆ ಹರಡು ಎಂದು ಹಾಡುವುದನ್ನು ನಮಗೆಲ್ಲಾ ಕೇಳಿಸಿ ಸಂತಸ ಪಡುತ್ತಿದ್ದಳು. ಹಾಗೆಯೇ ಅಹ್ಮದ್ ನಿಗೂ ಒಂದು ಪದ್ಯ ಹೇಳಿಕೊಟ್ಟಾಗ ಅದನ್ನು ಬಹಳ ಬೇಗ ತನ್ನ ಅಣ್ಣನಂತೆಯೇ ಕರಗತ ಮಾಡಿಕೊಂಡ. ಮೊನ್ನೆ ಅವನ ಮನೆಗೆ ಹೋದಾಗ ಅವನ ಕವನ ಗೋಷ್ಠಿ ಜೋರಾಗಿ ನಡೆಯುತ್ತಿತ್ತು… ಡಮ್ಮರೆ ಡಮ್ಮಮ್ಮ,

ಮನೆ ಸುಟ್ಟೋಯ್ತು

ಯಾರ ಮಾನೆ

ಪೂಜಾರಿ ಮಾನೆ

ಯಾವ ಪೂಜಾರಿ

ಜುಟ್ಟು ಪೂಜಾರಿ

ಯಾವ ಜುಟ್ಟು

ಕೋಳಿ ಜುಟ್ಟು

ಯಾವ ಕೋಳಿ

ಬಾತು ಕೋಳಿ

ಯಾವ ಬಾತು

ಕೇಸರಿ ಬಾತು

ಯಾವ ಕೇಸರಿ

ತಿನ್ನೋ ಕೇಸರಿ

ಯಾವ ತಿನ್ನೋದು

ಹೊಡ್ತ ತಿನ್ನೋದು…. ಹಹಹಾ ಎಂದು ಚಪ್ಪಾಳೆ ತಟ್ಟಿಕೊಂಡು ತನಗೆ ತಾನೇ ಅಭಿನಂದಿಸಿಕೊಂಡ. ನನ್ನ ಮಗಳೋ, ಇನ್ನೂ johnny johnny yes pappa ಹೇಳಲು ಒದ್ದಾಡುತ್ತಿದ್ದಾಳೆ.

ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಒಂದು ಲಾರಿಯ ಮೇಲೆ ತೆಲುಗುವಿನಲ್ಲಿ ಇದನ್ನು ಬರೆದಿದ್ದನ್ನು ಕಂಡೆ, ” ನಿಧಾನಮು ಪ್ರಧಾನಮು” ಎಂದು. ಅವಳ ವೇಗದ ಮಿತಿಯಲ್ಲೇ ಹೋಗಲಿ ಅಲ್ಲವೇ? ತಾಳಿದವನು ಬಾಳಿಯಾನು. ನನಗಂತೂ ತಾಳ್ಮೆ ಮಂಕರಿ ತುಂಬಾ ಇದೆ… ಕೃಪೆ ನನ್ನ ಮುದ್ದಿನ ಮಗಳು.